ಪುತ್ತೂರು: ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇರುವ ಕಾರಣಕ್ಕೆ ಇನ್ನೇನು ಬಾಗಿಲು ಮುಚ್ಚಲಿದೆ ಎಂಬ ಹಂತಕ್ಕೆ ಬಂದಿದ್ದ ಶತಮಾನ ಕಂಡ ಕಾವು ಸರಕಾರಿ ಹಿ.ಪ್ರಾ.ಶಾಲೆ ಇದೀಗ ಗ್ರಾಮೀಣ ಭಾಗದಲ್ಲಿ ಅತೀ ಹೆಚ್ಚು ವಿದ್ಯಾರ್ಥಿಗಳಿರುವ ಶಾಲೆಯಾಗಿ ಪರಿವರ್ತನೆಯಾಗಿದ್ದು ,ಮುಂದಿನ ಶೈಕ್ಷಣಿಕ ವರ್ಷದಲ್ಲಿ ಪ್ರೌಢಶಾಲೆ ಪ್ರಾರಂಭ ಮಾಡುವ ಬಗ್ಗೆ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಪೋಷಕರ ಹಾಗೂ ಶಾಲೆಯ ಹಳೆ ವಿದ್ಯಾರ್ಥಿಗಳ ಒಗ್ಗೂಡುವಿಕೆಯಿಂದ ಬದಲಾವಣೆ ಹೇಗೆ ಮಾಡಬಹುದು ಎಂಬುದಕ್ಕೆ ಕಾವು ಶಾಲೆ ಉದಾಹರಣೆಯಾಗಿ ನಮ್ಮೆಲ್ಲರ ಮುಂದೆ ತಲೆ ಎತ್ತಿ ನಿಂತಿದೆ.
ದ.ಕ ಜಿಲ್ಲೆಯಲ್ಲಿ ಎರಡು ಕಡೆಗಳಲ್ಲಿ ಪ್ರೌಢ ಶಾಲೆ ಮಂಜೂರಾಗಿದೆ. ಪುತ್ತೂರು ಹಾಗೂ ಬೆಳ್ತಂಗಡಿ ತಾಲೂಕಿನಲ್ಲಿ ತಲಾ ಒಂದು ಶಾಲೆಯನ್ನು ಈ ಬಾರಿ ಸರಕಾರಿ ಆಯ್ಕೆ ಮಾಡಿದೆ. ರಾಜ್ಯದಲ್ಲಿ ಒಟ್ಟು 100 ಪ್ರಾಥಮಿಕ ಶಾಲೆಗಳಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಪ್ರೌಢಶಾಲೆ ಆರಂಭಗೊಳ್ಳಲಿದೆ. ಈ ಪೈಕಿ ಕಾವು ಶಾಲೆಯೂ ಸೇರಿದೆ.
2005 ರಲ್ಲಿ ಮುಚ್ಚಿ ಹೋಗುತ್ತಿತ್ತು..!
2005ರಲ್ಲಿ ಕಾವು ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ಮಕ್ಕಳ ಸಂಖ್ಯೆ ತೀರಾ ಕಡಿಮೆ ಇತ್ತು. ಗ್ರಾಮೀಣ ಭಾಗದಲ್ಲಿ ಖಾಸಗಿ ಶಾಲೆಗಳು ಆರಂಭವಾಗಿದ್ದ ಕಾಲಘಟ್ಟ ಅದಾಗಿತ್ತು. ಕಾವು ಹಿ.ಪ್ರಾ.ಶಾಲೆ ಆ ಭಾಗದ ಅತ್ಯಂತ ಹಿರಿಯ ಶಾಲೆ ಮಾತ್ರವಲ್ಲದೆ ಅನೇಕ ಮಹಾನ್ ವ್ಯಕ್ತಿಗಳು ಇದೇ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದರು. ಈ ಶಾಲೆಯನ್ನು ಮುಚ್ಚಲು ಬಿಡುವುದಿಲ್ಲ ಎಂದು ಶಾಲೆಯನ್ನು ದತ್ತು ಪಡೆದವರು ಉದ್ಯಮಿ ಕಾವು ಹೇಮನಾಥ ಶೆಟ್ಟಿ.
