ಬೆಟ್ಟಂಪಾಡಿ: ಇಲ್ಲಿನ ಡೆಮ್ಮಂಗಾರ ಕೃಷ್ಣಪ್ರಸಾದ್ ರೈ ಎಂಬವರ ಮನೆ ಮೇಲೆ ಧರೆ ಕುಸಿದು ಮನೆಗೆ ಸಂಪೂರ್ಣ ಹಾನಿಯಾಗಿರುವ ಘಟನೆ ಜು.24ರಂದು ಮಧ್ಯಾಹ್ನ ನಡೆದಿದೆ.

ಮಧ್ಯಾಹ್ನ ಮನೆಯ ಕೋಣೆಯಲ್ಲಿ ವಿಶ್ರಾಂತಿಯಲ್ಲಿದ್ದ ಕೃಷ್ಣಪ್ರಸಾದ್ ರವರು ಕೋಣೆಯಿಂದ ಹೊರಗೆ ಬಂದಾಕ್ಷಣ ಮನೆಯ ಒಂದು ಭಾಗದ ಧರೆ ಕುಸಿದು ಕೋಣೆಯ ಭಾಗದ ಮೇಲೆ ಬಿದ್ದಿದೆ. ಇದರಿಂದಾಗಿ ಯಾವುದೇ ಜೀವಹಾನಿ ಸಂಭವಿಸಿಲ್ಲ. ಅದೇ ಭಾಗದಲ್ಲಿ ನಾಯಿಯನ್ನೂ ಕಟ್ಟಿಹಾಕಲಾಗಿತ್ತಾದರೂ ಅದಕ್ಕೂ ಪವಾಡಸದೃಶ ಯಾವುದೇ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ.
ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕಳೆದ ಕೆಲದಿನಗಳ ಹಿಂದೆ ಸ್ವಲ್ಪ ಧರೆ ಕುಸಿದಿತ್ತು. ಆದರೆ ಜು.18ರಂದು ಮಧ್ಯಾಹ್ನ ಭಾರೀ ಪ್ರಮಾಣದಲ್ಲಿ ಮಣ್ಣು ಕುಸಿದಿದ್ದು, ಮಣ್ಣಿನ ಬೃಹತ್ ರಾಶಿ ಗೋಚರಿಸಿದೆ. ಇನ್ನಷ್ಟು ಮಣ್ಣು ಕುಸಿದು ಬೀಳುವ ಅಪಾಯಕಾರಿ ಸ್ಥಿತಿಯಲ್ಲಿದ್ದು, ಭವಿಷ್ಯದಲ್ಲಿ ಅಲ್ಲಿ ವಾಸ್ತವ್ಯಕ್ಕೆ ಕಷ್ಟವಾಗಿದೆ ಎಂದು ಕೃಷ್ಣಪ್ರಸಾದ್ ರವರು ಆತಂಕ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಮತ್ತು ಕಂದಾಯ ಇಲಾಖೆಯವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.