ಆಲಂಕಾರು: ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 1976ರ ಪೂರ್ವದಲ್ಲಿ ಕೊಯಿಲ, ರಾಮಕುಂಜ, ಹಳೆನೇರೆಂಕಿ, ಆಲಂಕಾರು, ಕುಂತೂರು ಹಾಗು ಪೆರಾಬೆ ಈ ಆರು ಗ್ರಾಮಗಳ ವ್ಯಾಪ್ತಿಯಲ್ಲಿ 3 ಪತ್ತಿನ ಸಹಕಾರ ಸಂಘಗಳು ವ್ಯವಹಾರ ನಡೆಸಿದ್ದು, 1976-77ರಲ್ಲಿ ವಿಲೀನಗೊಂಡು ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ನಿ) ಎಂಬ ಹೆಸರಿನಲ್ಲಿ ಕಳೆದ 49 ವರ್ಷಗಳಿಂದ ಕಾರ್ಯಾಚರಿಸುತ್ತಿದೆ. ಸಂಘವು ಹಿರಿಯ ಸಹಕಾರಿಗಳು ಮತ್ತು ತಮ್ಮೆಲ್ಲರ ಸಹಕಾರ ಮತ್ತು ಮಾರ್ಗದರ್ಶನದಿಂದ ಸಹಕಾರ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆಯೊಂದಿಗೆ ಮಹತ್ತರ ಮೈಲುಗಲ್ಲು ದಾಟಿ ಮುಂದುವರಿಯುತ್ತಿದೆ.
ವರ್ಷಾಂತ್ಯದಲ್ಲಿ ಈ ಸಂಘವು 101.24 ಕೋಟಿ ಠೇವಣಿ ಹೊಂದಿರುತ್ತದೆ. ವರದಿ ವರ್ಷದಲ್ಲಿ ರೂ.156.13 ಕೋಟಿ ಸಾಲವನ್ನು ವಿವಿಧ ಉದ್ದೇಶಗಳಿಗೆ ವಿತರಿಸಿದ್ದು, ಸದಸ್ಯರ ಸಾಲದ ಹೊರಬಾಕಿ 159.09 ರೂ ಕೋಟಿ ಇದ್ದು, ವಿತರಿಸಿದ ಸಾಲದ ಪೈಕಿ ಶೇಕಡಾ 98.57 ವಸೂಲಾಗಿರುತ್ತದೆ. ಹಾಗು ರೂ.1158.60 ಕೋಟಿಗಳ ಒಟ್ಟು ವ್ಯವಹಾರವನ್ನು ಮಾಡಲಾಗಿದೆ. ಸದಸ್ಯ ಗ್ರಾಹಕರು ಪಡೆದ ಸಾಲವನ್ನು ಸಕಾಲಕ್ಕೆ ಮರುಪಾವತಿಸಿರುವುದರಿಂದ 2024-25ನೇ ಸಾಲಿನಲ್ಲಿ ಸಂಘ ರೂ 2,07,93,834.78 ಲಾಭ ಗಳಿಸಿದೆ.
ನಮ್ಮ ಸಂಘದ ಸಹಭಾಗಿತ್ವದೊಂದಿಗೆ ಪೂರ್ಣ ಪ್ರಮಾಣದ ಅಡಿಕೆ ಮಾರಾಟ, ಅಡಿಕೆ ಸಂಸ್ಕರಣಾ ಕೇಂದ್ರವನ್ನು ಕ್ಯಾಂಪ್ಕೊ ಸಂಸ್ಥೆಯು ನಮ್ಮ ಸಂಘದಲ್ಲಿ 2004 ರಿಂದ ಆರಂಭಿಸಿರುತ್ತದೆ. ಕ್ಯಾಂಪ್ಕೊ ಸಂಸ್ಥೆಯ ಮೂಲಕ ರಬ್ಬರ್ ಹಾಗು ಕಾಳುಮೆಣಸು,ಕೊಕ್ಕೋ ಖರೀದಿಯ ವ್ಯವಸ್ಥೆಯನ್ನು ಸಂಘದ ಮುಖ್ಯಕಛೇರಿಯ ನೂತನ ಕಟ್ಟಡದಲ್ಲಿ ಮಾಡಲಾಗಿದೆ.
