ಪುತ್ತೂರು:ಕೆದಿಲ ಗ್ರಾಮದ ಕಾಂತುಕೋಡಿಯಲ್ಲಿ ಮಹಿಳೆಯೊಬ್ಬರ ಮೃತ ದೇಹ ಮಳೆ ನೀರು ಹರಿಯುವ ತೋಡಿನಲ್ಲಿ ಪತ್ತೆಯಾದ ಘಟನೆ ಆ.6ರಂದು ಸಂಜೆ ಬೆಳಕಿಗೆ ಬಂದಿದೆ.
ಕೆದಿಲ ಗ್ರಾಮದ ಒಳಕುಮೇರಿ ನಿವಾಸಿ ರಾಮಣ್ಣ ಗೌಡ ಎಂಬವರ ಪತ್ನಿ ಮಮತಾ (35ವ.)ಅವರ ಮೃತ ದೇಹ ಎಂದು ಗುರುತಿಸಲಾಗಿದೆ.
ಮಮತಾ ಅವರು ಬೆಳಗ್ಗೆ ಬಟ್ಟೆ ಒಗೆಯಲು ಕಾಂತುಕೋಡಿ ತೋಡಿಗೆ ತೆರಳಿದ ಬಳಿಕ ನಾಪತ್ತೆಯಾಗಿದ್ದರು.ಪತ್ನಿ ಮಧ್ಯಾಹ್ನ ಮನೆಗೆ ಬಂದಿಲ್ಲ ಎಂದು ರಾಮಣ್ಣ ಗೌಡ ಅವರು ಸ್ಥಳೀಯರ ಜೊತೆ ಹುಡುಕಾಟ ಆರಂಭಿಸಿದ್ದಾರೆ.ಸಂಜೆ ವೇಳೆ ಮೃತದೇಹ ಕಾಂತುಕೋಡಿ ತೋಡಿನಲ್ಲಿ, ಬಟ್ಟೆ ಒಗೆಯುವ ಸ್ಥಳದಿಂದ ತುಸು ದೂರ ಕಲ್ಲುಬಂಡೆಯ ನೀರಿನ ಸೆಳೆತದ ಬಳಿ ಪತ್ತೆಯಾಗಿದೆ.ಘಟನೆ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಪೊಲೀಸರು ಬಂದು ಪರಿಶೀಲನೆ ನಡೆಸಿದ್ದಾರೆ.ಮೃತ ದೇಹವನ್ನು ಪುತ್ತೂರು ಸರಕಾರಿ ಆಸ್ಪತ್ರೆಯ ಶವಾಗಾರ ಕೊಠಡಿಯಲ್ಲಿ ಇರಿಸಲಾಗಿದೆ.ಮೃತರು ಗಂಡ ರಾಮಣ್ಣ, ಅತ್ತೆ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ.
ಬೀಡಿಕಟ್ಟಿ ಜೀವನ ಸಾಗಿಸುತ್ತಿದ್ದರು:
ರಾಮಣ್ಣ ಗೌಡ ಅವರು ಕೂಲಿ ಕಾರ್ಮಿಕರಾಗಿದ್ದು,ಮಮತಾ ಅವರು ಬೀಡಿ ಕಟ್ಟಿ ಜೀವನ ನಡೆಸುತ್ತಿದ್ದರು.ಮನೆಯಲ್ಲಿ ಮಮತಾ ಅವರ ಪತಿ,ಪುತ್ರ,ಪುತ್ರಿ ಹಾಗೂ ಅತ್ತೆ ಹಾಗು ಬಾವ ಲೋಕಯ್ಯ, ಅವರ ಇಬ್ಬರು ಗಂಡು ಮಕ್ಕಳು ಜೊತೆಯಲ್ಲಿ ವಾಸ್ತವ್ಯ ಹೊಂದಿದ್ದರು.ರಾಮಣ್ಣ ಗೌಡ ಮತ್ತು ಅವರ ಅಣ್ಣ ಲೋಕಯ್ಯ ಗೌಡರು ಕೂಲಿ ಕೆಲಸ ಮಾಡುತ್ತಿದ್ದರು.
ಬಾವ ನಾಪತ್ತೆ!
ಮೃತ ಮಮತಾ ಅವರ ಗಂಡ ರಾಮಣ್ಣ ಗೌಡರ ಅಣ್ಣ ಲೋಕಯ್ಯ ಗೌಡ ಅವರು ದಿಢೀರ್ ನಾಪತ್ತೆಯಾಗಿದ್ದಾರೆ.ಅವರು ಕೂಲಿ ಕೆಲಸಕ್ಕೆ ಹೋಗಿದ್ದ ಸ್ಥಳದಿಂದ ಬೆಳಗ್ಗಿನ ಚಹಾ ಕುಡಿಯಲು ಹೋದವರು ಮತ್ತೆ ಹಿಂದಿರುಗಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.ಲೋಕಯ್ಯ ಗೌಡ ಅವರ ಮೊದಲ ಪತ್ನಿ ಮೃತಪಟ್ಟಿದ್ದು ಎರಡನೇ ವಿವಾಹ ಆಗಿದ್ದರೂ ಆಕೆ ಜೊತೆಯಲ್ಲಿ ಇಲ್ಲ ಎಂಬ ಮಾಹಿತಿ ಲಭ್ಯವಾಗಿದೆ.ಇದೀಗ ಪೊಲೀಸರು ಲೋಕಯ್ಯ ಗೌಡರ ಪತ್ತೆಗೆ ಹುಡುಕಾಟ ನಡೆಸುತ್ತಿದ್ದಾರೆ.
ಕೊಲೆ ಶಂಕೆ !
ಮಮತಾ ಅವರು ಬಟ್ಟೆ ಒಗೆಯಲು ಹೋಗಿರುವ ತೋಡಿನಲ್ಲಿ ಮೊಣಕಾಲು ಮುಳುಗುವಷ್ಟು ಮಾತ್ರ ನೀರು ಹರಿಯುತ್ತಿದ್ದು,ನೀರಿನ ಸೆಳೆತವಿಲ್ಲ.ಒಂದೊಮ್ಮೆ ಆಕೆ ಕಾಲು ಜಾರಿ ಬಿದ್ದು ಸಾವು ಸಂಭವಿಸಿದ್ದರೂ ಬಟ್ಟೆ ಒಗೆಯುವ ಸ್ಥಳದಲ್ಲಿ ಮೃತ ದೇಹ ಇರದೆ ಸ್ವಲ್ಪ ದೂರದಲ್ಲಿ ಪತ್ತೆಯಾಗಿರುವುದು ಅನುಮಾನಕ್ಕೆ ಕಾರಣವಾಗಿದ್ದು ಇದೊಂದು ಕೊಲೆ ಪ್ರಕರಣ ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ.