ಹಾರ್ನ್ ಹಾಕಿದ್ದಕ್ಕೆ ಆಕ್ರೋಶ : ಬೈಕ್ ಸವಾರರಿಂದ ಬಸ್ ಚಾಲಕ, ಪ್ರಯಾಣಿಕನ ಮೇಲೆ ಹಲ್ಲೆ

0

ಉಪ್ಪಿನಂಗಡಿ: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ರಾಜಹಂಸ ಬಸ್ಸಿನ ಚಾಲಕ ಹಾರ್ನ್ ಹಾಕಿದ ಎಂಬ ಕಾರಣಕ್ಕೆ ಬೈಕ್ ಸವಾರರಿಬ್ಬರು ಬಸ್ಸನ್ನು ಅಡ್ಡ ಹಾಕಿ ಬಸ್ಸಿನ ಚಾಲಕನ ಮೇಲೆ ಹಲ್ಲೆ ನಡೆಸಿದ ಹಾಗೂ ಇದನ್ನು ಪ್ರಶ್ನಿಸಿದ ಪ್ರಯಾಣಿಕನ ಮೇಲೂ ಹೆಲ್ಮೆಟ್ ನಿಂದ ಹೊಡೆದು ಹಲ್ಲೆ ನಡೆಸಿದ ಘಟನೆ ಉಪ್ಪಿನಂಗಡಿಯಲ್ಲಿ ಜು.23ರಂದು ನಡೆದಿದೆ.


ಬೆಂಗಳೂರಿನಿಂದ ಮಂಗಳೂರಿನತ್ತ ಸಂಚರಿಸುತ್ತಿದ್ದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ರಾಜಹಂಸ ಬಸ್ಸಿನ ಚಾಲಕ ರಿಯಾಜ್ ಅಹಮ್ಮದ್ ಎಂಬವರು ಬಸ್ಸಿಗೆ ಅಡ್ಡವಾಗಿ ಸಂಚರಿಸುತ್ತಿದ್ದ ಬೈಕೊಂದಕ್ಕೆ ದಾರಿ ಬಿಟ್ಟು ಕೊಡುವ ಸಲುವಾಗಿ ಹಾರ್ನ್ ಹಾಕಿದ್ದರು. ಇದರಿಂದ ಕೆರಳಿದ ಬೈಕ್ ಸವಾರರಿಬ್ಬರು ಬಸ್ಸನ್ನು ಅಡ್ಡಗಟ್ಟಿ ಬಸ್ಸಿನ ಚಾಲಕನ ಮೇಲೆ ಯದ್ವಾತದ್ವ್ವಾ ಹಲ್ಲೆ ನಡೆಸಿದ್ದಾರೆ. ಇದನ್ನು ಪ್ರಶ್ನಿಸಿ ಹಲ್ಲೆಯನ್ನು ತಡೆಯಲು ಬಂದ ಬಸ್ಸಿನ ಪ್ರಯಾಣಿಕ ಅವಿನಾಶ್ ಮೇಲೂ ಮುಗಿ ಬಿದ್ದ ಬೈಕ್ ಸವಾರರು ಹೆಲ್ಮೆಟ್‌ನಿಂದ ಅವಿನಾಶ್ ರವರ ತಲೆಗೆ ಹೊಡೆದು ಗಂಭೀರವಾಗಿ ಗಾಯಗೊಳಿಸಿದ್ದಾರೆ. ಈ ಬಗ್ಗೆ ಬಸ್ಸಿನ ಚಾಲಕ ಬೈಕ್ ನಂಬ್ರವನ್ನಾಧರಿಸಿ ಪೊಲೀಸರಿಗೆ ದೂರು ನೀಡಿದ್ದರು.


ಸಾಯಂಕಾಲ 3.30 ರ ಸುಮಾರಿಗೆ ನಡೆದ ಈ ಘಟನೆಯ ಬಗ್ಗೆ ದೂರು ಸ್ವೀಕರಿಸಿದ ಉಪ್ಪಿನಂಗಡಿ ಠಾಣಾ ಪೊಲೀಸ್ ಉಪ ನಿರೀಕ್ಷಕ ಗುರುನಾಥ್ ಹಾದಿಮನಿ ಮಿಂಚಿನ ಕಾರ್ಯಾಚರಣೆ ನಡೆಸಿ ಒಂದು ಗಂಟೆಯೊಳಗೆ ಆರೋಪಿ ಬೈಕ್ ಸವಾರರಿಬ್ಬರನ್ನೂ ಪತ್ತೆ ಹಚ್ಚಿ ಬಂಧಿಸುವಲ್ಲಿ ಸಫಲರಾದರು. ಬಂಧಿತ ಆರೋಪಿಗಳನ್ನು ಉಪ್ಪಿನಂಗಡಿ ಗ್ರಾಮದ ಮಠ ನಿವಾಸಿಗರಾದ ಇಬ್ರಾಹಿಂ ಬ್ಯಾರಿ ಎಂಬವರ ಮಗನಾದ ಜುನೈದ್ (24) ಹಾಗೂ ಅಬ್ದುಲ್ ಲತೀಫ್ ಎಂಬವರ ಮಗನಾದ ಹಿಷಾಮ್ (18) ಎಂದು ಗುರುತಿಸಲಾಗಿದೆ. ಬಂಧಿತರ ವಿರುದ್ಧ ಸರಕಾರಿ ಕರ್ತವ್ಯಕ್ಕೆ ಅಡ್ಡಿ ಹಾಗೂ ಸಾರ್ವಜನಿಕ ಶಾಂತಿ ಭಂಗ ಆರೋಪದಡಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here