ಪುತ್ತೂರು: ಜೇಸಿಐ ಆಲಂಕಾರು ಘಟಕದ ಪೂರ್ವ ಅಧ್ಯಕ್ಷರು, ಜೇಸಿಐ ಭಾರತದ ವಲಯ 15ರ ತರಬೇತಿ ವಿಭಾಗದ ನಿರ್ದೇಶಕರಾಗಿದ್ದ ದಿ. ಪ್ರದೀಪ್ ಬಾಕಿಲ ಇವರ ಸ್ಮರಣಾರ್ಥ ತರಬೇತಿ ಸಪ್ತಾಹ-ದೀಪೋತ್ಥಾನದ ಉದ್ಘಾಟನೆಯು ಆಲಂಕಾರು ಹೊಂಬೆಳಕು ಮನೆಯಲ್ಲಿ ನಡೆಯಿತು.
ಉದ್ಘಾಟನೆಯನ್ನು ನೆರವೇರಿಸಿದ ರಾಷ್ಟ್ರೀಯ ತರಬೇತುದಾರರಾದ ಸತೀಶ್ ಭಟ್ ಬಿಳಿನೆಲೆಯವರು ಮಾತನಾಡಿ, “ವಲಯದ ತರಬೇತಿ ವಿಭಾಗಕ್ಕೆ ಪ್ರದೀಪ್ ಬಾಕಿಲ ಅವರ ಕೊಡುಗೆ ಬಹಳ ಹಿರಿದು. ಸ್ವತಃ ಅವರೊಬ್ಬ ಅತ್ಯುತ್ತಮ ತರಬೇತುದಾರರಾಗಿದ್ದರು. ಆದರ್ಶಗಳನ್ನ ಹೇಳುವುದು ಮಾತ್ರವಲ್ಲದೆ ಅನುಷ್ಠಾನಕ್ಕೆ ತಂದವರಲ್ಲಿ ಪ್ರದೀಪ್ ಬಾಕಿಲರುಕೂಡ ಪ್ರಮುಖರು. ಆದರೆ ಅವರು ಇಂದು ನಮ್ಮೊಂದಿಗೆ ಇಲ್ಲದಿರುವುದು ದುರ್ದೈವ. ಆದರೆ ಅವರು ತೋರಿಸಿದ ದಿಕ್ಕಿನಲ್ಲಿ ಸಾಗುವ ಮಹತ್ತರವಾದ ಕಾರ್ಯವನ್ನು ನಾವು ಮಾಡಬಹುದು. ಈ ನಿಟ್ಟಿನಲ್ಲಿ ಹಮ್ಮಿಕೊಂಡಂತಹ ಈ ತರಬೇತಿ ಸಪ್ತಾಹವು ಯಶಸ್ವಿಯಾಗಿ ಮೂಡಿ ಬರಲಿ. ಇದರಿಂದ ಪ್ರಯೋಜನ ಬಹಳಷ್ಟು ಜನರಿಗೆ ಸಿಗುವಂತಾಗಲಿ” ಎಂದು ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಆಲಂಕಾರು ವಲಯದ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಪ್ರಕಾಶ್ ಬಾಕಿಲ ಶುಭ ಹಾರೈಸಿದರು. ಆಲಂಕಾರು ಜೇಸಿಐ ಘಟಕದ ಅಧ್ಯಕ್ಷರಾದ ಜೆಸಿ ಗುರುರಾಜ ರೈ ಪ್ರಾಸ್ತಾವಿಕವಾಗಿ ಮಾತನಾಡಿ, ಎಲ್ಲರನ್ನ ಸ್ವಾಗತಿಸಿದರು. ಕಾರ್ಯದರ್ಶಿಗಳಾದ ಜೆಸಿ ಮಹೇಶ್ ಪಾಟಳಿ ಧನ್ಯವಾದ ಸಮರ್ಪಿಸಿದರು.
ಈ ಸಂದರ್ಭದಲ್ಲಿ ಪೂರ್ವ ಅಧ್ಯಕ್ಷರಾದ ಹೇಮಲತಾ ಪ್ರದೀಪ್ ಬಾಕಿಲ, ಸ್ಥಾಪಕ ಅಧ್ಯಕ್ಷರಾದ ಬಿ ಎಲ್ ಜನಾರ್ಧನ್, ಪೂರ್ವ ಅಧ್ಯಕ್ಷರಾದ ಪ್ರದೀಪ್ ರೈ ಮನವಳಿಕೆ, ಹರಿಶ್ಚಂದ್ರ, ಗುರುಪ್ರಸಾದ ರೈ, ಲಕ್ಷ್ಮೀನಾರಾಯಣ ಅಲೆಪ್ಪಾಡಿ, ಗಣೇಶ್ ಕಟ್ಟಪ್ಪುಣಿ, ಕಾರ್ಯಕ್ರಮ ನಿರ್ದೇಶಕರಾದ ಗುರುಕಿರಣ್ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು.