ಸಂಸ್ಕೃತದಲ್ಲಿ ನಿತ್ಯ ಬದುಕಿಗೆ ಸಂಬಂಧಿಸಿದ ನೂರಾರು ಲೌಕಿಕ ನ್ಯಾಯ ನುಡಿಗಳಿವೆ. ಜನಸಾಮಾನ್ಯರಲ್ಲಿ ಅನೇಕರು ಇಂತಹ ಕೆಲವು ಲೌಕಿಕ ನ್ಯಾಯನುಡಿಗಳನ್ನು ನಮ್ಮ ಬದುಕಿನಲ್ಲಿ ಗೊತ್ತಿದ್ದೋ ಗೊತ್ತಿಲ್ಲದೆಯೋ ಬಳಸುತ್ತಿದ್ದಾರೆ. ಆದರೆ, ಸಂಸ್ಕೃತದಲ್ಲಿರುವ ಲೌಕಿಕ ನ್ಯಾಯನುಡಿಗಳನ್ನು ಸರಳವಾಗಿ ಅರ್ಥಮಾಡಿಕೊಳ್ಳುವುದು ಎಂದರೆ ಸಂಸ್ಕೃತದ ಗಂಧಗಾಳಿಯೂ ಇಲ್ಲದವರಿಗೆ ಕಬ್ಬಿಣದ ಕಡಲೆಯೇ ಸರಿ. ಅಂತಹವರ ನೆರವಿಗೆ ಬರುವುದು ಈ ‘ನ್ಯಾಯವಲ್ಲರಿ’. ಇದು 365 ಲೌಕಿಕ ನ್ಯಾಯಗಳ ಸರಳವಾದ ಕನ್ನಡ ವಿವರಣೆಗಳಿರುವ ಪುಸ್ತಕ. ಇನ್ನೊಂದು ‘ನ್ಯಾಯಮಂಜರಿ’. ಇದು 409 ಲೌಕಿಕ ನ್ಯಾಯಗಳ ಕುರಿತಾದ ಸರಳ ವಿವರಣೆ ಇರುವ ಪುಸ್ತಕ.
ಲೌಕಿಕ ನ್ಯಾಯ ಎಂದರೇನು? :
ಸಹಜವಾಗಿ ಹೇಳುವುದಾದರೆ, ಲೌಕಿಕ ನ್ಯಾಯಗಳು ಎಂದರೆ ಜನಸಾಮಾನ್ಯರು ತಮ್ಮ ನಿತ್ಯ ವ್ಯವಹಾರಗಳಲ್ಲಿ ಬಳಸುವ ಮತ್ತು ಅರ್ಥ ಮಾಡಿಕೊಳ್ಳುವ ತತ್ವಗಳು ಅಥವಾ ನಿಯಮಗಳು. ಇವು ಶಾಸೀಯ ನ್ಯಾಯಗಳಿಗಿಂತ ಭಿನ್ನವಾಗಿದ್ದು, ಜನಸಾಮಾನ್ಯರಿಗೆ ಸುಲಭವಾಗಿ ಅನ್ವಯವಾಗುವಂಥದ್ದು. ಇಂಥಹ ನ್ಯಾಯಗಳನ್ನು ‘ಚಕ್ರಪಾಣಿ ಟೀಕಾ’ದಲ್ಲಿ ಉಲ್ಲೇಖಿಸಲಾಗಿದೆ. ‘ಚಕ್ರಪಾಣಿ ಟೀಕಾ’ ಎಂಬುದು ಆಯುರ್ವೇದದ ಚರಕಸಂಹಿತೆಯ ಬಗ್ಗೆ ಚಕ್ರಪಾಣಿ ದತ್ತ ಎಂಬ ವಿದ್ವಾಂಸರು ಬರೆದ ಟಿಪ್ಪಣಿ. ಒಂದು ಪರಿಚಯಕ್ಕಾಗಿ ಪೂರ್ವಪೀಠಿಕೆಯಾಗಿ ಇದನ್ನಿಲ್ಲಿ ಉಲ್ಲೇಖಿಸಿದ್ದಷ್ಟೆ. ನಿತ್ಯ ಬದುಕಿನಲ್ಲಿ ಚಾಲ್ತಿಯಲ್ಲಿರುವ ಕೆಲವು ಲೌಕಿಕ ನ್ಯಾಯ ಪದಗಳನ್ನು ಗಮನಿಸುವುದಾದರೆ ಹೆಚ್ಚು ಚಾಲ್ತಿಯಲ್ಲಿರುವ ‘ಅರಣ್ಯರೋದನ ನ್ಯಾಯ’ವನ್ನು ಉಲ್ಲೇಖಿಸಬಹುದು. ನ್ಯಾಯವಲ್ಲರಿಯಲ್ಲಿ ಕೊಟ್ಟ ಟಿಪ್ಪಣಿಯನ್ನು ಯಥಾವತ್ ಉಲ್ಲೇಖಿಸುವುದಾದರೆ ಅದು ಹೀಗಿದೆ.
