ಪುತ್ತೂರು: ಇಂಡಿಯನ್ ಜರ್ನಲಿಸ್ಟ್ ಯೂನಿಯನ್ ಇದರ ಅಂಗೀಕೃತ ಸಂಸ್ಥೆಯಾದ ಕರ್ನಾಟಕ ಪತ್ರಕರ್ತರ ಸಂಘ ಪುತ್ತೂರು ತಾಲೂಕು ಇದರ ಮೊಟ್ಟಮೊದಲ ಕಾನೂನು ಸಲಹೆಗಾರರಾಗಿ ಪುತ್ತೂರಿನ ನ್ಯಾಯವಾದಿ ಕೃಷ್ಣಪ್ರಸಾದ್ ನಡ್ಸಾರ್ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ಸಂಘದ ಜಿಲ್ಲಾಧ್ಯಕ್ಷ ಸುದೇಶ್ ಕುಮಾರ್ ರವರ ಉಪಸ್ಥಿತಿಯಲ್ಲಿ ನಡೆದ ಸಂಘದ ಮಹಾಸಭೆಯಲ್ಲಿ ಈ ಆಯ್ಕೆಯನ್ನು ನಡೆಸಲಾಯಿತು.
ಕರ್ನಾಟಕ ಪತ್ರಕರ್ತರ ಸಂಘವು ಕಳೆದ ಏಳು ವರ್ಷಗಳ ಹಿಂದೆ ಪುತ್ತೂರಿನಲ್ಲಿ ಸ್ಥಾಪನೆಗೊಂಡಿದ್ದು, ಪ್ರಸ್ತುತ ವರ್ಷದಲ್ಲಿ ಹಲವಾರು ನೂತನ ಸದಸ್ಯರ ಸೇರ್ಪಡೆಯೊಂದಿಗೆ ಸುಮಾರು 50ಕ್ಕೂ ಅಧಿಕ ಸದಸ್ಯಬಲವನ್ನು ಹೊಂದಿರುವ ಸಂಘವಾಗಿದೆ.
ನ್ಯಾಯವಾದಿ ಕೃಷ್ಣಪ್ರಸಾದ್ ನಡ್ಸಾರ್ ರವರು ಸುಮಾರು 14 ವರ್ಷಗಳ ಕಾಲ ದರ್ಬೆಯಲ್ಲಿ ಕಾರ್ಯಾಚರಿಸುತ್ತಿದ್ದ ಅನಿಕೇತನ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾಗಿ, ರಾಜ್ಯಮಟ್ಟದ ಮಾನವಿಕ ವಿಭಾಗ ಮತ್ತು ವೃತ್ತಿಪರ ಕೌಶಲ್ಯ ತರಬೇತುದಾರರಾಗಿ, ಹಲವಾರು ಕಾರ್ಪೊರೇಟ್ ಸಂಸ್ಥೆಗಳ ಸಹಭಾಗಿತ್ವವನ್ನು ಹೊಂದಿದ್ದು, ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಕೌಶಲ್ಯ ತರಬೇತಿ ಯೋಜನೆಯಾದ ದೀನ್ ದಯಾಳ್ ಗ್ರಾಮೀಣ ಕೌಶಲ್ಯ ಯೋಜನೆಯಡಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನೂರಾರು ಉದ್ಯೋಗಾರ್ಥಿಗಳನ್ನು ತರಬೇತುಗೊಳಿಸಿ ಉದ್ಯೋಗ ದೊರಕಿಸಿಕೊಡುವಲ್ಲಿ ಕಾರ್ಯನಿರ್ವಹಿಸಿದ್ದಾರೆ. ಪ್ರಸ್ತುತ ಪುತ್ತೂರಿನ ಎಂ.ಎಸ್. ರಸ್ತೆಯಲ್ಲಿ ಅನಿಕೇತನ ಲಾ ಛೇಂಬರ್ಸ್‌ನಲ್ಲಿ ವಕೀಲ ವೃತ್ತಿಯನ್ನು ನಡೆಸುತ್ತಿದ್ದಾರೆ.