ಪುತ್ತೂರು: ಪುತ್ತೂರಿನ ಪ್ರತಿಷ್ಠಿತ ವಿದ್ಯಾಸಂಸ್ಥೆ ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ ಸುದೀರ್ಘ 38 ವರ್ಷಗಳ ಕಾಲ ಸೇವೆ ಸಲ್ಲಿಸಿದ ಜಯಲಕ್ಷ್ಮಿ ಎ ಇವರು ಜು.31ರಂದು ಸೇವಾ ನಿವೃತ್ತಿ ಹೊಂದಲಿದ್ದಾರೆ. ಸುಳ್ಯ ತಾಲ್ಲೂಕಿನ ಪಂಜದ ಬಾಂಕಿ ದಿ. ಐತ್ತಪ್ಪ ರೈ ಬಿ ಮತ್ತು ದಿ. ಲಕ್ಷ್ಮೀ ರೈ ದಂಪತಿಗಳ ಸುಪುತ್ರಿಯಾಗಿ 10.೦7.1965 ರಂದು ಜನಿಸಿದ ಇವರು ತಮ್ಮ ಕಿರಿಯ ಪ್ರಾಥಮಿಕ ವಿದ್ಯಾಭ್ಯಾಸವನ್ನು ಕೇನ್ಯದಲ್ಲಿ, ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ಪಂಜದಲ್ಲಿ, ಪಿಯುಸಿ ವಿದ್ಯಾಭ್ಯಾಸವನ್ನು ಸುಬ್ರಹ್ಮಣ್ಯದಲ್ಲಿ, ಬಿ.ಎಸ್ಸಿ ಪದವಿಯನ್ನು ಸಂತ ಫಿಲೋಮಿನಾ ಕಾಲೇಜಿನಲ್ಲಿ ಬಿ.ಎಡ್ ಪದವಿಯನ್ನು ಮಂಗಳೂರಿನ ಸರಕಾರಿ ಕಾಲೇಜಿನಲ್ಲಿ, ಎಂಎಡ್ ಸ್ನಾತಕೋತ್ತರ ಪದವಿಯನ್ನು ಅಣ್ಣಾಮಲೈ ವಿಶ್ವವಿದ್ಯಾನಿಲಯದಲ್ಲಿ, ಅಲ್ಲದೇ ರಸಾಯನ ಶಾಸ್ತ್ರದಲ್ಲಿ ಎಂ.ಎಸ್ಸಿ ಸ್ನಾತಕೋತ್ತರ ಪದವಿಯನ್ನು ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಪಡೆದಿರುತ್ತಾರೆ.

ದಿನಾಂಕ ೦1.೦7.1987 ರಂದು ಶ್ರೀ ರಾಮಕೃಷ್ಣ ಪ್ರೌಢಶಾಲೆಗೆ ಪದವೀಧರ ಸಹಾಯಕ ಶಿಕ್ಷಕಿಯಾಗಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿ, ೦9.೦2.1988ರಂದು ಇಲಾಖಾ ಅನುಮೋದನೆಯನ್ನು ಪಡೆದುಕೊಂಡು ಈ ವಿದ್ಯಾಸಂಸ್ಥೆಯಲ್ಲಿ 34 ವರ್ಷ ಪದವೀಧರ ಶಿಕ್ಷಕಿಯಾಗಿ, ನಂತರ ಮುಂಬಡ್ತಿ ಹೊಂದಿ 4 ವರ್ಷ ಮುಖ್ಯೋಪಾಧ್ಯಾಯಿನಿಯಾಗಿ ಸೇವೆಯನ್ನು ಸಲ್ಲಿಸಿ ತಮ್ಮ ಸೇವಾವಧಿಯಲ್ಲಿ ರಾಷ್ಟ್ರಮಟ್ಟದ Iris science fair on research projects, ವಿಭಾಗೀಯ ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆ, ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶ, ರಾಜ್ಯಮಟ್ಟದ ರಸಪ್ರಶ್ನೆ ಸ್ಪರ್ಧೆ, ವಿಜ್ಞಾನ ಯೋಜನಾ ವರದಿ, ವಿಜ್ಞಾನ ವಿಚಾರ ಗೋಷ್ಠಿಗಳಲ್ಲಿ ಮಾರ್ಗದರ್ಶಿ ಶಿಕ್ಷಕರಾಗಿ ದುಡಿದು ವಿರ್ದ್ಯಾಥಿಗಳ ಯಶಸ್ಸಿಗೆ ಕಾರಣೀಕರ್ತರಾಗಿರುತ್ತಾರೆ.
