ನೆಲ್ಯಾಡಿ: ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ಹಾಗೂ ತಾಲೂಕು ಬಂಟರ ಸಂಘ ಪುತ್ತೂರು ಇವರ ಮಾರ್ಗದರ್ಶನದಲ್ಲಿ ವಲಯ ಬಂಟರ ಸಂಘ ನೆಲ್ಯಾಡಿ ಇದರ ಆಶ್ರಯದಲ್ಲಿ ’ಆಟಿಡೊಂಜಿ ಬಂಟೆರೆ ಸೇರಿಗೆ’ ಸಾಧಕರಿಗೆ ಸನ್ಮಾನ ಮತ್ತು ಪ್ರತಿಭಾ ಪುರಸ್ಕಾರ ಆ.10ರಂದು ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಲ್ಪವೃಕ್ಷ ಸಹಕಾರಿ ಸೌಧದಲ್ಲಿ ನಡೆಯಿತು.

ನೆಲ್ಯಾಡಿ ವಲಯದ ಬಂಟ ಸಮಾಜದ ಹಿರಿಯರಾದ ವಿಠಲ ಮಾರ್ಲ ರಾಮನಗರ ದೀಪ ಪ್ರಜ್ವಲಿಸಿದರು. ಅತಿಥಿಯಾಗಿದ್ದ ಅಬುದಾಭಿಯ ಖ್ಯಾತ ಉದ್ಯಮಿ ಮಿತ್ರಂಪಾಡಿ ಜಯರಾಮ ರೈ ಅವರು ಮಾತನಾಡಿ, ಸಮಾಜಕ್ಕೆ ನಿಸ್ವಾರ್ಥ ಸೇವೆ ನೀಡಿದಲ್ಲಿ ನಮಗೆ ಪ್ರೀತಿ, ವಾತ್ಸಲ್ಯ ದೊರೆಯುತ್ತದೆ. ಕಲೆ-ಸಂಸ್ಕೃತಿಗೆ ಭಾರತ ದೇಶದಲ್ಲಿ ಇರುವಷ್ಟು ಪ್ರೋತ್ಸಾಹ ಬೇರೆಡೆ ಎಲ್ಲಿಯೂ ಇಲ್ಲ. ವಿದ್ಯಾವಂತರಾದವರು ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಬೇಕು. ಹೆತ್ತವರು ಮಕ್ಕಳಿಗೆ ವಿದ್ಯೆ ಹಾಗೂ ಸಂಸ್ಕಾರವನ್ನು ನೀಡುವುದು ಅವರ ಮೊದಲ ಕರ್ತವ್ಯ. ಹಿರಿಯರ ಆಶೀರ್ವಾದ ಇದ್ದಲ್ಲಿ ಜಯ ಸಾಧಿಸಬಹುದು. ನಮ್ಮ ಆಚಾರ ವಿಚಾರಗಳನ್ನು ಬದಲಾಯಿಸಬಾರದು. ನಮ್ಮಲ್ಲಿ ಇರುವ ಸ್ವಲ್ಪವನ್ನು ಸಮಾಜದ ಹಿತಕ್ಕಾಗಿ ಹಾಗೂ ಇತರ ಧರ್ಮದವರಿಗೂ ಸಹಕಾರ ನೀಡಿದಲ್ಲಿ ದೇವರ ಆಶೀರ್ವಾದ ಸದಾ ನಮ್ಮೊಂದಿಗೆ ಇರುತ್ತದೆ ಎಂದರು.
