ಪುತ್ತೂರು: ಕೊರೋನಾ ಲಾಕ್‌ಡೌನ್ ಹಿನ್ನೆಲೆಯ ಕಥಾಹಂದರ ಮತ್ತು ಕಾಡಿನ ಮನೋಹರ ದೃಶ್ಯಾವಳಿಗಳ ಜೊತೆಗೆ ನಿರ್ಮಿತವಾಗಿರುವ ‘ಜಂಗಲ್ ಮಂಗಲ್’ ಸಿನಿಮಾ ಪ್ರೇಕ್ಷಕರ ಹಾಗೂ ವಿಮರ್ಶಕರ ಮನಸು ಗೆಲ್ಲುತ್ತಾ ಮೂರನೇ ವಾರಕ್ಕೆ ಯಶಸ್ವಿ ಪ್ರದರ್ಶನ ಮುಂದುವರೆಸುತ್ತಿದೆ.
ರಕ್ಷಿತ್ ಕುಮಾರ್ ಅವರ ನಿರ್ದೇಶನದ ಮೊದಲ ಪ್ರಯೋಗವಾದ ಈ ಚಿತ್ರಕ್ಕೆ ಪುತ್ತೂರು ಸೇರಿದಂತೆ ಕರ್ನಾಟಕದಾದ್ಯಂತ ಉತ್ತಮ ಪ್ರತಿಕ್ರಿಯೆ ದೊರಕುತ್ತಿದೆ.

ವಿಭಿನ್ನ ಕಥೆ:
ವಿಭಿನ್ನ ಕಥೆ ಚಿತ್ರಕಥೆ ಮೂಲಕ ಪ್ರೇಕ್ಷಕರನ್ನು ಸೆಳೆಯಲು ನಿರ್ದೇಶಕರು ಯಶಸ್ವಿಯಾಗಿದ್ದಾರೆ. ಅರೆಮಲೆನಾಡಿನ ಕಾಡಿನ ನೀರವತೆಯ ಭೀಕರತೆ ಮನುಷ್ಯನೊಳಗಿನ ಭಯ, ಆಸೆ, ಪ್ರೀತಿ, ತ್ಯಾಗ ಮತ್ತು ಜೀವನದ ಹೋರಾಟಗಳನ್ನು ಕಾವ್ಯಾತ್ಮಕವಾಗಿ ತೋರಿಸುವ ಈ ಚಿತ್ರ ಒಂದು ಕಾದಂಬರಿ ಓದಿದ ಅನುಭವ ನೀಡುತ್ತದೆ.

ಕಾಡಿನ ವೈಭವ:
ಸಹ್ಯಾದ್ರಿ ಸ್ಟುಡಿಯೋಸ್ ನಿರ್ಮಾಣದಲ್ಲಿ ಮೂಡಿ ಬಂದಿರುವ ಈ ಚಿತ್ರದ ಛಾಯಾಗ್ರಹಣದಲ್ಲಿ ವಿಷ್ಣು ಪ್ರಸಾದ್ ಅವರು ಕಾಡಿನ ವೈಭವವನ್ನು ಅತಿ ಸುಂದರವಾಗಿ ಸೆರೆ ಹಿಡಿದಿದ್ದಾರೆ. ಪ್ರಸಾದ್ ಕೆ. ಶೆಟ್ಟಿ ಮತ್ತು ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತ, ಮನು ಶೆಡ್ಗಾರ್ ಅವರ ಸಂಕಲನ ಕತೆಗೆ ಇನ್ನಷ್ಟು ಮೆರುಗು ನೀಡಿದೆ.
ಸುಂದರ ಮ್ಯಾನರಿಸಂ:
ನಾಯಕ ಯಶ್ ಶೆಟ್ಟಿ ಹಾಗೂ ನಾಯಕಿ ಹರ್ಷಿತಾ ರಾಮಚಂದ್ರ ಅವರ ಸಹಜ ಅಭಿನಯ, ಉಗ್ರಂ ಮಂಜು ಅವರ ವಿಭಿನ್ನ ಮ್ಯಾನರಿಸಂ ಗಮನ ಸೆಳೆಯುತ್ತದೆ. ಬಾಲರಾಜವಾಡಿ ಜಗ್ಗನಾಗಿ, ದೀಪಕ್ ರೈ ಪಾಣಾಜೆ ಗುರೂಜಿ ಪಾತ್ರದಲ್ಲಿ ಹಾಗು ಎಲ್ಲ ಕಲಾವಿದರು ಇಷ್ಟವಾಗುತ್ತಾರೆ.
ಕೋವಿಡ್ ಕಷ್ಟದ ದಿನ:
ಕೋವಿಡ್ ಕಷ್ಟದ ದಿನಗಳನ್ನು ನೆನೆಸಿಸುತ್ತಲೇ, ಪ್ರಕೃತಿ ಮತ್ತು ಮನುಷ್ಯನ ನಡುವಿನ ಸಂಬಂಧವನ್ನು ಗಾಢವಾಗಿ ತೋರಿಸುವ ಜಂಗಲ್ ಮಂಗಲ್ ಮಳೆಗಾಲದ ಸಮಯದಲ್ಲಿ ಒಂದು ಉತ್ತಮ ಅನುಭವವಾಗಿದೆ.