ಪುತ್ತೂರು:ಕೆಮ್ಮಾಯಿ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವಿಚಾರದಲ್ಲಿ ಸಲ್ಲಿಕೆಯಾಗಿರುವ ರಿಟ್ ಅರ್ಜಿಯೊಂದರ ವಿಚಾರಣೆ ಪೂರ್ಣಗೊಳಿಸಿದ ಕರ್ನಾಟಕ ಹೈಕೋರ್ಟ್,ಈ ದೇವಸ್ಥಾನ ಖಾಸಗಿ ಪಟ್ಟಾ ಜಮೀನಿನಲ್ಲಿರುವ ಖಾಸಗಿ ದೇವಸ್ಥಾನವೇ ಅಥವಾ ಸಾರ್ವಜನಿಕವೇ ಎನ್ನುವುದು ಇತ್ಯರ್ಥವಾಗಬೇಕಿದ್ದು ಇದನ್ನು ರಾಜ್ಯ ಧಾರ್ಮಿಕ ಪರಿಷತ್ನವರು ತೀರ್ಮಾನಿಸಬೇಕಾಗಿರುವುದರಿಂದ ಇದೇ ಆ.18ರ ಒಳಗೆ ರಾಜ್ಯ ಧಾರ್ಮಿಕ ಪರಿಷತ್ಗೆ ಅಪೀಲು ಸಲ್ಲಿಸುವಂತೆ ದೂರುದಾರರಿಗೆ ನಿರ್ದೇಶನ ನೀಡಿ ರಿಟ್ ಅರ್ಜಿಯನ್ನು ಇತ್ಯರ್ಥಪಡಿಸಿದೆ.ಆ.18ರ ಒಳಗೆ ಅರ್ಜಿದಾರರು ರಾಜ್ಯ ಧಾರ್ಮಿಕ ಪರಿಷತ್ಗೆ ಅಪೀಲು ಸಲ್ಲಿಸಿದಲ್ಲಿ ಅಲ್ಲಿ ಅಂತಿಮ ಆದೇಶವಾಗುವವರೆಗೆ ಅರ್ಜಿದಾರರ ವಿರುದ್ಧ ಯಾವುದೇ ಬಲವಂತದ ಕ್ರಮಕೈಗೊಳ್ಳಬಾರದು.ಒಂದೊಮ್ಮೆ ಆ.18ರೊಳಗೆ ಅಪೀಲು ಸಲ್ಲಿಸದೇ ಹೋದಲ್ಲಿ ಪ್ರತಿವಾದಿಗಳು ನ್ಯಾಯಸಮ್ಮತ ಕ್ರಮಕೈಗೊಳ್ಳಲು ಮುಕ್ತ ಅಽಕಾರ ಹೊಂದಿದ್ದಾರೆ ಎಂದು ನ್ಯಾಯಪೀಠ ತಿಳಿಸಿದೆ.
ಚಿಕ್ಕಮುಡ್ನೂರು ಗ್ರಾಮದ ಕೆಮ್ಮಾಯಿಯಲ್ಲಿರುವ, ಸಿ ಗ್ರೇಡ್ ದೇವಾಲಯವಾಗಿರುವ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನಕ್ಕೆ ವ್ಯವಸ್ಥಾಪನಾ ಸಮಿತಿ ರಚನೆ ಮಾಡಿ ಜಿಲ್ಲಾ ಧಾರ್ಮಿಕ ಪರಿಷತ್ ೨೦೧೮ರಲ್ಲಿ ಆದೇಶಿಸಿತ್ತು.ಇದನ್ನು ಪ್ರಶ್ನಿಸಿ ಶ್ರೀ ಮಹಾವಿಷ್ಣುಮೂರ್ತಿ ಸೇವಾ ಟ್ರಸ್ಟ್ನ ಅಧ್ಯಕ್ಷ ಶ್ರೀಪತಿ ಬೈಪಾಡಿತ್ತಾಯ ಅವರು ಕರ್ನಾಟಕ ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು.ರಿಟ್ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಿದ ನ್ಯಾಯಪೀಠ, ವ್ಯವಸ್ಥಾಪನಾ ಸಮಿತಿ ರಚಿಸಿ ಹೊರಡಿಸಿದ್ದ ಆದೇಶಕ್ಕೆ ಮಧ್ಯಂತರ ತಡೆಯಾe ನೀಡಿತ್ತು.ಆದೇಶದ ದಿನಾಂಕದಿಂದ ಒಂದು ವಾರದೊಳಗೆ ಅರ್ಜಿದಾರರು ಆಧಾರಪೂರ್ವಕ ದಾಖಲೆಗಳೊಂದಿಗೆ ನಾಲ್ಕನೇ ಪ್ರತಿವಾದಿಯಾಗಿರುವ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರಿಗೆ ಆಕ್ಷೇಪಣೆಗಳನ್ನು ಸಲ್ಲಿಸುವಂತೆ ಮತ್ತು ಸದರಿ ಪ್ರಾಽಕಾರವು ಆಕ್ಷೇಪಣೆ ಯಾ ಮನವಿಯನ್ನು ಪರಿಗಣಿಸಿ ಸೂಕ್ತ ಆದೇಶವನ್ನು ಎರಡು ವಾರದೊಳಗೆ ಹೊರಡಿಸಿ, ಸದರಿ ಆದೇಶದ ಪ್ರತಿಯನ್ನು ಅರ್ಜಿದಾರರ ಆಕ್ಷೇಪಣೆಗಳೊಂದಿಗೆ ಮುಂದಿನ ವಿಚಾರಣೆಗೆ ಹಾಜರುಪಡಿಸಲು ನಿರ್ದೇಶನ ನೀಡಿ, ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿತ್ತು.
ತನ್ನನ್ನೂ ಪ್ರತಿವಾದಿಯಾಗಿ ಸೇರಿಸಿ- ವ್ಯವಸ್ಥಾಪನಾ ಅಧ್ಯಕ್ಷರ ಮನವಿ: ವ್ಯವಸ್ಥಾಪನಾ ಸಮಿತಿಯನ್ನು ರದ್ದುಪಡಿಸುವಂತೆ ಕೋರಿ ಆರಂಭದಲ್ಲಿ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸುವ ಸಂದರ್ಭ ಕಂದಾಯ ಇಲಾಖೆ(ಮುಜರಾಯಿ), ಜಿಲ್ಲಾ ಧಾರ್ಮಿಕ ಪರಿಷದ್, ರಾಜ್ಯ ಧಾರ್ಮಿಕ ಪರಿಷತ್ ಮತ್ತು ಧಾರ್ಮಿಕ ದತ್ತಿ ಇಲಾಖೆ ಆಯುಕ್ತರನ್ನು ಪ್ರತಿವಾದಿಗಳಾಗಿ ಕಾಣಿಸಲಾಗಿತ್ತು.ದೇವಸ್ಥಾನ ಸಾರ್ವಜನಿಕ ಎನ್ನುವುದಕ್ಕೆ ತನ್ನ ಬಳಿ ಅಗತ್ಯ ದಾಖಲೆಗಳಿರುವುದರಿಂದ ತನ್ನನ್ನೂ ಓರ್ವ ಪ್ರತಿವಾದಿಯಾಗಿ ಸೇರ್ಪಡೆಗೊಳಿಸುವಂತೆ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಾಗೇಶ್ ಆಚಾರ್ಯ ಅವರು ಹೈಕೋಟ್ಗೆ ಪ್ರತ್ಯೇಕ ಮನವಿಯೊಂದನ್ನು ಸಲ್ಲಿಸಿದ್ದರು.ಅದನ್ನು ಪುರಸ್ಕರಿಸಿದ ನ್ಯಾಯಾಲಯ ಅವರನ್ನು ಐದನೇ ಪ್ರತಿವಾದಿಯಾಗಿ ಸೇರ್ಪಡೆಗೊಳಿಸಿತ್ತು.
