ಛಾಯಾಗ್ರಾಹಕರ ಅಕಾಡೆಮಿ ಸ್ಥಾಪನೆಗೆ ಸರಕಾರಕ್ಕೆ ಮನವಿ-ಪದ್ಮಪ್ರಸಾದ್ ಜೈನ್
ಪುತ್ತೂರು: ಛಾಯಾಗ್ರಹಣ ಬೆಳೆಯಬೇಕಾದರೆ ಛಾಯಾಗ್ರಾಹಕ ಬೆಳೆಯಬೇಕು. ಇದಕ್ಕಾಗಿ ಛಾಯಾಗ್ರಾಹಕರ ಅಕಾಡೆಮಿ ಸ್ಥಾಪನೆಯಾಗಬೇಕು.
ಛಾಯಾ ಗ್ರಾಹಕರೆಲ್ಲರಿಗೂ ಪಿಂಚಣಿ ದೊರೆಯಬೇಕು. ಇದಕ್ಕಾಗಿ ಜಿಲ್ಲಾ ಸಂಘದ 14 ವಲಯಗಳ ಶಾಸಕರು ಹಾಗೂ ಜನಪ್ರತಿನಿಧಿಗಳಿಗೆ ಮನವಿ ಮಾಡಿ ಸರಕಾರವನ್ನು ಆಗ್ರಹಿಸಲಾಗುವುದು ಎಂದು ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ನ ಜಿಲ್ಲಾಧ್ಯಕ್ಷ ಪದ್ಮಪ್ರಸಾದ್ ಜೈನ್ ಹೇಳಿದರು.


ರೋಟರಿ ಮನಿಷಾ ಹಾಲ್ ನಲ್ಲಿ ಜು.22ರಂದು ನಡೆದ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ನ ಪುತ್ತೂರು ವಲಯದ ಮಹಾಸಭೆಯನ್ನು ಉದ್ಘಾಟಿಸಿ, ಅವರು ಮಾತನಾಡಿದರು. ಛಾಯಾಗ್ರಾಹಕರಿಗೆ ಸಾಮಾಜಿಕ ಭದ್ರತೆಗಳಿಲ್ಲ. ಆದರೂ ಸರಕಾರ ನಮ್ಮನ್ನು ಕಾರ್ಮಿಕ ಇಲಾಖೆಗೆ ಸೇರ್ಪಡೆಮಾಡಿದೆ. ಆದರೆ ಛಾಯಾ ಗ್ರಾಹಕರು ಕಾರ್ಮಿಕರಲ್ಲ., ಕಲಾವಿದರು. ಛಾಯಾ ಗ್ರಾಹಕರನ್ನು ಕಲಾವಿದರಾಗಿ ತೋರಿಸುವಂತೆ ಆಂದೋಲನ ನಡೆಸಲಾಗುವುದು ಎಂದರು. ಬದಲಾಗುತ್ತಿರುವ ತಂತ್ರಜ್ಞಾನ ಯುಗದಲ್ಲಿ ಛಾಯಾಗ್ರಾಹಕರು ಹೊಂದಿಕೊಳ್ಳಬೇಕು. ಆಧುನಿಕ ತಂತ್ರಜ್ಞಾನಗಳ ಕುರಿತು ಜಿಲ್ಲಾ ಸಂಘ ಆಯೋಜಿಸುವ ಎಲ್ಲಾ ಕಾರ್ಯಾಗಾರಗಳಲ್ಲಿ ಭಾಗವಹಿಸಿ, ತಮ್ಮ ಜೀವನ ಮಟ್ಟ ಸುಧಾರಿಸಿಕೊಳ್ಳಬೇಕು. ಸದಸ್ಯರು ಸಂಘದ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಸದಸ್ಯರಿಗೆ ಛಾಯ ಸುರಕ್ಷಾ ಯೋಜನೆ ಮೂಲಕ ರೂ.20 ಸಾವಿರ ವಿಮಾ ಮೊತ್ತ ನೀಡುತ್ತಿದೆ. ಮುಂದಿನ ದಿನಗಳಲ್ಲಿ ಅಂಚೆ ಇಲಾಖೆಯ ವಿಮೆಯಲ್ಲಿ ತೊಡಗಿಸಿಕೊಂಡು ರೂ.1ಲಕ್ಷ ಪರಿಹಾರ ನೀಡುವ ವಿಮೆ ಮಾಡುವ ಯೋಜನೆಯಿದ್ದು, ಒದರ ಬಗ್ಗೆ ಆಂದೋಲನ ನಡೆಸಲಾಗುವುದು ಎಂದು ತಿಳಿಸಿದರು.