ಇನ್ನೋರ್ವ ಅತಿಥಿ ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ಹೇಮನಾಥ ಶೆಟ್ಟಿ ಕಾವು ಮಾತನಾಡಿ, ನಾಯಕತ್ವ, ಸಂಘಟನೆ ಬಂಟ ಸಮಾಜದವರಿಗೆ ರಕ್ತಗತವಾಗಿ ಬಂದಿದೆ. ಏಳು ಜನ್ಮದ ಪುಣ್ಯದ ಫಲವಾಗಿ ಬಂಟ ಸಮಾಜದಲ್ಲಿ ಹುಟ್ಟಿದ್ದೇವೆ. ಪ್ರಪಂಚದ ಯಾವ ಮೂಲೆಯಲ್ಲಿದ್ದರೂ ಬಂಟ ಸಮಾಜದವರು ಸಾಧಕರಾಗಿದ್ದಾರೆ. ನೆಲ್ಯಾಡಿ ವಲಯ ಬಂಟ ಬಾಂಧವರಲ್ಲಿ ಇರುವ ಒಗ್ಗಟ್ಟು, ಬಾಂಧವ್ಯ, ವಲಯದ ಪ್ರತಿ ಮನೆಯವರ ಸಹಕಾರ ಇತರರಿಗೆ ಮಾದರಿಯಾಗಿದೆ ಎಂದರು. ಶಾಸಕ ಅಶೋಕ್ ಕುಮಾರ್ ರೈಯವರ ಪ್ರಯತ್ನದಿಂದಾಗಿ ಪುತ್ತೂರಿನಲ್ಲಿ ತಾಲೂಕು ಬಂಟರ ಸಂಘಕ್ಕೆ 3 ಎಕ್ರೆ ಜಾಗ ಸರಕಾರದಿಂದ ಮಂಜೂರು ಆಗಿದೆ. ಎರಡೂವರೇ ಎಕ್ರೆ ಜಾಗ ಈಗಾಗಲೇ ಸಂಘಕ್ಕೆ ಇದ್ದು ಒಟ್ಟು ಐದೂವರೇ ಜಾಗದಲ್ಲಿ ಮುಂದೆ ಅಭಿವೃದ್ಧಿ ಕೆಲಸಗಳು ನಡೆಯಲಿದೆ. ಅಕ್ಟೋಬರ್ನಲ್ಲಿ ದೊಡ್ಡ ಕಾರ್ಯಕ್ರಮ ನಡೆಯಲಿದೆ ಎಂದು ಹೇಮನಾಥ ಶೆಟ್ಟಿ ಹೇಳಿದರು.
ಬಂಟರ ಯಾನೆ ನಾಡವರ ಮಾತೃಸಂಘ ಮಂಗಳೂರು ಇದರ ಸಹ ಸಂಚಾಲಕ ಸಾಜ ರಾಧಾಕೃಷ್ಣ ಆಳ್ವ ಮಾತನಾಡಿ, ನೆಲ್ಯಾಡಿ ವಲಯದಲ್ಲಿ ಬಂಟ ಸಮಾಜದವರ ಸಂಖ್ಯೆ ಕಡಿಮೆ ಇದ್ದರೂ ಉತ್ತಮ ರೀತಿಯಲ್ಲಿ ಸಂಘಟನೆ ನಡೆಯುತ್ತಿದೆ. ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷರಾಗಿರುವ ಕಾವು ಹೇಮನಾಥ ಶೆಟ್ಟಿಯವರ ನೇತೃತ್ವದಲ್ಲಿ ಹೊಸ ಸಂಚಲನವೇ ಆಗಿದೆ. ಪ್ರತಿ ಗ್ರಾಮದಲ್ಲೂ ಬಂಟ ಸಮಾಜದವರ ಮಾಹಿತಿ ಸಂಗ್ರಹ, ಪುತ್ತೂರಿನಲ್ಲಿ ಸ್ವಂತ ಜಾಗ ಆಗಿದೆ. ಸಮಾಜದ ಕೆಲಸದಲ್ಲಿ ಎಲ್ಲರೂ ಭಾಗವಹಿಸಬೇಕೆಂದು ಹೇಳಿದರು.
