ಪುತ್ತೂರು: ಪ್ರಕೃತಿಯ ಉಳಿವಿನ ಕಥಾ ಹಂದರವನ್ನು ಹೊಂದಿರುವ ಕಿರುಚಿತ್ರ ‘ಹರಿದ್ವರ್ಣ’ಇದರ ಮೂರನೇ ಪ್ರದರ್ಶನ ಪುತ್ತೂರಿನ ಜಿ.ಎಲ್. ಮಾಲ್‌ನಲ್ಲಿ ಇರುವ ಭಾರತ್ ಸಿನಿಮಾಸ್‌ದಲ್ಲಿ ಜು.20ರಂದು ನಡೆಯಿತು.

ಸುಳ್ಯ ಹಾಗೂ ಪುತ್ತೂರು ಭಾಗದ 50 ವಿಶೇಷ ಚೇತನ ಮಕ್ಕಳಿಗೆ ಹಾಗೂ ಅವರ ಪೋಷಕರಿಗೆ ಉಚಿತ ಪ್ರವೇಶವನ್ನು ನೀಡಲಾಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪುತ್ತೂರು ರೋಟರಿ ಕ್ಲಬ್ ಅಧ್ಯಕ್ಷ ಡಾ. ಶ್ರೀಪ್ರಕಾಶ್‌ರವರು ಮಾತನಾಡಿ, ಪ್ರಕೃತಿ ಸೌಂದರ್ಯವನ್ನು ಮುಂದಿನ ಪೀಳಿಗೆಗೆ ಉಳಿಬೇಕು ಎಂದಾದರೆ ಇಂದು ನಾವು ನಮ್ಮೊಳಗಿನ ಸ್ವಾರ್ಥ ಬಿಟ್ಟು ಪ್ರಕೃತಿಯ ಜತೆ ಬೆರೆತು ಅದರ ಸಂರಕ್ಷಣೆ ಮಾಡಬೇಕಾಗಿದೆ. ಮನರಂಜನೆಯ ಜೊತೆ ಸಂದೇಶವನ್ನು ಹೊಂದಿರುವ ಈ ಕನ್ನಡ ಕಿರುಚಿತ್ರ ಪ್ರಪಂಚದ ಮೂಲೆ ಮೂಲೆಗೂ ಪಸರಿಸಬೇಕು ಎಂದರು.

ಪ್ರಾಂಶುಪಾಲ ಸುಬ್ಬಪ್ಪ ಕೈಕಂಬ ಮಾತನಾಡಿ, ರೋಟರಿಯಂತಹ ಸಂಘ ಸಂಸ್ಥೆಗಳು ನಮ್ಮ ಕಿರುಚಿತ್ರ ಎನ್ನುವ ದೃಷ್ಟಿ ಕೋನದೊಂದಿಗೆ ಹತ್ತಿರದ ಶಾಲೆಗಳಲ್ಲಿ ಒಂದೊಂದು ಪ್ರದರ್ಶನ ಮಾಡುವ ಮುಖಾಂತರ ಮುಂದಿನ ಪೀಳಿಗೆಗೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕೆಂದು ಹೇಳಿದರು.
ರೋಟರಿ ಸದಸ್ಯ ರತ್ನಾಕರ್ ರೈ ಮಾತನಾಡಿ, ಹರಿದ್ವರ್ಣ ಕನ್ನಡ ಕಿರುಚಿತ್ರ ಗೆದ್ದರೆ ಪ್ರಕೃತಿ ಗೆದ್ದಂತೆ ಎಂದು ಹೇಳಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ. ಯು.ಪಿ.ಶಿವಾನಂದ, ನಿರ್ಮಾಪಕಿ ಶ್ರದ್ಧಾ ಕೇಶವ ರಾಮಕುಂಜ, ನಿರ್ದೇಶಕ ಚೇತನ್ ಕೆ.ವಿಟ್ಲ, ಸಹ ನಿರ್ದೇಶಕ ಅಚಲ್ ವಿಟ್ಲ, ರೋಟರಿ ಸದಸ್ಯರಾದ ಕಿಶನ್, ಪ್ರೇಮಾನಂದ, ನರಸಿಂಹ, ಹೇಮಲತಾ ಪ್ರದೀಪ್, ನಟಿ ಮನ್ವಿತಾ, ಛಾಯಾಗ್ರಾಹಕ ಮನ್ವಿತ್ ಕುಂಡಡ್ಕ, ಶ್ರೀಧರ್ ಆಚಾರ್ಯ, ಸುಬ್ರಮಣಿ ಕಲ್ಲುಗುಂಡಿ, ನವೀನ್ ಬನ್ನೂರು, ವಿನೀತ್, ಶಶಿಧರ್ ಮಾವಿನಕಟ್ಟೆ ಭಾಗವಹಿಸಿದ್ದರು. ನಿರ್ಮಾಪಕ ಕೇಶವ ರಾಮಕುಂಜ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.