ಕಡಬ: ಆಲಂಕಾರು ಮೂರ್ತೆದಾರರ ಸೇವಾ ಸಹಕಾರ ಸಂಘವು 2024-25ನೇ ಸಾಲಿನಲ್ಲಿ ರೂ.250.16 ಕೋಟಿ ವ್ಯವಹಾರ ನಡೆಸಿ ರೂ 1.೦3 ಕೋಟಿ ಲಾಭ ಗಳಿಸಿದೆ. ಜು.27ರಂದು ಸಂಘದ ಮಹಾಸಭೆ ಆಲಂಕಾರಿನಲ್ಲಿರುವ ಕೇಂದ್ರ ಕಚೇರಿಯ ಬೈದಶ್ರೀ ಸಭಾಂಗಣದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಎನ್.ಮುತ್ತಪ್ಪ ಪೂಜಾರಿ ನೈಯ್ಯಲ್ಗ ತಿಳಿಸಿದ್ದಾರೆ.

ಸಂಘವು 1991ರಲ್ಲಿ ಪ್ರಾರಂಭಗೊಂಡು 2005ರಿಂದ ಬ್ಯಾಂಕಿಂಗ್ ವ್ಯವಹಾರವನ್ನು ಪ್ರಾರಂಭಿಸಿರುತ್ತದೆ. ಆಲಂಕಾರಿನಲ್ಲಿ ಸ್ವಂತ ನಿವೇಶನದ ಕಟ್ಟಡ ಬೈದಶ್ರೀ ಸಹಕಾರ ಸೌಧದಲ್ಲಿ ಕೇಂದ್ರ ಕಚೇರಿ ಹೊಂದಿದ್ದು, ಕಡಬ, ನೂಜಿಬಾಳ್ತಿಲ-ಕಲ್ಲುಗುಡ್ಡೆ, ನೆಟ್ಟಣ ಮತ್ತು ಕೊಯಿಲದಲ್ಲಿ ಬ್ಯಾಂಕಿಂಗ್ ವ್ಯವಹಾರದ ಶಾಖೆಗಳಿವೆ. 2024-25ನೇ ಸಾಲಿನಲ್ಲಿ ಶೇ 98.14ಸಾಲ ವಸೂಲಾತಿ ಸಾಧಿಸಿರುತ್ತದೆ. ಲೆಕ್ಕಪರಿಶೋಧನೆಯಲ್ಲಿ ಸತತವಾಗಿ ಕಳೆದ 12 ವರ್ಷಗಳಿಂದ ’ಎ’ ವರ್ಗೀಕರಣದಲ್ಲಿ ಗುರುತಿಸಿಕೊಂಡಿದೆ. ಸಂಘವು ಸತತ 3 ವರ್ಷಗಳಿಂದ ವ್ಯವಹಾರದಲ್ಲಿ ಜಿಲ್ಲಾಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ ಎಂದು ಅವರು ತಿಳಿಸಿದರು.
ಜಿಲ್ಲಾ ಮಟ್ಟಕ್ಕೆ ವಿಸ್ತರಣೆ:
ಕಾರ್ಯಕ್ಷೇತ್ರದ ಹೊರಗಿನವರು ನಮ್ಮಲ್ಲಿ ನಂಬಿಕೆ, ವಿಶ್ವಾಸ ಇಟ್ಟು ತಮ್ಮ ಸಂಸ್ಥೆಯಲ್ಲಿ ಸದಸ್ಯರಾಗಿ ವ್ಯವಹಾರ ನಡೆಸಲು ಬೇಡಿಕೆ ಬಂದಿರುವುದರಿಂದ 2024-25ರಲ್ಲಿ ವಿಶೇಷ ಮಹಾಸಭೆ ಕರೆದು ಕಾರ್ಯವ್ಯಾಪ್ತಿಯನ್ನು ಜಿಲ್ಲಾಮಟ್ಟಕ್ಕೆ ವಿಸ್ತರಿಸಿ ಬೈಲಾ ತಿದ್ದುಪಡಿ ಮಾಡಿಕೊಂಡು ಇಲಾಖಾನುಮೋದನೆ ಪಡೆದುಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಬೆಳ್ಳಾರೆ ಮತ್ತು ನಿಂತಿಕಲ್ಲುನಲ್ಲಿ ಶಾಖೆ ತೆರೆಯಲು ಯೋಜನೆ ರೂಪಿಸಿಕೊಳ್ಳಲಾಗಿದೆ ಎಂದರು. ನಮ್ಮ ಸಂಘದಲ್ಲಿ 97 ಸ್ವ ಸಹಾಯ ಸಂಘಗಳಿದ್ದು, ಸ್ವಸಹಾಯ ಸಂಘಗಳು ವ್ಯವಹಾರ ನಡೆಸಿದ ಗತ 3 ವರ್ಷದ ಲಾಭಾಂಶ ರೂ.16.16 ಲಕ್ಷವನ್ನು ಗುಂಪಿನ ಸದಸ್ಯರಿಗೆ ನೀಡುವುದರೋದಿಗೆ ಸಂಘದ ವತಿಯಿಂದ 1.74 ಲಕ್ಷ ರೂ ಮೌಲ್ಯದ 746 ಸ್ಟೀಲ್ ಪಾತ್ರೆ ಉಡುಗೊರೆಯನ್ನು ನೀಡಲಾಗಿದೆ.