ಪ್ರತಿಭಾ ಪುರಸ್ಕಾರ ನೆರವೇರಿಸಿದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಮಾಜ ಸೇವಕ ಗಂಗಾಧರ ಶೆಟ್ಟಿ ಅಮೆತ್ತಿಮಾರುಗುತ್ತು ಮಾತನಾಡಿ, ಬಂಟ ಸಮಾಜದ ಹಿರಿಯರು ತಮ್ಮ ಭೂಮಿಯನ್ನು ಬಂಟ ಸಮಾಜಕ್ಕೋಸ್ಕರ ಯಾವುದೇ ಫಲಪೇಕ್ಷೆ ಇಲ್ಲದೆ ನೀಡಿರುವುದರಿಂದ ಬಂಟರ ಸಂಘ ಇಂದು ಎಲ್ಲಾ ಕ್ಷೇತ್ರದಲ್ಲೂ ಮುಂದಿದೆ. ಯುವ ಸಮಾಜ ದಾರಿ ತಪ್ಪದ ರೀತಿಯಲ್ಲಿ ಅವರಿಗೆ ಸಂಸ್ಕಾರವನ್ನು ಕೊಟ್ಟು ಬೆಳೆಸಬೇಕಾಗಿದೆ. ಕುಟುಂಬದ ತರವಾಡು ಮನೆಯ ಎಲ್ಲಾ ಕಾರ್ಯಕ್ರಮಗಳಲ್ಲಿ ಮಕ್ಕಳು ಭಾಗವಹಿಸುವ ಮೂಲಕ ತಮ್ಮ ಮನೆತನ, ಬಂಟ ಸಮಾಜದ ಗೌರವ ಉಳಿಸಿಕೊಳ್ಳಬೇಕು. ಅಂತರ್ಜಾತಿ ವಿವಾಹಗಳಿಗೆ ಎಡೆ ಮಾಡಿಕೊಡದೆ ನಮ್ಮ ಸಮಾಜವನ್ನು ಸದೃಢವಾಗಿ ಬೆಳೆಸುವ ಹೊಣೆಗಾರಿಕೆ ನಮ್ಮ ಸಮಾಜದ ಮುಂದಿದೆ. ಯುವ ಸಮಾಜಕ್ಕೆ ಸಂಸ್ಕಾರವನ್ನು ನೀಡಿ ಬೆಳೆಸಿದಾಗ ಹಿರಿಯರು ಮಾಡಿದ ತ್ಯಾಗ ಅರ್ಥಪೂರ್ಣವಾಗುತ್ತದೆ ಎಂದರು.
ಪುತ್ತೂರು ತಾಲೂಕು ಮಹಿಳಾ ಬಂಟರ ವಿಭಾಗದ ಅಧ್ಯಕ್ಷೆ ಗೀತಾಮೋಹನ ಶೆಟ್ಟಿ, ಕಾರ್ಯದರ್ಶಿ ಕುಸುಮ ಪಿ.ಶೆಟ್ಟಿ, ಒನ್ ಸೇವಿಂಗ್ಸ್ ಬ್ಯಾಂಕ್ ಆಫ್ ಇಂಡಿಯಾ ಬೆಂಗಳೂರು ಇದರ ಉದ್ಯೋಗಿ ಪ್ರತೀಕ್ಷ್ ರೈ ಕೊಣಾಲುಗುತ್ತು ಸಂದರ್ಭೋಚಿತವಾಗಿ ಮಾತನಾಡಿ ಶುಭಹಾರೈಸಿದರು. ಪುತ್ತೂರು ತಾಲೂಕು ಬಂಟರ ಸಂಘದ ಕಾರ್ಯದರ್ಶಿ ನಿತ್ಯಾನಂದ ಶೆಟ್ಟಿ ಮನವಳಿಕೆಗುತ್ತು, ಮಾತೃ ಸಂಘದ ನಿರ್ದೇಶಕಿ ವಾಣಿ ಸುಂದರ ಶೆಟ್ಟಿ, ಪುತ್ತೂರು ತಾಲೂಕು ಬಂಟರ ಸಂಘದ ಮಾಜಿ ಅಧ್ಯಕ್ಷ ದಯಾನಂದ ರೈ ಮನವಳಿಕೆಗುತ್ತು, ನೆಲ್ಯಾಡಿ ವಲಯ ಬಂಟರ ಸಂಘದ ಗೌರವಾಧ್ಯಕ್ಷ ವಿಶ್ವನಾಥ ಶೆಟ್ಟಿ ಶ್ರೀಮಾತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರತಾಪಚಂದ್ರ ರೈ ಕುದ್ಮಾರುಗುತ್ತು, ವಿಶ್ವನಾಥ ಶೆಟ್ಟಿ, ರಮೇಶ್ ಶೆಟ್ಟಿ ಬೀದಿ, ಚಂದ್ರಶೇಖರ ಶೆಟ್ಟಿ ಪೆರಣ, ಮಹಾಬಲ ಶೆಟ್ಟಿ, ವಾಣಿ ಶೆಟ್ಟಿ, ಪ್ರಹ್ಲಾದ್ ಶೆಟ್ಟಿ, ನಮಿತಾ ಶೆಟ್ಟಿ, ಭಾಸ್ಕರ ರೈ ತೋಟ, ಅನಿಲ್ ರೈ ಹಾರ್ಪಳ, ಜೀವಿತಾ ಶೆಟ್ಟಿ, ಪದ್ಮನಾಭ ಶೆಟ್ಟಿ ಮತ್ತಿತರರು ಅತಿಥಿಗಳಿಗೆ ಶಾಲು ಹಾಕಿ ಗೌರವಿಸಿದರು.
ಅಧ್ಯಕ್ಷತೆ ವಹಿಸಿದ್ದ ನೆಲ್ಯಾಡಿ ವಲಯ ಬಂಟರ ಸಂಘದ ಅಧ್ಯಕ್ಷ ಪ್ರತಾಪ್ ಚಂದ್ರ ರೈ ಕುದ್ಮಾರುಗುತ್ತು ಸ್ವಾಗತಿಸಿದರು. ಕಾರ್ಯದರ್ಶಿ ಮಹಾಬಲ ಶೆಟ್ಟಿ ದೋಂತಿಲ ವಂದಿಸಿದರು. ಆರ್ಯಭಟ ಪ್ರಶಸ್ತಿ ಪುರಸ್ಕೃತ ಸಂಗೀತ ನಿರ್ದೇಶಕ ವಿಶ್ವನಾಥ ಶೆಟ್ಟಿ ನಿರೂಪಿಸಿದರು. ಭೂಮಿಕಾ ಪ್ರಾರ್ಥಿಸಿದರು. ಕಾರ್ಯಕ್ರಮದಲ್ಲಿ ಪುತ್ತೂರು ಕೋಟಿ-ಚೆನ್ನಯ ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಪುತ್ತೂರು ತಾಲೂಕು ಬಂಟರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ರಾಧಾಕೃಷ್ಣ ರೈ ಪರಾರಿಗುತ್ತು, ಇಂದುಶೇಖರ ಶೆಟ್ಟಿ, ರವಿ ಪ್ರಸಾದ ರೈ, ಗಣೇಶ ರೈ ನೆಲ್ಲಿಕಟ್ಟೆ, ಕರುಣಾಕರ ರೈ, ಕೋಶಾಧಿಕಾರಿ ಕೋಶಾಧಿಕಾರಿ ಸಂತೋಷ್ ಶೆಟ್ಟಿ, ಮಾತೃಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಜಯಪ್ರಕಾಶ್ ರೈ ನೂಜಿಬೈಲು, ವಿನೋದ್ ಕುಮಾರ್ ಮನವಳಿಕೆಗುತ್ತು, ಪೆರಾಬೆ ಗ್ರಾ.ಪಂ. ನಿಕಟಪೂರ್ವ ಅಧ್ಯಕ್ಷ ಮೋಹನ ದಾಸ್ ರೈ ಪರಾರಿಗುತ್ತು, ಅರಸಿನಮಕ್ಕಿ ಬಂಟರ ಸಂಘದ ಗೌರವಾಧ್ಯಕ್ಷ ರಮಾನಾಥ ರೈ, ವಲಯ್ಯಾಧ್ಯಕ್ಷ ಲಕ್ಷ್ಮೀನಾರಾಯಣ ರೈ ಬೀಡು, ಹಿರಿಯ ಸದಸ್ಯ ಶ್ರೀನಿವಾಸ ರೈ ಸಹಿತ ನೆಲ್ಯಾಡಿ ವಲಯ ಬಂಟರ ಸಂಘದ ಸಂಚಾಲಕ ರತ್ನಾಕರ ಶೆಟ್ಟಿ ಕೊಲ್ಯೊಟ್ಟು, ಕೋಶಾಧಿಕಾರಿ ಆನಂದ ಶೆಟ್ಟಿ ಕಂಚಿನಡ್ಕ, ಜೊತೆ ಕಾರ್ಯದರ್ಶಿಗಳಾದ ನಮಿತಾಸದಾನಂದ ಶೆಟ್ಟಿ, ಶೀಲಾ ಯಶೋಧರ ಶೆಟ್ಟಿ, ಉಪಾಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು, ಸ್ವಜಾತಿ ಬಾಂಧವರು ಉಪಸ್ಥಿತರಿದ್ದರು. ಮಧ್ಯಾಹ್ನ ಆಟಿದ ಖಾದ್ಯದೊಂದಿಗೆ ಭೋಜನ ನಡೆಯಿತು.

ಸನ್ಮಾನ:
ದೈವಾರಾಧಕರು ಮತ್ತು ದೈವಾರಾಧನೆಯ ಮಧ್ಯಸ್ಥರಾದ ರಘುನಾಥ ರೈ ಹಾರ್ಪಳಗುತ್ತು, ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ತೋರಿದ ಧನ್ವಿ ಶೆಟ್ಟಿ ದೋಂತಿಲರ ಪರವಾಗಿ ಅವರ ತಾಯಿ ರಮ್ಯಶ್ರೀ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಜೀವಿತಾ ಶೆಟ್ಟಿ, ನಮಿತಾ ಶೆಟ್ಟಿ ಸನ್ಮಾನಿತರನ್ನು ಪರಿಚಯಿಸಿದರು. ರಘುನಾಥ ರೈ ಹಾರ್ಪಳಗುತ್ತು ಸನ್ಮಾನಕ್ಕೆ ಕೃತಜ್ಞತೆ ಸೂಚಿಸಿ ಮಾತನಾಡಿದರು. ಖ್ಯಾತ ಉದ್ಯಮಿ ಮಿತ್ರಂಪಾಡಿ ಜಯರಾಮ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಪ್ರತಿಭಾ ಪುರಸ್ಕಾರ:
ವಲಯದಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿರುವ ಬಂಟ ಸಮಾಜದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿ ಗೌರವಿಸಲಾಯಿತು. ಚಿನ್ಮಯಿ ಶೆಟ್ಟಿ ವಿದ್ಯಾರ್ಥಿಗಳ ಹೆಸರು ವಾಚಿಸಿದರು. ಸಭಾ ಕಾರ್ಯಕ್ರಮಕ್ಕೂ ಮೊದಲು ಆರ್ಯಭಟ ಪ್ರಶಸ್ತಿ ಪುರಸ್ಕೃತ ಸಂಗೀತ ನಿರ್ದೇಶಕ, ಉಪನ್ಯಾಸಕ ವಿಶ್ವನಾಥ ಶೆಟ್ಟಿ ಅವರ ನೇತೃತ್ವದಲ್ಲಿ ಬಂಟ ಬಾಂಧವರಿಗೆ ಒಳಾಂಗಣ ಆಟೋಟ ಸ್ಪರ್ಧೆ ಹಾಗೂ ಮನರಂಜನಾ ಕಾರ್ಯಕ್ರಮ ನಡೆಯಿತು. ವಿಜೇತರಿಗೆ ಸಭಾ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಯಿತು. ಸಾಯಿಧೃತಿ ಶೆಟ್ಟಿ ಬಹುಮಾನ ವಿಜೇತರ ಹೆಸರು ವಾಚಿಸಿದರು.