ಪುತ್ತೂರು: ಮಂಗಳೂರು ಪಚ್ಚನಾಡಿಯಲ್ಲಿ ನಡೆದ ಆಟಿಕೂಟದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹಿಂದೂಗಳ ಆರಾಧಕ ಭಗವಾನ್ ಶ್ರೀಕೃಷ್ಣನಿಗೆ ಅಪಹಾಸ್ಯ ಮಾಡಿರುವ ಕುರಿತು ಕಾನೂನು ಕ್ರಮಕ್ಕೆ ಆಗ್ರಹಿಸಿ ಹಿಂದು ಸಂಘಟನೆಯ ನೇತೃತ್ವದಲ್ಲಿ ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ಮಂಗಳೂರು ತಾಲೂಕು ಪಚ್ಚನಾಡಿಯ ಬಂದಲೆ ಎಂಬಲ್ಲಿ ಶ್ರೀಮಂತ ರಾಜಗುಳಿಗೆ ಕ್ಷೇತ್ರ ಮೂಡು ಮನೆ ಇವರ ನೇತೃತ್ವದಲ್ಲಿ ನಡೆದ ಆಟಿಕೂಟ ಕಾರ್ಯಕ್ರಮದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶ್ರೀಕೃಷ್ಣ ವೇಷಧಾರಿಯಾದ ರವಿ ರಾಮಕುಂಜ ಎಂಬವರು ಹಿಂದೂಗಳು ಆರಾಧ್ಯ ದೇವರಾದ ಶ್ರೀಕೃಷ್ಣ ಪರಮಾತ್ಮನ ವೇಶ ಧರಿಸಿಕೊಂಡು ಅಶ್ಲೀಲ ಭಂಗಿ ಮತ್ತು ಅಶ್ಲೀಲ ಪದದಿಂದ ಅಪಹಾಸ್ಯ ಮಾಡಿದ್ದಾರೆ. ಇದು ಶ್ರೀಕೃಷ್ಣನ ಆರಾಧಕರಾದ ಹಿಂದೂಗಳ ಧಾರ್ಮಿಕ ಭಾವನೆಗೆ ತೀವ್ರ ಘಾಸಿಯನ್ನು ಉಂಟು ಮಾಡಿರುತ್ತದೆ. ಧಾರ್ಮಿಕ ನಂಬಿಕೆ ಮತ್ತು ಆರಾಧನೆಗೆ ಧಕ್ಕೆಯಾಗದಂತೆ ಕಾನೂನಿನಲ್ಲಿ ಉಲ್ಲೇಖವಿದ್ದರೂ ಈ ರೀತಿಯ ಘಟನೆಗಳು ಮರುಕಳಿಸಿರುವುದರಿಂದ ಸಮಾಜದಲ್ಲಿ ಅಶಾಂತಿಯ ವಾತಾವರಣ ಉಂಟಾಗಿ ಸಮುದಾಯದ ಒಳಗೆ ಗಲಭೆಗಳು ಆಗುವ ಸಾದ್ಯತೆಯಿರುತ್ತದೆ. ಆದ್ದರಿಂದ ಸದ್ರಿ ಕಲಾವಿದ ರವಿ ರಾಮಕುಂಜ ಮತ್ತು ನಿರ್ದೇಶಕರಾದ ಪುಷ್ಪರಾಜ್ ಹಾಗೂ ಕಾರ್ಯಕ್ರಮದ ಆಯೋಜಕರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ದೂರುದಾರರಾದ ಬಾಲಚಂದ್ರ ಸೊರಕೆ ಮತ್ತು ಹರಿಪ್ರಸಾದ್ ನೆಲ್ಲಿಕಟ್ಟೆ ತಿಳಿಸಿದ್ದಾರೆ.
ದೂರು ನೀಡುವ ಸಂದರ್ಭ ಹಿಂದು ಸಂಘಟಕರಾದ ಸತೀಶ್ ನಾಯ್ಕ್, ವಕೀಲ ಚಂದ್ರಹಾಸ, ಗೋಪಾಲ್ ಎಮ್ ಆರ್, ಬಾಲಕೃಷ್ಣ ರೈ ಇಳಂತಾಜೆ, ಸಂದೇಶ್ ನಾಯ್ಕ್, ರಾಜೇಶ್, ಪ್ರಸಾದ್ ರೈ, ಚಂದ್ರಶೇಖರ್, ಹರೀಶ್ ಮಿನಿಪದವು, ಶ್ರೀಧರ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.