ಕೇಂದ್ರ ಸರಕಾರದ ನೀತಿ ಆಯೋಗದ ಆರ್ಥಿಕ ನೆರವಿನೊಂದಿಗೆ ಅಟಲ್ ಇನ್ನೋವೇಷನ್ ಮಿಷನ್ ಇವರ ಆಶ್ರಯದಲ್ಲಿ ನಮ್ಮ ಸಂಸ್ಥೆಯಲ್ಲಿ ಕಾರ್ಯಾಚರಿಸುತ್ತಿರುವ ಅಟಲ್ ಟಿಂಕರಿಂಗ್ ಲ್ಯಾಬ್‌ನ ಉತ್ತಮ ಕಾರ್ಯನಿರ್ವಹಣೆಗೆ ರಾಷ್ಟ್ರೀಯ ಮಟ್ಟದಲ್ಲಿ Regional Teacher of Change ಬಿರುದನ್ನು ಪಡೆದು, ತಮ್ಮ ವ್ಯಾಪ್ತಿಯಲ್ಲಿ ಕಾರ್ಯಾಚರಿಸುತ್ತಿರುವ ಅಟಲ್ ಲ್ಯಾಬ್‌ಗಳ ಮಾರ್ಗದರ್ಶಿ ಶಿಕ್ಷಕರುಗಳಿಗೆ RToC ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. 2004ರಲ್ಲಿ ದಾವಣಗೆರೆಯಲ್ಲಿ ನಡೆದ ಶಿಕ್ಷಕರ ರಾಜ್ಯಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಿರುವುದಲ್ಲದೆ, ರಾಜ್ಯ ಮಟ್ಟದ ವಿಜ್ಞಾನ ವಿಚಾರಗೋಷ್ಠಿ ಸ್ಪರ್ಧೆಯಲ್ಲಿ ಭಾಗವಹಿಸಿರುತ್ತಾರೆ. 2015 ರಲ್ಲಿ ದಾವಣಗೆರೆಯಲ್ಲಿ ನಡೆದ ಶಿಕ್ಷಕರ ರಾಜ್ಯಮಟ್ಟದ ವಿಜ್ಞಾನ ಮಾದರಿ ತಯಾರಿಕಾ ಸ್ಪರ್ಧೆಯಲ್ಲಿ ಭಾಗವಹಿಸಿ ದಕ್ಷಣ ಭಾರತ ವಲಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. 2023 ರಲ್ಲಿ ಮತ್ತು 2024 ರಲ್ಲಿ ಎಸ್. ಎಸ್. ಎಲ್. ಸಿ ವಾರ್ಷಿಕ ಪರೀಕ್ಷೆಯ ಗಣಿತ ವಿಷಯದ ಮೌಲ್ಯಮಾಪನ ಕೇಂದ್ರದ ಮುಖ್ಯ ಅಧೀಕ್ಷಕರಾಗಿ ಕಾರ್ಯನಿರ್ವಹಿಸಿರುತ್ತಾರೆ. ಅಲ್ಲದೇ ಪುತ್ತೂರು ತಾಲೂಕು ಮುಖ್ಯ ಶಿಕ್ಷಕರ ಸಂಘದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2023-24ನೇ ಸಾಲಿನಲ್ಲಿ ಶಾಲಾ ಶಿಕ್ಷಣ ಇಲಾಖಾ ವತಿಯಿಂದ ಸಂಸ್ಥೆಯಲ್ಲಿ ನಡೆದ ರಾಜ್ಯಮಟ್ಟದ 17ರ ವಯೋಮಾನದ ಕ್ರೀಡಾಕೂಟವು ಇವರ ಕಾರ್ಯ ಸಂಯೋಜನೆಯಲ್ಲಿ ತುಂಬಾ ಯಶಸ್ವಿಯಾಗಿ ನಡೆದಿರುತ್ತದೆ.
ಕರ್ತವ್ಯ ನಿಷ್ಠೆ, ಸಹನಶೀಲತೆ, ದೂರದರ್ಶಿತ್ವ, ಎಲ್ಲವನನ್ನೂ ಮೈಗೂಡಿಸಿಕೊಂಡು ಶಿಸ್ತುಬದ್ಧ, ನೇರ ನಡೆ- ನುಡಿ ಹಾಗೂ ಸರಳ ಜೀವನ ಶೈಲಿ, ಉತ್ತಮ ವ್ಯಕ್ತಿತ್ವವನ್ನು ಹೊಂದಿರುವ ಇವರು ತಮ್ಮ ವಿದ್ಯಾ ಸಂಸ್ಥೆಯ ಹಾಗೂ ವಿದ್ಯಾರ್ಥಿಗಳ ಪ್ರಗತಿ ಬಗ್ಗೆ ಸದಾ ಚಿಂತಿಸುತ್ತಾ ತಮ್ಮ ಶಿಕ್ಷಣ ಸಂಸ್ಥೆಯು ಪುತ್ತೂರು ತಾಲೂಕಿನಲ್ಲಿ ಒಳ್ಳೆಯ ಹೆಸರು ಪಡೆಯಲು ಶಕ್ತಿಯನ್ನು ತುಂಬಿರುತ್ತಾರೆ.
ಮಂಗಳೂರು ಗ್ರಾಮಾಂತರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಛೇರಿಯಲ್ಲಿ ಸಹಾಯಕ ಶಿಶು ಅಭಿವೃಧ್ಧಿ ಯೋಜನಾಧಿಕಾರಿಯಾಗಿ, ನಿವೃತ್ತಿಗೊಂಡಿರುವ ಪತಿ ಶ್ರೀ ಯಶವಂತ ಶೆಟ್ಟಿಯವರ ಜೊತೆ ನೆಮ್ಮದಿಯ ಸಂಸಾರವನ್ನು ನಡೆಸುತ್ತಿರುವ ಇವರು ಜುಲೈ 31ರಂದು ಸೇವಾ ನಿವೃತ್ತಿ ಹೊಂದುತ್ತಿದ್ದಾರೆ. ಇವರಿಗೆ ಸಂಸ್ಥೆಯ ವತಿಯಿಂದ ಜು.31ರಂದು ಪುತ್ತೂರು ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ವಿದಾಯ ಸಮಾರಂಭವು ನಡೆಯಲಿದೆ ಎಂದು ಶಾಲಾ ಸಂಚಾಲಕ ಕಾವು ಹೇಮನಾಥ ಶೆಟ್ಟಿರವರು ತಿಳಿಸಿದ್ದಾರೆ.