ಮೂಡಂಬೈಲು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಮೂಡಂಬೈಲು ಒಕ್ಕೂಟ ಹಾಗೂ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಇದರ ಸಂಯುಕ್ತ ಆಶ್ರಯದಲ್ಲಿ ನಾಲ್ಕನೇ ವರ್ಷದ ಸಾಮೂಹಿಕ ವರಮಹಾಲಕ್ಷ್ಮಿ ಪೂಜೆಯು ಆಗಸ್ಟ್ 8ರಂದು ಶ್ರೀ ಮಹಿಷಮರ್ದಿನಿ ಭಜನಾ ಮಂಡಳಿ ಮೂಡಂಬೈಲು ಇದರ ವೈಭವಿ ಸಭಾಭವನದಲ್ಲಿ ವೇದಮೂರ್ತಿ ಶ್ರೀ ಸತ್ಯ ಶಂಕರ ಉಪಾಧ್ಯಾಯರ ಪೌರೋಹಿತ್ಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.
ಬಳಿಕ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಬೆಳ್ಳೂರು ಜಿಎಸ್ಎಸ್ ನಿವೃತ್ತ ಮುಖ್ಯ ಶಿಕ್ಷಕಿ ವಾರಿಜಾ ಎಂ ಮಾತನಾಡಿ, ಅಷ್ಟ ಐಶ್ವರ್ಯಗಳನ್ನು ಆ ಕೂಡಲೇ ಬಯಸದೆ, ನ್ಯಾಯದಿಂದ ಧನಾತ್ಮಕ ಚಿಂತನೆಗಳಿಂದ ಕರ್ತವ್ಯಗಳನ್ನು ನಿರ್ವಹಿಸಿದರೆ ಪೂಜೆಯ ಫಲವು ಖಂಡಿತಾ ದೊರೆಯುವುದು ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಳಿಕೆ ವಲಯದ ಮೇಲ್ವಿಚಾರಕಿ ಮೀನಾಕ್ಷಿ ಯೋಜನೆಯಿಂದ ಸಿಗುವ ವಿವಿಧ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ಸಭಾಧ್ಯಕ್ಷತೆಯನ್ನು ವಹಿಸಿದ್ದ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಅಧ್ಯಕ್ಷೆ ಶಶಿಕಲಾ ಮಾತನಾಡಿ, ಶ್ರಾವಣ ಮಾಸದ ಎರಡನೇ ಶುಕ್ರವಾರ ಆಚರಣೆ ಮಾಡುವ ಈ ವರಮಹಾಲಕ್ಷ್ಮಿ ವೃತ್ತಾಚರಣೆಯಿಂದ ಎಲ್ಲರಿಗೂ ಶುಭವಾಗಲಿ. ಲಕ್ಷ್ಮಿಯ ಕೃಪೆ ಎಲ್ಲರಿಗೂ ಸಿಗಲಿ ಎಂದು ಶುಭ ಹಾರೈಸಿದರು.
ವೇದಿಕೆಯಲ್ಲಿ ಪುಣಚ ಗ್ರಾಮ ಪಂಚಾಯಿತಿ ಸದಸ್ಯರಾದ ಶಾರದಾ ಉದಯ್ ಕುಮಾರ್ ಸರವು, ವಾಣಿಶ್ರೀ ರೋಹಿತ್ ಪಂಡಿತಮೂಲೆ, ಶ್ರೀಮಹಿಷಮರ್ದಿನಿ ಮಹಿಳಾ ಮಂಡಳಿಯ ಅಧ್ಯಕ್ಷೆ ಸತ್ಯ ಬಿ ಶೆಟ್ಟಿ, ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಡಂಬೈಲು ಒಕ್ಕೂಟದ ಹಿರಿಯ ನಿವೃತ್ತ ಸದಸ್ಯೆ ಮುತ್ತು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಒಕ್ಕೂಟದ ಹಿರಿಯ ನಿವೃತ್ತ ಸದಸ್ಯರಾದ ಮುತ್ತು, ಸುಮಾರು 30 ವರ್ಷಗಳಿಂದ ಆರೋಗ್ಯ ಸಹಾಯಕಿಯಾಗಿ ಮೂಡಂಬೈಲು ಪರಿಸರದಲ್ಲಿ ಕಾರ್ಯನಿರ್ವಹಿಸಿ ವಿಟ್ಲ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವರ್ಗಾವಣೆಗೊಂಡಿರುವ ಪುಷ್ಪ, ಹಾಗೂ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆಗೊಂಡ ಒಕ್ಕೂಟದ ಸದಸ್ಯರ ಮಕ್ಕಳಾದ ಭಾಗ್ಯ ಹಾಗೂ ಪ್ರಜ್ಞಾ ಇವರನ್ನು ಗೌರವಿಸಲಾಯಿತು.
ನಳಿನಿ, ಹರಿಣಾಕ್ಷಿ ಹಾಗೂ ಅಮಿತಾ ಪ್ರಾರ್ಥಿಸಿದರು ವರಮಹಾಲಕ್ಷ್ಮಿ ಪೂಜಾ ಸಮಿತಿಯ ಕಾರ್ಯದರ್ಶಿ ಶೈಲಜಾ ಸ್ವಾಗತಿಸಿ, ಸಮಿತಿ ಸದಸ್ಯರಾದ ತಾರಾ ರವಿನಾಥ ಶೆಟ್ಟಿ ವರದಿ ವಾಚಿಸಿದರು. ಯೋಜನೆಯ ಸದಸ್ಯರುಗಳಾದ ಅಮಿತಾ, ಹರಿಣಾಕ್ಷಿ, ಭಾರತಿ, ನಳಿನಿ ಸನ್ಮಾನಿತರನ್ನು ಪರಿಚಯಿಸಿದರು. ದಿವ್ಯ ಕಾರ್ಯಕ್ರಮವನ್ನು ನಿರೂಪಿಸಿದರು. ಈ ಕಾರ್ಯಕ್ರಮಕ್ಕೆ ಶ್ರೀ ಮಹಿಷಮರ್ದಿನಿ ಯುವಕ ಮಂಡಲ ಹಾಗೂ ಮಹಿಷಮರ್ದಿನಿ ಮಹಿಳಾ ಮಂಡಳಿ ಸಹಕರಿಸಿದ್ದರು.