ಅಽಸೂಚಿತ ಸಂಸ್ಥೆಗಳ ಪಟ್ಟಿಯಿಂದ ಕೈಬಿಡಲು ಮನವಿ: ಈ ದೇವಾಲಯವು ನಮ್ಮ ಕುಟುಂಬದ ದೇವಾಲಯವಾಗಿದೆ.ಸದ್ರಿ ದೇವಾಲಯವು ಚಿಕ್ಕಮುಡ್ನೂರು ಗ್ರಾಮದ ಸ.ನಂ.೬೪/೪ಎರಲ್ಲಿನ ೪೩ ಸೆಂಟ್ಸ್ ಜಮೀನಿನಲ್ಲಿ ನಿರ್ಮಾಣವಾಗಿದ್ದು ಇದು ನಮ್ಮ ಕುಟುಂಬಕ್ಕೆ ಸೇರಿದ ವರ್ಗ ಜಮೀನಾಗಿರುತ್ತದೆ.ಆದರೂ ಸರಕಾರ ಈ ದೇವಾಲಯವನ್ನು ಅಽಸೂಚಿತ ಸಂಸ್ಥೆಗಳ ಪಟ್ಟಿಯಲ್ಲಿ ಸೇರಿಸಿದೆ.ಈ ದೇವಾಲಯವನ್ನು ಅಽಸೂಚಿತ ಸಂಸ್ಥೆಗಳ ಪಟ್ಟಿಯಲ್ಲಿ ಸೇರಿಸುವ ಮುನ್ನ ಹಾಗೂ ದೇವಾಲಯಕ್ಕೆ ವ್ಯವಸ್ಥಾಪನಾ ಸಮಿತಿಯನ್ನು ರಚಿಸಲು ಕ್ರಮಕೈಗೊಳ್ಳುವ ಮೊದಲು ತಮ್ಮ ಅಹವಾಲುಗಳನ್ನು ಕೇಳಿಲ್ಲ.ಪ್ರಸ್ತಾವಿತ ದೇವಾಲಯದ ಆಡಳಿತವನ್ನು ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ನಮ್ಮ ಕುಟುಂಬದ ಸದಸ್ಯರೇ ಈ ಹಿಂದಿನಿಂದಲೂ ನಿರ್ವಹಿಸಿಕೊಂಡು ಬರುತ್ತಿದ್ದು, ಈ ಎಲ್ಲ ಕಾರಣಗಳಿಂದಾಗಿ ಈ ದೇವಾಲಯವನ್ನು ಅಽಸೂಚಿತ ಸಂಸ್ಥೆಗಳ ಪಟ್ಟಿಯಿಂದ ಹೊರತುಪಡಿಸುವಂತೆ ಶ್ರೀ ಮಹಾವಿಷ್ಣುಮೂರ್ತಿ ಸೇವಾ ಟ್ರಸ್ಟ್ನ ಅಧ್ಯಕ್ಷ ಶ್ರೀಪತಿ ಬೈಪಾಡಿತ್ತಾಯ ಮತ್ತು ಕಾರ್ಯದರ್ಶಿ ಕೆ.ಎಸ್.ಶ್ರೀಧರ ಬೈಪಾಡಿತ್ತಾಯ ಅವರು ಹೈಕೋರ್ಟ್ಗೆ ತಿದ್ದುಪಡಿ ರಿಟ್ ಅರ್ಜಿಯೊಂದನ್ನು ಸಲ್ಲಿಸಿದ್ದರು.ಈ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಿದ್ದ ನ್ಯಾಯಪೀಠ, ಅರ್ಜಿದಾರರ ಆಕ್ಷೇಪಣೆ/ಅರ್ಜಿ ಹಾಗೂ ಪೂರಕ ದಾಖಲೆಗಳನ್ನು ಪರಿಶೀಲಿಸಿ ಕಾರಣಗಳನ್ನೊಳಗೊಂಡ ಆದೇಶವನ್ನು ಹೊರಡಿಸುವಂತೆ ಧಾರ್ಮಿಕ ದತ್ತಿ ಆಯುಕ್ತರಿಗೆ ನಿರ್ದೇಶನ ನೀಡಿತ್ತು.