ಕೃಷಿಕ ರೈತ ಸದಸ್ಯರು ಬೆಳೆಸಿದ ಬೆಳೆಗೆ ಯೋಗ್ಯವಾದ ಬೆಲೆ ದೊರಕಿಸಿಕೊಡುವ ನಿಟ್ಟಿನಲ್ಲಿ ದಾಸ್ತಾನು ಇಡುವವರಿಗೆ ವಿಸ್ತೃತವಾದ ಗೋದಾಮು ಕಟ್ಟಡವನ್ನು ನಿರ್ಮಿಸಲಾಗಿದ್ದು ರೈತ ಸದಸ್ಯರು ಇದರ ಸದುಪಯೋಗ ಪಡೆಯುತ್ತಿದ್ದಾರೆ. ಸಂಘದ ಕಾರ್ಯಕ್ಷೇತ್ರದ ಸದಸ್ಯರಿಗೆ, ಸಂಘ ಸಂಸ್ಥೆಗಳಿಗೆ ಮಿತ ದರದ ಸೇಫ್ ಲಾಕರ್ ವ್ಯವಸ್ಥೆ ಮಾಡಲಾಗಿದೆ. ಸಂಘದ ಭದ್ರತೆಗಾಗಿ ಆಲಂಕಾರು ಪ್ರಧಾನ ಕಛೇರಿ, ಕೊಯಿಲ ಮತ್ತು ಕುಂತೂರು ಶಾಖೆಯಲ್ಲಿ ಸಿ.ಸಿ.ಟಿ.ವಿಯನ್ನು ಮತು ಸೈರನ್ ಅಳವಡಿಸಲಾಗಿದೆ.
ರೈತ ಸದಸ್ಯರ ಅವಶ್ಯಕತೆ ಮನಗಂಡು ಸಂಘದ ಮೂಲಕ ರಾಷ್ಟ್ರೀಕೃತ ಬ್ಯಾಂಕ್‌ಗಳ ಸಹಯೋಗದೊಂದಿಗೆ ನೆಪ್ಟ್ / ಆರ್.ಟಿ.ಜಿ.ಎಸ್ ಸೌಲಭ್ಯವನ್ನು ನೀಡಲಾಗಿದೆ. ಸದಸ್ಯರು ಇದರ ಸದುಪಯೋಗ ಪಡೆಯುತ್ತಿದ್ದಾರೆ ಹಾಗು ಸಂಘದ ಶಾಖೆಗಳಲ್ಲಿ ಖರೀದಿಗಾಗಿ ಕ್ಯಾಶ್‌ಲೆಸ್ ಸೌಲಭ್ಯವನ್ನು ಕೂಡ ಅಳವಡಿಸಲಾಗಿದೆ. ಕೃಷಿಕ ರೈತರ ಮಣ್ಣಿನ ಫಲವತ್ತತೆಯನ್ನು ನಿಖರವಾಗಿ ಪರೀಕ್ಷಿಸುವ ಸಲುವಾಗಿ ನಮ್ಮ ಸಂಘದಲ್ಲಿ ಮಣ್ಣು ಮತ್ತು ನೀರು ಪರೀಕ್ಷಾ ಕೇಂದ್ರವನ್ನು ಕೇಂದ್ರ ಮತ್ತು ರಾಜ್ಯ ಸರಕಾರದ ಕೃಷಿ ಇಲಾಖೆಯ ಸಹಯೋಗದೊಂದಿಗೆ ತೆರೆದಿದ್ದು ರೈತ ಸದಸ್ಯರು ಇದರ ಸದುಪಯೋಗವನ್ನು ಪಡೆಯುತ್ತಿದ್ದಾರೆ. ರೈತ ಸದಸ್ಯರ ಕೃಷಿ ಚಟುವಟಿಕೆ ಯನ್ನು ಉತ್ತೇಜಿಸುವ ಸದುದ್ದೇಶದಿಂದ ಸದಸ್ಯರಿಗೆ ಗೊಬ್ಬರ ಹಾಗೂ ಇತರ ಕೃಷಿ ಸಂಬಂದಿತ ಸಾಮಾಗ್ರಿಗಳ ಖರೀದಿಗಾಗಿ ಒಂದು ತಿಂಗಳ ಅವಧಿಗೆ ಬಡ್ಡಿ ರಹಿತವಾಗಿ ವಿವಿಧ ರೀತಿಯ ಸಾಲ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ವಿದ್ಯುತ್ ಸರಬರಾಜು ವ್ಯವಸ್ಥೆ ಸರಿ ಇಲ್ಲದ ಕಾರಣ ರೈತರು ಕೃಷಿ ಚಟುವಟಿಕೆ ನಡೆಸಲು ತೀವ್ರ ರೀತಿಯ ತೊಂದರೆ ಅನುಭವಿಸುತ್ತಿದ್ದು ಅದಕ್ಕಾಗಿ ಸೋಲಾರ್ ವಿದ್ಯುತ್ ಉಪಕರಣಗಳನ್ನು ಅಳವಡಿಸಿಕೊಳ್ಳಲು ದೀರ್ಘಾವಧಿ ಸಾಲದ ವ್ಯವಸ್ಥೆಯನ್ನು ಮಾಡಲಾಗಿದೆ.
