ಪೇಟೆ ಅಂಗನವಾಡಿ ಪಕ್ಕದ ಜಾಗ ಅತಿಕ್ರಮಣ ತೆರವುಗೊಳಿಸುವಂತೆ ಗ್ರಾಮಸ್ಥರ ಆಗ್ರಹ
ನೆಲ್ಯಾಡಿ: ಇಲ್ಲಿನ ಪೇಟೆ ಅಂಗನವಾಡಿ ಸುತ್ತಲಿನ ಸರಕಾರಿ ಜಾಗ ಅತ್ರಿಕ್ರಮಣ ತೆರವುಗೊಳಿಸಿ ಬೇಲಿ ಹಾಕಬೇಕೆಂದು ನೆಲ್ಯಾಡಿ ಗ್ರಾಮಸಭೆಯಲ್ಲಿ ಗ್ರಾಮಸ್ಥರ ಆಗ್ರಹದಂತೆ ನಿರ್ಣಯ ಕೈಗೊಳ್ಳಲಾಗಿದೆ.

ಸಭೆ ಜು.31ರಂದು ಗ್ರಾ.ಪಂ.ಅಧ್ಯಕ್ಷ ಯಾಕೂಬ್ ಯಾನೆ ಸಲಾಂ ಬಿಲಾಲ್ ಅವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ.ಸಭಾಂಗಣದಲ್ಲಿ ನಡೆಯಿತು. ಕಡಬ ತಾ.ಪಂ.ಸಹಾಯಕ ನಿರ್ದೇಶಕ ಯಶವಂತ ಬೆಳ್ಚಡ ಅವರು ಮಾರ್ಗದರ್ಶಿ ಅಧಿಕಾರಿಯಾಗಿದ್ದರು. ಗ್ರಾಮಸ್ಥ ಶಕೀಲ್ ಅವರು ಮಾತನಾಡಿ, ನೆಲ್ಯಾಡಿ ಪೇಟೆ ಅಂಗನವಾಡಿ ಸುತ್ತಲಿನ ಜಾಗ ಅತಿಕ್ರಮಣ ಆಗುತ್ತಿದೆ. ಈ ಬಗ್ಗೆ ಏನೂ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಗ್ರಾಮ ಸಹಾಯಕ ಚರಣ್ ಅವರು, ಇಲ್ಲಿ ಸರ್ವೆ ನಂ.25/3ಎ5ರಲ್ಲಿ 48ಸೆಂಟ್ಸ್ ಇದೆ. ಇದು ಪರಂಬೋಕು ಜಾಗ ಎಂದರು. ಈ ಬಗ್ಗೆ ಚರ್ಚೆ ನಡೆಯುತ್ತಿದ್ದಂತೆ ಮಾತನಾಡಿದ ಸದಸ್ಯ ಮೊಹಮ್ಮದ್ ಇಕ್ಬಾಲ್ ಅವರು, ಇಲ್ಲಿನ ಅಂಗನವಾಡಿಗೆ 32 ವರ್ಷದಿಂದ ಆರ್ಟಿಸಿ ಆಗಿಲ್ಲ. ಆದ್ದರಿಂದ ಯಾವುದೇ ಅನುದಾನ ನೀಡಲೂ ಆಗುತ್ತಿಲ್ಲ. ಬಾಲವಿಕಾಸ ಸಮಿತಿಯಲ್ಲಿ ಚರ್ಚಿಸಿ ಅಂಗನವಾಡಿಗೆ 12.5 ಸೆಂಟ್ಸ್ ಜಾಗಕ್ಕೆ ಮಂಜೂರಾತಿಗೆ ಪ್ರಯತ್ನಿಸುತ್ತಿದ್ದೇವೆ ಎಂದರು. ಈ ಬಗ್ಗೆ ಚರ್ಚೆ ನಡೆದು ಸದ್ರಿ ಜಾಗದ ಜಂಟಿ ಸರ್ವೆ ನಡೆಸಿ ಗಡಿ ಗುರುತು ಮಾಡಿ ಒತ್ತುವರಿ ತೆರವುಗೊಳಿಸಲು ನಿರ್ಣಯ ಕೈಗೊಳ್ಳಲಾಯಿತು.