ಅರಣ್ಯರೋದನ ನ್ಯಾಯ:
‘ವ್ಯಕ್ತಿಯೊಬ್ಬನಿಗೆ ತುಂಬ ದುಃಖವಾಗಿದೆ. ಮೇಲಿಂದ ಮೇಲೆ ಕಷ್ಟ-ನಷ್ಟಗಳು. ನಂಬಿದವರಿಂದಲೇ ವಿಶ್ವಾಸದ್ರೋಹ. ಹೋದಲ್ಲಿ ಬಂದಲ್ಲಿ ನಿರಾಶೆ. ಮನಸ್ಸಿನ ದುಗುಡವನ್ನು ಆತ್ಮೀಯರೆದುರಿಗೆ ತೋಡಿಕೊಳ್ಳಲು ಸ್ವಾಭಿಮಾನ ಅಡ್ಡಬರುತ್ತದೆ. ಆದ್ದರಿಂದ ಗೊಂಡಾರಣ್ಯಕ್ಕೆ ಹೋಗಿ ಅಲ್ಲಿ ಗೋಳೋ ಎಂದು ಅಳುತ್ತಾನೆ.ಆದರೆ ಕಾಡಿನಲ್ಲಿ ಅತ್ತು ಫಲವೇನು?. ಯಾರೂ ನೋಡುವುದಿಲ್ಲ. ಕೇಳಿಸಿಕೊಳ್ಳುವುದಿಲ್ಲ. ದುಃಖಕ್ಕೆ ಕಾರಣ ಹುಡುಕಿ ಪರಿಹಾರ ಸೂಚಿಸುವುದಿಲ್ಲ. ನಿಷ್ಕಲ ಪ್ರಯತ್ನ ಮಾಡಿ ಕೇವಲ ಆಯಾಸ ತಂದುಕೊಳ್ಳುವ ವ್ಯಕ್ತಿಗಳ ವರ್ತನೆಯನ್ನು ವರ್ಣಿಸುವಾಗ ‘ಅರಣ್ಯರೋದನ ನ್ಯಾಯ’ವನ್ನು ಉದಾಹರಿಸುತ್ತಾರೆ.ಮನುಷ್ಯ ತನಗೆ ಸಮಸ್ಯೆಗಳು ಎದುರಾದಾಗ, ದುಃಖ ಒತ್ತರಿಸಿ ಬಂದಾಗ ಅವನ್ನೆಲ್ಲ ಅದುಮಿಟ್ಟುಕೊಳ್ಳಬಾರದು. ತೀರಾ ಆತ್ಮೀಯರೊಂದಿಗೆ (ಹೆಂಡತಿ, ಮಕ್ಕಳು, ಬಂಧು-ಬಳಗ) ಹಂಚಿಕೊಳ್ಳಬೇಕು. ಸಂತೋಷವನ್ನು ಹಂಚಿಕೊಂಡಾಗ ಅದು ಇಮ್ಮಡಿಯಾದಂತೆ, ಬೇಸರವನ್ನು ಹಂಚಿಕೊಂಡಾಗ ಅದು ಅರ್ಧಕ್ಕಿಳಿಯುತ್ತದೆ’.ಹೀಗೆ ಬಹಳ ಸರಳವಾಗಿ ಮನಮುಟ್ಟುವಂತಹ ವಿವರಣೆಯನ್ನು ನ್ಯಾಯವಲ್ಲರಿಯಲ್ಲಿ ಕೊಟ್ಟಿದ್ದಾರೆ. ಇನ್ನೊಂದು ಲೌಕಿಕ ನ್ಯಾಯವನ್ನೂ ಉಲ್ಲೇಖಿಸುತ್ತೇನೆ. ಅದು ‘ಕಾಂತಾರ ನ್ಯಾಯ’. ಕಿವಿ ನೆಟ್ಟಗಾಯಿತಲ್ಲವೆ, ಕಣ್ಣು ಚುರುಕಾಯಿತಲ್ಲವೆ, ಕಾಂತಾರ ಸಿನಿಮಾ ಬಂದ ಪರಿಣಾಮ ಅದು.. ಇರಲಿ.. ನ್ಯಾಯವಲ್ಲರಿಯಲ್ಲಿ ‘ಕಾಂತಾರ ನ್ಯಾಯ’ ವಿವರಣೆ ಹೀಗಿದೆ ನೋಡಿ
ಕಾಂತಾರ ನ್ಯಾಯ:
‘ಕಾಂತಾರವೆಂದರೆ ಕಾಡು. ಇಬ್ಬರು ಪ್ರಯಾಣಿಕರು ಬೇರೆ ಬೇರೆ ದಾರಿ ಹಿಡಿದು ಸಾಗುತ್ತಿದ್ದರು. ಅಷ್ಟರಲ್ಲಿ ಅವರು ಒಂದು ಗೊಂಡಾರಣ್ಯದ ಸಮೀಪಕ್ಕೆ ತಲುಪಿದರು. ಕಾಂತಾರದ ಗಂಭೀರತೆ ಮತ್ತು ಭೀಕರತೆಗಳನ್ನು ಕಂಡು ಅವರಿಗೆ ಹೆದರಿಕೆ ಹುಟ್ಟಿತು. ಹಾಗಾಗಿ ಅವರಿಬ್ಬರೂ ಜತೆಯಾಗಿ ಕಾಡು ಹೊಕ್ಕುವ ನಿರ್ಧಾರ ಮಾಡಿದರು. ಪರಸ್ಪರ ಸ್ನೇಹಿತರಾದ ಅವರು ಕಾಡಿನೊಳಗೆ ತಕ್ಕುದಾದ ದಾರಿಯನ್ನು ಹುಡುಕಿಕೊಂಡರು. ಇಬ್ಬರೂ ಒಟ್ಟಿಗೆ ಇದ್ದುದರಿಂದ ಧೈರ್ಯವಾಗಿ ಅರಣ್ಯದ ಅಪಾಯಕಾರಿ ಭಾಗವನ್ನು ದಾಟಿ ಮುಂದುವರಿದರು. ಒಂದು ಸಲ ನಿಭಿಡಾರಣ್ಯದಿಂದ ಹೊರಬಂದ ನಂತರ ಅವರಲ್ಲಿ ಮನೆಮಾಡಿದ್ದ ಭಯ ದೂರವಾಯಿತು. ಜತೆಯಾಗಿ ಸಾಗುವ ಅವಶ್ಯಕತೆ ಇಲ್ಲದಾಯಿತು. ಹಾಗಾಗಿ ಅವರಿಬ್ಬರೂ ಬೇರೆ ಬೇರೆ ದಾರಿ ಹಿಡಿದು ಮುಂದುವರಿದರು. ಅವಶ್ಯಕತೆಯು ವ್ಯಕ್ತಿಗಳನ್ನು ಸ್ವಲ್ಪ ಸಮಯಕ್ಕೆ ಸ್ನೇಹಿತರಾಗಿ ಮಾಡುತ್ತದೆ. ಒಮ್ಮೆ ಆ ಅಗತ್ಯವು ಮಾಯವಾದರೆ ಅವರು ಕವಲುದಾರಿ ಹಿಡಿಯುತ್ತಾರೆ’.
ಲೌಕಿಕ ನ್ಯಾಯಗಳಿಗೆ ಅದ್ಭುತ ಕಿರುಟಿಪ್ಪಣಿ ಕೊಟ್ಟವರು ಪ್ರೊ| ವಿ.ಬಿ. ಅರ್ತಿಕಜೆ :
ಪುತ್ತೂರಿನ ಹಿರಿಯ ವಿದ್ವಾಂಸ, ಸಾಹಿತಿ, ನಿವೃತ್ತ ಪ್ರಾಧ್ಯಾಪಕ, ಸುದ್ದಿ ಬಿಡುಗಡೆ ಪತ್ರಿಕೆಯ ಅಂಕಣಕಾರ ಪ್ರೊ| ವಿ.ಬಿ. ಅರ್ತಿಕಜೆ ಈ ರೀತಿ ಲೌಕಿಕ ನ್ಯಾಯ ನುಡಿಗಳಿಗೆ ಕಿರುಟಿಪ್ಪಣಿ ನೀಡಿದ್ದು, ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನಿಜವಾಗಿಯೂ ಬಹುದೊಡ್ಡ ಕೊಡುಗೆಯೇ ಸರಿ. ಸಾಮಾನ್ಯರಿಗೂ ಅರ್ಥವಾಗುವಂತೆ ಸರಳವಾಗಿ ಲೌಕಿಕ ನ್ಯಾಯಗಳನ್ನು ವಿವರಣೆ ನೀಡುವ ಅವರ ಸಾಮರ್ಥ್ಯಕ್ಕೆ ಶರಣು ಎನ್ನಬೇಕು. ಅಂದ ಹಾಗೆ ಈ “ನ್ಯಾಯ ವಲ್ಲರಿ” ಪುಸ್ತಕವನ್ನು