ರಾಜ್ಯ ಧಾರ್ಮಿಕ ಪರಿಷತ್ಗೆ ಪ್ರಸ್ತಾವನೆ: ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ತಿದ್ದುಪಡಿ ಅಧಿನಿಯಮ ೨೦೧೧ರ ಸೆಕ್ಷನ್ ೨೦ಎ(೨)(ವಿ)ಅನ್ವಯ ಯಾವುದೇ ಅಽಸೂಚಿತ ಸಂಸ್ಥೆಯನ್ನು ಅಧಿಸೂಚಿತ ಸಂಸ್ಥೆಗಳ ಪಟ್ಟಿಯಿಂದ ತೆಗೆದು ಹಾಕಲು ಸರ್ಕಾರಕ್ಕೆ ಶಿಫಾರಸ್ಸು ಮಾಡುವ ಅಽಕಾರ ರಾಜ್ಯ ಧಾರ್ಮಿಕ ಪರಿಷತ್ಗೆ ಇರುವುದರಿಂದ ಈ ಪ್ರಸ್ತಾವನೆಯನ್ನು ರಾಜ್ಯ ಧಾರ್ಮಿಕ ಪರಿಷತ್ತಿನ ಸಭೆಯಲ್ಲಿ ಚರ್ಚೆಗಿಡಲಾಗಿತ್ತು.
ನಮ್ಮ ಕುಟುಂಬದ ಖಾಸಗಿ ದೇವಸ್ಥಾನ-ಧಾರ್ಮಿಕ ದತ್ತಿ ಆಯುಕ್ತರಿಗೆ ಮನವಿ: ಶ್ರೀ ಮಹಾವಿಷ್ಣುಮೂರ್ತಿ ಸೇವಾ ಟ್ರಸ್ಟ್ನ ಕಾರ್ಯದರ್ಶಿ ಶ್ರೀಧರ ಬೈಪಾಡಿತ್ತಾಯ ಅವರು ರಾಜ್ಯ ಧಾರ್ಮಿಕ ಪರಿಷತ್ನ ಸದಸ್ಯ ಕಾರ್ಯದರ್ಶಿಯೂ ಆಗಿರುವ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರಿಗೆ ಮನವಿ ಸಲ್ಲಿಸಿ, ಕೆಮ್ಮಾಯಿ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ ನಮ್ಮ ಕುಟುಂಬದ ದೇವಸ್ಥಾನವಾಗಿದ್ದು ದೇವಸ್ಥಾನ ನಮ್ಮ ಖಾಸಗಿ ಪಟ್ಟಾ ಜಮೀನಿನಲ್ಲಿದೆ.ದೇವಳವನ್ನು ನಮ್ಮ ಕುಟುಂಬದವರೇ ನಿರ್ವಹಣೆ ಮಾಡುತ್ತಿರುವುದರಿಂದ ಅಧಿಸೂಚಿತ ಪಟ್ಟಿಯಿಂದ ಕೈಬಿಡುವಂತೆ ಕೋರಿದ್ದರು.
