ಭಗವಾನ್ ಶ್ರೀಕೃಷ್ಣನಿಗೆ ಅಪಹಾಸ್ಯ ಆರೋಪ ; ದೂರು : ಪುತ್ತೂರು ನಗರ ಪೊಲೀಸ್ ಠಾಣೆಗೆ ಹಾಜರಾಗಿ ಮುಚ್ಚಳಿಕೆ ನೀಡಿ ತೆರಳಿದ ಕಲಾವಿದ, ನಿರ್ದೇಶಕ

0

ಮುಂದಿನ ಪ್ರದರ್ಶನದಲ್ಲಿ ಅಶ್ಲೀಲ ಭಂಗಿ, ಪದ ಉಪಯೋಗಿಸುವುದಿಲ್ಲ- ಮುಚ್ಚಳಿಕೆ
ಹಿಂದು ಸಮಾಜದ ಮುಂದೆ ಕ್ಷಮೆಯಾಚಿಸಬೇಕು – ಹರಿಪ್ರಸಾದ್ ನೆಲ್ಲಿಕಟ್ಟೆ

ಪುತ್ತೂರು: ಮಂಗಳೂರು ಪಚ್ಚನಾಡಿಯಲ್ಲಿ ನಡೆದ ಆಟಿಕೂಟದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹಿಂದೂಗಳ ಆರಾಧಕ ಭಗವಾನ್ ಶ್ರೀಕೃಷ್ಣನಿಗೆ ಅಪಹಾಸ್ಯ ಮಾಡಿರುವ ಕಲಾವಿದ ಮತ್ತು ನಿದೇರ್ಶಕರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಆಗ್ರಹಿಸಿ ಹಿಂದು ಸಂಘಟನೆಯ ನೇತೃತ್ವದಲ್ಲಿ ಪುತ್ತೂರು ನಗರ ಪೊಲೀಸ್ ಠಾಣೆಗೆ ನೀಡಿದ ದೂರಿಗೆ ಸಂಬಂಧಿಸಿ ಕಲಾವಿದ ಮತ್ತು ನಿರ್ದೇಶಕ ಪುತ್ತೂರು ನಗರ ಪೊಲೀಸ್ ಠಾಣೆಗೆ ಆಗಮಿಸಿ ಮುಚ್ಚಳಿಕೆ ನೀಡಿ ತೆರಳಿದ್ದಾರೆ.