ಅಷ್ಟೇ ಪ್ರೀತಿಯಿಂದ ಪ್ರಕಟಿಸಿದವರು ಪುತ್ತೂರಿನ ಜ್ಞಾನಗಂಗಾ ಪುಸ್ತಕ ಮಳಿಗೆಯ ಪ್ರಕಾಶ್ ಕೊಡಂಕಿರಿ ಅವರು. “ಲೌಕಿಕ ನ್ಯಾಯಗಳ ಅಂತರಂಗವನ್ನು ಸರಳವಾಗಿಯೂ ಸಮರ್ಪಕವಾಗಿಯೂ ತೆರೆದಿಡುವ ಪ್ರಯತ್ನದ ಫಲವಾಗಿ “ನ್ಯಾಯವಲ್ಲರಿ”ಮತ್ತು “ನ್ಯಾಯಮಂಜರಿ” ಯು ರೂಪುಗೊಂಡಿದೆ. ಸಾರ್ಥಕ ನುಡಿಚಿತ್ರಗಳಂತೆ ಎದ್ದುಕಾಣುವ ಇಲ್ಲಿನ ಕಿರುಬರೆಹಗಳು ಎಷ್ಟು ಸಮರ್ಪಕವಾಗಿವೆ ಎಂದರೆ ಎಲ್ಲೂ ಕೂಡ ಒಂದು ಶಬ್ದ ಸೇರಿಸುವಂತೆ ಇಲ್ಲ. ಕಳೆಯುವಂತೆ ಇಲ್ಲ. ಇವುಗಳ ಸ್ವಾರಸ್ಯವನ್ನು ಓದಿಯೇ ಸವಿಯಬೇಕು” ಎಂದು ಪ್ರಕಾಶ್ ಕೊಡೆಂಕಿರಿ ಅವರು ನ್ಯಾಯವಲ್ಲರಿ ಪುಸ್ತಕದ ಬೆನ್ನುಡಿಯಲ್ಲಿ ಬರೆದಿದ್ದಾರೆ.
ಸಾಮಾನ್ಯವಾಗಿ ವಾಕ್ಯಗಳು ದೊಡ್ಡದೊಡ್ಡದಾಗಿರುತ್ತವೆ. ಮೂರು-ನಾಲ್ಕು ವಾಕ್ಯಗಳನ್ನು ಒಂದೇ ವಾಕ್ಯವಾಗಿ ಬರೆಯುವವರೂ ಇದ್ದಾರೆ. ಆದರೆ, ಪ್ರೊ ವಿ.ಬಿ. ಅರ್ತಿಕಜೆಯವರ ಟಿಪ್ಪಣಿ ಎಷ್ಟು ಸರಳವಾಗಿದೆ ಎಂದರೆ ಪುಟ್ಟ ಪುಟ್ಟ ವಾಕ್ಯಗಳು ಬಹುಬೇಗ ಗಮನಸೆಳೆಯುತ್ತವೆ. ನಿಜಕ್ಕೂ ನ್ಯಾಯವಲ್ಲರಿ ಮತ್ತು ನ್ಯಾಯ ಮಂಜರಿಗಳು ನಿತ್ಯಬದುಕಿಗೊಂದು ಕೈಪಿಡಿಗಳೇ ಸರಿ.
ಪುಸ್ತಕದ ಹೆಸರು- ನ್ಯಾಯವಲ್ಲರಿ (365 ಲೌಕಿಕ ನ್ಯಾಯಗಳು) ಮತ್ತು ನ್ಯಾಯ ಮಂಜರಿ (409 ಲೌಕಿಕ ನ್ಯಾಯಗಳು)
ಪುಸ್ತಕದ ಲೇಖಕ – ಪ್ರೊ| ವಿ.ಬಿ.ಅರ್ತಿಕಜೆ
ನ್ಯಾಯ ವಲ್ಲರಿ ಪುಸ್ತಕದ ಪುಟಗಳು – 8+176, ದರ- 120 ರೂಪಾಯಿ
ನ್ಯಾಯ ಮಂಜರಿ ಪುಸ್ತಕದ ಪುಟಗಳು- 8+184, ದರ 150 ರೂಪಾಯಿ
ಪ್ರಕಾಶಕರು – ಜ್ಞಾನಗಂಗಾ ಪುಸ್ತಕ ಮಳಿಗೆ, ಪುತ್ತೂರು (9480451560)
ಬರಹ:ಹಿರಿಯ ಪತ್ರಕರ್ತ ಉಮೇಶ್ ಕುಮಾರ್ ಶಿಮ್ಲಡ್ಕ