ಅಽಸೂಚಿತ ಸಂಸ್ಥೆಗಳ ಪಟ್ಟಿಯಿಂದ ಹೊರತುಪಡಿಸುವುದು ಸೂಕ್ತವಲ್ಲ-ಶಿಫಾರಸ್ಸು: ಈ ದೇವಾಲಯ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಽನಿಯಮ ೧೯೯೭ರ ಸೆಕ್ಷನ್ ೨೩ರನ್ವಯ ಅಧಿಸೂಚಿತ ಸಂಸ್ಥೆಯಾಗಿರುತ್ತದೆ.ಕಾಯ್ದೆಯ ಸೆಕ್ಷನ್ ೨೩(ಸಿ)ರನ್ವಯ ಈ ಹಿಂದಿನ ಮದ್ರಾಸ್ ಹಿಂದೂ ಧಾರ್ಮಿಕ ಮತ್ತು ಧರ್ಮಾದಾಯ ದತ್ತಿಗಳ ಅಽನಿಯಮ ೧೯೫೧ರನ್ವಯವಾಗುವ ಎಲ್ಲಾ ಸಂಸ್ಥೆಗಳನ್ನು ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ ೧೯೯೭ರ ಆಡಳಿತ ವ್ಯಾಪ್ತಿಗೆ ಒಳಪಡಿಸಲಾಗಿದ್ದು ಸದ್ರಿ ಸಂಸ್ಥೆಗಳನ್ನು ಅಧಿಸೂಚಿತ ಸಂಸ್ಥೆಗಳ ಪಟ್ಟಿಯಲ್ಲಿ ಪ್ರಕಟಿಸಲಾಗಿರುತ್ತದೆ.ಆದ್ದರಿಂದ ಪ್ರಸ್ತಾವಿತ ದೇವಾಲಯವನ್ನು ಅಧಿಸೂಚಿತ ಸಂಸ್ಥೆಗಳ ಪಟ್ಟಿಯಲ್ಲಿ ಪ್ರಕಟಿಸುವ ಬಗ್ಗೆ ಅರ್ಜಿದಾರರ ಅಹವಾಲುಗಳನ್ನು ಕೇಳುವ ಅವಶ್ಯಕತೆ ಕಂಡು ಬರುವುದಿಲ್ಲ.ಪ್ರಸ್ತಾವಿತ ದೇವಾಲಯಕ್ಕೆ ಈ ಹಿಂದೆ ಸರಕಾರದಿಂದ ವಾರ್ಷಿಕ ೧೨ ರೂ.ತಸ್ತೀಕ್ ಭತ್ಯೆ ಮಂಜೂರಾಗಿದ್ದು ಸದರಿ ತಸ್ತೀಕನ್ನು ನಂತರದಲ್ಲಿ ಕಾಲಕಾಲಕ್ಕೆ ಪರಿಷ್ಕರಿಸಿದ್ದು ಪ್ರಸ್ತುತ ಸದರಿ ಸಂಸ್ಥೆಗೆ ವಾರ್ಷಿಕ ರೂ.೪೮ ಸಾವಿರ ತಸ್ತೀಕ್ ಭತ್ಯೆ ಪರಿಷ್ಕರಣೆಗೊಂಡಿರುತ್ತದೆ.ಕಾಯ್ದೆಯನ್ವಯ ಸಾರ್ವಜನಿಕ ಆದಾಯಗಳಿಂದ ಯಾವುದೇ ಶಾಶ್ವತ ಮಾಸಿಕ ಅಥವಾ ವಾರ್ಷಿಕ ಅನುದಾನವನ್ನು ಪಡೆಯುವ ಸಂಸ್ಥೆಯು ಅಧಿಸೂಚಿತ ಸಂಸ್ಥೆಯಾಗಿರುವುದರಿಂದ ಪ್ರಸ್ತಾವಿತ ದೇವಾಲಯವು ಅಧಿಸೂಚಿತ ಸಂಸ್ಥೆಯಾಗಿ ಕಂಡು ಬರುತ್ತದೆ.ಜಿಲ್ಲಾ ಧಾರ್ಮಿಕ ಪರಿಷತ್ ನಿರ್ಣಯದಂತೆ ಈ ದೇವಸ್ಥಾನಕ್ಕೆ ವ್ಯವಸ್ಥಾಪನಾ ಸಮಿತಿಯನ್ನೂ ರಚಿಸಲಾಗಿದೆ.