ಪುತ್ತೂರು : ಕುಂಟ್ಯಾನ ಶ್ರೀ ಕೃಷ್ಣ ಯುವಕ ಮಂಡಲ, ಸೇಡಿಯಾಪು – ಬನ್ನೂರು, ಇದರ ವತಿಯಿಂದ ಆ. 17 ರಂದು ಕುಂಟ್ಯಾನ ಶ್ರೀ ಸದಾಶಿವ ದೇವಾಲಯದ ವಠಾರದಲ್ಲಿ 21ನೇ ವರ್ಷದ ಮೊಸರು ಕುಡಿಕೆ ಉತ್ಸವವನ್ನು ಧಾರ್ಮಿಕ , ಸಾಂಸ್ಕೃತಿಕ ಹಾಗೂ ವಿವಿಧ ರೀತಿಯ ಅಟೋಟ ಸ್ಪರ್ಧೆಯೊಂದಿಗೆ , ಸನ್ಮಾನ ಆರ್ಥಿಕ ಸಹಾಯಧನ ಮೂಲಕ ಅದ್ದೂರಿಯಾಗಿ ಆಚರಣೆ ಮಾಡಲಾಯಿತು.
ಶ್ರೀ ಸದಾಶಿವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಧರ್ಣಪ್ಪ ಮೂಲ್ಯ ಕಜೆ ದೀಪ ಪ್ರಜ್ವಲನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ,ಹಾರೈಸಿದರು.

ಬಳಿಕ ಪುಟಾಣಿಗಳು, ಮಕ್ಕಳು ಹಾಗೂ ಯುವ ಸಮೂಹ ವಿವಿಧ ಬಗೆಯ ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸಿ ಸಂಭ್ರಮಿಸಿ , ಬಹುಮಾನ ಪಡೆದುಕೊಂಡರು. ಬೆಳಗ್ಗೆ ಉಪಹಾರ ಹಾಗೂ ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು. ಸಂಜೆ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನೂ ಕೂಡ ಕುಂಟ್ಯಾನ ಶ್ರೀ ಸದಾಶಿವ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಧರ್ಣಪ್ಪ ಮೂಲ್ಯ ಕಜೆ ವಹಿಸಿದ್ದರು. ಬಳಿಕ ಮಾತನಾಡಿದ ಅವರು , ಹಲವು ವರುಷಗಳಿಂದ ಶ್ರೀ ಕೃಷ್ಣ ಯುವಕ ಮಂಡಲ ಆಯೋಜಿಸಿಕೊಂಡು ಬರುತ್ತಿರುವ ಧಾರ್ಮಿಕ ಕಾರ್ಯವೈಖರಿಗೆ ನಮ್ಮ ನಿಮ್ಮೆಲರ ಪ್ರೀತಿ ಬೆಂಬಲ ಸಿಗಲಿ ಜೊತೆಗೆ ಇನ್ನೂ ಅತ್ಯುತ್ತಮ ರೀತಿಯಲ್ಲಿ ಕಾರ್ಯಕ್ರಮ ನಡೆಸುವಂತಹ ಶಕ್ತಿ ಯುವ ಸಂಘಟನೆಗೆ ಸಿಗಲಿಯೆಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮನೋಹರ ಎ ಆರುವಾರಗುತ್ತು ಮಾತನಾಡಿ , ಭಗವಾನ್ ಶ್ರೀ ಕೃಷ್ಣನ ಗುಣಗಾನ ಮಾಡಿ , ನಾವೆಲ್ಲರೂ ಶ್ರೀಕೃಷ್ಣನ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಾಗೋಣ ಹಾಗೂ ಎಲ್ಲರಲ್ಲೂ ಮತ್ತಷ್ಟು ಒಗ್ಗಟ್ಟು ಮೂಡುವ ಕಾರ್ಯ ನಡೆಯಲು ಇಂತಹ ಕಾರ್ಯಕ್ರಮ ಸಹಕಾರಿಯೆಂದರು.
ಈಶ್ವರ ಗೌಡ ಗೊಳ್ತಿಲ , ಗೃಹ ರಕ್ಷಕ ದಳ ಸಿಬಂದಿ ಚಿದಂಬರ , ಶ್ರೀಕೃಷ್ಣ ಯುವಕ ಮಂಡಲ ಅಧ್ಯಕ್ಷ ತಿಲಕ್ , ಮಾಜಿ ಅಧ್ಯಕ್ಷ ನಾಗರಾಜ್ ಹಾಗೂ ನಿವೃತ್ತ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ವೀಣಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಾಧೆ ಕೃಷ್ಣ ಸ್ಪರ್ಧೆಯಲ್ಲಿ ಭಾಗವಹಿಸಿದ್ದ 20 ಪುಟಾಣಿಗಳಿಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು. ವಿವಿಧ ಆಟೋಟ ಹಾಗೂ ಇನ್ನಿತರ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆಯು ನಡೆಯಿತು.
ಯುವಕ ಮಂಡಲದ ಕಾರ್ಯದರ್ಶಿ ಎಂ ಕೆ ಸುಬ್ರಹ್ಮಣಿ ಅಡೆಂಚಿಲಡ್ಕ ,ಗೌರವ ಸಲಹೆಗಾರ ಸುಬ್ರಹ್ಮಣ್ಯ ದಾಸ್ ಹಾಗೂ ಪದಾಧಿಕಾರಿಗಳು ಮತ್ತು ಸದಸ್ಯರು ಹಾಗೂ ಕ್ರೀಡಾ ಪ್ರೇಮಿಗಳು ಮತ್ತು ಸ್ಥಳೀಯರು ಉಪಸ್ಥಿತರಿದ್ದರು. ಸಂತೋಷ್ ಕುಮಾರ್ ಕುಲಾಲ್ ಕಜೆ ಸ್ವಾಗತಿಸಿ ,ರಮೇಶ್ ಅಡೆಂಚಿಲಡ್ಕ ಕಾರ್ಯಕ್ರಮ ನಿರೂಪಿಸಿ , ವಂದಿಸಿದರು.
ಸನ್ಮಾನ ಹಾಗೂ ಧನ ಸಹಾಯ…
ಹಲವಾರು ವರುಷಗಳಿಂದ ಕಜೆ ಬೇರಿಕೆ ಮತ್ತು ಪಡ್ನೂರು ಅಂಗನವಾಡಿ ಕೇಂದ್ರದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಶ್ರೀಮತಿ ವೀಣಾ ಅವರನ್ನು ಸನ್ಮಾನಿಸಲಾಯಿತು ಹಾಗೂ ದಿವಂಗತ ಸಂದೀಪ್ ಅಡೆಂಚಿಲಡ್ಕ ಕುಟುಂಬ ಸದಸ್ಯರಿಗೆ ಆರ್ಥಿಕ ಸಹಾಯ ನೀಡಲಾಯಿತು.