‘ಮಾನವ ಕಳ್ಳಸಾಗಾಣಿಕೆ ತಡೆ’ ದಿನಾಚರಣೆ : ಕಾನೂನು ಮಾಹಿತಿ ಕಾರ್ಯಾಗಾರ ಸಮಾರೋಪ

0

ತಂತ್ರಜ್ಞಾನ ಬಳಸಿಯೂ ಕಳ್ಳಸಾಗಾಣಿಕೆ ನಡೆಯುತ್ತಿದೆ – ಶಿವಣ್ಣ ಎಚ್.ಆರ್
ಅಮಾಯಕ ಜೀವಗಳೊಂದಿಗೆ ಹಣ ಮಾಡುವ ವ್ಯವಸ್ಥಿತ ಜಾಲವಿದೆ – ಸ್ವಾತಿ ಜೆ. ರೈ

ಪುತ್ತೂರು: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮಂಗಳೂರು, ತಾಲೂಕು ಕಾನೂನು ಸೇವೆಗಳ ಸಮಿತಿ ಪುತ್ತೂರು ಹಾಗೂ ವಕೀಲರ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ತಾಲೂಕು ಪಂಚಾಯತ್ ಪುತ್ತೂರು, ಕರ್ನಾಟಕ ಪತ್ರಕರ್ತರ ಸಂಘ ಪುತ್ತೂರು, ಅನಿಕೇತನ ಎಜುಕೇಶನಲ್ ಟ್ರಸ್ಟ್ ಹಾಗೂ ಶ್ರೀ ಸರಸ್ವತಿ ಚಾರಿಟೇಬಲ್ ಟ್ರಸ್ಟ್ ಇವರ ಸಹಭಾಗಿತ್ವದಲ್ಲಿ  ‘ಮಾನವ ಕಳ್ಳಸಾಗಾಣಿಕೆ ತಡೆ’ ದಿನಾಚರಣೆಯ ಅಂಗವಾಗಿ ತಾಲೂಕಿನ 7 ಕಡೆ ನಡೆದ ಕಾನೂನು ಮಾಹಿತಿ ಕಾರ್ಯಾಗಾರದ ಸಮಾರೋಪ ಸಮಾರಂಭವು ಆರ್ಯಾಪು ಗ್ರಾಮ ಪಂಚಾಯತ್ ಆಯೋಜನೆಯಲ್ಲಿ ಗ್ರಾ.ಪಂ. ಸಭಾಂಗಣದಲ್ಲಿ ಆ.6 ರಂದು ನಡೆಯಿತು.

ಮುಖ್ಯ ಅತಿಥಿಯಾಗಿ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಗಾಟಿಸಿದ ಪುತ್ತೂರು ಜೆಎಂಎಫ್‌ಸಿ ಪ್ರಧಾನ ವ್ಯವಹಾರಿಕ ನ್ಯಾಯಾಧೀಶರೂ, ತಾಲೂಕು ಕಾನೂನು ಸೇವೆಗಳ ಸಮಿತಿಯ ಸದಸ್ಯ ಕಾರ್ಯದರ್ಶಿಯವರೂ ಆದ ಶಿವಣ್ಣ ಎಚ್‌. ಆರ್. ರವರು ಮಾತನಾಡಿ ‘ಸಮಾಜದಲ್ಲಿ ಕಾನೂನಿನ ಮಾಹಿತಿಯ ಕೊರತೆಯಾಗುತ್ತಿದೆ. ಸುಶಿಕ್ಷಿತರೇ ಮಾಹಿತಿಯಿಂದ ವಂಚಿತರಾಗುತ್ತಿದ್ದಾರೆ. 

