ರಾಮಕುಂಜ: ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಾಲೆ ಹಾಗೂ ನೇತ್ರಾವತಿ ತುಳುಕೂಟ ರಾಮಕುಂಜ ಇವರ ಆಶ್ರಯದಲ್ಲಿ ’ಆಟಿದ ಅಮಾಸೆ’ ವಿಶೇಷ ಕಾರ್ಯಕ್ರಮ ಜು.24ರಂದು ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ನಡೆಯಿತು.

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಅಜಿತ್ ಪಾಲೇರಿ ಅವರು ಕಡೀರ ಬೇರು ತೆಗೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿ ಅವರು, ನಶಿಸಿ ಹೋಗುತ್ತಿರುವ ತುಳುನಾಡಿನ ಪರಿಕರಗಳನ್ನು ’ತುಳು ಮ್ಯೂಸಿಯಂ’ನಲ್ಲಿ ಸಂಗ್ರಹಿಸುವ ಕೆಲಸವನ್ನು ರಾಮಕುಂಜ ಆಂಗ್ಲಮಾಧ್ಯಮ ಶಾಲೆ ಮಾಡುತ್ತಿದೆ. ಇಲ್ಲಿ ಆಟಿ ತಿಂಗಳ 73 ಬಗೆಯ ವಿಶೇಷ ಖಾದ್ಯಗಳನ್ನು ತಯಾರಿಸುವ ಮೂಲಕ ಆಟಿ ಅಮಾವಾಸ್ಯೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ ಎಂದು ಮೆಚ್ಚುಗೆ ಸೂಚಿಸಿದರು.
ಉಪನ್ಯಾಸ ನೀಡಿದ ತುಳು ವರ್ಲ್ಡ್ ಪೌಂಡೇಶನ್ ನಿರ್ದೇಶಕ ಡಾ.ರಾಜೇಶ್ ಆಳ್ವ ಮಾತನಾಡಿ, ಆಟಿಯಲ್ಲಿನ ಆಹಾರ ಧಾನ್ಯಗಳ ಸೇವನೆಯಿಂದ ಆಯಸ್ಸು ವೃದ್ಧಿಸಲಿದೆ. ತುಳುನಾಡಿನ ಆಚರಣೆಗಳ ಹಿಂದೆ ಯಾವುದೇ ಮಾರ್ಕೆಟಿಂಗ್ ಇರುವುದಿಲ್ಲ. ಇದರಿಂದಾಗಿ ತುಳುನಾಡಿನ ಆಚರಣೆಗಳು ಹೆಚ್ಚು ಪ್ರಸಿದ್ಧಿ ಪಡೆದುಕೊಂಡಿಲ್ಲ. ಈ ಆಚರಣೆಗಳು ಪ್ರಾಕೃತಿಕವಾಗಿರುವಂತದ್ದು ಎಂದರು.
ಅಧ್ಯಕ್ಷತೆ ವಹಿಸಿದ್ದ ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಾಲೆಯ ಕಾರ್ಯದರ್ಶಿ ಕೆ.ಸೇಸಪ್ಪ ರೈ ಮಾತನಾಡಿ, ಇಲ್ಲಿ ತುಳುನಾಡಿನ ವಿಶೇಷ ಆಚರಣೆಗಳು ಪಾಠದ ಅಂಗವಾಗಿದೆ. ಇದರಿಂದಾಗಿ ಮಕ್ಕಳಲ್ಲಿ ಪ್ರಜ್ಞೆಯೂ ಬೆಳೆಯುತ್ತದೆ. ಪ್ರತಿವರ್ಷವೂ ಶಾಲೆಯಲ್ಲಿ ಆಟಿ ಆಚರಣೆ ಮಾಡಲಾಗುತ್ತಿದೆ. ಮಕ್ಕಳ ಮೂಲಕ ಪೋಷಕರಿಂದಲೇ ವಿವಿಧ ವಸ್ತುಗಳನ್ನು ಸಂಗ್ರಹಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟೂ ವಿಶೇಷವಾಗಿ ಆಚರಿಸಲಾಗುವುದು ಎಂದರು.

