ಪುತ್ತೂರು: ಶಿವಳ್ಳಿ ಸಂಪದ ಬೊಳುವಾರು ವಲಯದ ವತಿಯಿಂದ ಆಗಸ್ಟ್16 ರಿಂದ 22ರವರೆಗೆ ಕೆಮ್ಮಾಯಿ ವಿಷ್ಣುಮಂಟಪದಲ್ಲಿ ನಡೆದ ಡಾ.ಬೆ.ನಾ .ವಿಜಯೀಂದ್ರ ಆಚಾರ್ಯರ ಶ್ರೀಮದ್ಭಾಗವತ ಪ್ರವಚನ ಸಪ್ತಾಹ ನಡೆಯಿತು.

ಪ್ರವಚನವು ಹೊಸತೊಂದು ಆಧ್ಯಾತ್ಮದ ಕ್ರಾಂತಿಯನ್ನೇ ಸೃಷ್ಟಿಸಿತು ಎಂದರೆ ತಪ್ಪಾಗಲಾರದು. 7 ದಿನಗಳಲ್ಲಿ ನಡೆದ ಪ್ರವಚನಕ್ಕೆ ಅಭೂತಪೂರ್ವ ಜನ ಬೆಂಬಲ ವ್ಯಕ್ತವಾಗಿದ್ದು, 4ನೇ ದಿನದ ಸಪ್ತಾಹವು ಸುಮಾರು 400ಕ್ಕೂ ಹೆಚ್ಚು ಆಸ್ತಿಕ ಬಂಧುಗಳಿಗೆ ಏಕಾದಶಿ ವೃತದ ಮಹತ್ವವನ್ನು ಪ್ರೇರೇಪಿಸಿತು.

ಸಪ್ತಾಹದ ಕೊನೆಯ ದಿನವಾದ ಆಗಸ್ಟ್ 22ರಂದು ಬೆಳಿಗ್ಗೆ 8 ಗಂಟೆಯಿಂದ ವೇ.ಮೂ ವಿಶ್ವಮೂರ್ತಿ ಬಡೆಕ್ಕಿಲ್ಲಾಯರ ನೇತೃತ್ವದಲ್ಲಿ ಚಕ್ರಾಬ್ಜ ಮಂಡಲ ಪೂಜೆ, ಶ್ರೀಮದ್ಭಾಗವತ ಮಹಾಗ್ರಂಥವನ್ನು ಕೆಮ್ಮಾಯಿ ವಿಷ್ಣುಮೂರ್ತಿ ಸನ್ನಿಧಿಗೆ ಮೆರವಣಿಗೆಯ ಮೂಲಕ ಸಾಗಿ ಮತ್ತೆ ಪ್ರವಚನ ಮಂಟಪಕ್ಕೆ ತರಲಾಯಿತು. ಗ್ರಂಥಕ್ಕೆಪೂಜೆಯ ಬಳಿಕ ಪ್ರವಚನ, ಅಷ್ಟಾವಧಾನ ಸೇವೆ ನಡೆಯಿತು. ಭರತನಾಟ್ಯದಲ್ಲಿ ಅಕ್ಷರ ಕೆ.ಸಿ, ಸಂಗೀತದಲ್ಲಿ ಅಭಿಜ್ಞಾ ರಾವ್ ದಾಳಿಂಬ, ಮೃದಂಗದಲ್ಲಿ ಆಶ್ರಿತ್ ಕೃಷ್ಣ ದಾಳಿಂಬ ನಡೆಸಿಕೊಟ್ಟರು.
ಸಮಾರೋಪ ಸಮಾರಂಭದಲ್ಲಿ ಗುರವಂದನಾ ಕಾರ್ಯಕ್ರಮ ನಡೆಯಿತು. ಸಮಾರೋಪ ಸಮಾರಂಭದಲ್ಲಿ ಉಡುಪಿ ಮಧ್ವ ಸಿದ್ಧಾಂತ ಪ್ರಭೋದಕ ಸಂಸ್ಕೃತ ಮಹಾವಿದ್ಯಾಲಯ ಪ್ರಾಧ್ಯಾಪಕ ಡಾ.ಷಣ್ಮುಖ ಹೆಬ್ಬಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದು, ಪುತ್ತೂರು ಪ್ರಗತಿ ಅಸ್ಪತ್ರೆಯ ಡಾ. ಶ್ರೀಪತಿ ರಾವ್, ತಾಲೂಕು ಅಧ್ಯಕ್ಷ ಸುದೀಂದ್ರ ಕುದ್ದಣ್ಣಾಯ, ಮಹಿಳಾ ಸಂಪದ ಅಧ್ಯಕ್ಷೆ ಪ್ರೇಮಲತಾ ರಾವ್, ವಿಷ್ಣು ಮಂಟಪದ ಮಾಲಕ ಶ್ರೀಧರ ಬೈಪಾಡಿತ್ತಾಯ, ಕೃಷ್ಣರಾಜ ಎರ್ಕಾಡಿತ್ತಾಯ, ಪ್ರಕಾಶ್ ಪುತ್ತೂರಾಯ ಆಲಡ್ಕ, ವಲಯಾಧ್ಯಕ್ಷ ಗಣೇಶ್ ಕೆದಿಲಾಯ, ವಲಯ ಕೋಶಾಧಿಕಾರಿ ಅನಂತಪದ್ಮನಾಭ ಕಡಂಬಳಿತ್ತಾಯ ಮತ್ತು ಭಕ್ತರು ಸಮ್ಮುಖದಲ್ಲಿ ವಲಯ ಕಾರ್ಯದರ್ಶಿ ಹರಿಪ್ರಸಾದ್ ದಾಳಿಂಬ ಆಚಾರ್ಯರಿಗೆ ಗುರುವಂದನೆಯನ್ನು ಸಮರ್ಪಿಸಿದರು.
ಸಪ್ತಾಹ ಸಮಾಪ್ತಿಯ ದಿನದ ಪೂರ್ಣ ಪ್ರಾಯೋಜಕರಾದ ಪದ್ಮಾವತಿ ಮತ್ತು ಅನಂತಕೃಷ್ಣ ಪಡ್ಡಿಲ್ಲಾಯ ಶ್ರೀ ದುರ್ಗಾ ನಿಲಯ ಬನ್ನೂರು, ವಿವಿಧ ಧಾರ್ಮಿಕ ಕಾರ್ಯಕ್ರಮದ ಜೊತೆ ಪ್ರಸಾದ ಭೋಜನದ ಸೇವಾಕರ್ತರಾಗಿದ್ದರು.