ಪುತ್ತೂರು: ಸಹೋದರ ಮತ್ತು ಸಹೋದರಿಯರ ನಡುವಿನ ಪವಿತ್ರ ಸಂಬಂಧದ ಅರಿವು ಮೂಡಿಸುವಂತಹ ರಕ್ಷಾಬಂಧನ ಹಬ್ಬವನ್ನು ಇದೇ ಆ.8ರಂದು ವಿವೇಕಾನಂದ ಸೆಂಟ್ರಲ್ ಸ್ಕೂಲ್ ನಲ್ಲಿ ಆಚರಿಸಲಾಯಿತು.
ಶಾಲಾ ಪ್ರಾಂಶುಪಾಲರಾದ ಸಿಂಧು ವಿ.ಜಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, ರಕ್ಷಾಬಂಧನ ಹಬ್ಬವನ್ನು ಭಾರತೀಯರು ಶ್ರಾವಣ ಮಾಸದಲ್ಲಿ ಆಚರಿಸುವರು. ಈ ದಿನದಂದು, ಸಹೋದರ ಸಹೋದರಿಯರು ಪರಸ್ಪರ ಮುಂಗೈಗೆ ರಾಖಿಯನ್ನು ಬಿಗಿದು, ಆರತಿ ಬೆಳಗಿ ಆಶೀರ್ವಾದವನ್ನು ಬೇಡುವರು. ಪರಸ್ಪರ ಭ್ರಾತೃತ್ವದ ಭಾವನೆಯನ್ನು ಗಟ್ಟಿಗೊಳಿಸುವ ಹಾಗೂ ಒಬ್ಬರಿಗೊಬ್ಬರು ರಕ್ಷಣೆ ನೀಡುವ ಆಶ್ವಾಸನೆ ಹೊಂದಿರುವ ಈ ಹಬ್ಬವು ಬಹಳ ವಿಶಿಷ್ಟವಾಗಿದೆ ಎಂದು ನುಡಿದರು.
ಶಾಲಾ ವಿದ್ಯಾರ್ಥಿನಿಯಾದ ಘನ್ಯಶ್ರೀ ಕೆ. ರಕ್ಷಾಬಂಧನದ ಮಹತ್ತ್ವವನ್ನು ಸವಿಸ್ತಾರವಾಗಿ ಮನಮುಟ್ಟುವಂತೆ ವಿವರಿಸಿದರು.
ಶಿಕ್ಷಕಿಯರು ವಿದ್ಯಾರ್ಥಿಗಳಿಗೆ ಆರತಿ ಬೆಳಗಿ, ತಿಲಕವಿಟ್ಟು, ಅಕ್ಷತೆ ಹಾಕಿ ಆಶೀರ್ವದಿಸಿದರು. ವಿದ್ಯಾರ್ಥಿಗಳು ಪರಸ್ಪರ ರಕ್ಷೆಯನ್ನು ಬಿಗಿದು, ದೀರ್ಘಾಯುಷ್ಯ ಹಾಗೂ ಯಶಸ್ಸಿಗೆ ಪ್ರಾರ್ಥಿಸಿ ಶುಭಕೋರಿದರು. ವಿದ್ಯಾರ್ಥಿನಿಯರಾದ ಸಾನ್ವಿಕಾ ಎಸ್ ರೈ ಮತ್ತು ಗಾರ್ಗಿ ಆಳ್ವ ಕೆ. ಕಾರ್ಯಕ್ರಮವನ್ನು ನಿರೂಪಿಸಿದರು.
