ಜೀವನ ಅಂದ್ರೇನೆ ಹಾಗೆ ಏಳು-ಬೀಳಿನ ಹಾದಿ. ಕೆಲವೊಂದು ವಿಚಾರಗಳು ನಮ್ಮ ಜೀವನದಲ್ಲಿ ಸಂಭವಿಸಿದ ಬಳಿಕವೇ ಜೀವನದಲ್ಲಿ ಉನ್ನತ ಸ್ಥಾನಮಾನಗಳು ಲಭಿಸಬೇಕೆಂಬುದು ವಿಧಿ ಲಿಖಿತವು ಆಗಿರಬಹುದು. ಕಾಲೇಜು ವ್ಯಾಸಂಗದ ಸಂದರ್ಭದಲ್ಲಿ ಸಂಭವಿಸಿದ ಅಪಘಾತದಲ್ಲಿ ಸೊಂಟದ ಕೆಳಗಿನ ಬಲವನ್ನು ಕಳೆದುಕೊಂಡರೂ ತನ್ನ ದಿಟ್ಟ ನಿರ್ಧಾರ, ಅಚಲವಾದ ಛಲದ ಮೂಲದ ಸಾಧನೆಗೈದ ಯುವಕನ ಸ್ಟೋರಿ ಎಲ್ಲ ಸರಿ ಇದ್ದರೂ ಯಾವುದೋ ವಿಚಾರವನ್ನಿಟ್ಟುಕೊಂಡು ಕೊರಗುವ ಎಲ್ಲರಿಗೂ ಸ್ಪೂರ್ತಿ…

ಬಂಟ್ವಾಳ ತಾಲೂಕು ಪೆರಾಜೆ ಗ್ರಾಮದ ದೀಕ್ಷಿತ್ ದ್ವಿತೀಯ ಪಿಯುಸಿಯಲ್ಲಿ ವ್ಯಾಸಾಂಗ ಮಾಡುತ್ತಿರುವಾಗ ಸಂಭವಿಸಿದ ಅಪಘಾತದಿಂದಾಗಿ ಸೊಂಟದ ಕೆಳಗಿನ ಬಲವನ್ನು ಕಳೆದುಕೊಂಡರೂ ಜೀವನದ ಸಾಧನೆಗೆ ತನ್ನ ಅಂಗ ಊನತೆ ಅಡ್ಡಿಯಾಗಬಾರದು ಎಂಬ ದೃಢ ನಿರ್ಧಾರದಿಂದ ವಿವೇಕಾನಂದ ಕಾಲೇಜಿನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಆಗಿದ್ದ ದಿ. ಭಾಸ್ಕರ್ ಹಾಗೂ ಪೋಷಕರ ಬೆಂಬಲದಿಂದ ಪಿಯುಸಿ ನಂತರ, ಬಿಕಾಂ ಪದವಿ ಮುಗಿಸಿ ಮನೆಯಲ್ಲಿದ್ದಾಗ ವಾಮನ ಪೈ ಇವರ ತಮ್ಮ ಮಾಲಕತ್ವದ ಗಣೇಶ್ ಟ್ರೇಡರ್ಸ್ ಸಂಸ್ಥೆಯಲ್ಲಿ ಅಕೌಂಟೆಂಟ್ ಆಗಿ ಸೇರಿಕೊಂಡರು. ಸಂಸ್ಥೆಯ ಮಾಲಕರ ಸಹಕಾರದ ಜೊತೆಗೆ ತನ್ನ ಮಾವನ ಬೆಂಬಲ ಪ್ರೋತ್ಸಾಹದೊಂದಿಗೆ ಮಾಣಿ ಸಮೀಪದ ಬುಡೋಳಿ ಎಂಬಲ್ಲಿ 2022 ರಲ್ಲಿ ತನ್ನ ಸ್ವಂತ ಉದ್ಯಮದ ಕನಸಿನೊಂದಿಗೆ ಗ್ರಾಹಕರಿಗೆ ಅಮೂಲ್ಯ ಸೇವೆ ನೀಡಲು ಐಸಿರಿ ಅಕೌಂಟ್ಸ್ & ಡಿಜಿಟಲ್ ಸೊಲ್ಯೂಷನ್ಸ್ ಎಂಬ ಸಿಎಸ್ಸಿ ಸೆಂಟರ್ ಆರಂಭಿಸಿದರು. ಈಗಾಗಲೇ ತನ್ನ ವೈಯಕ್ತಿಕ ದೇಹದ ಸಮಸ್ಯೆಯಿದ್ದರೂ ಗ್ರಾಹಕರಿಗೆ ನಗುಮೊಗದ ಸೇವೆಯನ್ನು