ಸರ್ಕಾರದ ಆಡಳಿತಕ್ಕೆ ಒಳಪಟ್ಟ ಅಧಿಸೂಚಿತ ಸಂಸ್ಥೆಗೆ ಕಾಯ್ದೆಯನ್ವಯ ಯಾವುದೇ ಸಮಿತಿ ಅಥವಾ ಟ್ರಸ್ಟನ್ನು ನಿಯಮಿಸಲಾದ ಪ್ರಾಧಿಕಾರದಿಂದ ಯಾವುದೇ ಮಂಜೂರಾತಿ ಪಡೆಯದೆ ರಚಿಸುವಂತಿಲ್ಲ.ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ ಈ ದೇವಸ್ಥಾನವನ್ನು ಅಧಿಸೂಚಿತ ಸಂಸ್ಥೆಗಳ ಪಟ್ಟಿಯಿಂದ ಹೊರತುಪಡಿಸುವುದು ಸೂಕ್ತವಲ್ಲ ಎಂದು ತೀರ್ಮಾನಿಸಿದ್ದ ರಾಜ್ಯ ಧಾರ್ಮಿಕ ಪರಿಷತ್ ಸಭೆ, ಅರ್ಜಿದಾರರ ಮನವಿಯನ್ನು ತಿರಸ್ಕರಿಸಲು ಸರಕಾರಕ್ಕೆ ಶಿಫಾರಸ್ಸು ಮಾಡಿತ್ತು.ಸರಕಾರ ಈ ವಿಚಾರವನ್ನು ನ್ಯಾಯಪೀಠದ ಗಮನಕ್ಕೆ ತಂದಿತ್ತು.
ಜಮೀನು ನಕ್ಷೆ ತಯಾರಿಸಲು ಮನವಿ: ಈ ಮಧ್ಯೆ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ನೇಮಕಗೊಂಡಿದ್ದ ನಾಗೇಶ್ ಆಚಾರ್ಯ ಅವರು,ಕೆಮ್ಮಾಯಿ ಶ್ರೀ ಮಹಾವಿಷ್ಣುಮೂರ್ತಿ ದೇವಾಲಯದ ಜಮೀನು ನಕ್ಷೆ ತಯಾರಿಸಿ ಕೊಡುವಂತೆ ಕಂದಾಯ ಇಲಾಖೆಗೆ ಮನವಿ ಮಾಡಿದ್ದರು.ಅದರಂತೆ ಪುತ್ತೂರು ತಾಲೂಕು ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯ ಭೂಮಾಪಕರು ನಕ್ಷೆ ತಯಾರಿಸಿದ್ದರು.ಇದನ್ನು ತಹಸಿಲ್ದಾರ್ ಅವರು ಹಿಂದೂ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರಿಗೆ ಸಲ್ಲಿಸಿದ್ದರು.
ರಿಟ್ ಅರ್ಜಿ ಇತ್ಯರ್ಥ: ಕೆಮ್ಮಾಯಿ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನಕ್ಕೆ ವ್ಯವಸ್ಥಾಪನಾ ಸಮಿತಿ ರಚನೆ ಮಾಡಿರುವುದರ ವಿರುದ್ಧ ಮತ್ತು ಈ ದೇವಸ್ಥಾನವನ್ನು ಅಽಸೂಚಿತ ಸಂಸ್ಥೆಗಳ ಪಟ್ಟಿಯಿಂದ ಕೈಬಿಡುವಂತೆ ಕೋರಿ ಸಲ್ಲಿಕೆಯಾಗಿದ್ದ ರಿಟ್ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿರುವ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಈ ದೇವಸ್ಥಾನ ಖಾಸಗಿ ಪಟ್ಟಾ ಜಮೀನಿನಲ್ಲಿರುವ ಖಾಸಗಿ ದೇವಸ್ಥಾನವೇ ಅಥವಾ ಸಾರ್ವಜನಿಕವೇ ಎನ್ನುವುದಷ್ಟೆ ಇಲ್ಲಿ ಇತ್ಯರ್ಥವಾಗಲು ಬಾಕಿ.