ಕಳಪೆ ಕಾಮಗಾರಿ-ಆಕ್ರೋಶ
ರಾಷ್ಟ್ರೀಯ ಹೆದ್ದಾರಿಯಿಂದ ನೆಲ್ಯಾಡಿ-ಕೊಕ್ಕಡ ರಸ್ತೆ ಸಂಪರ್ಕಿಸುವಲ್ಲಿ ಕಾಂಕ್ರಿಟ್ ಎದ್ದು ಹೋಗಿ ವಾಹನ ಸಂಚಾರಕ್ಕೆ ಸಮಸ್ಯೆಯಾಗಿದೆ. ಈ ರಸ್ತೆ ಮೂಲಕವೇ ಗ್ರಾ.ಪಂ., ಪೊಲೀಸ್ ಠಾಣೆ, ಆಸ್ಪತ್ರೆ, ಸಹಕಾರ ಸಂಘಕ್ಕೆ ಬರಬೇಕಾಗಿದೆ. ಇಲ್ಲಿ ಕಾಮಗಾರಿ ಸಂಪೂರ್ಣ ಕಳಪೆಯಾಗಿರುವುದರಿಂದಲೇ ಈ ರೀತಿಯಾಗಿದೆ ಎಂದು ಗ್ರಾಮಸ್ಥರಾದ ಕೆ.ಪಿ.ಆನಂದ, ಜಿ.ವರ್ಗೀಸ್, ಸೆಬಾಸ್ಟಿನ್, ಗಣೇಶ ಪೊಸೊಳಿಕೆ ಮತ್ತಿತರರು ಆಕ್ರೋಶ ವ್ಯಕ್ತಪಡಿಸಿದರು. ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುತ್ತೇನೆ ಎಂದು ಇಂಜಿನಿಯರ್ ಎಸ್,ಎಸ್,ಹುಕ್ಕೇರಿ ಹೇಳಿದರು. ಮಾದೇರಿ-ಆಲಂಕಾರು ರಸ್ತೆಯಲ್ಲೂ ಡಾಮರು ಎದ್ದು ಹೊಂಡ ನಿರ್ಮಾಣಗೊಂಡಿದೆ. ಪ್ಯಾಚ್ ವರ್ಕ್ಗಳೂ 15 ದಿನದಲ್ಲಿ ಎದ್ದು ಹೋಗುತ್ತಿವೆ ಎಂದು ಸೆಬಾಸ್ಟಿನ್ ಹಾಗೂ ವರ್ಗೀಸ್ರವರು ಆರೋಪಿಸಿದರು. ಸದ್ರಿ ರಸ್ತೆ ಪಿಡಬ್ಲ್ಯುಡಿ ರಸ್ತೆಯಾಗಿ ಮೇಲ್ದರ್ಜೆಗೇರಿದೆ. ಆ ಇಲಾಖೆಯವರ ಗಮನಕ್ಕೆ ತರುವುದಾಗಿ ಹುಕ್ಕೇರಿ ಹೇಳಿದರು.
ಕಾಮಗಾರಿಯಿಂದ ರಸ್ತೆಗೆ ಹಾನಿ
ಜೆಜೆಎಂ ಹಾಗೂ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿಯಿಂದ ಬಹುತೇಕ ಕಡೆಗಳಲ್ಲಿ ರಸ್ತೆಗೆ ಹಾನಿಯಾಗಿದೆ. ಮಾದೇರಿ ಸಬ್ಸ್ಟೇಷನ್, ಪಡುಬೆಟ್ಟು ಮತ್ತಿತರ ಕಡೆಗಳಲ್ಲಿ ಕಾಂಕ್ರಿಟ್, ಡಾಮರು ರಸ್ತೆ ತುಂಡರಿಸಿ ಪೈಪ್ ಹಾಕಲಾಗಿದೆ. ಪೈಪ್ ಹಾಕಿದ ಬಳಿಕ ರಸ್ತೆಯಲ್ಲಿನ ಗುಂಡಿಯನ್ನು ಸಮರ್ಪಕವಾಗಿ ಮುಚ್ಚಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು. ಗ್ರಾ.ಪಂ.ಸದಸ್ಯರಾದ ಅಬ್ದುಲ್ ಜಬ್ಬಾರ್, ರವಿಪ್ರಸಾದ್ ಶೆಟ್ಟಿ, ಆನಂದ ಪಿಲವೂರು ಅವರು ಬಹುಗ್ರಾಮ ಕುಡಿಯುವ ನೀರಿನ ಕಾಮಗಾರಿ ವೇಳೆ ರಸ್ತೆ ಕಾಮಗಾರಿಗೆ ಹಾನಿಯಾಗಿದೆ ಎಂದು ಇಂಜಿನಿಯರ್ ಗಮನ ಸೆಳೆದರು.
ಅಂಬೇಡ್ಕರ್ ಭವನ ಜಾಗಕ್ಕೆ ಬೇಲಿ ಹಾಕಿ
ನೆಲ್ಯಾಡಿಯಲ್ಲಿ ಅಂಬೇಡ್ಕರ್ ಭವನಕ್ಕೆ ಜಾಗ ಮಂಜೂರು ಆಗಿ ಹಲವು ವರ್ಷವೇ ಆಗಿದೆ. ಕಟ್ಟಡ ನಿರ್ಮಾಣಕ್ಕೆ ಇನ್ನೂ ಅನುದಾನ ಬಿಡುಗಡೆಯಾಗದೇ ಇರುವುದಕ್ಕೆ ಕೆ.ಪಿ.ಆನಂದ ಅವರು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಪ್ರೇಮಲತಾ ಅವರು, 2019-20ರ ಬಳಿಕ ಅಂಬೇಡ್ಕರ್ ಭವನಕ್ಕೆ ಅನುದಾನ ಬಂದಿಲ್ಲ ಎಂದರು. ಪುತ್ತೂರು, ವಿಟ್ಲದಲ್ಲಿ ಅಂಬೇಡ್ಕರ್ ಭವನಕ್ಕೆ ಅನುದಾನ ಬಂದಿದೆ. ನೆಲ್ಯಾಡಿಗೆ ಅನುದಾನ ಯಾಕೆ ? ಬರುತ್ತಿಲ್ಲ. ಇಲ್ಲಿಗೆ ಸಂಬಂಧಪಟ್ಟ ಕಡತ ಬೆಂಗಳೂರು ಕಚೇರಿಯಲ್ಲೇ ತಟಸ್ಥವಾಗಿದೆ. ಅಂಬೇಡ್ಕರ್ ಭವನಕ್ಕೆ ಮೀಸಲಿಟ್ಟ ಜಾಗಕ್ಕೆ ಬೇಲಿಯಾದರೂ ಹಾಕುವ ಕೆಲಸ ಇಲಾಖೆ ಮಾಡಬೇಕೆಂದು ಕೆ.ಪಿ.ಆನಂದ ಆಗ್ರಹಿಸಿದರು. ಎಸ್ಸಿ/ಎಸ್ಟಿಗೆ ಮೀಸಲಾದ ಅನುದಾನವನ್ನು ಗ್ಯಾರಂಟಿ ಯೋಜನೆಗೆ ಬಳಕೆ ಮಾಡುತ್ತಿದ್ದಾರೆ ಎಂದು ಅಣ್ಣಿ ಎಲ್ತಿಮಾರ್ ಆರೋಪಿಸಿದರು.
ಶಾಲೆ ಕಟ್ಟಡ ತೆರವುಗೊಳಿಸಿಲ್ಲ
ನೆಲ್ಯಾಡಿ ಪಿಎಂಶ್ರೀ ಸರಕಾರಿ ಹಿ.ಪ್ರಾ.ಶಾಲೆಯ ನಾದುರಸ್ತಿಯಲ್ಲಿದ್ದ ಕಟ್ಟಡ ತೆರವಿಗೆ ಟೆಂಡರ್ ಪಡೆದುಕೊಂಡವರು ಹಂಚು ಮಾತ್ರ ತೆರವುಗೊಳಿಸಿದ್ದಾರೆ. ಕಟ್ಟಡ ಅದೇ ರೀತಿ ಇರುವುದರಿಂದ ಮಳೆಗೆ ಬಿದ್ದು ಅನಾಹುತ ಸಂಭವಿಸುವ ಸಾಧ್ಯತೆ ಇದೆ. ಆದ್ದರಿಂದ ಸದ್ರಿ ಕಟ್ಟಡವನ್ನು ತಕ್ಷಣ ತೆರವುಗೊಳಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಆರ್ಪಿ ಪ್ರಕಾಶ್ ಅವರು, ಇಷ್ಟು ಸಮಯದೊಳಗೆ ತೆರವುಗೊಳಿಸಬೇಕೆಂದು ಟೆಂಡರ್ ಪಡೆದುಕೊಂಡವರಿಗೆ ಸೂಚನೆ ನೀಡಲಾಗಿರುತ್ತದೆ. ಏಲಂನಲ್ಲಿ ಪಡೆದುಕೊಂಡವರು ಕಟ್ಟಡವನ್ನು ಸಂಪೂರ್ಣ ನೆಲಸಮಗೊಳಿಸಿ ಮಣ್ಣು ಸಹ ತೆರವುಗೊಳಿಸಬೇಕಾಗಿದೆ. 5 ದಿನದೊಳಗೆ ಕಟ್ಟಡ ತೆರವುಗೊಳಿಸುವಂತೆ ಶಾಲೆಯ ಮೂಲಕ ಸೂಚನೆ ನೀಡಲಾಗುವುದು ಎಂದರು.
ಹೆಚ್.ಎಂ., ದೈ.ಶಿ.ಶಿಕ್ಷಕರ ನೇಮಿಸಿ
ನೆಲ್ಯಾಡಿ ಪಿಎಂಶ್ರೀ ಸರಕಾರಿ ಉ.ಹಿ.ಪ್ರಾ.ಶಾಲೆಗೆ ಮುಖ್ಯಶಿಕ್ಷಕರ ಹಾಗೂ ದೈಹಿಕ ಶಿಕ್ಷಣ ಶಿಕ್ಷಕರ ನೇಮಕ ಮಾಡಬೇಕೆಂದು ಗ್ರಾ.ಪಂ.ಸದಸ್ಯ ಅಬ್ದುಲ್ ಜಬ್ಬಾರ್ ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಆರ್ಪಿ ಪ್ರಕಾಶ್ ಅವರು, 300ಕ್ಕೂ ಹೆಚ್ಚು ಮಕ್ಕಳಿರುವುದರಿಂದ ಇಲ್ಲಿಗೆ ಪದವೀಧರ ಮುಖ್ಯಶಿಕ್ಷಕರ ನೇಮಕ ಆಗಬೇಕು. 2 ವರ್ಷದಿಂದ ನೇಮಕಾತಿ ಆಗುತ್ತಿಲ್ಲ. ಇಲ್ಲವಾದರೆ ಬೇರೆ ಶಾಲೆಯಿಂದ ಮುಖ್ಯ ಶಿಕ್ಷಕರು ವರ್ಗಾವಣೆಗೊಂಡು ಇಲ್ಲಿಗೆ ಬರಬೇಕು. ಬರಲು ಯಾರು ಒಪ್ಪುತ್ತಿಲ್ಲ ಎಂದರು. ಆಗಂತ ಮಕ್ಕಳಿಗೆ ಅನ್ಯಾಯ ಆಗಬಾರದು ಎಂದು ಗ್ರಾ.ಪಂ.ಸದಸ್ಯ ಅಬ್ದುಲ್ ಜಬ್ಬಾರ್, ನಝೀರ್ ಮೊರಂಕಳ ಹೇಳಿದರು. ಈ ಬಗ್ಗೆ ಚರ್ಚೆ ನಡೆದು ನೆಲ್ಯಾಡಿ ಪಿಎಂಶ್ರೀ ಶಾಲೆಗೆ ಮುಖ್ಯಶಿಕ್ಷಕರ ಹಾಗೂ ದೈಹಿಕ ಶಿಕ್ಷಣ ಶಿಕ್ಷಕರ ನೇಮಕ ಮಾಡುವಂತೆ ಇಲಾಖೆಗೆ ಮನವಿ ಮಾಡಲು ನಿರ್ಣಯ ಕೈಗೊಳ್ಳಲಾಯಿತು.