ನಮ್ಮೊಳಗಿ ಸ್ಪರ್ಧೆ ನಿಲ್ಲಿಸಬೇಕು-ದಯಾನಂದ ಬಂಟ್ವಾಳ:
ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ದಯಾನಂದ ಬಂಟ್ವಾಳ ಮಾತನಾಡಿ, ಸಂಘದ ಛಾಯಾ ಸುರಕ್ಷಾ ವಿಮೆಯು ನಮಗಾಗಿ ಇರುವ ಯೋಜನೆಯಾಗಿದೆ. ಕನಿಷ್ಠ ಸಂಖ್ಯೆಯ ಸದಸ್ಯರು ಛಾಯಾ ಸುರಕ್ಷಾ ವಿಮೆ ಯಲ್ಲಿ ನೋಂದಾಯಿಸಿಕೊಂಡಿದ್ದು ಪ್ರತಿಯೊಬ್ಬರ ಸದಸ್ಯರು ನೋಂದಾಯಿಸಿಕೊಳ್ಳಬೇಕು. ಸಂಘಟನೆಯನ್ನು ನಾವು ಅಪ್ಪಿಕೊಂಡಷ್ಟು ಅದು ನಮ್ಮನ್ನು ಬೆಳೆಸುತ್ತದೆ. ನಮ್ಮಿಂದ ಇತರರಿಗೆ ತೊಂದರೆಯಾಗಬಾರದು. ಇದಕ್ಕಾಗಿ ಸದಸ್ಯರು ನಮ್ಮೊಳಗಿನ ಸ್ಪರ್ಧೆ ನಿಲ್ಲಿಸಬೇಕು ಎಂದರು.
ಕಟ್ಟಡಕ್ಕೆ ಸದಸ್ಯರು ಗರಿಷ್ಠ ದೇಣಿಗೆ ನೀಡಿ ಸಹಕರಿಸಬೇಕು-ಸುಧಾಕರ ಶೆಟ್ಟಿ:
ಕಟ್ಟಡ ಸಂಘದ ಜಿಲ್ಲಾಧ್ಯಕ್ಷ ಸುಧಾಕರ ಶೆಟ್ಟಿ ಮಿತ್ತೂರು ಮಾತನಾಡಿ , ಜಿಲ್ಲಾ ಸಂಘಕ್ಕೆ ಸುಮಾರು ರೂ.1 ಕೋಟಿ ವೆಚ್ಚದಲ್ಲಿ ಜಾಗ ಖರೀದಿಸಿ ಅದರಲ್ಲಿ ರೂ.4ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಿಸಲಾಗುವುದು. ಪುತ್ತೂರು ವಲಯದಿಂದ ಈಗಾಗಲೇ ಪ್ರಥಮ ಕಂತಿನಲ್ಲಿ ರೂ.2ಲಕ್ಷ ದೇಣಿಗೆ ನೀಡಲಾಗಿದೆ. ಜಿಲ್ಲಾ ಸಂಘದಲ್ಲಿ 4 ಸಾವಿರ ಸದಸ್ಯರಿದ್ದು ಪ್ರತಿಯೊಬ್ಬರೂ ಗರಿಷ್ಠ ಪ್ರಮಾಣದಲ್ಲಿ ದೇಣಿಗೆ ನೀಡಿ ಸಹಕರಿಸುವಂತೆ ವಿನಂತಿಸಿದರು.
ಉಚಿತ ಕಾರ್ಯಾಗಾರ ಸದುಪಯೋಗ ಪಡಿಸಿಕೊಳ್ಳಬೇಕು-ನವೀನ್ ರೈ ಪಂಜಳ:
ಜಿಲ್ಲಾ ಕೋಶಾಧಿಕಾರಿ ನವೀನ್ ರೈ ಪಂಜಳ ಮಾತನಾಡಿ, ಫೋಟೋಗ್ರಾಫರ್ಸ್ ವೃತ್ತಿಯ ಜೊತೆಗೆ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ಸದಸ್ಯರ ನೋವು ನಲಿವುಗಳಲ್ಲಿ ಭಾಗಿಯಾಗುತ್ತಿದೆ. ಸದಸ್ಯರ ಸಮಸ್ಯೆಗಳಿಗೆ ಧ್ವನಿಯಾಗಿ ಸಂಘ ಕೆಲಸ ಮಾಡುತ್ತಿದೆ. ಆರ್ಥಿಕ ಸಹಕಾರ ನೀಡುತ್ತಿದೆ. ಬದಲಾದ ತಂತ್ರಜ್ಞಾನದಲ್ಲಿ ಸದಸ್ಯರ ಜ್ಞಾನಾರ್ಜನೆಗಾಗಿ ಉಚಿತ ತರಬೇತಿ ಕಾರ್ಯಾಗಾರ ಆಯೋಜಿಸಲಾಗುತ್ತಿದ್ದು ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಸದಸ್ಯರು ಕ್ರಿಯಾಶೀಲರಾಗಿ ಸಂಘಟನೆ ಬಲಪಡಿಸೋಣ-ರಘು ಶೆಟ್ಟಿ
ಅಧ್ಯಕ್ಷತೆ ವಹಿಸಿದ್ದ ಪುತ್ತೂರು ವಲಯದ ಅಧ್ಯಕ್ಷ ರಘು ಶೆಟ್ಟಿ ಮಾತನಾಡಿ, ಕಳೆದ ಎರಡು ವರ್ಷಗಳಲ್ಲಿ ಸಂಘದ ಮುಖಾಂತರ ಸದಸ್ಯರಿಗೆ ಅನುಕೂಲವಾಗುವಂತಹ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸಂಘದ ಮುಖಾಂತರ ನಡೆಯುವ ಉಚಿತ ಕಾರ್ಯಾಗಾರದ ಸದುಪಯೋಗ ಪಡೆದುಕೊಂಡು ಉತ್ತಮ ಛಾಯಾಗ್ರಾಹಕರಾಗಿ ಮೂಡಿಬರಬೇಕು. ಇದು ವ್ಯಕ್ತಿಗತವಾದ ಸಂಘಟನೆಯಲ್ಲ. ಸಮಾನ ಮನಸ್ಕರ ಸಂಘಟನೆಯಾಗಿದ್ದು ಪ್ರತಿಯೊಬ್ಬರು ಕ್ರಿಯಾಶೀಲರಾಗಿ ಪಾಲ್ಗೊಂಡು ಸಂಘಟನೆ ಇನ್ನಷ್ಟು ಬಲಪಡಿಸಬೇಕು ಎಂದು ಹೇಳಿದರು.
ಜಿಲ್ಲಾ ಸಂಘದ ಸಂಚಾಲಕ ಕರುಣಾಕರ ಕಾನಂಗಿ, ಜಿಲ್ಲಾ ಉಪಾಧ್ಯಕ್ಷ ರಮೇಶ್ ಕಲಾಶ್ರೀ, ಎಸ್.ಕೆ.ಪಿ.ಎ ವಿವಿಧೋದ್ದೇಶ ಸಹಕಾರಿ ಸಂಘದ ನಿರ್ದೇಶಕ ಸುದರ್ಶನ ರಾವ್, ಪುತ್ತೂರು ವಲಯದ ಗೌರವಾಧ್ಯಕ್ಷ ಹರೀಶ್ ಎಲಿಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರತಿಭಾ ಪುರಸ್ಕಾರ:
ಶೈಕ್ಷಣಿಕವಾಗಿ ಸಾಧನೆ ಮಾಡಿದ ಸಂಘದ ಸದಸ್ಯರ ಮಕ್ಕಳಾದ ಧ್ಯಾನ್ ಎಸ್ ಹೆಬ್ಬಾರ್, ವಿಕಾಶ್ ಶಗ್ರಿತ್ತಾಯ ಹಾಗೂ ಅವನಿ ನಾಯಕ್ ರವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಪೋಸ್ಟರ್ ಬಿಡುಗಡೆ:
ಸಂಘದಿಂದ ನಡೆಯಲಿರುವ ಜಿಲ್ಲಾ ವಾರ್ಷಿಕ ಕ್ರೀಡೋತ್ಸವ ಹಾಗೂ ಜಿಲ್ಲಾ ಛಾಯಾ ಕಾರ್ಯಾಗಾರದ ಪೋಸ್ಟರ್ ನ್ನು ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಲಾಯಿತು. ಜಿಲ್ಲೆ ಹಾಗೂ ವಲಯದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಧರ್ಮಚಾವಡಿ ಚಿತ್ರ ತಂಡ ಭೇಟಿ:
ಮಹಾಸಭೆಯಲ್ಲಿಧರ್ಮಚಾವಡಿ ತುಳು ಚಲನ ಚಿತ್ರ ತಂಡದ ಭೇಟಿ ಚಿತ್ರ ವಿಶೇಷತೆ ತಿಳಿಸಿ ಚಿತ್ರ ವೀಕ್ಷಣೆ ಮಾಡಿ ಪ್ರೋತ್ಸಾಹಿಸುವಂತೆ ವಿನಂತಿಸಿದರು. ಚಿತ್ರ ತಂಡವನ್ನು ಸಂಘದಿಂದ ಅಭಿನಂದಿಸಲಾಯಿತು.
