ಸೌತಡ್ಕ: ಕಾಡಾನೆ ದಾಳಿ-ಕೃಷಿ ನಾಶ

0

ನೆಲ್ಯಾಡಿ: ಕೊಕ್ಕಡ ಗ್ರಾಮದ ಸೌತಡ್ಕ ಕಡೀರ ಪ್ರದೇಶದಲ್ಲಿ ಆ.12ರಂದು ರಾತ್ರಿ ಕೃಷಿ ತೋಟಗಳಿಗೆ ಕಾಡಾನೆ ದಾಳಿ ನಡೆಸಿ ಅಪಾರ ಪ್ರಮಾಣದಲ್ಲಿ ಕೃಷಿ ಹಾನಿಗೊಳಿಸಿ ಎಂದು ವರದಿಯಾಗಿದೆ.


ಕಡೀರ ಕೋಟಿಯಪ್ಪ ಗೌಡ, ಕಡೀರ ಗೋಪಾಲ ಅವರ ಕೃಷಿ ತೋಟಗಳಿಗೆ ನುಗ್ಗಿದ ಕಾಡಾನೆಯು ಬಾಳೆ, ತೆಂಗು, ಅಡಿಕೆ ಗಿಡಗಳು ಹಾಗೂ ನೀರಿನ ಡ್ರಮ್‌ಗಳಿಗೆ ಹಾನಿ ಉಂಟುಮಾಡಿದೆ. ಈ ದಾಳಿಯಿಂದ ರೈತರಿಗೆ ಭಾರೀ ಆರ್ಥಿಕ ನಷ್ಟವಾಗಿದೆ. ಘಟನಾ ಸ್ಥಳಕ್ಕೆ ಉಪವಲಯ ಅರಣ್ಯಾಧಿಕಾರಿ ಶಿವಾನಂದ ಆಚಾರ್ಯ, ವೀಕ್ಷಕ ದಾಮೋದರ ಅವರು ಭೇಟಿ ನೀಡಿ ಹಾನಿ ಪರಿಶೀಲಿಸಿದರು. ಸರಕಾರದಿಂದ ಸೂಕ್ತ ಪರಿಹಾರ ಒದಗಿಸುವ ಭರವಸೆ ನೀಡಿದ ಅವರು, ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕೆಂದು ತಿಳಿಸಿದರು.


ಕಳೆದ ತಿಂಗಳು ಸೌತಡ್ಕ ಸಮೀಪದ ಮುರತ್ತಮೇಲು ಎಂಬಲ್ಲಿ ಕಾಡಾನೆ ದಾಳಿಗೆ ಸ್ಥಳೀಯ ನಿವಾಸಿ ಬಾಲಕೃಷ್ಣ ಶೆಟ್ಟಿ ಎಂಬವರು ಮೃತಪಟ್ಟಿದ್ದರು. ಈ ಘಟನೆಯ ಬಳಿಕ ಕುಶಾಲನಗರದಿಂದ ಆಗಮಿಸಿದ್ದ ಆನೆ ಮಾವುತರ ಸಹಕಾರದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮೂರ‍್ನಾಲ್ಕು ದಿನ ರಾತ್ರಿ, ಹಗಲು ಕಾರ್ಯಾಚರಣೆ ನಡೆಸಿ ಕಾಡಾನೆಗಳನ್ನು ಮತ್ತೆ ಕಾಡಿಗೆ ಅಟ್ಟಿದ್ದರು. ಇದೀಗ ಇದೇ ಭಾಗದಲ್ಲಿ ಮತ್ತೆ ಕಾಡಾನೆ ಕೃಷಿ ತೋಟಗಳಿಗೆ ದಾಳಿ ನಡೆಸಿರುವುದು ಜನರಲ್ಲಿ ಆತಂಕ ಉಂಟು ಮಾಡಿದೆ.

LEAVE A REPLY

Please enter your comment!
Please enter your name here