ಕಳೆದ 18 ವರ್ಷಗಳಿಂದ ಸದಸ್ಯರ ಸಂಪರ್ಕ ಅಭಿಯಾನದ ಭಾಗವಾಗಿ ವಾರ್ಷಿಕ ಕ್ಯಾಲೆಂಡರ್ ನ್ನು ಮುದ್ರಿಸಿ ಸಂಘದ ಕಾರ್ಯಕ್ಷೇತ್ರಕ್ಕೆ ಬರುವ ಎಲ್ಲಾ ಮನೆಗಳಿಗೆ ಸಿಬ್ಬಂದಿಯ ಮೂಲಕ ನೀಡುತ್ತಿದ್ದೇವೆ. ಸಂಘದಲ್ಲಿ ದಿನಾಂಕ 23-05-2025 ರಿಂದ ಹೊಸ ಆಡಳಿತ ಮಂಡಳಿಯು ಅಧಿಕಾರ ವಹಿಸಿಕೊಂಡಿದ್ದು ನನ್ನ ಅಧ್ಯಕ್ಷಾವಧಿಯಲ್ಲಿ ಸಂಘವು ಮೊದಲು ಮಾಡಿದ ಎಲ್ಲಾ ಸದಸ್ಯ ಸ್ನೇಹಿ ವ್ಯವಹಾರಗಳನ್ನು ಮುಂದುವರಿಸುವುದಲ್ಲದೆ ಇನ್ನೂ ಹೆಚ್ಚಿನ ಸೌಲಭ್ಯಗಳು ಸಂಘದಲ್ಲಿ ಸಿಗುವ ನಿಟ್ಟಿನಲ್ಲಿ ಕಾರ್ಯವಟಿಕೆಗಳನ್ನು ವಿಸ್ತರಿಸಲೂ ಪ್ರಯತ್ನಿಸುತ್ತೇವೆಂದೂ ಎಲ್ಲಾ ಸದಸ್ಯರಿಗೆ ಆಡಳಿತ ಮಂಡಳಿ ಪರವಾಗಿ ಭರವಸೆ ನೀಡಲು ಇಚ್ಚಿಸುತ್ತೇನೆ ಎಂದು ತಿಳಿಸಿ ಜ.26 ರಂದು ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಛೇರಿಯಲ್ಲಿರುವ ದೀನದಯಾಳ್ ರೈತ ಸಭಾಭವನದಲ್ಲಿ ಬೆಳಿಗ್ಗೆ 10:00 ಕ್ಕೆ ವಾರ್ಷಿಕ ಮಹಾಸಭೆ ನಡೆಯಲಿದೆ ಈ ಸಭೆಗೆ ಸಂಘದ ಸದಸ್ಯರೆಲ್ಲರೂ ಭಾಗವಹಿಸುವಂತೆ ಸಂಘದ ಅಧ್ಯಕ್ಷರಾದ ರಮೇಶ ಉಪ್ಪಂಗಳ ರವರು ಸುದ್ದಿ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಸಂಘದ ಉಪಾಧ್ಯಕ್ಷರಾದ ದಯಾನಂದ ರೈ ಮನವಳಿಕೆ ಸ್ವಾಗತಿಸಿ, ಮುಖ್ಯಕಾರ್ಯನಿರ್ವಹಣಾಧಿಕಾರಿ ಮನೋಹರ ಪ್ರಕಾಶ .ಡಿ ಧನ್ಯವಾದ ಸಮರ್ಪಿಸಿದರು. ಈ ಸಂಧರ್ಭದಲ್ಲಿ ಸಂಘದ ನಿರ್ದೇಶಕರಾದ ಪದ್ಮಪ್ಪ ಗೌಡ .ಕೆ,ಕೇಶವ ಗೌಡ ಆಲಡ್ಕ ಉಪಸ್ಥಿತರಿದ್ದರು.