ಪದವಿ ಪೂರ್ವ ಕಾಲೇಜುಗಳ ನೌಕರರ ಸಹಕಾರ ಸಂಘದ ಮಹಾಸಭೆ

0

ಪುತ್ತೂರು: ಪುತ್ತೂರಿನಲ್ಲಿ ಶಾಖೆ ಹೊಂದಿರುವ ಪದವಿ ಪೂರ್ವ ಕಾಲೇಜುಗಳ ನೌಕರರ ಸಹಕಾರ ಸಂಘ ಮಂಗಳೂರು ಇದರ 2024-25ನೇ ಸಾಲಿನ ವಾರ್ಷಿಕ ಮಹಾಸಭೆ ಆ.23ರಂದು ನಂತೂರು ಡಾ.ಎನ್ ಎಸ್ ಎ ಎಂ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಜರಗಿತು.


ಸಂಘದ ಅಧ್ಯಕ್ಷ ಎನ್. ದುಗ್ಗಪ್ಪ ಇವರು ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, 2024-25ನೇ ಸಾಲಿನಲ್ಲಿ ಸುಮಾರು ಎಂಟೂವರೆ ಕೋಟಿ ರುಪಾಯಿಗಳ ಸಾಲ ನೀಡಲಾಗಿದೆ. ಶಿಕ್ಷಕ ಮತ್ತು ಸಾರ್ವಜನಿಕರಿಂದ ಸುಮಾರು ಹತ್ತುಕೋಟಿ ರೂಪಾಯಿಗಳ ಠೇವಣಿ ಸಂಗ್ರಹಿಸಲಾಗಿದೆ. ದುಡಿಯುವ ಬಂಡವಾಳ ರೂಪಾಯಿ ಒಂಭತ್ತೂವರೆ ಕೋಟಿಗೂ ಮೀರಿದ್ದು ಸಂಘವು ಸುಮಾರು ಒಂದು ಕೋಟಿ ರೂಪಾಯಿಗಳನ್ನು ಇತರ ಹಣಕಾಸು ಸಂಸ್ಥೆಗಳಲ್ಲಿ ಹೂಡಿಕೆ ಮಾಡಿದೆ. ಸದಸ್ಯರಿಗೆ ಶೇ.10 ಡಿವಿಡೆಂಡ್ ನೀಡಲಾಗುವುದು. ಮಂಗಳೂರಿನಲ್ಲಿ ತನ್ನ ಕೇಂದ್ರ ಕಚೇರಿಯನ್ನು ಹೊಂದಿರುವ ನಮ್ಮ ಸಂಘವು ಪುತ್ತೂರು ಮತ್ತು ಕಡಬದಲ್ಲಿ ಶಾಖೆಗಳನ್ನು ಹೊಂದಿ ವೈಯಕ್ತಿಕ ಮತ್ತು ಚಿನ್ನಾಭರಣ ಅಡಮಾನ ಸಾಲವನ್ನು ಸಾರ್ವಜನಿಕರಿಗೆ ಕಡಿಮೆ ಬಡ್ಡಿಯಲ್ಲಿ ನೀಡಲಾಗುತ್ತಿದೆ. ಕಳೆದ ಏಳು ವರ್ಷಗಳಲ್ಲಿ ಒಟ್ಟು 36 ಕೋಟಿ ವ್ಯವಹಾರ ನಡೆಸಲಾಗಿದೆ. ಮುಂದಿನ ವರ್ಷದಿಂದ ಸಂಘವು ಸದಸ್ಯರಿಗೆ ಮತ್ತು ಸಾರ್ವಜನಿಕರಿಗೆ ವಾಹನ ಸಾಲ ಮತ್ತು ವಿಮೆ ಪಾಲಿಸಿಗಳ ಮೇಲೆ ಸಾಲ ನೀಡುವ ಬಗ್ಗೆ ಚಿಂತನೆ ನಡೆದಿದೆ ಎಂದು ಹೇಳಿದರು.


