ಕಟ್ಟಡ,ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳಿಗಾಗಿ ಕುರಿಯದಲ್ಲಿ ಶ್ರಮಿಕ ವಸತಿ ಶಾಲೆ: ಸರಕಾರದ ಅನುಮೋದನೆ

0

ಪುತ್ತೂರು:ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಂಡಳಿಯ ನೋಂದಾಯಿತ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ರಾಜ್ಯದ 31 ಜಿಲ್ಲೆಗಳಲ್ಲಿ ತಲಾ ಒಂದರಂತೆ 1125.25 ಕೋಟಿ ರೂ.ವೆಚ್ಚದಲ್ಲಿ 31 ಶ್ರಮಿಕ ವಸತಿ ಶಾಲೆಗಳ ನಿರ್ಮಾಣಕ್ಕೆ ಸರಕಾರ ಅನುಮೋದನೆ ನೀಡಿದ್ದು ದಕ್ಷಿಣ ಕನ್ನಡ ಜಿಲ್ಲೆಗೆ ಸಂಬಂಧಿಸಿ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕುರಿಯ ಗ್ರಾಮದಲ್ಲಿ 37.65 ಕೋಟಿ ರೂ.ವೆಚ್ಚದಲ್ಲಿ ಶ್ರಮಿಕ ವಸತಿ ಶಾಲೆ ನಿರ್ಮಾಣವಾಗಲಿದೆ.ಶಾಲೆಗಳ ನಿರ್ವಹಣಾ ವೆಚ್ಚವನ್ನು ಮಂಡಳಿಯ ನಿಧಿಯಿಂದ ಭರಿಸಲು ಅನುಮೋದನೆ ನೀಡಲಾಗಿದೆ.


ಈ ಶಾಲೆಗಳಲ್ಲಿ 6ನೇ ತರಗತಿಯಿಂದ 12ನೇ ತರಗತಿವರೆಗೆ ವಿದ್ಯಾಭ್ಯಾಸ ನೀಡಲಾಗುತ್ತದೆ.ಶಾಲಾ ಕಟ್ಟಡದಲ್ಲಿ ತರಗತಿಗೊಂದರಂತೆ 7 ತರಗತಿ ಕೊಠಡಿಗಳು, 5 ಪ್ರಯೋಗಾಲಯಗಳು, ಗ್ರಂಥಾಲಯ, ಬಹುಚಟುವಟಿಕೆ ಕೊಠಡಿ ಹಾಗೂ ಕ್ರೀಡಾ ಸಾಮಾಗ್ರಿಗಳ ಕೊಠಡಿ, ಕಚೇರಿ ಕೊಠಡಿ, ಸಿಬ್ಬಂದಿ ಕೊಠಡಿ ಹಾಗೂ ಇತರ ಕೊಠಡಿಗಳನ್ನು ನಿರ್ಮಿಸಲಾಗುವುದು.ಅಲ್ಲದೆ ಬಾಲಕ,ಬಾಲಕಿಯರ ವಸತಿ ನಿಲಯಗಳು,ಭೋಜನಾಲಯ ಮತ್ತು ಅಡುಗೆ ಮನೆ, ಶಿಕ್ಷಕರಿಗೆ ಪ್ರತ್ಯೇಕವಾಗಿ ವಸತಿಗೃಹ ನಿರ್ಮಿಸಲಾಗುವುದು.ಕಟ್ಟಡ ನಿರ್ಮಾಣದ ನಂತರ ಕಟ್ಟಡಗಳಲ್ಲಿ ಅಗತ್ಯ ಪ್ರಯೋಗಾಲಯ ಉಪಕರಣಗಳು, ಪೀಠೋಪಕರಣ ಹಾಗೂ ಪೀಠೋಪಕರಣಗಳ ಸಹಿತ ಸಂಪೂರ್ಣ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದರಿಂದ ಪ್ರತಿ ಶಾಲೆಯ ಒಟ್ಟು ವಿಸ್ತೀರ್ಣ 7720.56 ಚದರ ಮೀ.(83073.22 ಚದರಡಿ)ಹೊಂದಿರುವಂತೆ ಪ್ರಸ್ತಾಪಿಸಲಾಗಿದೆ.


ಬಜೆಟ್‌ನಲ್ಲಿ ಘೋಷಣೆ:
ಕಟ್ಟಡ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡಲು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ರಾಜ್ಯದ 31 ಜಿಲ್ಲೆಗಳಲ್ಲಿಯೂ 6ನೇ ತರಗತಿಯಿಂದ 12ನೇ ತರಗತಿವರೆಗಿನ ವಸತಿ ಶಾಲೆಗಳನ್ನು ಒಟ್ಟಾರೆ 750 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಬಜೆಟ್‌ನಲ್ಲಿ ಘೋಷಿಸಿದ್ದರು.ಅದಾದ ಬಳಿಕ ಮಾ.1ರಂದು ಕಾರ್ಮಿಕ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಂಡಳಿಯ 44ನೇ ಸಭೆಯಲ್ಲಿ ಕಾರ್ಮಿಕರ ಅಭ್ಯುದಯಕ್ಕಾಗಿ ಈ ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿತ್ತು.


37.65 ಕೋಟಿ ರೂ.ವೆಚ್ಚ:
ಕುರಿಯದಲ್ಲಿ 37.65 ಕೋಟಿ ರೂ.ವೆಚ್ಚದಲ್ಲಿ ಈ ಶ್ರಮಿಕ ಶಾಲೆ ನಿರ್ಮಾಣವಾಗಲಿದೆ.ಈ ಪೈಕಿ ಕಟ್ಟಡ ಕಾಮಗಾರಿಗೆ 33 ಕೋಟಿ ರೂ.,ಕಂಪೌಂಡ್ ನಿರ್ಮಾಣಕ್ಕೆ 90 ಲಕ್ಷ ರೂ., ಪೀಠೋಪಕರಣಗಳಿಗೆ 3 ಕೋಟಿ ರೂ. ಹಾಗೂ ಲ್ಯಾಬ್ ಉಪಕರಣಗಳ ವೆಚ್ಚವಾಗಿ 75 ಲಕ್ಷ ರೂ. ಸೇರಿದಂತೆ ಒಟ್ಟು 37.65 ಕೋಟಿ ರೂ.ವೆಚ್ಚದಲ್ಲಿ ಶ್ರಮಿಕ ವಸತಿ ಶಾಲೆ ನಿರ್ಮಾಣವಾಗಲಿದೆ.


ಇತಿಹಾಸದ ಪುಟದಲ್ಲಿ ದಾಖಲಾಗಲಿದೆ-ಅಶೋಕ್ ಕುಮಾರ್ ರೈ
ದ.ಕ ಜಿಲ್ಲೆಯ ಕಾರ್ಮಿಕ ವಸತಿ ಶಾಲೆಯನ್ನು ಸರಕಾರ ಪುತ್ತೂರಿಗೆ ಮಂಜೂರು ಮಾಡಿದೆ.ಕಾರ್ಮಿಕ ವಸತಿ ಶಾಲೆಯನ್ನು ಪುತ್ತೂರಿಗೆ ನೀಡುವಂತೆ ಕಾರ್ಮಿಕ ಸಚಿವರಿಗೆ ಮನವಿ ಮಾಡಿದ್ದೆ ಮತ್ತು ವಸತಿ ಶಾಲೆ ನಿರ್ಮಾಣಕ್ಕೆ ಕುರಿಯ ಗ್ರಾಮದಲ್ಲಿ 15 ಎಕ್ರೆ ಜಾಗವನ್ನು ಮೀಸಲಿರಿಸಿದ್ದೆ.ಪುತ್ತೂರಿಗೆ ಮಂಜೂರಾದ ಕಾರ್ಮಿಕರ ವಸತಿ ಶಾಲೆಯಲ್ಲಿ ಒಂದರಿಂದ 12ನೇ ತರಗತಿ ತನಕ ವಿದ್ಯಾಭ್ಯಾಸ ನೀಡಲಾಗುತ್ತದೆ.ಕಾರ್ಮಿಕರ ಮಕ್ಕಳಿಗೆಂದೇ ಈ ವಸತಿ ಶಾಲೆ ನಿರ್ಮಾಣವಾಗಲಿದೆ. ಬಡ ಕಾರ್ಮಿಕರ ಮಕ್ಕಳ ಕಲ್ಯಾಣಕ್ಕೆ ಕರ್ನಾಟಕದ ಕಾಂಗ್ರೆಸ್ ಸರಕಾರ ನೀಡಿದ ಮಹತ್ತರ ಯೋಜನೆ ಇದಾಗಿದ್ದು ಪುತ್ತೂರು ವಿಧಾನಸಭಾ ಕ್ಷೇತ್ರದ ಪ್ರತಿಯೊಬ್ಬ ಕಾರ್ಮಿಕರ ಮಕ್ಕಳೂ ಇದನ್ನು ಬಳಸಿಕೊಳ್ಳಬೇಕು.ಸುಮಾರು 1000 ಮಂದಿ ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡಲಿದ್ದಾರೆ.ಜಿಲ್ಲೆಯಲ್ಲೇ ಅತಿ ದೊಡ್ಡ ವಸತಿ ಶಾಲೆ ಇದಾಗಿದೆ.ಪುತ್ತೂರು ಕ್ಷೇತ್ರಕ್ಕೆ ಇನ್ನಷ್ಟು ಅಭಿವೃದ್ದಿ ಯೋಜನೆಗಳು ಮುಂದೆ ಬರಲಿದೆ.ಪುತ್ತೂರಿಗೆ ಕಾರ್ಮಿಕ ವಸತಿ ಶಾಲೆ ಮಂಜೂರು ಮಾಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಕಾರ್ಮಿಕ ಸಚಿವರಿಗೆ ಅಭಿನಂದನೆಯನ್ನು ಸಲ್ಲಿಸುತ್ತಿದ್ದೇನೆ.ಇದು ಪುತ್ತೂರಿನ ಇತಿಹಾಸ ಪುಟದಲ್ಲಿ ದಾಖಲಾಗಲಿದೆ
-ಅಶೋಕ್ ಕುಮಾರ್ ರೈ, ಶಾಸಕರು ,ಪುತ್ತೂರು

LEAVE A REPLY

Please enter your comment!
Please enter your name here