ಆ.9ಕ್ಕೆ ಕಬಡ್ಡಿ ಪಂದ್ಯಾಟ, ಆ.10ಕ್ಕೆ ಕೃಷ್ಣವೇಷ, ಶಂಖನಾದ ಸ್ಪರ್ಧೆ,ಆ.16ಕ್ಕೆ ವಿವಿಧ ಸ್ಪರ್ಧೆಗಳು
ಪುತ್ತೂರು: ವಿಶ್ವಹಿಂದೂ ಪರಿಷದ್ನ ಸ್ಥಾಪನಾ ದಿನಾಚರಣೆಯ ಅಂಗವಾಗಿ ವಿಶ್ವಹಿಂದೂ ಪರಿಷದ್ ಪುತ್ತೂರು ಜಿಲ್ಲೆ, ನಗರ ಪ್ರಖಂಡ, ಗ್ರಾಮಾಂತರ ಪ್ರಖಂಡ ಮತ್ತು ಪುತ್ತೂರು ಮೊಸರುಕುಡಿಕೆ ಉತ್ಸವ ಸಮಿತಿಯಿಂದ ಆ.16ರಂದು ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ 15ನೇ ವರ್ಷದ ಪುತ್ತೂರು ಮೊಸರುಕುಡಿಕೆ ಉತ್ಸವ ಮತ್ತು ಪುತ್ತೂರು ನಗರದಲ್ಲಿ ಭವ್ಯ ಶೋಭಾಯಾತ್ರೆ ನಡೆಯಲಿದೆ. ಇದರ ಜೊತೆಗೆ ಆ.9ರಂದು ಮ್ಯಾಟ್ ಅಂಕಣದ ಕಬಡ್ಡಿ ಪಂದ್ಯಾಟ, ಆ.10ಕ್ಕೆ ಕೃಷ್ಣವೇಷ, ಶಂಖನಾದ ಸ್ಪರ್ಧೆ, ಆ.16ಕ್ಕೆ ಬೆಳಗ್ಗಿನಿಂದಲೇ ವಿವಿಧ ಸ್ಪರ್ಧೆಗಳು ಜರುಗಲಿದೆ.
ಬೃಹತ್ ಶೋಭಾಯಾತ್ರೆ ಅಟ್ಟಿಮಡಿಕೆ ಉತ್ಸವ:
ವಿಶ್ವಹಿಂದು ಪರಿಷದ್ ಬಜರಂಗದಳ ಪುತ್ತೂರು ನಗರ ಮಂಡಲದ ಅಧ್ಯಕ್ಷ ದಾಮೋದರ ಪಾಟಾಳಿ ಅವರು ಮಾತನಾಡಿ, ವಿಶೇಷವಾಗಿ ಪುತ್ತೂರು ಮೊಸರುಕುಡಿಕೆ ಉತ್ಸವದಲ್ಲಿ ಹಲವು ಸ್ಪರ್ಧೆಗಳನ್ನು ಮಕ್ಕಳಿಗೆ ಮತ್ತು ಸಾರ್ವಜನಿಕರಿಗೆ ನೀಡಲಾಗಿದೆ. ದೇಶವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಅದಕ್ಕೆ ಸರಿಯಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಆ.16ಕ್ಕೆ ಪುತ್ತೂರು ಮೊಸರುಕುಡಿಕೆ ವಿಶೇಷ ಉತ್ಸವ, ಶೋಭಾಯಾತ್ರೆ ನಡೆಯಲಿದ್ದು, ಬೆಳಗ್ಗೆ ಉದ್ದಕಂಬ ಸ್ಪರ್ಧೆ ಆರಂಭಗೊಳ್ಳಲಿದೆ. ಸಂಜೆಯಿಂದ ಬೊಳುವಾರು ಶ್ರೀ ಆಂಜನೇಯ ಮಂತ್ರಾಲಯದ ಮುಂಭಾಗದಿಂದ ಪುತ್ತೂರು ಮೊಸರು ಕುಡಿಕೆ ಉತ್ಸವದ ಶೋಭಾಯಾತ್ರೆ ಮತ್ತು ಹಿಂದು ಯುವಕರಿಂದ ಅಟ್ಟಿಮಡಿಕೆ ಒಡೆಯುವ ಸಾಹಸ ಸ್ಪರ್ಧೆಯ ಉದ್ಘಾಟನೆ ನಡೆಯಲಿದೆ.