2024-25ನೇ ಸಾಲಿನಲ್ಲಿ ನಿವೃತ್ತರಾದ ಪ್ರಾಂಶುಪಾಲ ಉಮೇಶ ಕರ್ಕೇರ, ದ.ಕ. ಜಿಲ್ಲಾ ಪಿ.ಯು. ಕಾಲೇಜುಗಳ ಪ್ರಾಚಾರ್ಯರ ಸಂಘದ ನಿರ್ಗಮಿತ ಅಧ್ಯಕ್ಷ ಜಯಾನಂದ ಸುವರ್ಣ, ಪ್ರಾಚಾರ್ಯರ ಸಂಘದ ನಿಯೋಜಿತ ಅಧ್ಯಕ್ಷ ಎನ್ ಎಸ್ ಎ ಎಂ ಪಿ ಯು ಕಾಲೇಜು ನಂತೂರು ಇಲ್ಲಿನ ಪ್ರಾಂಶುಪಾಲ ಡಾ.ನವೀನ್ ಶೆಟ್ಟಿ ಕೆ. ಇವರನ್ನು ಸನ್ಮಾನಿಸಲಾಯಿತು. 2024-25 ರ ಪಿಯುಸಿ ಮತ್ತು 10 ನೇ ತರಗತಿ ವಾರ್ಷಿಕ ಪರೀಕ್ಷೆಗಳಲ್ಲಿ ಶೇ.95 ಕ್ಕಿಂತ ಅಧಿಕ ಅಂಕಗಳಿಸಿದ ಸಂಘದ ಸದಸ್ಯರ ಮಕ್ಕಳಿಗೆ ನಗದು ಬಹುಮಾನ ನೀಡಿ ಅಭಿನಂದಿಸಲಾಯಿತು. ಸಭೆಗೆ ಹಾಜರಾದ ಎಲ್ಲಾ ಸದಸ್ಯರಿಗೆ ಸ್ಮರಣಿಕೆಗಳನ್ನು ನೀಡಿ ಸತ್ಕರಿಸಲಾಯಿತು.


ಮಹಾಸಭೆಯಲ್ಲಿ ನಿರ್ದೇಶಕರಾದ ವಿಠಲ ಎ, ಶೇಖರ್ ರೈ, ಸಂಧ್ಯಾ ಕುಮಾರಿ, ಸುರೇಖಾ, ಸತೀಶ್, ನವೀನ್ ಕುಮಾರ್, ಸಿಬ್ಬಂದಿ ವರ್ಗದವರು ಮತ್ತು ಇತರರು ಉಪಸ್ಥಿತರಿದ್ದರು.
ಸಂಘದ ಉಪಾಧ್ಯಕ್ಷ ಗಂಗಾಧರ ಆಳ್ವ ಸ್ವಾಗತಿಸಿದರು. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರವೀಂದ್ರ ಆಳ್ವ ವರದಿ ಹಾಗೂ ಬಜೆಟ್ ಮಂಡಿಸಿದರು. ನಿರ್ದೇಶಕ ಕೃಷ್ಣ ತಿಳುವಳಿಕೆ ಪತ್ರ ವಾಚಿಸಿದರು. ಯೂಸುಫ್ ಲೆಕ್ಕ ಪತ್ರ ಮಂಡಿಸಿದರು. ನಂತೂರು ಎನ್‌ಎಸ್‌ಎಎಂ ಪಿಯು ಕಾಲೇಜಿನ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ನಿರ್ದೇಶಕರಾದ ಸುಕುಮಾರ ಜೈನ್, ಕಿಶೋರ್ ಕುಮಾರ್ ರೈ ಶೇಣಿ ಕಾರ್ಯಕ್ರಮ ನಿರೂಪಿಸಿದರು. ಡಾ. ನವೀನ್ ಶೆಟ್ಟಿ ಕೆ ವಂದಿಸಿದರು.

LEAVE A REPLY

Please enter your comment!
Please enter your name here