2005ರಲ್ಲಿ ಕಾವು ಸರಕಾರಿ ಶಾಲೆಯನ್ನು ದತ್ತು ಪಡೆದು ಶಾಲೆಗೆ ಅಗತ್ಯವಾಗಿ ಬೇಕಾದ ಮೂಲಭೂತ ಸೌಕರ್ಯಗಳನ್ನು ತರಿಸುವಲ್ಲಿಯೂ ಯಶಸ್ವಿಯಾದರು. ಸರಕಾರದ ಪರವಾನಿಗೆ ಇಲ್ಲದೇ ಇದ್ದರೂ ಮೊದಲ ಬಾರಿಗೆ ಪುತ್ತೂರು ತಾಲೂಕಿನಲ್ಲಿ ಸರಕಾರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಎಲ್ ಕೆ ಜಿ ಯುಕೆಜಿ ತರಗತಿಯನ್ನು ಪ್ರಾರಂಭ ಮಾಡಿದರು. ಪ್ರಾರಂಭದಲ್ಲಿ ಎಲ್‌ಕೆಜಿ ತರಗತಿಗೆ ಮಕ್ಕಳ ಸಂಖ್ಯೆ ಕಡಿಮೆ ಇದ್ದರೂ ಎರಡನೇ ವರ್ಷದಲ್ಲಿ ಮಕ್ಕಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿತು. 10 ವರ್ಷದ ಬಳಿಕ ಇದೇ ಶಾಲೆಯಲ್ಲೀಗ 450 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಎಲ್ ಕೆಜಿಯಿಂದ 7ನೇ ತರಗತಿತನಕ ಆಂಗ್ಲ ಹಾಗೂ ಕನ್ನಡ ಮಾಧ್ಯಮ ತರಗತಿಗಳಿದೆ. ಶಾಲೆಯಲ್ಲಿನ ಕೊಠಡಿ ಸಮಸ್ಯೆಗಳ ಕೊರತೆಯನ್ನು ನೀಗಿಸಲಾಗಿದೆ. ಶಾಲೆಗೆ ಏನೆಲ್ಲಾ ಬೇಕೋ ಅದೆಲ್ಲವನ್ನೂ ಅಲ್ಲಿಗೆ ಮಾಡಿಸುವಲ್ಲಿ ದತ್ತು ಪಡೆದ ಕಾವು ಹೇಮನಾಥ ಶೆಟ್ಟಿ ಯಶಸ್ವಿಯಾಗಿದ್ದರು. ಕಳೆದ ಎರಡು ವರ್ಷದಿಂದ ಈ ಶಾಲೆಗೆ ಶಾಲಾ ಬಸ್ ವ್ಯವಸ್ಥೆ ಕೂಡ ಮಾಡಲಾಗಿದೆ. ಸರಕಾರಿ ಶಾಲೆಗೆ ಶಾಲಾ ಬಸ್ ವ್ಯವಸ್ಥೆ ಮಾಡಿದ ಮೊದಲ ಶಾಲೆ ಎಂಬ ಹೆಗ್ಗಳಿಕೆಯನ್ನೂ ಕಾವು ಶಾಲೆ ತನ್ನದಾಗಿಸಿತು.
ಶಾಸಕ ಅಶೋಕ್ ರೈ ಶಿಫಾರಸ್ಸು
ಕಾವು ಸರಕಾರಿ ಶಾಲೆಯಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಪ್ರೌಢಶಾಲೆ ತರಗತಿ ಪ್ರಾರಂಭ ಮಾಡಿಸುತ್ತೇನೆ. ಇದಕ್ಕಾಗಿ ಶಿಕ್ಷಣ ಇಲಾಖೆಗೆ ಸೂಚನೆಯನ್ನು ನೀಡಿದ್ದೇನೆ ಎಂದು ಕಾವು ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಅಶೋಕ್ ರೈ ಭರವಸೆ ನೀಡಿದ್ದರು. ಆ ಪ್ರಕಾರ ಪ್ರೌಢ ಶಾಲೆ ಮಂಜೂರುಗೊಂಡಿದೆ. ಪ್ರೌಢ ಶಾಲೆ ಮಂಜೂರುಗೊಂಡಿರುವುದು ಶಾಲಾ ಪೋಷಕರಿಗೆ ಅತ್ಯಂತ ಸಂತಸವನ್ನು ತಂದಿದೆ.