ಯುನಿವರ್ಸಿಟಿಗೆ ಜಾಗ ಕೊಡಿ
ತೊಟ್ಟಿಲಗುಂಡಿಯಲ್ಲಿ ಮಂಗಳೂರು ವಿವಿ ನೆಲ್ಯಾಡಿ ಘಟಕ ಕಾಲೇಜಿಗೆ ಜಾಗ ಮಂಜೂರು ಆದರೂ ಅಲ್ಲಿ ಯಾವುದೇ ಕೆಲಸ ಮಾಡಲು ಅರಣ್ಯ ಇಲಾಖೆ ಬಿಡುತ್ತಿಲ್ಲ ಎಂದು ಗ್ರಾಮಸ್ಥ ಕೆ.ಪಿ.ಆನಂದ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಸಲಾಂ ಬಿಲಾಲ್ ಅವರು, 50 ಸೆಂಟ್ಸ್ ತಾತ್ಕಾಲಿಕವಾಗಿ ನೀಡಲು ಗ್ರಾ.ಪಂ.ನಲ್ಲಿ ನಿರ್ಣಯ ಆಗಿದೆ. ಕಾಲೇಜಿಗೆ ಸಂಬಂಧಿಸಿದಂತೆ ಅನುಷ್ಠಾನ ಸಮಿತಿ ಇದ್ದು ಅವರು ಗಮನ ಹರಿಸುತ್ತಿದ್ದಾರೆ ಎಂದರು. ಈ ವರ್ಷ ಕಲಾ, ವಾಣಿಜ್ಯ ವಿಭಾಗಕ್ಕೆ ದಾಖಲಾತಿ ಆಗಿಲ್ಲ ಎಂದು ಕೆ.ಪಿ.ಆನಂದ ಹೇಳಿದರು. ನೆಲ್ಯಾಡಿಗೆ ಸಿಕ್ಕಿರುವುದನ್ನು ಉಳಿಸಿಕೊಳ್ಳುವ ಭಾಗ್ಯ ನಮಗಿಲ್ಲ ಎಂದು ಗಣೇಶ್ ಪೊಸೊಳಿಗೆ ಹೇಳಿದರು.
ಸಂತೆದಿನ ಶಾಲೆ ಪಕ್ಕ ವ್ಯಾಪರ ಬೇಡ
ಬುಧವಾರ ನಡೆಯುವ ವಾರದ ಸಂತೆ ದಿನ ಅಂಡರ್ಪಾಸ್, ಶಾಲೆಯ ಮುಂಭಾಗದಲ್ಲಿ ವ್ಯಾಪರ ಮಾಡಲಾಗುತ್ತಿದೆ. ಇದರಿಂದ ಶಾಲಾ ಮಕ್ಕಳಿಗೆ ತೊಂದರೆಯಾಗುತ್ತಿದೆ ಎಂದು ಗ್ರಾಮಸ್ಥ ನಝೀರ್ ಮೊರಂಕಳ ಹಾಗೂ ಇತರರು ಆರೋಪಿಸಿದರು. ಈ ಬಗ್ಗೆ ಚರ್ಚೆ ನಡೆದು ಪೊಲೀಸ್ ಹಾಗೂ ಗ್ರಾ.ಪಂ.ನಿಂದ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ವ್ಯಾಪಾರಿಗಳು ಸಂತೆ ಮಾರುಕಟ್ಟೆಯೊಳಗೆ ವ್ಯಾಪರ ನಡೆಸಲು ಕ್ರಮ ಕೈಗೊಳ್ಳುವ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.
ಪಡ್ಡಡ್ಕದಲ್ಲಿ ದಾರಿದೀಪಕ್ಕೆ ಮನವಿ
ಪಡಡ್ಕ ಅಂಗನವಾಡಿ ಪಕ್ಕದಲ್ಲಿದ್ದ ದಾರಿದೀಪ ಡಿಸ್ಕನೆಕ್ಟ್ ಆಗಿದೆ. ಇಲ್ಲಿಗೆ ದಾರಿದೀಪ ಅಳವಡಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು. ಮೊರಂಕಳ ರಸ್ತೆಯಲ್ಲಿ ಮರದ ಗೆಲ್ಲುಗಳು ವಿದ್ಯುತ್ ತಂತಿಗೆ ತಾಗುತ್ತಿದ್ದು ಇವುಗಳನ್ನು ತೆರವುಗೊಳಿಸಬೇಕೆಂದು ಗ್ರಾಮಸ್ಥ ನಝೀರ್ ಮೊರಂಕಳ ಆಗ್ರಹಿಸಿದರು.
