ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಸ್ಥಾನದಲ್ಲಿ ತುಪ್ಪದಾರತಿ ಸೇವೆಗೆ ಚಾಲನೆ

0

ಉಪ್ಪಿನಂಗಡಿ: ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದಲ್ಲಿ ತುಪ್ಪದ ದೀಪಗಳನ್ನು ಉರಿಸುವ ಮೂಲಕ ತುಪ್ಪದಾರತಿ ಸೇವೆಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಆ.16ರಂದು ಚಾಲನೆ ನೀಡಿದರು.


ಬಳಿಕ ಮಾತನಾಡಿದ ಅವರು, ಮನುಷ್ಯನಿಗೆ ಅನ್ನ ಹೇಗೆ ಆಹಾರವೋ ಹಾಗೆಯೇ ದೇವರಿಗೆ ತುಪ್ಪ ಆಹಾರವಿದ್ದಂತೆ. ತುಪ್ಪದ ದೀಪ ಉರಿಸುವುದರಿಂದ ದೇವಾಲಯದ ಸಾನಿಧ್ಯ ವೃದ್ಧಿಯಾಗುವುದರೊಂದಿಗೆ ಭಕ್ತರ ಆಸೆ- ಅಭೀಷ್ಟೆಗಳು ಈಡೇರುತ್ತವೆ. ಈಗಿನ ವ್ಯವಸ್ಥಾಪನಾ ಸಮಿತಿ ಬಂದ ಬಳಿಕ ದೇವಾಲಯದಲ್ಲಿ ಹಲವು ಬದಲಾವಣೆಗಳಾಗಿವೆ. ದೇವರಿಗೆ ಸಮರ್ಪಿಸಲು ಭಕ್ತಾದಿಗಳಿಗೆ ಶುದ್ಧ ಎಳ್ಳೆಣ್ಣೆಯ ವ್ಯವಸ್ಥೆಯನ್ನೂ ದೇವಾಲಯದಲ್ಲಿಯೇ ಮಾಡಲಾಗಿದೆ. ಈ ದೇವಾಲಯದಲ್ಲಿ ಇನ್ನಷ್ಟು ಅಭಿವೃದ್ಧಿ ಕೆಲಸಗಳು ಮುಂದೆ ನಡೆಯಲಿದ್ದು, ಎಲ್ಲಾ ಭಕ್ತರೂ ಒಂದಾಗಿ ಕೈ ಜೋಡಿಸಿಕೊಂಡು ಹೋಗುವ ಮೂಲಕ ದೇವಾಲಯದ ಅಭಿವೃದ್ಧಿಯಲ್ಲಿ ಪಾಲು ಪಡೆಯಬೇಕು ಎಂದರು.


ದೇವಾಲಯದ ಪ್ರಧಾನ ಅರ್ಚಕ ವೇ.ಮೂ. ಹರೀಶ ಉಪಾಧ್ಯಾಯ ಮಾತನಾಡಿ, ದೇವರಿಗೆ ತುಪ್ಪದ ದೀಪ ಉರಿಸುವುದರಿಂದ ಅಜ್ಞಾನ ದೂರವಾಗಿ ಸುಜ್ಞಾನ ಪ್ರಾಪ್ತಿಯಾಗುತ್ತದೆ. ಅಲ್ಲದೇ, ದೇವಾಲಯದ ಸಾನಿಧ್ಯ ವೃದ್ಧಿಯಾಗುವುದರೊಂದಿಗೆ ಉರಿಸಿದವರ ಕಷ್ಟಗಳು ದೂರವಾಗಿ ಅವರ ಮನಸ್ಸಿನ ಅಭಿಲಾಷೆಗಳು ಈಡೇರುತ್ತವೆ. ಪ್ರಾಯಶ್ಚಿತದಲ್ಲಿ ಜ್ಯೋತಿಷಿಗಳು ಮೊದಲು ಹೇಳುವುದೇ ದುರ್ಗಾ ನಮಸ್ಕಾರ ಪೂಜೆ ಮಾಡಲು. ಇಲ್ಲಿ ಮುಖ್ಯವಾಗಿ ಐದು ದೀಪಗಳನ್ನು ಉರಿಸಿ ದೇವಿಯ ಆರಾಧನೆ ಮಾಡುವುದು. ದೇವರಿಗೆ ದೀಪ ಉರಿಸುವುದರಿಂದ ದುಷ್ಟ ಶಕ್ತಿಗಳು ದೂರವಾಗಿ ದೇವರ ಕೃಪೆ ನಮ್ಮದಾಗುತ್ತದೆ ಎಂದರು.


