ಉಪ್ಪಿನಂಗಡಿ: ಸತತ ಮಳೆ ಸುರಿಯುತ್ತಿದ್ದರೂ ನೇತ್ರಾವತಿ ನದಿಯಲ್ಲಿ ಯಥಾ ಸ್ಥಿತಿಯಲ್ಲಿದ್ದ ನೀರಿನ ಮಟ್ಟವು ಗುರುವಾರ ಮಧ್ಯಾಹ್ನದ ಬಳಿಕ ಏರಿಕೆಯನ್ನು ಕಾಣಿಸತೊಡಗಿ ರಾತ್ರಿ ವೇಳೆಗಾಗಲೇ ಒಂದು ಮೀಟರ್‌ನಷ್ಟು ಹೆಚ್ಚಳಗೊಂಡು ಹರಿಯತೊಡಗಿದೆ.
ಗುರುವಾರ ಮಧ್ಯಾಹ್ನ ತನಕ 26 ಮೀಟರ್ ನಲ್ಲಿದ್ದ ನದಿಯ ನೀರಿನ ಮಟ್ಟವು ಬಳಿಕ ನಿಧಾನ ಗತಿಯ ಏರಿಕೆಯನ್ನು ಕಾಣತೊಡಗಿ, ರಾತ್ರಿ ವೇಳೆ 27 ಮೀಟರ್‌ನಲ್ಲಿ ತನ್ನ ಹರಿಯುವಿಕೆಯ ಮಟ್ಟವನ್ನು ದಾಖಲಿಸಿದೆ.

ಜಿಲ್ಲೆಯಾದ್ಯಂತ ಸತತ ಮಳೆಯಾಗುತ್ತಿದ್ದರೂ ನದಿಯ ನೀರಿನ ಮಟ್ಟದಲ್ಲಿ ಗಣನೀಯ ಏರಿಕೆ ಇಲ್ಲಿ ಕಾಣಿಸಿರಲಿಲ್ಲ. ಗುರುವಾರದಂದು ಪಶ್ಚಿಮಘಟ್ಟ ಪ್ರದೇಶದಲ್ಲಿ ಭಾರೀ ಮಳೆ ಸುರಿದ ಪರಿಣಾಮ ನದಿಯಲ್ಲಿನ ನೀರಿನ ಮಟ್ಟದಲ್ಲಿ ಹೆಚ್ಚಳ ಕಾಣಿಸಿತು. ನೇತ್ರಾವತಿಗಿಂತಲೂ ಕುಮಾರಧಾರಾ ನದಿಯ ನೀರಿನ ಪ್ರಮಾಣದಲ್ಲಿ ಗಣನೀಯ ಹೆಚ್ಚಳವಿದ್ದು, ಭಾರೀ ರಭಸದಿಂದ ಹರಿದು ಬಂದು ನೇತ್ರಾವತಿ ನದಿಯನ್ನು ಸಂಗಮಿಸುತ್ತಿದೆ.
ಇನ್ನೂ ಎರಡು ದಿನಗಳ ಕಾಲ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯನ್ನು ಹವಾಮಾನ ಇಲಾಖೆ ಪ್ರಕಟಿಸಿದ್ದು, ಮುಂದಿನ ದಿನಗಳಲ್ಲಿ ನೇತ್ರಾವತಿ ನದಿಯ ನೀರಿನ ಹರಿಯುವಿಕೆಯಲ್ಲಿ ಇನ್ನಷ್ಟು ಹೆಚ್ಚಳದ ಸಾಧ್ಯತೆಯನ್ನು ಅಂದಾಜಿಸಲಾಗಿದೆ.
ಉಪ್ಪಿನಂಗಡಿಯಲ್ಲಿ ನೇತ್ರಾವತಿ ನದಿಯಲ್ಲಿ ಸಮುದ್ರಮಟ್ಟಕ್ಕಿಂತ 31.5 ಮೀಟರ್ ಎತ್ತರದಲ್ಲಿ ನೀರು ಹರಿದರೆ ಅಪಾಯದ ಮಟ್ಟವಾಗಿದ್ದು, ಗುರುವಾರ ರಾತ್ರಿ ನದಿಯ ನೀರಿನ ಮಟ್ಟ ಅಪಾಯದ ಮಟ್ಟಕಿಂತ 4.5 ಮೀಟರ್ ಕೆಳಗೆ ಹರಿಯುತ್ತಿದೆ. ಆದರೂ ನದಿಯಲ್ಲಿ ನೀರಿನ ಮಟ್ಟದಲ್ಲಿ ನಿರಂತರ ಹೆಚ್ಚಳ ಕಾಣಿಸುತ್ತಿದೆ. ಸಂಭಾವ್ಯ ಪರಿಸ್ಥಿತಿಯನ್ನು ನಿಭಾಯಿಸಲು ಪ್ರವಾಹ ರಕ್ಷಣಾ ತಂಡ ದೇವಾಲಯದ ಬಳಿ ನದಿ ತೀರದಲ್ಲಿ ಸನ್ನದ್ಧವಾಗಿದೆ.