ಪೆರ್ನೆ ಯುವ ಸ್ಪಂದನದಿಂದ ಪ್ರಥಮ ವರ್ಷದ ಗ್ರಾಮೀಣ ಕ್ರೀಡೋತ್ಸವ ಕೆಸರ್ದ ಪರ್ಬ

0

ಹಿಂದಿನ ಸಾಂಸ್ಕೃತಿಕ ಪರಂಪರೆಯ ಪುನರಾವರ್ತನೆ-ರವೀಂದ್ರ ಶೆಟ್ಟಿ ನುಳಿಯಾಲು

ಪುತ್ತೂರು: ಪೆರ್ನೆ ಯುವ ಸ್ಪಂದನ ತಂಡದಿಂದ ಊರ ಪರವೂರ ಹಿಂದೂ ಬಾಂಧವರ ಪ್ರಥಮ ವರ್ಷದ ಗ್ರಾಮೀಣ ಕ್ರೀಡೋತ್ಸವ ಕೆಸರ್ದ ಪರ್ಬ ಆ.3 ರಂದು ಪೆರ್ನೆ ನಡಿಮಾರ್ ಗದ್ದೆ ದೊಡ್ಡ ಮನೆಯಲ್ಲಿ ಜರಗಿತು.

ಹಿಂದಿನ ಸಾಂಸ್ಕೃತಿಕ ಪರಂಪರೆಯ ಪುನರಾವರ್ತನೆ-ರವೀಂದ್ರ ಶೆಟ್ಟಿ ನುಳಿಯಾಲು:
ಶ್ರೀ ಮಹಾಲಿಂಗೇಶ್ವರ ದೇವಳದ ವಠಾರದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷ ಎನ್.ರವೀಂದ್ರ ಶೆಟ್ಟಿ ನುಳಿಯಾಲು ಹಿಂಗಾರ ಅರಳಿಸಿ, ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಪೆರ್ನೆಯ ಯುವ ಸ್ಪಂದನ ಗೆಳೆಯರು ಪ್ರಥಮ ಬಾರಿಗೆ ವಿಜ್ರಂಭಣೆಯ ಕೆಸರ್ ಪರ್ಬ ಆಟೋಟ ಸ್ಪರ್ಧೆಗಳನ್ನು ಆಯೋಜಿಸಿದೆ. ಕೆಸರ್ ಪರ್ಬದಲ್ಲಿ ಪಾಲ್ಗೊಳ್ಳಲು ಆಗಮಿಸಿದವರು ಸ್ಪರ್ಧೆಗಳಲ್ಲಿ ಕ್ರೀಡಾಸ್ಫೂರ್ತಿಯಿಂದ ಭಾಗವಹಿಸಿ ಯಶಸ್ವಿಗೊಳಿಸಿ. ಮಣ್ಣಿನಲ್ಲಿ ರೋಗ ನಿರೋಧಕ ಶಕ್ತಿಯಿದ್ದು ನಾವು ಹಿಂದಿನ ದಿನಗಳಲ್ಲಿ ಇಡೀ ದಿನ ಕೆಸರಿನಲ್ಲಿಯೇ ಮಿಂದೆದ್ದು ಕೆಲಸ ಮಾಡುತ್ತಿದ್ದೆವು. ಇದೀಗ ಎಲ್ಲೆಡೆ ಕೆಸರ್ದ ಪರ್ಬ ಹೆಸರಿನಲ್ಲಿ ಕ್ರೀಡೋತ್ಸವಗಳು ಆಗುತ್ತಿದ್ದು ಹಿಂದಿನ ಸಾಂಸ್ಕೃತಿಕ ಪರಂಪರೆಯ ಪುನರಾವರ್ತನೆ ಎನಿಸುತ್ತಿದೆ ಎಂದರು.

ಮಂಗಳೂರು ಶ್ರೀ ಗೋಕರ್ಣನಾಥೇಶ್ವರ ಶಿಕ್ಷಣ ಸಂಸ್ಥೆಯ ಡೀನ್ ಡಾ.ಉಮ್ಮಪ್ಪ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಪೆರ್ನೆ ದೊಡ್ಡ ಮನೆ ಜ್ಯೋತಿ ಎಸ್.ಶೆಟ್ಟಿ, ಕಡೇಶಿವಾಲಯ ಯಮುನಾ ಬೋರ್ ವೆಲ್ಸ್ ಮಾಲಕ ಕಿರಣ್ ಶೆಟ್ಟಿ ನಡ್ಯೇಲು, ರೋಟರಿ ಕ್ಲಬ್ ಬಂಟ್ವಾಳ ಟೌನ್ ಕಾರ್ಯದರ್ಶಿ ನಾರಾಯಣ ಸಿ.ಪೆರ್ನೆ, ಯುವ ಸ್ಪಂದನ ಸ್ಥಾಪಕಾಧ್ಯಕ್ಷ ಕಿರಣ್ ಶೆಟ್ಟಿರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಕ್ಕಳಿಗೆ, ಪುರುಷರಿಗೆ, ಮಹಿಳೆಯರಿಗೆ, ಹಿರಿಯ ನಾಗರಿಕರಿಗೆ ವಿವಿಧ ಸ್ಪರ್ಧೆಗಳು ನಡೆದವು.

LEAVE A REPLY

Please enter your comment!
Please enter your name here