ಈ ಸಂದರ್ಭ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಕೆ. ರಾಧಾಕೃಷ್ಣ ನಾೖಕ್‌, ಸದಸ್ಯರಾದ ಬಿ. ಗೋಪಾಲಕೃಷ್ಣ ರೈ, ಜಿ. ಕೃಷ್ಣರಾವ್ ಆರ್ತಿಲ, ದೇವಿದಾಸ್ ರೈ, ಎಂ. ವೆಂಕಪ್ಪ ಪೂಜಾರಿ, ಸೋಮನಾಥ, ಪ್ರಮುಖರಾದ ರಾಮಚಂದ್ರ ಮಣಿಯಾಣಿ, ಜಯಂತ ಪೊರೋಳಿ, ವಿದ್ಯಾಧರ ಜೈನ್, ಉದಯಕುಮಾರ್ ಕೆ., ಡಾ. ಕೆ.ಜಿ. ಭಟ್, ಸುರೇಶ್ ಅತ್ರೆಮಜಲು, ಚಂದ್ರಶೇಖರ ಮಡಿವಾಳ, ಉಷಾಚಂದ್ರ ಮುಳಿಯ, ಚಂದ್ರಿಕಾ ಭಟ್, ದೇವಾಲಯದ ವ್ಯವಸ್ಥಾಪಕರಾದ ವೆಂಕಟೇಶ್ ರಾವ್, ಸಿಬ್ಬಂದಿ ಪದ್ಮನಾಭ, ಕೃಷ್ಣಪ್ರಸಾದ್ ಬಡಿಲ, ದಿವಾಕರ, ಸುಧಾಕರ ಶೆಟ್ಟಿ ಮತ್ತಿತರರು ಇದ್ದರು.

ಆ.17ರಂದು ಭಕ್ತರ ಸಭೆ
ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಕೆ. ರಾಧಾಕೃಷ್ಣ ನಾಕ್ ಮಾತನಾಡಿ, ವರ್ಷದ ಶ್ರಾವಣ ಮಾಸದ ಪ್ರತಿ ಶನಿವಾರ ಮಧ್ಯಾಹ್ನ ದೇವಾಲಯದಲ್ಲಿ ಭಕ್ತರಿಗೆ ಅನ್ನ ಪ್ರಸಾದದ ವ್ಯವಸ್ಥೆ ಮಾಡಲಾಗಿದ್ದು, ಇದಕ್ಕೆ ಕೊಪ್ಪರಿಗೆ ಏರಿಸಲಾಗಿದೆ. ಅಲ್ಲದೇ, ಈ ದೇವಾಲಯದ ಸೀಮೆಗೆ ಸಂಬಂಧಪಟ್ಟ ಎಲ್ಲರನ್ನೂ ಒಗ್ಗೂಡಿಸಿ ದೇವಾಲಯದ ಅಭಿವೃದ್ಧಿ ಕೆಲಸಗಳಲ್ಲಿ ಎಲ್ಲರೂ ಪಾಲು ಪಡೆಯಬೇಕು ಹಾಗೂ ಎಲ್ಲರ ಅಭಿಪ್ರಾಯಗಳೊಂದಿಗೆ ದೇವಾಲಯದ ಅಭಿವೃದ್ಧಿ ಕೆಲಸಗಳು ನಡೆಯಬೇಕು ಎಂಬ ಉದ್ದೇಶದಿಂದ ಪ್ರತಿ ಗ್ರಾಮ ಮಟ್ಟದಲ್ಲಿ ಭಕ್ತಾದಿಗಳ ಸಮಿತಿಗಳನ್ನು ರಚಿಸುತ್ತಿದ್ದು, ಉಪ್ಪಿನಂಗಡಿ ಭಕ್ತರ ಸಭೆಯನ್ನು ಆ.17ರಂದು ದೇವಾಲಯದಲ್ಲಿ ಕರೆಯಲಾಗಿದೆ ಎಂದು ತಿಳಿಸಿದರು.

ಪೋಟೋ: ಟೆಂಪಲ್

LEAVE A REPLY

Please enter your comment!
Please enter your name here