ನೀಡುವುತ್ತಿದ್ದು, ಆಫೀಸಿಗೆ ಬರುವ ಕಾರ್ಮಿಕರಿಗೆ, ಮಹಿಳೆಯರಿಗೆ, ವಿಧವೆಯರಿಗೆ ಇರುವಂತಹ ಸರ್ಕಾರಿ ಸೌಲಭ್ಯ ಪಡೆಯಲು ಸೂಕ್ತ ಮಾಹಿತಿಯನ್ನು ನೀಡುತ್ತಿದ್ದಾರೆ. ಈಗಾಗಲೇ ಬದುಕಿನಲ್ಲಿ ಸವಾಲುಗಳನ್ನು ಎದುರಿಸಿದ್ದ ದೀಕ್ಷಿತ್ ಅವರಿಗೆ 2024 ರಲ್ಲಿ ತನ್ನ ಪ್ರೇರಕ ಶಕ್ತಿಯಾಗಿದ್ದ ಮಾವ ಭಾಸ್ಕರ್ ಅವರ ಅಗಲುವಿಕೆ ಅಪಾರ ಆಘಾತ ತಂದಿತ್ತು. ಇಂತಹ ಸವಾಲುಗಳನ್ನು ನೋವುಗಳನ್ನು ಮೆಟ್ಟಿ ನಿಂತು ದೀಕ್ಷಿತ್ ಇವರು ಸಿಎಸ್ಸಿ ನಿರ್ವಹಣಾ ಕೇಂದ್ರಗಳಲ್ಲಿ ನೀಡಿದ ಸೇವಾಸಾಧನೆಯಿಂದ ಸಿಎಸ್ಸಿ ನಿರ್ವಹಣೆಯ ರಾಜ್ಯದ ಮೊದಲ 12 ಕೇಂದ್ರಗಳ ಪೈಕಿ ನಾಲ್ಕನೇ ಸ್ಥಾನ ಪಡೆದಿದ್ದಾರೆ.

ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಸಿಎಸ್ಸಿ ದಿವಸ್ ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರದ (Centre for Smart Governance) ಎಕ್ಸಿಕ್ಯೂಟಿವ್ ಡೈರೆಕ್ಟರ್ ಆದ ರಾಹುಲ್ ರತ್ನಮ್ ಪಾಂಡೆ, CEO ಟಿ.ಭೂಬಾಲನ್, (UIDAI RO Bangalore.) ಡೆಪ್ಯುಟಿ ಡೈರೆಕ್ಟರ್ಆದ ಆನಿ ಜಾಯ್ಸ್ ವಿ, ಹಾಗೂ csc e governance ಇದರ ರಾಜ್ಯ ಮುಖ್ಯಸ್ಥ ಶಕೀಬ್ ಅಹ್ಮದ್ ಇವರ ಸಮ್ಮುಖದಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ.
ಬುಡೋಳಿ ಜೋಗಿಬೆಟ್ಟು ದೇಜಪ್ಪ ಮತ್ತು ಚಿತ್ರಾ ದಂಪತಿಗಳ ಪ್ರಥಮ ಪುತ್ರನಾಗಿರುವ ದೀಕ್ಷಿತ್ ಇವರು ತಮ್ಮ ಸಾಧನೆಗೆ ಅನನ್ಯ ಸಹಕಾರ ನೀಡುವ ಕುಟುಂಬ ಸದಸ್ಯರು ಸ್ನೇಹಿತರು ಗ್ರಾಹಕರನ್ನು ಸದಾ ಸ್ಮರಿಸುತ್ತಾರೆ. ಬಂಟ್ವಾಳ ತಾಲೂಕು ಪೆರಾಜೆ ಗ್ರಾಮದ ದೀಕ್ಷಿತ್ ಇವರ ಸಾಧನೆಯು ಎಲ್ಲರಿಗೂ ಪ್ರೇರಣೆಯಾಗಿದೆ.