ಕೊಟ್ಟ ಮಾತಿನಂತೆ ಕಾವು ಸರಕಾರಿ ಪ್ರೌಢಶಾಲೆ ತರಗತಿಯನ್ನು ಮಂಜೂರು ಮಾಡಿದ್ದೇನೆ. ಕಾವು ಶಾಲೆಯನ್ನು ಕಾವು ಹೇಮನಾಥ ಶೆಟ್ಟಿಯವರು ಹತ್ತು ವರ್ಷಗಳ ಹಿಂದೆ ದತ್ತುಪಡೆದುಕೊಂಡು ಶಾಲೆಯನ್ನು ಅಭಿವೃದ್ದಿ ಮಾಡಿದ್ದಾರೆ. ಮಕ್ಕಳ ಸಂಖ್ಯೆಯೂ ಇದೆ. ಖಾಸಗಿ ಶಾಲೆಯ ಮಾದರಿಯಲ್ಲೇ ಸರಕಾರಿ ಶಾಲೆಯನ್ನು ಶಾಲೆಯ ಎಲ್ಲಾ ಪೋಷಕರೊಂದಿಗೆ ಸೇರಿಕೊಂಡು ಹೇಮನಾಥ ಶೆಟ್ಟಿ ಯವರ ತಂಡ ಸರಕಾರಿ ಶಾಲೆಯನ್ನು ಅಭಿವೃದ್ದಿ ಮಾಡಿದೆ. ಆಂಗ್ಲ ಮಾಧ್ಯಮ ಹಾಗೂ ಕನ್ನಡ ಮಾಧ್ಯಮ ಶಾಲೆ ಒಂದೇ ಸೂರಿನಡಿ ಮಕ್ಕಳಿಗೆ ದೊರೆಯುತ್ತಿದೆ. ಮಕ್ಕಳನ್ನು ಶಾಲೆಗೆ ಕರೆತರಲು ಬಸ್ಸಿನ ವ್ಯವಸ್ಥೆಯೂ ಇದೆ, ಉತ್ತಮ ಶಿಕ್ಷಕರ ತಂಡವೂ ಇಲ್ಲಿದೆ. ಪೋಷಕರ ಸಂಪೂರ್ಣ ಸಹಕಾರ ಈ ಶಾಲೆಯ ಬೆಳವಣಿಗೆಯ ಹಿಂದೆ ಕೆಲಸ ಮಾಡಿದೆ.
ಅಶೋಕ್ ರೈ,
ಶಾಸಕರು, ಪುತ್ತೂರು
ಕಾವು ಸರಕಾರಿ ಪ್ರೌಢಶಾಲೆ ಮಂಜೂರುಗೊಂಡಿರುವುದು ಅತ್ಯಂತ ಸಂತೋಷ ತಂದಿದೆ. ಇದಕ್ಕಾಗಿ ಶಾಸಕ ಅಶೋಕ್ ರೈ, ಕರ್ನಾಟಕ ಸರಕಾರ ಶಿಕ್ಷಣ ಇಲಾಖೆ, ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ಎಲ್ಲರ ಸಹಕಾರದಿಂದ ನಮ್ಮ ಶಾಲೆಗೆ ಪ್ರೌಢ ಶಿಕ್ಷಣ ಮಂಜೂರಾಗಿದೆ. ನಾನು ಶಾಲೆಯನ್ನು ದತ್ತು ಪಡೆದುಕೊಂಡ ಬಳಿಕ ಶಾಲೆಯ ಪೋಷಕರು, ಹಳೆ ವಿದ್ಯಾರ್ಥಿಗಳು, ಸ್ಥಳೀಯ ಸಂಘ ಸಂಸ್ಥೆಗಳು, ದಾನಿಗಳು ಹಾಗೂ ಎಲ್ಲರ ಸಹಕಾರದಿಂದ ಇಲ್ಲಿ ಅಭಿವೃದ್ದಿ ಕೆಲಸಗಳು ನಡೆದಿದೆ. ಶಾಲೆಯ ಸರ್ವಾಂಗೀಣ ಅಭಿವೃದ್ದಿಗೆ ಮುಂದಿನ ದಿನಗಳಲ್ಲಿಯೂ ಎಲ್ಲರೂ ಸಹಕಾರ ನೀಡುವಂತೆ ಮನವಿ ಮಾಡುತ್ತಿದ್ದೇನೆ. ಶತಮಾನ ಕಂಡ ಈ ಶಾಲೆಗೆ ಶತಮಾನದ ಬಳಿಕ ಪ್ರೌಢಶಾಲೆ ಮಂಜೂರುಗೊಂಡಿರುವುದು ಬಡವರ ಮಕ್ಕಳಿಗೂ ಉನ್ನತ ಶಿಕ್ಷಣ ನೀಡಲು ಇದು ಸಹಕಾರಿಯಾಗಲಿದೆ.
ಕಾವು ಹೇಮನಾಥ ಶೆಟ್ಟಿ,
ಶಾಲೆಯನ್ನು ದತ್ತು ಪಡೆದವರು