ಹಣದ ಆಮಿಷ ಮತ್ತು ಉದ್ಯೋಗದ ಆಮಿಷದಿಂದಾಗಿ ಹೆಣ್ಮಕ್ಕಳನ್ನು ವಿದೇಶಗಳಿಗೆ ಕರೆದುಕೊಂಡು ಹೋಗಿ ಮನೆ ಕೆಲಸಕ್ಕೆ, ವೃದ್ಧರ ಉಪಚಾರಕ್ಕೆ ಬಳಸಲಾಗುತ್ತದೆ. ಅಂತಹವರು ಅಲ್ಲಿ ಬಂಧಿಯಾಗಿರುತ್ತಾರೆ.  ಸರಕಾರ ಹಲವು ಯೋಜನೆ ತಂದು ಹಳೆಯ ರೀತಿಯ ಅಪಹರಣ ಪ್ರಕರಣಗಳು ನಡೆಯುವುದು ಕಡಿಮೆಯಾದರೂ, ಈಗಿನ ತಂತ್ರಜ್ಞಾನವನ್ನು ಬಳಸಿಯೂ ಮಾನವ ಕಳ್ಳಸಾಗಾಣಿಕೆ ನಡೆಯುತ್ತಿರುವುದು ಆತಂಕಕಾರಿ ವಿಷಯ. ಹೀಗಾಗಿ ನ್ಯಾಯಾಂಗ ವ್ಯವಸ್ಥೆಯು ಕಾಳಜಿ ವಹಿಸಿ ಸಾರ್ವಜನಿಕರಿಗೆ ಸಮರ್ಪಕ ಕಾನೂನಿನ ಮಾಹಿತಿಯನ್ನು ನೀಡ ಬಯಸುತ್ತಿದೆ’ ಎಂದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಕರ್ನಾಟಕ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಸುದೇಶ್ ಕುಮಾರ್ ಮಾತನಾಡಿ ‘ಗ್ರಾಮೀಣ ಭಾಗಗಳಲ್ಲಿ ಅಗತ್ಯವಾಗಿ ತಿಳಿದುಕೊಳ್ಳಬೇಕಾದ ವಿಚಾರ ಇದಾಗಿದೆ. ಈ ಪ್ರಕರಣದಲ್ಲಿ ಸಿಲುಕಿದವರು ಜೀವನ ಪರ್ಯಂತ ಕಷ್ಟಪಡಬೇಕಾಗುತ್ತದೆ. ದೊಡ್ಡಮೊತ್ತದ ಹಣದ ಆಮಿಷಕ್ಕೆ ನಾವು ಬಲಿಪಶುಗಳಾಗದಂತೆ ನಾವು ಸದಾ ಜಾಗೃತರಾಗಿರಬೇಕು. ನಮ್ಮ ಮನೆ, ಹತ್ತಿರದ ಮನೆ, ಊರು, ಗ್ರಾಮದಲ್ಲಿ ಇಂತಹ ಯಾವುದೇ ಅನುಮಾನಸ್ಪಾದ ಘಟನೆಗಳು ನಡೆದಾಗ ಸ್ಥಳೀಯ ಪತ್ರಕರ್ತರಿಗೆ ಮಾಹಿತಿ ನೀಡಿದರೆ ಅದಕ್ಕೆ ಸ್ಪಂದಿಸುವ ಕೆಲಸ ನಾವು ಮಾಡಲಿದ್ದೇವೆ’ ಎಂದರು.

ಆರ್ಯಾಪು ಗ್ರಾ.ಪಂ. ಅಧ್ಯಕ್ಷೆ ಗೀತಾ ಸಭಾಧ್ಯಕ್ಷತೆ ವಹಿಸಿ ಮಾತನಾಡಿ ‘ಇಲ್ಲಿ ಪಡೆದಿರುವ ಮಾಹಿತಿಯನ್ನು ನಮ್ಮ‌ಜೀವನದಲ್ಲಿ ಅಳವಡಿಸಿಕೊಂಡಾಗ ಸಮಾಜಕ್ಕೆ ಎದುರಾಗುವ ಕಂಟಕ ದೂರವಾಗಬಹುದು. ಪರಸ್ಪರ ನಂಬಿಕೆ ವಿಶ್ವಾಸಗಳಿಂದ ಜೀವನ ಸಾಗಿಸೋಣ’ ಎಂದರು. 

ಸಂಪನ್ಮೂಲ ವ್ಯಕ್ತಿಯಾಗಿ ವಕೀಲೆ ಸ್ವಾತಿ ಜೆ. ರೈ ರವರು ಮಾತನಾಡಿ  ‘ಮಾನವ ಕಳ್ಳಸಾಗಾಣಿಕೆಯಂತಹ ಪ್ರಕರಣಗಳು ನಮ್ಮಲ್ಲಿ ನಡೆಯುವುದಿಲ್ಲ ಎಂಬ ಭಾವನೆ ತಪ್ಪು. ಸಮಾಜದಲ್ಲಿ ಇದು ಪಿಡುಗಾಗಿ ಕಾಣಿಸಲ್ಪಟ್ಟಿದೆ. ಗಂಡು ಹೆಣ್ಣು ತಾರತಮ್ಯವಿಲ್ಲದೇ ಈ ಪ್ರಕರಣದಲ್ಲಿ ಸಿಲುಕಿಕೊಳ್ಳುತ್ತಿದ್ದಾರೆ. ಅಮಾಯಕ ಜೀವಗಳನ್ನು ಹಿಡಿದುಕೊಂಡು ಹಣ ಮಾಡುವ ವ್ಯವಸ್ಥಿತ ಜಾಲ ಇದೆ.  ಈಗಿನ ಸಾಮಾಜಿಕ ಜಾಲತಾಣಗಳ ಮೂಲಕ ಅಪರಿಚಿತ ವ್ಯಕ್ತಿಗಳನ್ನು ಸಂಪರ್ಕಿಸಿಕೊಳ್ಳುವುದು ಇಂತಹ ಪ್ರಕರಣಗಳಿಗೆ ದಾರಿ ಮಾಡಿಕೊಡುತ್ತದೆ’ ಎಂದರು.

