ಸೇವೆ ಮಾಡುತ್ತಿದ್ದೇನೆ ಎಂದು ಗೊತ್ತಾಗದಿರುವುದೇ ಸೇವೆ-ಲಕ್ಷ್ಮೀಶ ತೋಳ್ಪಾಡಿ
ಪುತ್ತೂರು: ನಾವು ಸೇವೆ ಎಂದು ಭಾವಿಸದೆ ಮಾಡುವುದೇ ನಿಜವಾದ ಸೇವೆಯಾಗಿದ್ದು ಅದು ಅತ್ಯಂತ ಸಹಜವಾಗಿರತಕ್ಕಂತಹ ಒಂದು ಸಂಗತಿ. ನಾವು ಸೇವೆ ಮಾಡುತ್ತಾ ಇದ್ದೇವೆ ಎಂದು ಗೊತ್ತಾಗಬಾರದು ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಸಾಹಿತಿ ಲಕ್ಷ್ಮೀಶ ತೊಳ್ಪಾಡಿ ಹೇಳಿದರು.
ಅವರು ಜಿಲ್ಲೆಯ ಹಿರಿಯ ಕ್ಲಬ್ ಆಗಿರುವ ರೋಟರಿ ಕ್ಲಬ್ ಪುತ್ತೂರು ಇದರ ಆಶ್ರಯದಲ್ಲಿ “ಸೇವೆಯೇ ಮನೋಧರ್ಮ” ಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ನೀಡುತ್ತಾ ಮಾತನಾಡಿದರು. ನಮ್ಮ ಹೆಸರು ನಾವು ಮಾಡುವ ಸೇವೆಯನ್ನು ಕೆಡಿಸಬಾರದು. ಸೇವೆ ನಾವು ಮಾಡಲೇಬೇಕಾದ ಕರ್ತವ್ಯ ಮತ್ತು ನಮಗೆ ನಾವೇ ಮಾಡಿಕೊಳ್ಳಬಹುದಾದ ಥೆರಪಿ. ನಮ್ಮದೊಂದು ವಿಶ್ವ ಮನುಷ್ಯರ ಬಳಗ ಹೊರತು ಯಾವುದೇ ಜಾತಿ, ಧರ್ಮ, ಮತ, ಪಂಥಗಳು ಅಲ್ಲ .ಇನ್ನೊಬ್ಬ ಮನುಷ್ಯನನ್ನು ತನ್ನಂತೆ ಅನುಭವಿಸುವ ನಾನು ನೀನು ಒಂದೇ ಎಂದು ಅಂತರಂಗದಲ್ಲಿ ಅನುಭವಿಸುವ ಸಾಮರ್ಥ್ಯವನ್ನು ಗಳಿಸಿಕೊಳ್ಳಬೇಕು. ಅದುವೇ ಸಹಾನುಭೂತಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಡಾ.ಶ್ರೀಪ್ರಕಾಶ್ ಬಿ.ರವರು ಮಾತನಾಡಿ, ಮನುಕುಲದ ಸೇವೆ ನಮ್ಮ ಬದುಕಿಗೆ ನಿಜವಾದ ಸಾರ್ಥಕವನ್ನು ಒದಗಿಸುತ್ತದೆ ಎಂದರು.
ವೇದಿಕೆಯಲ್ಲಿ ನಿಕಟಪೂರ್ವ ಅಧ್ಯಕ್ಷರಾದ ಡಾ ಶ್ರೀಪತಿ ರಾವ್ ಉಪಸ್ಥಿತರಿದ್ದರು. ಕ್ಲಬ್ ಕಾರ್ಯದರ್ಶಿ ಪ್ರೊ| ಸುಬ್ಬಪ್ಪ ಕೈಕಂಬ ವರದಿ ಮಂಡಿಸಿದರು. ನಿಯೋಜಿತ ಅಧ್ಯಕ್ಷ ಪ್ರೊ|ದತ್ತಾತ್ರೇಯ ರಾವ್ ಪ್ರಾರ್ಥಿಸಿದರು. ಡಾ.ಶ್ಯಾಮ್ ಬಿ ಅತಿಥಿಗಳ ಪರಿಚಯ ಮಾಡಿದರು. ಡಾ.ರಾಮಕೃಷ್ಣ ರಾವ್ ವಂದಿಸಿದರು.