ವಿಶ್ವಹಿಂದು ಪರಿಷದ್ ಪುತ್ತೂರು ಪ್ರಖಂಡದ ಮಾಜಿ ಅಧ್ಯಕ್ಷ ವೆಂಕಟರಮಣ ಗೌಡ ಕಳುವಾಜೆ ಅವರು ಸಾಹಸ ಸ್ಪರ್ಧೆಯನ್ನು ಉದ್ಘಾಟಿಸಲಿದ್ದಾರೆ. ಬಜರಂಗದಳ ಪುತ್ತೂರು ಜಿಲ್ಲೆ ಸುರಕ್ಷಾ ಪ್ರಮುಖ್ ಸಂತೋಷ್ ಸರಪಾಡಿ ಅವರು ಧ್ವಜ ಹಸ್ತಾಂತರ ಮಾಡುವ ಮೂಲಕ ಶೋಭಾಯಾತ್ರೆಗೆ ಚಾಲನೆ ನೀಡಲಿದ್ದಾರೆ. ಬೊಳುವಾರು ಶ್ರೀ ಆಂಜನೇಯ ಮಂತ್ರಾಲಯದ ಬಳಿ ಪ್ರಾರಂಭವಾಗುವ ಶೋಭಾಯಾತ್ರೆಯಲ್ಲಿ ಶ್ರೀ ಕೃಷ್ಣನ ಸುಂದರ ರಥದೊಂದಿಗೆ ಕೊಂಬು ಕಹಳೆಯೊಂದಿಗೆ ವಿಶೇಷ ಆಕರ್ಷಣೆಯಾಗಿ ಚಂದಳಿಕೆ ವೀರಾಂಜನೇಯ ವ್ಯಾಯಾಮ ಶಾಲೆಯಿಂದ ತಾಲೀಮು ಪ್ರದರ್ಶನ, ಕುಣಿತ ಭಜನಾ ತಂಡಗಳಿಂದ ಕುಣಿತ ಭಜನೆ, ಕೀಲುಕುದುರೆ, ಗೊಂಬೆ, ನಾಸಿಕ್ ಬ್ಯಾಂಡ್, ಶ್ರೀರಾಮ್ ಚೆಂಡೆ ಮತ್ತು ವಿವಿಧ ಕಲಾತಂಡಗಳು ಭಾಗವಹಿಸಲಿದೆ.
ದಿ| ಗುರುಕೃಷ್ಣ ಸುಳ್ಯ ಇವರ ಸ್ಮರಣಾರ್ಥ ವೀರ ಯುವಕರಿಂದ ಸಾಹಸಮಯ ಅಟ್ಟಿಮಡಿಕೆ ಒಡೆಯುವ ಸ್ಪರ್ಧೆಯು ಮುಖ್ಯರಸ್ತೆಯ ಮೂಲಕ ಸಾಗಿ ಅಂಚೆ ಕಚೇರಿಯ ಬಳಿಯಿಂದ ದೇವಸ್ಥಾನದ ಗದ್ದೆಗೆ ಸಾಗಿ ಸಂಜೆ ಗಂಟೆ 6.30 ರಿಂದ ವಿಶ್ವಹಿಂದು ಪರಿಷದ್ ಸ್ಥಾಪನ ದಿನದ ಸಭಾ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು. ಬಜರಂಗದಳ ಕರ್ನಾಟಕದ ದಕ್ಷಿಣ ಪ್ರಾಂತ ಸಂಯೋಜಕ ಪ್ರಭಂಜನ್ ಸೂರ್ಯ ಅವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಮುಂಬಯಿಯ ಉದ್ಯಮಿ ಕನ್ಯಾನ ಸದಾಶಿವ ಶೆಟ್ಟಿ, ಬೆಳ್ತಗಂಗಡಿಯ ಧಾರ್ಮಿಕ ಮುಖಂಡ ಕಿರಣ್ಚಂದ್ರ ಡಿ ಪುಷ್ಪಗಿರಿ, ನಿಡ್ಪಳ್ಳಿ ಶ್ರೀ ಬ್ರಹ್ಮರಗುಂಡ ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ವಿಜಯ ವಿಕ್ರಮ ರಾಮಕುಂಜ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಅಟ್ಟಿಮಡಿಕೆ ಸ್ಪರ್ಧಾ ವಿಜೇತರಿಗೆ ನಗದು ಬಹುಮಾನ ವಿತರಿಸಲಾಗುವುದು ಎಂದವರು ತಿಳಿಸಿದರು.
ಆ.10ಕ್ಕೆ ಜಿಲ್ಲಾ ಮಟ್ಟದ ಕೃಷ್ಣ ವೇಷ ಸ್ಪರ್ಧೆ:
ಪುತ್ತೂರು ಮೊಸರುಕುಡಿಕೆ ಉತ್ಸವ ಸಮಿತಿ ಅಧ್ಯಕ್ಷೆ ವೇದ ಲಕ್ಷ್ಮೀಕಾಂತ್ ಅವರು ಮಾತನಾಡಿ, ಆ.10ರಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಬೆಳಗ್ಗೆ ಗಂಟೆ 10 ರಿಂದ ವಿವಿಧ ಸ್ಪರ್ಧೆಗಳು ನಿರಂತರ ನಡೆಯಲಿದೆ. ಯೆಲ್ತಿಮಾರ್ ವಿಜಯಲಕ್ಷ್ಮೀ ಶೆಣೈ ಸ್ಪರ್ಧಾ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ವಂದನಾ ಶಂಕರ್, ಕೆನರಾ ಬ್ಯಾಂಕ್ ಕೆದಿಲ ಶಾಖೆಯ ಗುಮಾಸ್ತೆ ಜಯಲಕ್ಷ್ಮೀ ಡಿ ಎಸ್, ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಸದಸ್ಯ ಭಾಸ್ಕರ ಬಲ್ಯಾಯ ಅಭಿಜ್ಞಾನ, ಬಜರಂಗದಳ ಮಾಜಿ ಸಂಚಾಲಕ ಲಕ್ಷ್ಮಣ ಬೆಳ್ಳಿಪ್ಪಾಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ 2 ವಷದ ಒಳಗಿನ ಮಕ್ಕಳ ಪುತ್ತೂರು ಮುದ್ದುಕೃಷ್ಣ ಸ್ಪರ್ಧೆ ನಡೆಯಲಿದೆ.
10 ವರ್ಷದಿಂದ 16 ವರ್ಷದೊಳಗಿನ ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಲಿದೆ. ಭಾರತಮಾತೆಯ ಚಿತ್ರ ಬಿಡಿಸುವುದು, ಸ್ಮರಣಶಕ್ತಿ, ದೇಶಭಕ್ತಿಗೀತೆ, ಗುಂಡೆಸೆತ, ಭಗವದ್ಗೀತೆ ಕಂಠಪಾಠ, ಮಡಿಕೆ ಒಡೆಯುವ ಸ್ಪರ್ಧೆಗಳು, ಮಹಿಳೆಯರಿಗೆ ಸಂಗೀತ ಕುರ್ಚಿ, ಮಡಿಕೆ ಒಡೆಯುವುದು, ರಂಗವಲ್ಲಿ ಸ್ಪರ್ಧೆ, ಗುಂಡೆಸೆತ, 8 ಜನರ ತಂಡದ ಮಹಿಳೆಯರ ಹಗ್ಗಜಗ್ಗಾಟ ನಡೆಯಲಿದೆ. ವಿಜೇತರಿಗೆ ನಗದು ಬಹುಮಾನ ನೀಡಲಾಗುವುದು ಎಂದು ಅವರು ತಿಳಿಸಿದರು.
ಆ.9ಕ್ಕೆ ಕಬಡ್ಡಿ ಪಂದ್ಯಾಟ:
ಆ.9ಕ್ಕೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮುಂಭಾಗ ಬೆಳಿಗ್ಗೆ ಗಂಟೆ 10 ರಿಂದ ದಿ.ಟಿ.ರಾಧಾಕೃಷ್ಣ ಭಟ್ ಇವರ ಸ್ಮರಣಾರ್ಥ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಆಹ್ವಾನಿತ ತಂಡಗಳ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ ನಡೆಯಲಿದೆ. ರಾತ್ರಿ ಗಂಟೆ 7ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಅಶೋಕ್ ಕುಂಬ್ಳೆ ಅವರು ಸಭಾಧ್ಯಕ್ಷತೆ ವಹಿಸಲಿದ್ದಾರೆ. ಅನೇಕ ಮಂದಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ದಾಮೋದರ್ ಪಾಟಾಳಿ ಅವರು ತಿಳಿಸಿದರು. ಕಬಡ್ಡಿ ಪಂದ್ಯಾಟದ ವಿಜೇತರಿಗೆ ನಗದು ಬಹುಮಾನ ವಿತರಿಸಲಾಗುವುದು ಎಂದು ತಿಳಿಸಿದರು. ಪತ್ರಿಕಾಗೋಷ್ಟಿಯಲ್ಲಿ ಪುತ್ತೂರು ಮೊಸರು ಕುಡಿಕೆ ಉತ್ಸವ ಸಮಿತಿ ಸಂಚಾಲಕ ಅರುಣ್ ಕುಮಾರ್ ರೈ ಆನಾಜೆ, ಕಾರ್ಯದರ್ಶಿ ಗಣೇಶ್ ಕಾಮತ್, ವಿಶ್ವಹಿಂದೂ ಪರಿಷದ್ ಬಜರಂಗದಳ ಪುತ್ತೂರು ಗ್ರಾಮಾಂತರ ಪ್ರಖಂಡ ಅದ್ಯಕ್ಷ ಜಯಂತ್ ಶೆಟ್ಟಿ ಕಂಬಳತ್ತಡ್ಡ ಉಪಸ್ಥಿತರಿದ್ದರು.