ಅಕ್ರಮ ಕೋಳಿಶೆಡ್
ಬೊನ್ಯಸಾಗುನಲ್ಲಿ ಅರಣ್ಯ ಜಾಗದಲ್ಲಿ ಅಕ್ರಮವಾಗಿ ಕೋಳಿಶೆಡ್ ನಿರ್ಮಾಣವಾಗುತ್ತಿದೆ. ಇದರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೆ.ಪಿ.ಆನಂದ ಒತ್ತಾಯಿಸಿದರು. ಸದ್ರಿ ಜಾಗ ಕುಂತೂರು ಅರಣ್ಯ ವ್ಯಾಪ್ತಿಗೆ ಬರುತ್ತಿದೆ. ಅವರಿಗೆ ಮಾಹಿತಿ ನೀಡುತ್ತೇನೆ ಎಂದು ಗಸ್ತು ಅರಣ್ಯ ಪಾಲಕ ದೇವಿಪ್ರಸಾದ್ ಎಸ್.ಹೇಳಿದರು.
ಅಂಗನವಾಡಿ ಪೂರ್ಣಗೊಳಿಸಿ
ಕೊಲ್ಯೊಟ್ಟು ಅಂಗನವಾಡಿ ಕೇಂದ್ರದ ಗೋಡೆ ಆಗಿದೆ. ಉದ್ಯೋಗಖಾತ್ರಿ ಯೋಜನೆಯಡಿ ಕಟ್ಟಡ ಪೂರ್ಣಗೊಳಿಸುವ ಎಂದು ಗ್ರಾ.ಪಂ.ನಿಂದ ಭರವಸೆ ನೀಡಿದ್ದೀರಿ. ಇದನ್ನು ಪೂರ್ಣಗೊಳಿಸಬೇಕೆಂದು ಅಂಗನವಾಡಿ ಕಾರ್ಯಕರ್ತೆ ಸಂಪಾವತಿ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಪಿಡಿಒ ಮೋಹನ್ಕುಮಾರ್ ಅವರು, ಎರಡು ಅಂಗನವಾಡಿಗೆ ಉದ್ಯೋಗ ಖಾತ್ರಿ ಯೋಜನೆಯಲ್ಲಿ ೫ ಲಕ್ಷ ರೂ.ಅನುದಾನ ಇಡಲಾಗಿದೆ. ಆದರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದಲೂ ೩ ಲಕ್ಷ ರೂ.ಅನುದಾನ ಸಿಗಬೇಕೆಂದು ಹೇಳಿದರು.
ಹಿರಿಯ ಆರೋಗ್ಯ ಸಹಾಯಕಿ ಅನ್ನಮ್ಮ ಕೆ.ಸಿ., ಪಿಆರ್ಡಿ ಇಲಾಖೆಯ ಎಸ್.ಎಸ್.ಹುಕ್ಕೇರಿ, ಮೆಸ್ಕಾಂ ಜೆಇ ರಾಮಣ್ಣ, ಸಮಾಜ ಕಲ್ಯಾಣ ಇಲಾಖೆಯ ಪ್ರೇಮಲತಾ ಎಂ., ಗ್ರಾಮಸಹಾಯಕ ಚರಣ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಾಗವೇಣಿ, ಸಿಆರ್ಪಿ ಪ್ರಕಾಶ್ ಬಾಕಿಲ, ತೋಟಗಾರಿಕೆ ಇಲಾಖೆಯ ಶಿವಪ್ರಸಾದ್ ಎಂ., ನೆಲ್ಯಾಡಿ ಹೊರಠಾಣೆಯ ಪ್ರವೀಣ್, ಗಸ್ತು ಅರಣ್ಯಪಾಲಕ ದೇವಿಪ್ರಸಾದ್ ಎಸ್., ಕಿರಿಯ ಪಶುವೈದ್ಯ ಪರೀಕ್ಷಕ ಹನುಮಂತ ಪಾವಿ ಅವರು ಇಲಾಖಾವಾರು ಮಾಹಿತಿ ನೀಡಿದರು.
ಉಪಾಧ್ಯಕ್ಷೆ ರೇಷ್ಮಾಶಶಿ, ಸದಸ್ಯರಾದ ಅಬ್ದುಲ್ ಜಬ್ಬಾರ್, ಚೇತನಾ, ಆನಂದ ಪಿಲವೂರು, ಜಯಲಕ್ಷ್ಮೀ, ರವಿಪ್ರಸಾದ್ ಶೆಟ್ಟಿ, ಮಹಮ್ಮದ್ ಇಕ್ಬಾಲ್, ಪುಷ್ಪಾ, ಪ್ರಕಾಶ್, ಜಯಂತಿ, ಜಯಾನಂದ ಬಂಟ್ರಿಯಾಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಿಬ್ಬಂದಿ ಶಿವಪ್ರಸಾದ್ ವರದಿ ಮಂಡಿಸಿದರು. ಪಿಡಿಒ ಮೋಹನ್ಕುಮಾರ್ ಸ್ವಾಗತಿಸಿ, ನಿರೂಪಿಸಿದರು. ಸಿಬ್ಬಂದಿಗಳು ಸಹಕರಿಸಿದರು.