ಈ ನಿಟ್ಟಿನಲ್ಲಿ ಅರ್ಜಿದಾರರು ಆಗಸ್ಟ್ ೧೮ರ ಒಳಗೆ ರಾಜ್ಯ ಧಾರ್ಮಿಕ ಪರಿಷತ್ಗೆ ಪೂರಕ ದಾಖಲೆಗಳೊಂದಿಗೆ ಅಪೀಲು ಸಲ್ಲಿಸಬೇಕು.ಈ ಅವಽಯಲ್ಲಿ ಅರ್ಜಿದಾರರು ಅಪೀಲು ಸಲ್ಲಿಸಿದ್ದೇ ಆದರೆ, ರಾಜ್ಯ ಧಾರ್ಮಿಕ ಪರಿಷತ್ನಲ್ಲಿ ಈ ಕುರಿತು ಅಂತಿಮ ಆದೇಶವಾಗುವವರೆಗೆ ಪ್ರತಿವಾದಿಗಳು ಅರ್ಜಿದಾರರ ವಿರುದ್ಧ ಯಾವುದೇ ಬಲವಂತದ ಕ್ರಮಕೈಗೊಳ್ಳುವಂತಿಲ್ಲ.ಒಂದು ವೇಳೆ ಆ.18ರೊಳಗೆ ಅರ್ಜಿದಾರರು ರಾಜ್ಯ ಧಾರ್ಮಿಕ ಪರಿಷತ್ಗೆ ಅಪೀಲು ಸಲ್ಲಿಸದೇ ಇದ್ದಲ್ಲಿ, ಈ ವಿಚಾರದಲ್ಲಿ ನ್ಯಾಯಸಮ್ಮತ ಕ್ರಮಕೈಗೊಳ್ಳಲು ಪ್ರತಿವಾದಿಗಳು ಮುಕ್ತ ಅವಕಾಶ ಹೊಂದಿದ್ದಾರೆ ಎಂದು ತಿಳಿಸಿ ರಿಟ್ ಅರ್ಜಿಯನ್ನು ಇತ್ಯರ್ಥಪಡಿಸಿದೆ.
ಯಾವುದೇ ಮಾಹಿತಿ ಬಂದಿಲ್ಲ
ರಿಟ್ ಅರ್ಜಿಯನ್ನು ಇತ್ಯರ್ಥಪಡಿಸಿ ನ್ಯಾಯಪೀಠ ಮಾಡಿರುವ ಆದೇಶದ ಕುರಿತು ತಮಗೆ ಯಾವುದೇ ಮಾಹಿತಿ ಇಲ್ಲ,ಅದೇನಿದ್ದರೂ ನಮ್ಮ ವಕೀಲರು ನೋಡಿಕೊಳ್ಳುತ್ತಾರೆ.ಅದಕ್ಕೆ ಬೇಕಾದ ವ್ಯವಸ್ಥೆಯನ್ನು ಅವರು ಮಾಡುತ್ತಾರೆ ಎಂದು ಅರ್ಜಿದಾರ ಶ್ರೀಧರ ಬೈಪಾಡಿತ್ತಾಯ ಅವರು ಪ್ರತಿಕ್ರಿಯೆ ನೀಡಿದ್ದಾರೆ.ಕೆಮ್ಮಾಯಿ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ ನಮ್ಮ ಹಿರಿಯರ ಕಾಲದಿಂದಲೇ ನಮ್ಮ ಕುಟುಂಬದ ದೇವಸ್ಥಾನವಾಗಿದ್ದು ಇದು ನಮ್ಮ ಖಾಸಗಿ ಪಟ್ಟಾ ಜಮೀನಿನಲ್ಲಿದೆ ಮತ್ತು ಇದರ ಸಂಪೂರ್ಣ ನಿರ್ವಹಣೆಯನ್ನು ನಮ್ಮ ಕುಟುಂಬದವರೇ ಮಾಡುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.