ಭಗವಂತನಿಗೆ ಅಧೀನರಾದಾಗ ಬದುಕಿನ ಉತ್ತುಂಗ : ರಾಜಶ್ರೀ ಎಸ್. ನಟ್ಟೋಜ
ಪುತ್ತೂರು: ದೈವಾಧೀನರಾಗುವುದೆಂದರೆ ಸತ್ತು ಭಗವಂತನನ್ನು ಸೇರುವುದು ಎಂಬ ಅರ್ಥವನ್ನು ಪ್ರತಿಯೊಬ್ಬರೂ ಗ್ರಹಿಸುತ್ತಾರೆ. ಆದರೆ ಬದುಕಿರುವಾಗಲೇ ದೈವಾಧೀನರಾಗಬಹುದೆಂಬ ಕಲ್ಪನೆ ಅನೇಕರಿಗೆ ಇರುವುದಿಲ್ಲ. ಭಗವಂತನಿಗೆ ನಮ್ಮನ್ನು ನಾವು ಸಮರ್ಪಿಸಿಕೊಂಡು ಆತ ತೋರಿದ ಹಾದಿಯಲ್ಲಿ ಮುನ್ನಡೆಯುವ ಸ್ಥಿತಿಯೇ ದೈವಾದೀನತೆ ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಾಜಶ್ರೀ ಎಸ್.ನಟ್ಟೋಜ ಹೇಳಿದರು.

ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಶ್ರೀ ಶಂಕರ ಸಭಾಭವನದಲ್ಲಿ ಆಯೋಜಿಸಲಾದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಕ್ರವಾರ ಮಾತನಾಡಿದರು.
ಭಗವಾನ್ ಶ್ರೀಕೃಷ್ಣ ಬೋಧಿಸಿದ ಭಗವದ್ಗೀತೆ ನಮ್ಮೆಲ್ಲರ ಬದುಕಿಗೆ ದಾರಿದೀಪ. ಪ್ರತಿನಿತ್ಯ ಭಗವದ್ಗೀತೆ ಓದುವುದರಿಂದ ನಮ್ಮ ಹತ್ತಾರು ಸಮಸ್ಯೆಗಳಿಗೆ ಪರಿಹಾರ ದೊರಕುತ್ತದೆ. ಅರ್ಜುನನ ವಿಷಾದವೇ ಆತನಿಗೆ ಯೋಗವಾಗಿ ಪರಿಣಮಿಸಿ, ಭಗವದ್ಗೀತೆಯ ಸಿಂಚನವಾಗುವಂತಾಯಿತು. ಹಾಗಾಗಿಯೇ ಅದನ್ನು ವಿಷಾದಯೋಗ ಎಂದು ಕರೆಯುವಲ್ಲಿ ಹೆಚ್ಚು ಮಹತ್ವವಿದೆ. ಜ್ಞಾನವನ್ನು ಮುಂದಿನ ತಲೆಮಾರಿಗೆ ಹಸ್ತಾಂತರಿಸುವುದಕ್ಕಾಗಿ ಭಗವಾನ್ ಶ್ರೀಕೃಷ್ಣ ಆಡಿದ ನಾಟಕವೇ ಅರ್ಜುನನಲ್ಲಿ ವಿಷಾದ ಮೂಡಲು ಕಾರಣವಾಯಿತು ಎಂದು ನುಡಿದರು.