ಸರಸ್ವತೀ ಚಾರಿಟೇಬಲ್ ಟ್ರಸ್ಟ್ ನ  ಟ್ರಸ್ಟಿ ದೇವಿಪ್ರಸಾದ್ ಕೆ. ರವರು ಮಾತನಾಡಿ ‘ಸಮಾಜವನ್ನು ಬೇರೆ ಬೇರೆ ಪಿಡುಗುಗಳಿಂದ ಜಾಗೃತಿಗೊಳಿಸುವ ಕಾರ್ಯವನ್ನು ನಾವು ಮಾಡಬೇಕು. ಸಮಾಜದಲ್ಲಿ ನಾವು ಏನು ಮಾಡಬೇಕು ? ಏನು ಮಾಡಬಾರದು ? ಎಂಬುದರ ಬಗ್ಗೆ ತಿಳುವಳಿಕೆ ಮೂಡಿಸಿಕೊಳ್ಳಬೇಕು‌. ಸರಸ್ವತೀ ಚಾರಿಟೇಬಲ್ ಟ್ರಸ್ಟ್ ಮುಖಾಂತರ ಹಲವು ವರ್ಷಗಳಿಂದ ಕಾನೂನಿನ ಮಾಹಿತಿ ಕೊಡುವ ಕಾರ್ಯಕ್ರಮ ನಡೆಯುತ್ತಿದೆ’ ಎಂದರು.

ಮಾದಕ ದ್ರವ್ಯ ಜಾಲಕ್ಕೆ ಬೀಳದಿರಿ
ಪಿಡಿಒ ನಾಗೇಶ್ ರವರು ಮಾತನಾಡಿ ‘ಮಾದಕ ದ್ರವ್ಯ ಸೇವೆನೆಯೂ ಒಂದು ದೊಡ್ಡ ಪಿಡುಗಾಗಿ ಪರಿಣಮಿಸಿದ್ದು, ಇದು ಕೇವಲ ಹಣ ಇದ್ದವರು ಮಾತ್ರ ಸೇವನೆ ಮಾಡೋದು ಎಂಬುದು ತಪ್ಪು. ಈ ಜಾಲದವರು ಮೊದಲಿಗೆ ಉಚಿತವಾಗಿ ಸೇವನೆ ಮಾಡಿಸಿ ನಂತರ ವಿದ್ಯಾರ್ಥಿಗಳನ್ನು ಆ ಜಾಲದೊಳಗೆ ಸಿಲುಕಿಸುವ ಸಂಚು ನಡೆಯುತ್ತದೆ. ಈ ಬಗ್ಗೆ ವಿದ್ಯಾರ್ಥಿಗಳು ಎಚ್ಚರವಹಿಸಬೇಕು’ ಎಂದರು.

ಒಟ್ಟು ಏಳು ದಿನಗಳ ಕಾರ್ಯಾಗಾರದ ಸಂಯೋಜಕ ಪುತ್ತೂರಿನ ವಕೀಲ  ಕೃಷ್ಣಪ್ರಸಾದ್ ನಡ್ಸಾರ್ ರವರು ಮಾತನಾಡಿ ‘ಕಾನೂನು ಸೇವೆಗಳ ಬಗ್ಗೆ ಜನರಿಗೆ ಸರಿಯಾದ ಮಾಹಿತಿ ಇರಬೇಕೆಂಬ ಉದ್ದೇಶದಿಂದ ರಾಷ್ಟ್ರೀಯ ಮಟ್ಟದಲ್ಲಿ ಸುಪ್ರೀಂ ಕೋರ್ಟ್ ಈ ಬಗ್ಗೆ ವಿಶೇಷ ಮುತುವರ್ಜಿ ವಹಿಸಿ ಈ ಕಾರ್ಯಾಗಾರ ಹಮ್ಮಿಕೊಂಡಿದೆ. ಸೈಬರ್ ಕ್ರೈಂ, ಆರ್ಥಿಕ ವ್ಯವಹಾರ ಮತ್ತು ಡ್ರಗ್ಸ್ ಗೆ ಸಂಬಂಧಿಸಿದ ಪ್ರಕರಣಗಳಿಗೆ ವಿಶೇಷ ಆಕ್ಟ್  ನ್ಯಾಯಾಂಗದಲ್ಲಿವೆ. ಇವುಗಳ ಮಾಹಿತಿ ಪ್ರತಿಯೊಬ್ಬ ಸಾರ್ವಜನಿಕರಿಗೂ ಇದ್ದಾಗ ಅಪರಾಧಗಳಾಗುವುದೂ, ಜನರು ಮೋಸಹೋಗುವುದೂ ನಿಲ್ಲುತ್ತದೆ’ ಎಂದರು.