ಮಂಗಳೂರು ತಾಲೂಕು ಪಚ್ಚನಾಡಿಯ ಬಂದಲೆ ಎಂಬಲ್ಲಿ ಶ್ರೀಮಂತ ರಾಜಗುಳಿಗೆ ಕ್ಷೇತ್ರ ಮೂಡು ಮನೆ ಇವರ ನೇತೃತ್ವದಲ್ಲಿ ನಡೆದ ಆಟಿಕೂಟ ಕಾರ್ಯಕ್ರಮದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶ್ರೀಕೃಷ್ಣ ವೇಷಧಾರಿಯಾದ ರವಿ ರಾಮಕುಂಜ ಎಂಬವರು ಹಿಂದೂಗಳು ಆರಾಧ್ಯ ದೇವರಾದ ಶ್ರೀಕೃಷ್ಣ ಪರಮಾತ್ಮನ ವೇಷ ಧರಿಸಿಕೊಂಡು ಅಶ್ಲೀಲ ಭಂಗಿ ಮತ್ತು ಅಶ್ಲೀಲ ಪದದಿಂದ ಅಪಹಾಸ್ಯ ಮಾಡಿದ್ದಾರೆ. ಇದು ಶ್ರೀಕೃಷ್ಣನ ಆರಾಧಕರಾದ ಹಿಂದೂಗಳ ಧಾರ್ಮಿಕ ಭಾವನೆಗೆ ತೀವ್ರ ಘಾಸಿಯನ್ನು ಉಂಟು ಮಾಡಿರುತ್ತದೆ. ಧಾರ್ಮಿಕ ನಂಬಿಕೆ ಮತ್ತು ಆರಾಧನೆಗೆ ಧಕ್ಕೆಯಾಗದಂತೆ ಕಾನೂನಿನಲ್ಲಿ ಉಲ್ಲೇಖವಿದ್ದರೂ ಈ ರೀತಿಯ ಘಟನೆಗಳು ಮರುಕಳಿಸಿರುವುದರಿಂದ ಸಮಾಜದಲ್ಲಿ ಅಶಾಂತಿಯ ವಾತಾವರಣ ಉಂಟಾಗಿ ಸಮುದಾಯದ ಒಳಗೆ ಗಲಭೆಗಳು ಆಗುವ ಸಾದ್ಯತೆಯಿರುತ್ತದೆ. ಆದ್ದರಿಂದ ಸದ್ರಿ ಕಲಾವಿದ ರವಿ ರಾಮಕುಂಜ ಮತ್ತು ನಿರ್ದೇಶಕರಾದ ಪುಷ್ಪರಾಜ್ ಹಾಗೂ ಕಾರ್ಯಕ್ರಮದ ಆಯೋಜಕರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ದೂರುದಾರರಾದ ಬಾಲಚಂದ್ರ ಸೊರಕೆ ಮತ್ತು ಹರಿಪ್ರಸಾದ್ ನೆಲ್ಲಿಕಟ್ಟೆ ತಿಳಿಸಿದ್ದರು. ಈ ಕುರಿತು ಪೊಲೀಸರು ರವಿ ರಾಮಕುಂಜ ಮತ್ತು ನಿರ್ದೇಶಕ ಪುಷ್ಪರಾಜ್ ಅವರನ್ನು ವಿಚಾರಣೆಗಾಗಿ ಕರೆದಿದ್ದರು. ಆ.4ರಂದು ಕಲಾವಿದ ರವಿ ರಾಮಕುಂಜ ಮತ್ತು ನಿರ್ದೇಶಕ ಪುಷ್ಪರಾಜ್ ಹಾಗು ಅವರ ಪರ ವಕೀಲರು ಪುತ್ತೂರು ನಗರ ಪೊಲೀಸ್ ಠಾಣೆಗೆ ಹಾಜರಾಗಿದ್ದಾರೆ. ಬಳಿಕ ಮುಚ್ಚಳಿಕೆ ನೀಡಿ ತೆರಳಿದ್ದಾರೆ. ಠಾಣೆಯಿಂದ ದೂರುದಾರರಿಗೆ ಹಿಂಬರಹ ನೀಡಲಾಗಿದೆ.

ಹಿಂದು ಸಮಾಜದ ಮುಂದೆ ಕ್ಷಮೆಯಾಚಿಸಬೇಕು :
ಮಂಗಳೂರು ಪಚ್ಚನಾಡಿಯಲ್ಲಿ ನಡೆದ ಆಟಿಕೂಟದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹಿಂದೂಗಳ ಆರಾಧಕ ಭಗವಾನ್ ಶ್ರೀಕೃಷ್ಣನಿಗೆ ಅಪಹಾಸ್ಯ ಮಾಡಿರುವ ಕಲಾವಿದ ರವಿ ರಾಮಕುಂಜ ಮತ್ತು ನಿದೇರ್ಶಕರ ಪುಷ್ಪರಾಜ್ ಅವರು ಮಾಡಿದ ತಪ್ಪಿಗೆ ಹಿಂದು ಸಮಾಜದ ಮುಂದೆ ಕ್ಷಮೆಯಾಚಿಸಬೇಕು. ಈ ಕುರಿತು ಠಾಣೆಯಲ್ಲಿ ಮಾತುಕತೆ ನಡೆದಾಗ ಅವರು ಕ್ಷಮೆಯಾಚನೆಗೆ ಒಪ್ಪಿಲ್ಲ. ಮುಂದೆ ನಡೆಯುವ ಪ್ರದರ್ಶನದಲ್ಲಿ ಅಶ್ಲೀಲ ಭಂಗಿ ಮತ್ತು ಪದ ಬಳಕೆ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ. ಆದರೆ ಅವರು ಅಶ್ಲೀಲ ಭಂಗಿ ಮತ್ತು ಪದ ಬಳಕೆ ಮಾಡದಿದ್ದರೂ ಮುಂದೆ ಪ್ರದರ್ಶನ ಮಾಡುವಾಗ ಕೃಷ್ಣನ ವೇಷ ಧರಿಸಿ ಮಾಡಬಾರದು. ಒಂದು ವೇಳೆ ಕೃಷ್ಣ ಪಾತ್ರ ಮಾಡಿ ಪ್ರದರ್ಶನ ಮುಂದುವರಿಸಿದರೆ ನಮ್ಮ ವಿರೋಧವಿದೆ. ಎಲ್ಲಿ ಮಾಡಿದರೂ ನಾವು ದೂರು ನೀಡುತ್ತೇವೆ. ಈ ವಿಚಾರದಲ್ಲಿ ಅವರ ವಿರುದ್ದ ಕಾನೂನು ಕ್ರಮ ಆಗಿದ್ದರೆ ಪ್ರತಿಭಟನೆ ಮಾಡಲಿದ್ದೇವೆ ಎಂದು ದೂರುದಾರ ಹರಿಪ್ರಸಾದ್ ನೆಲ್ಲಿಕಟ್ಟೆಯವರು ತಿಳಿಸಿದ್ದಾರೆ.