ರಾಮಕುಂಜ ಗ್ರಾ.ಪಂ.ಪಿಡಿಒ ಮೋಹನ್‌ಕುಮಾರ್, ಹೊಸಮಠ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೋಮಸುಂದರ ಶೆಟ್ಟಿ, ಕನ್ನಡ ಸಾಹಿತ್ಯ ಪರಿಷತ್ ಕಡಬ ಹೋಬಳಿ ಅಧ್ಯಕ್ಷ ಪದ್ಮಪ್ಪ ಗೌಡ ರಾಮಕುಂಜ, ಆಲಂಕಾರು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಮಾಧವ ಪೂಜಾರಿ ಕಯ್ಯಪೆ, ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಗಿರೀಶ್ ಎ.ಪಿ.ಸಂದರ್ಭೋಚಿತವಾಗಿ ಮಾತನಾಡಿದರು.
ರಾಮಕುಂಜ ಗ್ರಾ.ಪಂ.ಕಾರ್ಯದರ್ಶಿ ಲಲಿತಾ, ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ ಕೆ., ಶ್ರೀ ರಾಮಕುಂಜೇಶ್ವರ ವಿದ್ಯಾಲಯದ ಪ್ರಾಂಶುಪಾಲ ಪ್ರವೀದ್, ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಾಲಾ ಆಡಳಿತಾಧಿಕಾರಿ ಆನಂದ ಎಸ್.ಟಿ., ಪ್ರೌಢಶಾಲಾ ಮುಖ್ಯಶಿಕ್ಷಕಿ ಗಾಯತ್ರಿ, ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿ ಲೋಹಿತ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಕ್ಷಕಿ ಸರಿತಾ ಸ್ವಾಗತಿಸಿ, ವ್ಯವಸ್ಥಾಪಕ ರಮೇಶ್ ರೈ ವಂದಿಸಿದರು. ಶಿಕ್ಷಕರಾದ ಸಂಚಿತ, ವಸಂತಕುಮಾರ್ ನಿರೂಪಿಸಿದರು. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಬಹುಮಾನ ವಿತರಣೆ;
ಆಟಿ ಅಮಾವಾಸ್ಯೆ ಸಲುವಾಗಿ ಪೋಷಕರಿಗೆ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಾಲೆ ಹಾಗೂ ಶ್ರೀ ರಾಮಕುಂಜೇಶ್ವರ ವಿದ್ಯಾಲಯದಲ್ಲಿ ಆಟಿ ತಿಂಗಳ ವಿವಿಧ ಖಾದ್ಯಗಳ ತಯಾರಿಕೆಗೆ ಅತೀ ಹೆಚ್ಚಿನ ವಸ್ತುಗಳನ್ನು ತಂದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು. ಸಹಕರಿಸಿದ ಶಿಕ್ಷಕ-ರಕ್ಷಕ ಸಂಘದ ಪದಾಧಿಕಾರಿಗಳನ್ನು ಗೌರವಿಸಲಾಯಿತು.
74 ಬಗೆಯ ವಿಶೇಷ ಖಾದ್ಯ;
ನೆಲನೆಲ್ಲಿ ಕಷಾಯ, ಪಾಲೆಕೆತ್ತೆ ಕಷಾಯ, ಕುಂಟೋಲು ಕಾಪಿ, ಕಡೀರಬೇರಿನ ಕಷಾಯ, ಪುನರ್ಪುಳಿ ಸಾರು, ನುಗ್ಗೆ ಸೊಪ್ಪು ಸಾರು, ಚೀಮುಳ್ಳು ಸಾರು ಸೇರಿದಂತೆ ವಿವಿಧ ಬಗೆಯ ಚಟ್ನಿ, ಉಪ್ಪಿನಕಾಯಿ, ಗಸಿ, ಪಾಯಸ, ಪಲ್ಯ ಸೇರಿದಂತೆ ಸುಮಾರು 74 ಬಗೆಯ ಸೊತ್ತುಗಳಿಂದ ತಯಾರಿಸಿದ ಆಟಿ ತಿಂಗಳಲ್ಲಿ ಉಪಯೋಗಿಸುವ ಔಷದೀಯ ಗುಣವುಳ್ಳ ಸುಮಾರು 74 ಬಗೆಯ ವಿಶೇಷ ಖಾದ್ಯಗಳನ್ನು ತಯಾರಿಸಿ ನೀಡಲಾಯಿತು. 500ಕ್ಕೂ ಹೆಚ್ಚು ಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಆಟಿಯ ಖಾದ್ಯಗಳನ್ನು ಸವಿದ್ದರು.