ರಾಮಕುಂಜ ಆಂಗ್ಲಮಾಧ್ಯಮ ಶಾಲೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ

0

ರಾಮಕುಂಜ: ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆ ಹಾಗೂ ನೇತ್ರಾವತಿ ತುಳುಕೂಟ ರಾಮಕುಂಜ ಇದರ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ‘ಅಟ್ಟೆಮಿ ಪರ್ಬ’ವನ್ನು ಆ.15ರಂದು ವಿಜ್ರಂಭಣೆಯಿಂದ ಆಚರಿಸಲಾಯಿತು.


ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಕಾರ್‍ಯದರ್ಶಿ ಕೆ.ಸೇಸಪ್ಪ ರೈಯವರು ಮಾತನಾಡಿ, ನಮ್ಮ ತುಳುನಾಡಿನ, ಹಿಂದು ಸಂಸ್ಕೃತಿಯು ನಶಿಸಿ ಹೋಗುತ್ತಿರುವ ಹಬ್ಬ-ಹರಿದಿನಗಳನ್ನು ಆಚರಿಸಿ ಹಂಚಿಕೊಳ್ಳುವುದರಿಂದ ಸಂತೋಷ ಪಡುತ್ತಿದ್ದೇವೆ. ಈ ಸಂತೋಷವನ್ನು ವಿದ್ಯಾರ್ಥಿಗಳೆಲ್ಲರು ಇಡೀ ಜೀವನದಲ್ಲಿ ಅನುಭವಿಸಬೇಕೆಂಬ ಉದ್ದೇಶದಿಂದ ನಮ್ಮ ವಿದ್ಯಾಸಂಸ್ಥೆಯು ಹಲವಾರು ಹಬ್ಬಗಳನ್ನು ಆಚರಿಸಿಕೊಂಡು ಬರುತ್ತಿದೆ ಎಂದರು.


ವಿಶೇಷ ಅತಿಥಿಯಾಗಿ ಆಗಮಿಸಿದ್ದ ನೆಲ್ಯಾಡಿ ಸಂತ ಜಾರ್ಜ್ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಚೇತನ್ ಆನೆಗುಂಡಿ ಇವರು ಮಾತನಾಡಿ, ಒಬ್ಬ ಮನುಷ್ಯನ ಬದುಕು ಯಾವ ರೀತಿಯಲ್ಲಿ ಇರಬೇಕು, ಅವನು ಅಳವಡಿಸಿಕೊಳ್ಳಬೇಕಾದ ಸಂಸ್ಕಾರ ಮಾನವೀಯತೆ ಏನೆಂಬುದನ್ನು ಶ್ರೀ ಕೃಷ್ಣ ಪರಮಾತ್ಮನಿಂದ ಕಲಿತು ನಮ್ಮ ಬದುಕನ್ನು ಅರ್ಥ ಪೂರ್ಣವಾಗಿಸಿಕೊಳ್ಳಬೇಕು. ಪ್ರತಿಯೊಬ್ಬ ವ್ಯಕ್ತಿಯ ಆಂತರ್ಯದೊಳಗೆ ಅದ್ಭುತ ಶಕ್ತಿಯಿದೆ. ಆ ಶಕ್ತಿಯನ್ನು ಶ್ರೀ ಕೃಷ್ಣ ಗುರುವಾಗಿ ಅರ್ಜುನನಲ್ಲಿರುವ ಅಪೂರ್ವ ಶಕ್ತಿಯನ್ನು ಜಗತ್ತಿಗೆ ತೋರಿಸಿದ ಹಾಗೆ, ವಿದ್ಯಾಸಂಸ್ಥೆಗಳು ಹಾಗೂ ಶಿಕ್ಷಕರು ವಿದ್ಯಾರ್ಥಿಗಳಲ್ಲಿರುವ ಬುದ್ದಿವಂತಿಕೆ, ಸೃಜನಶೀಲತೆಯನ್ನು ಹೊರತೆಗೆಯುವಲ್ಲಿ ಕಾರಣವಾಗುತ್ತಾರೆ. ಈ ಮೂಲಕ ಕೃಷ್ಣನ ವ್ಯಕ್ತಿತ್ವವನ್ನು ರೂಪಿಸಿಕೊಂಡು, ಉತ್ತಮ ವಿದ್ಯಾರ್ಥಿಗಳಾಗಬೇಕೆಂದರು.


ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಗಿರೀಶ್ ಎ.ಪಿ. ಮಾತನಾಡಿ, ಶ್ರೀ ಕೃಷ್ಣನ ಬಾಲ್ಯ ಜೀವನದ ಮೌಲ್ಯಗಳನ್ನು ಮಕ್ಕಳೆಲ್ಲರೂ ಬೆಳೆಸಿಕೊಂಡು, ಏಕಾಗ್ರತೆಯಿಂದ ವಿದ್ಯಾಭ್ಯಾಸ ಮಾಡಿ ಉತ್ತಮ ಪ್ರಜೆಯಾಗಬೇಕೆಂದು ಕರೆನೀಡಿದರು. ಮುಖ್ಯ ಅತಿಥಿಯಾಗಿದ್ದ ಸುರುಳಿ ಶ್ರೀ ಬಾಲಸುಬ್ರಹ್ಮಣ್ಯ ದೇವಸ್ಥಾನದ ಅಧ್ಯಕ್ಷರಾದ ಕೃಷ್ಣಕುಮಾರ್ ಅರ್ತಿಜಾಲು ಇವರು ಸಂದರ್ಭೋಚಿತವಾಗಿ ಮಾತನಾಡಿದರು.
‘ಅಟ್ಟೆಮಿ ಪರ್ಬ’ದ ಪ್ರಯುಕ್ತ ಸಂಸ್ಥೆಯ ವಿದ್ಯಾರ್ಥಿಗಳಿಗೆ ಮೊಸರು ಕುಡಿಕೆ, ಕೃಷ್ಣನ ಕುರಿತಾದ ಭಕ್ತಿಗೀತೆ ಸ್ಪರ್ಧೆ, ಕೃಷ್ಣವೇಷ ಸ್ಪರ್ಧೆ, ಕರಕುಶಲ ವಸ್ತು ತಯಾರಿ (ಮೂಡೆ, ಗುಂಡ, ಕೊಟ್ಟಿಗೆ) ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನವನ್ನು ವಿತರಿಸಲಾಯಿತು. ಮಧ್ಯಾಹ್ನ ಅಷ್ಟಮಿಯ ವಿಶೇಷ ತಿಂಡಿಯಾದ ಕೊಟ್ಟಿಗೆ, ಮೊಳಕೆ ಬರಿಸಿದ ಹೆಸರುಕಾಳು ಸಾರು ಮತ್ತು ಪಾಯಸವನ್ನು ಉಣಬಡಿಸಲಾಯಿತು.

ವೇದಿಕೆಯಲ್ಲಿ ಸಂಸ್ಥೆಯ ಆಡಳಿತಾಧಿಕಾರಿ ಆನಂದ ಎಸ್.ಟಿ.ಉಪಸ್ಥಿತರಿದ್ದರು. ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಲೋಹಿತಾ ಎ ಸ್ವಾಗತಿಸಿ, ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಗಾಯತ್ರಿ ಯು.ಎನ್.ವಂದಿಸಿದರು. ಸಹಶಿಕ್ಷಕಿಯರಾದ ಸರಿತಾ, ಸುನಂದ ಹಾಗೂ ಕವಿತಾ ಬಿ ಕಾರ್ಯಕ್ರಮ ನಿರ್ವಹಿಸಿದರು. ವ್ಯವಸ್ಥಾಪಕರಾದ ರಮೇಶ್ ರೈ ಆರ್.ಬಿ., ಶಿಕ್ಷಕ-ಶಿಕ್ಷಕೇತರ ವೃಂದದವರು ಸಹಕರಿಸಿದರು.

LEAVE A REPLY

Please enter your comment!
Please enter your name here