ಅನುದಾನ ರೆಡಿ ಇದೆ. ಮಳೆ ಕಡಿಮೆಯಾದ ಕೂಡಲೇ ದುರಸ್ಥಿ ಕಾಮಗಾರಿ ಪೂರ್ಣ – ಶಾಸಕ ಅಶೋಕ್ ರೈ
ಪುತ್ತೂರು: ಈ ಬಾರಿ ವಿಪರೀತ ಮಳೆಯಾಗುತ್ತಿದೆ. ಭಾರೀ ಮಳೆಗೆ ಕಳೆದ ಮೂರು ವರ್ಷದ ಹಿಂದೆ ಮಾಡಿದ ರಸ್ತೆಗಳ ಡಾಂಬಾರು ಎದ್ದು ಹೋಗಿದೆ. ಪುತ್ತೂರು ಉಪ್ಪಿನಂಗಡಿ ರಸ್ತೆ ಮಾತ್ರ ಹದಗೆಟ್ಟಿದ್ದಲ್ಲ, ಕ್ಷೇತ್ರದ ಬಹುತೇಕ ರಸ್ತೆಗಳು ಮಳೆಯ ಕಾರಣಕ್ಕೆ ಹೊಂಡಗಳು ಬಿದ್ದಿದೆ. ಮಳೆಯ ಬಿಡುವಿನ ನಡುವೆ ದುರಸ್ಥಿ ಕಾರ್ಯವೂ ಅಲ್ಲಲ್ಲಿ ನಡೆಯುತ್ತಿದೆ. ಮಳೆ ಕಡಿಮೆಯಾದ ತಕ್ಷಣ ಎಲ್ಲಾ ರಸ್ತೆಗಳ ಕಾಮಗಾರಿಯೂ ಪೂರ್ಣಗೊಳ್ಳಲಿದೆ ಎಂದು ಶಾಸಕ ಅಶೋಕ್ ರೈ ಮಾಹಿತಿ ನೀಡಿದರು.

ಕಳೆದ ಮೂರು ವರ್ಷದ ಹಿಂದೆ ನಿರ್ಮಾಣವಾದ ಪುತ್ತೂರು ಉಪ್ಪಿನಂಗಡಿ ರಸ್ತೆಯ ಅಲ್ಲಲ್ಲಿ ಹೊಂಡಗಳು ಬಿದ್ದಿದೆ. ಮಳೆಯ ಕಾರಣಕ್ಕೆ ಈ ರೀತಿಯಾಗಿದೆ. ಈ ರಸ್ತೆಯಲ್ಲಿ ಹೊಂಡ ಮುಚ್ಚುವ ಕೆಲಸ ನಡೆಯುತ್ತಲೇ ಇದೆ. ಮಳೆಗೆ ರಸ್ತೆ ಹೊಂಡ ಮುಚ್ಚುವ ಕೆಲಸ ನಡೆದರೂ ಮತ್ತೆ ಮಳೆಗೆ ಕೊಚ್ಚಿ ಹೋಗುತ್ತಿದೆ. ಎಲ್ಲೆಲ್ಲಿ ರಸ್ತೆ ಹೊಂಡ ಬಿದ್ದಿದೆ. ಅದನ್ನೆಲ್ಲಾ ತೇಪೆ ಹಾಕುವ ಕೆಲಸವನ್ನು ಇಲಾಖೆ ಮಾಡಲಿದೆ ಈಗಾಗಲೇ ಸೂಚನೆಯನ್ನು ನೀಡಿದ್ದೇನೆ ಎಂದು ಹೇಳಿದರು.
ಜನರಿಗೆ ತಾಳ್ಮೆ ಬೇಕು
ಮಳೆಯ ಕಾರಣಕ್ಕೆ ರಸ್ತೆ ಹೊಂಡ ಬಿದ್ದಿದೆ. ಮಳೆಗೆ ಡಾಂಬಾರು ಹಾಕಲು ಸಾಧ್ಯವಿಲ್ಲ ಎಂಬ ವಿಚಾರ ಎಲ್ಲರಿಗೂ ಗೊತ್ತಿದೆ. ಪರಿಸ್ಥಿತಿ ಈ ರೀತಿ ಇರುವಾಗ ಜನರಿಗೂ ಸ್ವಲ್ಪ ತಾಳ್ಮೆ ಇರಬೇಕು. ಹೊಂಡ ಮುಚ್ಚಲು ಅನುದಾನ ರೆಡಿ ಇದೆ. ಎಲ್ಲಾ ವ್ಯವಸ್ಥೆಗಳು ಇದೆ. ಆದರೆ ಮಳೆಗೆ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎಂಬ ವಿಚಾರ ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ರಸ್ತೆ ಹೊಂಡ ಬಿದ್ದಿರುವ ವಿಚಾರ ಗೊತ್ತಿರುವ ಕಾರಣ ವಹನ ಚಾಲಕರು ಅತಿ ವೇಗದಿಂದ ವಾಹನವನ್ನು ಚಲಾಯಿಸದೆ ನಿಧಾನಕ್ಕೆ ತೆರಳಬೇಕು. ಮಳೆ ಮುಗಿದ ಕೂಡಲೇ ಹೊಂಡ ಮುಚ್ಚುವ ಕಾಮಗಾರಿ ಪ್ರಾರಂಭವಾಗಲಿದೆ ಅಲ್ಲಿಯ ತನಕ ತಾಳ್ಮೆಯಿಂದ ಇದ್ದು ಸಹಕಾರ ನೀಡಬೇಕು ಎಂದು ಹೇಳಿದರು.
ವಿರೋಧ ಪಕ್ಷದವರು ಆರೋಪ ಮಾಡುತ್ತಾರೆ
ರಸ್ತೆ ಹೊಂಡ ಬಿದ್ದಿದೆ, ದುರಸ್ತಿ ಮಾಡಿಲ್ಲ ಎಂದು ವಿರೋಧ ಪಕ್ಷದವರು ರಾಜಕೀಯ ಆರೋಪ ಮಾಡುತ್ತಿದ್ದಾರೆ. ಮಳೆಯಲ್ಲಿ ಹೊಂಡ ಮುಚ್ಚಲು ಸಾಧ್ಯವಿಲ್ಲ ಎಂಬುದು ಅವರಿಗೂ ಗೊತ್ತಿದೆ ಆದರೆ ರಾಜಕೀಯ ದುರುದ್ದೇಶದಿಂದ ಈ ರೀತಿ ಆರೋಪ ಮಾಡುತ್ತಿದ್ದಾರೆ. ಯಾರೇ ಏನೇ ಹೇಳಿದರೂ, ಆರೋಪ ಮಾಡಿದರೂ ಮಳೆ ವಿಪರೀತವಾಗಿ ಸುರಿಯುತ್ತಿರುವ ಹಿನ್ನಲೆ ಹೊಂಡ ಮುಚ್ಚಲು ಸಾಧ್ಯವಿಲ್ಲದ ಕಾರಣ ಮಳೆ ಕಡಿಮೆಯಾದ ತಕ್ಷಣ ಹೊಂಡ ಬಿದ್ದಿರುವ ಎಲ್ಲಾ ರಸ್ತೆಗಳ ಹೊಂಡ ಮುಚ್ಚುವ ಕಾಮಗಾರಿ ನಡೆಯಲಿದ್ದು, ಸಹಕಾರ ನೀಡುವಂತೆ ಶಾಸಕರು ವಿನಂತಿಸಿದರು.