ಮುಂದಿನ ಪ್ರದರ್ಶನದಲ್ಲಿ ಅಶ್ಲೀಲ ಭಂಗಿ, ಪದ ಉಪಯೋಗಿಸುವುದಿಲ್ಲ
ಬಾಲಚಂದ್ರ ಸೊರಕೆ ಮತ್ತು ಹರಿಪ್ರಸಾದ್ ನೆಲ್ಲಿಕಟ್ಟೆಯವರು ನೀಡಿದ ದೂರು ಅರ್ಜಿಗೆ ಸಂಬಂಧಿಸಿ ರವಿರಾಮಕುಂಜ ಮತ್ತು ಪುಷ್ಪರಾಜ್ ಅವರನ್ನು ಪೊಲೀಸರು ದೂರುದಾರರ ಸಮಕ್ಷಮದಲ್ಲೇ ವಿಚಾರಣೆ ಮಾಡಿದ್ದಾರೆ. ಈ ವೇಳೆ ರವಿ ರಾಮಕುಂಜ ಮತ್ತು ಪುಷ್ಪರಾಜ್ ಅವರು ಉದ್ದೇಶಪೂರ್ವಕವಾಗಿ ಯಾವುದೇ ದೇವರ ನಿಂದನೆ ಮಾಡಿರುವುದಿಲ್ಲ. ಮುಂದಿನ ಪ್ರದರ್ಶನಗಳಲ್ಲಿ ದೂರುದಾರರು ಅರ್ಜಿಯಲ್ಲಿ ತಿಳಿಸಿದಂತೆ ಶ್ರೀಕೃಷ್ಣ ಪರಮಾತ್ಮನ ವೇಷ ಧರಿಸಿಕೊಂಡು ಅಶ್ಲೀಲ ಭಂಗಿ ಮತ್ತು ಅಶ್ಲೀಲ ಪದವನ್ನು ಉಪಯೋಗಿಸುವುದಿಲ್ಲವಾಗಿ ಲಿಖಿತ ಹೇಳಿಕೆ ನೀಡಿ ಮುಚ್ಚಳಿಕೆ ಪಡೆದು ಅರ್ಜಿ ವಿಚಾರಣೆಯನ್ನು ಮುಕ್ತಾಯಗೊಳಿಸಲಾಗಿದೆ ಎಂದು ಪೊಲೀಸರು ಹಿಂಬರಹವನ್ನು ದೂರುದಾರರಿಗೆ ನೀಡಿದ್ದಾರೆ.

LEAVE A REPLY

Please enter your comment!
Please enter your name here