ಕಾಣಿಯೂರು : ಕೊಪ್ಪ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 79 ನೇ ಸ್ವಾತಂತ್ರ ದಿನಾಚರಣೆಯನ್ನು ಆಚರಿಸಲಾಯಿತು. ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷ ಸೀತಾರಾಮ ಕೊಪ್ಪರವರು ಧ್ವಜಾರೋಹಣಗೈದು ಶುಭ ಹಾರೈಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಪ್ರವೀಣ್ ಕುಂಟ್ಯಾನರವರು ಮಾತನಾಡುತ್ತಾ ಸ್ವಾತಂತ್ರ್ಯಕ್ಕೆ ಹೋರಾಡಿದ ಅದೆಷ್ಟೋ ಮಹಾನ್ ವೀರರಿದ್ದಾರೆ. ಆದರೆ ಇಂದು ಕೆಲವೇ ವ್ಯಕ್ತಿಗಳ ಹೆಸರು ಮಾತ್ರ ನಮಗೆ ತಿಳಿದಿದೆ. ಸ್ಥಳೀಯವಾಗಿ ಹೋರಾಡಿದ ಕೆದಂಬಾಡಿ ರಾಮಯ್ಯ ಗೌಡ ರಂಥ ಮಹನೀಯರ ಕಥೆಗಳನ್ನು ಇಂದಿನ ಮಕ್ಕಳಿಗೆ ತಿಳಿಸುವ ಮೂಲಕ ದೇಶಪ್ರೇಮ ಬೆಳೆಸಬೇಕು ಎಂದರು.
ಮೋನಪ್ಪ ಗೌಡ ಉಳವ ರವರು ಮಾತನಾಡುತ್ತ ನಮ್ಮ ದೇಶವನ್ನು ಕಾಯುವ ಸೈನಿಕರನ್ನು ನಾವು ಗೌರವಿಸಬೇಕು, ಜೊತೆಗೆ ಸಮಾಜದಲ್ಲಿ ಎಲ್ಲರನ್ನು ಗೌರವದಿಂದ ಕಾಣಬೇಕು. ಹಾಗೂ ಎಲ್ಲರು ಜೊತೆಗೂಡಿ ಇಂಥ ರಾಷ್ಟ್ರೀಯ ಹಬ್ಬಗಳಲ್ಲಿ ಪಾಲ್ಗೊಳ್ಳಬೇಕು ಎಂದರು. ಕಾಣಿಯೂರು ಗ್ರಾಮ ಪಂಚಾಯತ್ ಅಧ್ಯಕ್ಷ ವಿಶ್ವನಾಥ ಕೊಪ್ಪ, ಊರಿನ ಹಿರಿಯರಾದ ಗಿರಿಯಪ್ಪ ಕುಂಬಾರ,ಮತ್ತು ಕೃಷ್ಣಪ್ಪ ಗೌಡ ದೈಪಿಲ,ವಿಜಯ ಕುಮಾರ್ ಸೊರಕೆ ಕಾರ್ಯಕ್ರಮಕ್ಕೆ ಶುಭ ಕೋರಿದರು. ಎಸ್ ಡಿ ಎಂ ಸಿ ಅಧ್ಯಕ್ಷ ಸೀತಾರಾಮ ಕೊಪ್ಪ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಮುಖ್ಯಗುರು ನಾರಾಯಣ ಡಿ. ಸ್ವಾಗತಿಸಿ, ಶಿಕ್ಷಕಿ ಕುಮಾರಿ ಹವ್ಯ ವಂದಿಸಿದರು. ಅತಿಥಿ ಶಿಕ್ಷಕ ಸುರೇಶ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.