ಪರವಾನಿಗೆ ನವೀಕರಣಕ್ಕೆ ಜಾಥಾ
ವ್ಯಾಪರಸ್ಥರ ಪರವಾನಿಗೆ ನವೀಕರಣಕ್ಕೆ ಸಂಬಂಧಿಸಿ ನೆಲ್ಯಾಡಿ ಪೇಟೆ ಸಹಿತ ಗ್ರಾಮದಲ್ಲಿ ಜಾಥಾ ನಡೆಸುತ್ತೇವೆ. ವ್ಯಾಪರಸ್ಥರು ಪ್ರತಿ ವರ್ಷವೂ ಕಡ್ಡಾಯವಾಗಿ ಪರವಾನಿಗೆ ನವೀಕರಣ ಮಾಡಿಕೊಳ್ಳಬೇಕು. ಈ ವರ್ಷ ನವೀಕರಣ ಮಾಡುವ ವೇಳೆ ಹಿಂದಿನ ೧೦ ವರ್ಷದ್ದು ಬಾಕಿ ಇದ್ದರೂ ವಸೂಲಾತಿಗೂ ಕ್ರಮ ಕೈಗೊಳ್ಳುತ್ತೇವೆ ಎಂದು ಪಿಡಿಒ ಮೋಹನ್ಕುಮಾರ್ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಆದರೂ ಕಟ್ಟದಿದ್ದರೆ ಏನು ಕ್ರಮ ಕೈಗೊಳ್ಳುತ್ತೀರಿ ಎಂದು ಜಿ.ವರ್ಗೀಸ್ ಪ್ರಶ್ನಿಸಿದರು. ಅಂತವರಿಗೆ ನೋಟಿಸ್ ನೀಡಿ ಬೀಗ ಹಾಕಲು ಕ್ರಮ ಕೈಗೊಳ್ಳುತ್ತೇವೆ ಎಂದು ಪಿಡಿಒ ಹೇಳಿದರು.
ಅಧ್ಯಕ್ಷರ ತಂಡಕ್ಕೆ ಅಭಿನಂದನೆ
ಗ್ರಾ.ಪಂ.ಅಧ್ಯಕ್ಷ ಸಲಾಂ ಬಿಲಾಲ್ರವರ ತಂಡ ಉತ್ತಮ ಸೇವೆ ನೀಡಿದೆ. ಅವರಿಗೆ ಅಭಿನಂದನೆಗಳು ಎಂದು ಗ್ರಾಮಸ್ಥ ಗಣೇಶ್ ಪೊಸೊಳಿಗೆ ಹೇಳಿದರು. ಪಡ್ಡಡ್ಕ ಅಂಗನವಾಡಿ ಕೇಂದ್ರಕ್ಕೆ ಅನುದಾನ ನೀಡಿ ಅಭಿವೃದ್ಧಿಗೆ ಸಹಕರಿಸಿದ ಗ್ರಾ.ಪಂ.ಅಧ್ಯಕ್ಷ ಹಾಗೂ ಸದಸ್ಯರಿಗೆ ಅಭಿನಂದನೆ ಸಲ್ಲಿಸುವುದಾಗಿ ಅಂಗನವಾಡಿ ಕಾರ್ಯಕರ್ತೆ ಹೇಳಿದರು. ಅಧ್ಯಕ್ಷ ಸಲಾಂ ಬಿಲಾಲ್ ಮಾತನಾಡಿ, ಅನುದಾನವನ್ನು ಎಲ್ಲಾ ವಾರ್ಡ್ಗಳಿಗೆ ಸಮಾನವಾಗಿ ಹಂಚಿ ಅಭವೃದ್ಧಿಗೆ ಒತ್ತು ನೀಡಲಾಗಿದೆ. ಗ್ರಾಮಸ್ಥರಿಂದ ಬಂದ ಬೇಡಿಕೆಗಳನ್ನು ಆದ್ಯತೆ ಮೇಲೆ ಈಡೇರಿಸುವುದಾಗಿ ಹೇಳಿದರು.