ರಾಮಕುಂಜ: ಸಂತಾನಪ್ರಾಪ್ತಿಗೆ ಪ್ರಸಿದ್ಧಿ ಪಡೆದುಕೊಂಡಿರುವ ರಾಮಕುಂಜ ಗ್ರಾಮದ ಕೊಂಡಪ್ಪಾಡಿ ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ಆಟಿ ಅಮವಾಸ್ಯೆ ಪ್ರಯುಕ್ತ ಜು.24ರಂದು ವಿಶೇಷ ಪೂಜೆ ನಡೆಯಿತು.

ಸಂತಾನ ಪ್ರಾಪ್ತಿಗೆ ಹೆಸರುವಾಸಿಯಾದ ಈ ದೇವಾಲಯದಲ್ಲಿ ಸಂತಾನ ಅಭೀಷ್ಟೆಗಾಗಿ ದಂಪತಿಗಳು ಸಂಕಲ್ಪ ಮಾಡಿಕೊಂಡರು. ಇಷ್ಠಾರ್ಥ ಸಿದ್ದಿಸಿಕೊಂಡ ದಂಪತಿಗಳು ಹರಕೆ ಸಲ್ಲಿಸಿದರು. ವಿಶೇಷ ಪೂಜೆ ಕೈಂಕರ್ಯಗಳು ನಡೆಯಿತು. ಅರ್ಚಕ ರಾಮಶಂಕರ ಮುಚ್ಚಿಂತ್ತಾಯರ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ನಡೆಯಿತು. ಆಡಳಿತ ಮೊಕ್ತೇಸರ ಗೋಕುಲ ಪಿ.ಎಸ್., ಪರ್ಲತ್ತಾಯ ಟ್ರಸ್ಟ್‌ನ ಪ್ರಮುಖರಾದ ವೆಂಕಟರಾಜ್, ರವಿರಾಜ್, ಆನಂತಪದ್ಮನಾಭ ಸೇವಾ ಟ್ರಸ್ಟ್‌ನ ಪ್ರಮುಖರಾದ ಟಿ.ನಾರಾಯಣ ಭಟ್, ಅನಂತಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
ದಂಪತಿಗಳಿಂದ ಪ್ರಾರ್ಥನೆ:
ಅಟಿ ಅಮವಾಸ್ಯೆಯ ಪೂಜೆ ಸಂದರ್ಭದಲ್ಲಿ ಹಲವು ದಂಪತಿ ಸಂತಾನ ಪ್ರಾಪ್ತಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ದಂಪತಿ ದೇವಾಲಯದ ಎದುರಿನ ಕೆರೆಯಲ್ಲಿ ತೀರ್ಥ ಸ್ನಾನ ಮಾಡಿ, ಬಳಿಕ ಸ್ನಾನ ಮಾಡಿದ ಬಟ್ಟೆಯಲ್ಲೇ ದೇವಾಲಯಕ್ಕೆ ಬಂದು ಪ್ರಾರ್ಥನೆ ಸಲ್ಲಿಸಿದರು. ಅರ್ಚಕರು ದೇವಾಲಯದ ಪ್ರಸಾದದೊಂದಿಗೆ ವಿಶೇಷ ಅರ್ಚನೆಯನ್ನು ಮಾಡಿದ ಅಕ್ಕಿಯನ್ನು ದಂಪತಿಗಳಿಗೆ ನೀಡಿದರು. ಈ ಅಕ್ಕಿಯನ್ನು ದಂಪತಿಗಳು 12 ದಿನ ತಮ್ಮ ಮನೆಯಲ್ಲಿ ಪ್ರತೀ ದಿನ ಬೆಳಿಗ್ಗೆ ಸ್ನಾನ ಮಾಡಿ ಮಡಿಯುಟ್ಟು ತಾವು ಸೇವಿಸುವ ಆಹಾರದಲ್ಲಿ ಈ ಅಕ್ಕಿಯನ್ನು ಬೆರೆಸಿ ಸ್ವೀಕರಿಸಬೇಕು. ಹೀಗೆ ಮಾಡಿದಲ್ಲಿ ದಂಪತಿಗಳಿಗೆ ಸಂತಾನ ಪ್ರಾಪ್ತಿಯಾಗುವುದೆಂದು ಭಕ್ತರ ನಂಬಿಕೆಯಾಗಿದೆ.