ವೇದಿಕೆಯಲ್ಲಿ ಕರ್ನಾಟಕ ಪತ್ರಕರ್ತರ ಸಂಘದ ಪುತ್ತೂರು ತಾಲೂಕು ಅಧ್ಯಕ್ಷ ಶ್ರೀಧರ ರೈ ಕೋಡಂಬು ಉಪಸ್ಥಿತರಿದ್ದರು. ಆರ್ಯಾಪು ಪಂ. ಅಭಿವೃದ್ಧಿ ಅಧಿಕಾರಿ ನಾಗೇಶ್ ಮಾರ್ತಾಜೆ ರವರು ಕಾರ್ಯಕ್ರಮ ನಿರೂಪಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ‘ಗ್ರಾಮೀಣ ಭಾಗದ ನಮ್ಮ ಪಂಚಾಯತ್ ನ ಸಹಯೋಗದೊಂದಿಗೆ ಉಪಯುಕ್ತಕಾರಿ ಮತ್ತು ಸಮಾಜಕ್ಕೆ ಅವಶ್ಯಕವಾದ ಕಾರ್ಯಕ್ರಮ ಆಯೋಜಿಸಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರು. 

ಕಾರ್ಯಾಗಾರದಲ್ಲಿ ಸಂಪ್ಯ ಅಕ್ಷಯ ಕಾಲೇಜಿನ ವಿದ್ಯಾರ್ಥಿಗಳು, ಸಂಜೀವಿನಿ ಒಕ್ಕೂಟದವರು, ಕರ್ನಾಟಕ ಪತ್ರಕರ್ತರ ಸಂಘದ ಪದಾಧಿಕಾರಿಗಳು, ಸದಸ್ಯರು ಪಾಲ್ಗೊಂಡರು.

ವಿವಿಧ ಕಡೆ ಏಳು ದಿನಗಳು ನಡೆದ ಕಾರ್ಯಾಗಾರಗಳು
ಈ ಕಾರ್ಯಾಗಾರ ಸಪ್ತಾಹದ ಉದ್ಘಾಟನೆಯು ಪುತ್ತೂರಿನ ನ್ಯಾಯಾಲಯ ಸಂಕೀರ್ಣದಲ್ಲಿರುವ ‘ಪರಾಶರ ವಕೀಲರ ಭವನದಲ್ಲಿ ಜು.30 ರಂದು ನಡೆದಿತ್ತು. ಬಳಿಕ ಕ್ರಮವಾಗಿ ಜು.31 ರಂದು ಬಲ್ನಾಡು ಪಂಚಾಯತ್ ಆಯೋಜನೆಯಲ್ಲಿ ಬೆಳಿಯೂರುಕಟ್ಟೆ ಸ.ಪ.ಪೂ. ಕಾಲೇಜಿನಲ್ಲಿ, ಆ.1 ರಂದು ಒಳಮೊಗ್ರು ಗ್ರಾ.ಪಂ. ಆಯೋಜನೆಯಲ್ಲಿ ಕುಂಬ್ರ ಸ.ಪ.ಪೂ. ಕಾಲೇಜಿನಲ್ಲಿ, ಆ.2 ರಂದು ಉಪ್ಪಿನಂಗಡಿ ಗ್ರಾ.ಪಂ. ಆಯೋಜನೆಯಲ್ಲಿ ಉಪ್ಪಿನಂಗಡಿ ಸ.ಪ.ಪೂ. ಕಾಲೇಜಿನಲ್ಲಿ, ಆ.4 ರಂದು ಕೆಯ್ಯೂರು ಗ್ರಾ.ಪಂ. ಆಯೋಜನೆಯಲ್ಲಿ ಕೆಯ್ಯೂರು ಸ.ಪ.ಪೂ. ಕಾಲೇಜಿನಲ್ಲಿ, ಆ.5 ರಂದು ನಿಡ್ಪಳ್ಳಿ ಗ್ರಾ.ಪಂ. ಆಯೋಜನೆಯಲ್ಲಿ ಬೆಟ್ಟಂಪಾಡಿ ಸ.ಪ.ಪೂ. ಕಾಲೇಜಿನಲ್ಲಿ ಕಾರ್ಯಾಗಾರಗಳು ನಡೆದವು.

LEAVE A REPLY

Please enter your comment!
Please enter your name here