@ ಸಿಶೇ ಕಜೆಮಾರ್
ಪುತ್ತೂರು: ಕನ್ನಡ ಚಿತ್ರರಂಗದಲ್ಲೇ ದಾಖಲೆ ಬರೆದ ‘ಚಿನ್ನಾರಿ ಮುತ್ತಾ’ದಂತಹ ಸೂಪರ್ ಹಿಟ್ ಮಕ್ಕಳ ಸಿನಿಮಾಗಳ ಬಳಿಕ ಅಂತಹದೆ ಮಕ್ಕಳ ಚಿತ್ರವೊಂದು ಸದ್ದು ಮಾಡಿದೆ. ಪೆನ್ಸಿಲ್ ಬಾಕ್ಸ್ ಖ್ಯಾತಿಯ ನಿರ್ದೇಶಕ ರಝಾಕ್ ಪುತ್ತೂರು ನಿರ್ದೇಶನದ ‘ಸ್ಕೂಲ್ ಲೀಡರ್’ ಯಶಸ್ವಿ 50 ದಿನಗಳನ್ನು ಪೂರೈಸಿ ಮುನ್ನುಗ್ಗುತ್ತಿದೆ. ಈಗಾಗಲೇ ಮಂಗಳೂರು, ಉಡುಪಿ ಹಾಗೂ ಪುತ್ತೂರಿನಲ್ಲಿ ಪ್ರದರ್ಶನ ಕಾಣುತ್ತಿರುವ ಸ್ಕೂಲ್ ಲೀಡರ್ ಸಿನಿ ಪ್ರೇಕ್ಷಕರ ಮನಗೆದ್ದಿದೆ.ಸರಕಾರಿ ಶಾಲೆಗಳ ಸ್ಥಿತಿಗತಿ ಸೇರಿದಂತೆ ಪ್ರಸ್ತುತ ಸರಕಾರಿ ಶಾಲೆಗಳು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಆ ಸಮಸ್ಯೆಗಳ ಬಗ್ಗೆ ಸರಕಾರಕ್ಕೊಂದು ಮನವಿಯನ್ನು ಚಿತ್ರದ ಮೂಲಕ ಹೇಳಹೊರಟಿರುವ ರಝಾಕ್ ಪುತ್ತೂರುರವರ ತಮ್ಮ ನಿರ್ದೇಶನದಲ್ಲಿ ಗೆದ್ದಿದ್ದಾರೆ. ಕೆ.ಸತ್ಯಂದ್ರ ಪೈ ನಿರ್ಮಾಣ, ಎಂ.ಎಂ ವಿಮಲ್ ಮತ್ತು ಸುದರ್ಶನ್ ಶಂಕರ್‌ರವರ ಸಹ ನಿರ್ಮಾಣದಲ್ಲಿ ಮೂಡಿಬಂದಿರುವ ಚಿತ್ರಕ್ಕೆ ರಝಾಕ್ ಪುತ್ತೂರುರವರು ಕಥೆ,ಚಿತ್ರಕಥೆ,ಸಾಹಿತ್ಯ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ.

ರಂಗಭೂಮಿ ಕಲಾವಿದರಾದ ಬೋಜರಾಜ್ ವಾಮಂಜೂರು, ಅರವಿಂದ ಬೋಳಾರ್, ದೀಪಕ್ ಪಾಣಾಜೆ ಸೇರಿದಂತೆ ಕನ್ನಡ ಚಿತ್ರರಂಗದ ಹಿರಿಯ ನಟ ರಮೇಶ್ ಭಟ್, ಪೆನ್ಸಿಲ್ ಬಾಕ್ಸ್ ಖ್ಯಾತಿಯ ದೀಕ್ಷಾ ಡಿ.ರೈ ಪುತ್ತೂರು ಸೇರಿದಂತೆ ಹಲವು ಹಿರಿಯ ಕಿರಿಯ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. ಪ್ರತಿಯೊಬ್ಬರು ಕುಟುಂಬ ಸಮೇತರಾಗಿ ನೋಡಬಹುದಾದ ಹಾಗೂ ಒಮ್ಮೆ ನೋಡಿದರೆ ಮತ್ತೊಮ್ಮೆ ನೋಡಬೇಕೆನಿಸು ಮುದ್ದು ಮುದ್ದಾದ ಮಕ್ಕಳ ನಟನೆ ನಿಜಕ್ಕೂ ಸೂಪರ್. ಸಂಗೀತ, ಸಾಹಿತ್ಯ, ಸಂಭಾಷಣೆ, ನಿರ್ದೇಶನ ಎಲ್ಲದರಲ್ಲೂ ಸೈ ಎನಿಸಿಕೊಂಡಿರುವ ಸ್ಕೂಲ್ ಲೀಡರ್‌ನ 50 ದಿನದ ಸಂಭ್ರಮವನ್ನು ಚಿತ್ರತಂಡ ಪ್ರೇಕ್ಷಕರಿಗೆ ಅರ್ಪಣೆ ಮಾಡಿದೆ.

‘ ಸ್ಕೂಲ್ ಲೀಡರ್ ಯಶಸ್ವಿ 50 ದಿನವನ್ನು ಪೂರೈಸಿ ಮುನ್ನುಗ್ಗುತ್ತಿರುವುದಕ್ಕೆ ಪ್ರೇಕ್ಷಕರೇ ಮುಖ್ಯ ಕಾರಣರಾಗಿದ್ದಾರೆ. ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ, ಪ್ರಾಂಶುಪಾಲರಿಗೆ ಹಾಗೂ ಅಧ್ಯಾಪಕ ವರ್ಗಕ್ಕೆ, ಪೋಷಕರಿಗೆ ಹಾಗೇ ಚಿತ್ರ ನೋಡಿ ಪ್ರೋತ್ಸಾಹಿಸಿದ ಸಮಸ್ತ ಸಿನಿ ಪ್ರೇಮಿಗಳಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ.’
ರಝಾಕ್ ಪುತ್ತೂರು, ನಿರ್ದೇಶಕರು ‘ಸ್ಕೂಲ್ ಲೀಡರ್’