ಎಲ್ಲ ಸಮುದಾಯದವರು ನಮ್ಮಲ್ಲಿ ನಂಬಿಕೆ ವಿಶ್ವಾಸ ಇಟ್ಟು ವ್ಯವಹಾರ ನಡೆಸುತ್ತಿದ್ದು ಕೇವಲ ಲಾಭದ ಉದ್ದೇಶವನ್ನಿಟ್ಟುಕೊಂಡು ವ್ಯವಹಾರ ನಡೆಸದೆ ಸಮಾಜದ ಎಲ್ಲಾ ಸಮುದಾಯದ ವ್ಯಕ್ತಿಗಳಿಗೂ ಸೌಲಭ್ಯ ಸಿಗಬೇಕು ಎನ್ನುವ ನಿಟ್ಟಿನಲ್ಲಿ ಗ್ರಾಹಕರು ಆರ್ಥಿಕವಾಗಿ ತೀರಾ ಸಂಕಷ್ಟದಲ್ಲಿದ್ದಾಗ ಸಹಾಯಧನ ವಿತರಣೆ, ಮೂರ್ತೆದಾರ ವಯೋವೃದ್ದರಿಗೆ ಆರ್ಥಿಕ ನೆರವು, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ವಿತರಣೆಯಂತಹ ಕಾರ್ಯಕ್ರಮಮನ್ನು ಇಟ್ಟುಕೊಂಡಿದೆ.
ಪ್ರತಿಭಾ ಪುರಸ್ಕಾರ:
ಪ್ರತಿ ವರ್ಷದಂತೆ ಮಹಾಸಭೆಯಲ್ಲಿ ಸಂಘದ ಕಾರ್ಯವ್ಯಾಪ್ತಿಯಲ್ಲಿ ಬರುವ ವಿದ್ಯಾಸಂಸ್ಥೆಗಳಲ್ಲಿ ವ್ಯಾಸಂಗ ಮಾಡಿರುವ, ಕಳೆದ ಸಾಲಿನ ಎಸ್.ಎಸ್.ಎಲ್.ಸಿ, ಪಿ.ಯು.ಸಿ ಮತ್ತು ಪದವಿ ತರಗತಿಯಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಿ ಗೌರವಿಸಲಾಗುವುದು.
ವಿದ್ಯಾರ್ಥಿ ವೇತನ:
ಸಂಘದ ಸದಸ್ಯರ ಮಕ್ಕಳ ಪೈಕಿ ಪ್ರತಿಭಾನ್ವಿತರಿಗೆ, ಮೂರ್ತೆದಾರ ಸದಸ್ಯರ ಮಕ್ಕಳಿಗೆ, ಸರಕಾರಿ ಪ್ರೌಢಶಾಲೆ ಮತ್ತು ಕಾಲೇಜು ನಲ್ಲಿ ವ್ಯಾಸಂಗ ಮಾಡಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುವುದು.
ದತ್ತಿನಿಧಿ ವಿದ್ಯಾರ್ಥಿವೇತನ:
ದತ್ತಿನಿಧಿ ಠೇವಣಿ ಇರಿಸಿದ ಸದಸ್ಯರು ಸೂಚಿಸಿದ ಅರ್ಹ ಬಡವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುವುದು ಎಂದು ಹೇಳಿದರು. ಸಂಘದ ಉಪಾಧ್ಯಕ್ಷರಾದ ಜನಾರ್ದನ ಪೂಜಾರಿ ಕದ್ರ, ಮುಖ್ಯಕಾರ್ಯನಿರ್ವಹಣಾಧಿಕಾರಿ ಬಿ.ಲಿಂಗಪ್ಪ ಪೂಜಾರಿ ನೈಯ್ಯಲ್ಗ ಉಪಸ್ಥಿತರಿದ್ದರು.
ಜು.27 ಮಹಾಸಭೆ:
ಸಂಘದ 2024-25ನೇ ಸಾಲಿನ ವಾರ್ಷಿಕ ಮಹಾಸಭೆ ಜು.27ರಂದು ಪೂರ್ವಾಹ್ನ ಗಂಟೆ 10.೦೦ಕ್ಕೆ ಆಲಂಕಾರಿನಲ್ಲಿರುವ ಕೇಂದ್ರ ಕಚೇರಿಯ ಬೈದಶ್ರೀ ಸಭಾಭವನದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷರಾದ ಮುತ್ತಪ್ಪ ಪೂಜಾರಿ ನೈಯ್ಯಲ್ಗ ತಿಳಿಸಿದರು.

ಫೈಬರ್ ದೋಟಿ ಖರೀದಿಗೆ ಸಾಲ;
ಮುಂದಿನ ದಿನಗಳಲ್ಲಿ ಅಡಿಕೆ ಬೆಳೆಗಾರ ಸದಸ್ಯರಿಗೆ ಕಡಿಮೆ ಬಡ್ಡಿದರದಲ್ಲಿ ಔಷಧಿ ಸಿಂಪಡಿಸುವ ಫೈಬರ್ ದೋಟಿ ಖರೀದಿಸಲು ಸಾಲ ನೀಡುವ ಯೋಜನೆ ರೂಪಿಸಲಾಗಿದೆ. ಸಂಘದ ಪ್ರಧಾನ ಕಛೇರಿಯಲ್ಲಿ ಸೇಫ್ ಲಾಕರ್ ಹಾಗೂ ಪ್ರಧಾನ ಕಛೇರಿ ಮತ್ತು ಕಡಬ ಶಾಖೆಯಲ್ಲಿ ಇ-ಸ್ಟ್ಯಾಂಪ್ ಸೌಲಭ್ಯ ಇರುತ್ತದೆ.
-ಎನ್.ಮುತ್ತಪ್ಪ ಪೂಜಾರಿ ನೈಯ್ಯಲ್ಗ
ಅಧ್ಯಕ್ಷರು