ಸದಸ್ಯರ ಸೇರ್ಪಡೆ:
ಲಿಖಿತ್ ಕುಮಾರ್, ಪ್ರಜ್ವಲ್ ಎಂ.ಎಸ್., ಸೀಮಂತ್ ಕುಮಾರ್ ಸಂಘಕ್ಕೆ ನೂತನ ಸದಸ್ಯರಾಗಿ ಸೇರ್ಪಡೆಗೊಂಡರು.
ಸನ್ಮಾನ:
ಅಸೋಸಿಯೇಶನ್ ನ ಜಿಲ್ಲಾಧ್ಯಕ್ಷ ಪದ್ಮಪ್ರಸಾದ್ ಜೈನ್, ಪ್ರಧಾನ ಕಾರ್ಯದರ್ಶಿ ದಯಾನಂದ ಬಂಟ್ವಾಳ ಹಾಗೂ ಸಂಚಾಲಕ ಕರುಣಾಕರ ಕಾನಂಗಿಯರನ್ನು ಸನ್ಮಾನಿಸಲಾಯಿತು.
ಕಣ್ಣಿನ ಉಚಿತ ತಪಾಸಣೆ:
ಸಭಾ ಕಾರ್ಯಕ್ರಮದ ಪ್ರಾರಂಭದಲ್ಲಿ ವಿಷನ್ ಐ ಕೇರ್ ಅಪ್ಟಿಕಲ್ಸ್ ಕಣ್ಣಿನ ಪರೀಕ್ಷಾ ಕೇಂದ್ರದ ವತಿಯಿಂದ ಸದಸ್ಯರಿಗೆ ಕಣ್ಣಿನ ಉಚಿತ ತಪಾಸಣೆ ನಡೆಸಲಾಯಿತು.
ಸದಸ್ಯ ಜಗದೀಶ ಶೆಟ್ಟಿ ಸೂತ್ರಬೆಟ್ಟು ಪ್ರಾರ್ಥಿಸಿದರು. ಜಿಲ್ಲಾ ಕೋಶಾಧಿಕಾರಿ ನವೀನ್ ರೈ ಪಂಜಳ ಸ್ವಾಗತಿಸಿದರು. ಪುತ್ತೂರು ವಲಯದ ಉಪಾಧ್ಯಕ್ಷ ಗಣೇಶ್ ಕಟ್ಟಪುಣಿ ವರದಿ ವಾಚಿಸಿದರು. ಕೋಶಾಧಿಕಾರಿ ಪ್ರಮೋದ್ ಸಾಲ್ಯಾನ್ ಲೆಕ್ಕಪತ್ರ ಮಂಡಿಸಿದರು. ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ ವಂದಿಸಿದರು. ರವಿಚಂದ್ರ ರೈ ಮುಂಡೂರು ಕಾರ್ಯಕ್ರಮ ನಿರೂಪಿಸಿದರು.
ಪ್ರಶಾಂತ್, ಸಂತೋಷ್ ಬನ್ನೂರು, ಪ್ರವೀಣ್ ವಿಟ್ಲ, ವಿನಯ ರೈ ಪಂಜಳ, ಗಿರಿಧರ್ ಭಟ್, ವಸಂತ ಕಾಣಿಯೂರು, ಸುಶ್ರುತ್, ಸುಪ್ರೀತ್ ಯಾದವ್, ಗಣೇಶ್ ಕಟ್ಟಪುಣಿ, ವಸಂತ ನಾಯ್ಕ್, ರವಿಕಿರಣ್ ಅತಿಥಿಗಳಿಗೆ ಹೂ ನೀಡಿ, ಶಾಲು ಹಾಕಿ ಸ್ವಾಗತಿಸಿದರು.