ಅರ್ಜುನನಂತೆ ವಿದ್ಯಾರ್ಥಿ ಜೀವನದಲ್ಲೂ ಹಲವಾರು ಬಗೆಯ ಕ್ಷಣಿಕ ವಿಷಾದಗಳು ಹುಟ್ಟಿಕೊಳ್ಳುತ್ತವೆ. ಅವುಗಳನ್ನೆಲ್ಲ ಮೀರಿ ನಿಲ್ಲುವುದಕ್ಕೆ ಭಗವದ್ಗೀತೆ ಮಾರ್ಗದರ್ಶಕ. ನಮ್ಮ ಪಂಚೇಂದ್ರಿಯಗಳೇ ಅರ್ಜುನನ ರಥದಲ್ಲಿದ್ದಂತಹ ಐದು ಕುದುರೆಗಳು. ನಾವೇ ಅರ್ಜುನರು. ನಮ್ಮ ಮನಸ್ಸೇ ನಮ್ಮ ರಥದ ಲಗಾಮು. ಆದರೆ ಈ ಲಗಾಮನ್ನು ಬುದ್ಧಿ ಎನ್ನುವ ಭಗವಂತನಲ್ಲಿ ಸ್ಥಾಯಿಯಾಗಿಸಿದಾಗ ಬದುಕಿನ ರಥ ಸುಲಲಿತವಾಗಿ ಮುನ್ನಡೆಯುತ್ತದೆ ಎಂದು ಅಭಿಪ್ರಾಯಪಟ್ಟರು.
ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ ಅಧ್ಯಕ್ಷತೆ ವಹಿಸಿ, ಧರ್ಮವನ್ನು ಉಳಿಸುವ ಕಾರ್ಯಕ್ಕೆ ಪ್ರತಿಯೊಬ್ಬರೂ ಹೆಗಲು ನೀಡಬೇಕು. ಭಗವಾನ್ ಶ್ರೀಕೃಷ್ಣನ ಜನ್ಮಾಷ್ಟಮಿ ಕೇವಲ ಲಡ್ಡು, ಚಕ್ಕುಲಿ ತಿಂದು ಮಲಗುವುದಕ್ಕಿರುವುದಲ್ಲ. ಆ ಭಗವಂತನ ಜನ್ಮಸ್ಥಾನ ಮಥುರೆ ಹಿಂದೂಗಳ ಕೈಯಲ್ಲಿಲ್ಲ ಎಂಬುದನ್ನು ನೆನಪು ಮಾಡಿಕೊಳ್ಳಬೇಕು. ನಮ್ಮ ಧರ್ಮವನ್ನು ಉಳಿಸುವ ಕಾರ್ಯಕ್ಕೆ ಮುಂದಡಿ ಇಡಬೇಕು ಎಂದರು.
ವೇದಿಕೆಯಲ್ಲಿ ಆಡಳಿತ ಮಂಡಳಿ ಸದಸ್ಯ ಸುರೇಶ ಶೆಟ್ಟಿ ಕೆ, ಆಡಳಿತಾಧಿಕಾರಿ ಗಣೇಶ ಪ್ರಸಾದ್ ಎ, ಅಂಬಿಕಾ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ರಾಕೇಶ ಕುಮಾರ್ ಕಮ್ಮಜೆ, ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ, ಬಪ್ಪಳಿಗೆ ಅಂಬಿಕಾ ವಸತಿಯುತ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯ ಗಣೇಶ್ ಪ್ರಸಾದ್ ಡಿ.ಎಸ್., ಬಪ್ಪಳಿಗೆ ಅಂಬಿಕಾ ವಿದ್ಯಾಲಯ ಸಿಬಿಎಸ್ಇ ಸಂಸ್ಥೆಯ ಪ್ರಾಚಾರ್ಯೆ ಮಾಲತಿ ಡಿ., ಹಿರಿಯ ವಿದ್ಯಾರ್ಥಿ ಸಂಕೇತ್ ಶೆಟ್ಟಿ ಉಪಸ್ಥಿತರಿದ್ದರು.
ಬಪ್ಪಳಿಗೆ ಹಾಗೂ ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ವಿದ್ಯಾರ್ಥಿನಿಯರಿಂದ ಭಜನಾ ಕಾರ್ಯಕ್ರಮ ನಡೆಯಿತು. ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಆಯೋಜಿಸಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದ ತರುವಾಯ ಭಗವಾನ್ ಶ್ರೀಕೃಷ್ಣನ ಮೂರ್ತಿಗೆ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ನಾಯಕರು ಆರತಿ ಬೆಳಗಿ ಆರಾಧಿಸಿದರು. ತದನಂತರ ಪ್ರಸಾದ ವಿತರಣೆ, ಮೊಸರುಕುಡಿಕೆ ಸ್ಪರ್ಧೆಗಳು ನಡೆದವು.