ಮುಕ್ಕೂರು ಗಣೇಶೋತ್ಸವ ಎಳೆಯ ಮಕ್ಕಳಲ್ಲಿ ಧಾರ್ಮಿಕ ಪ್ರಜ್ಞೆ ಮೂಡಿಸುವ ಕಾರ್ಯ ಮಾಡಿದೆ : ಮಾಜಿ ಸಂಸದ ನಳಿನ್ ಕುಮಾರ್ ಕಟೀಲು
ಸಾಮರಸ್ಯದ ಸಮಾಜ ನಿರ್ಮಾಣದ ಸಂಕಲ್ಪ ಇಟ್ಟುಕೊಂಡಿರುವುದು ಶ್ಲಾಘನೀಯ : ಅಶೋಕ್ ನೆಕ್ರಾಜೆ
ಮುಕ್ಕೂರು: ಜಾಗೃತ ಸಮಾಜಕೋಸ್ಕರ ಹಬ್ಬ ಹರಿದಿನಗಳಲ್ಲಿ ಧಾರ್ಮಿಕ ಪ್ರಜ್ಞೆ ಮೂಡಿಸುವ ಕಾರ್ಯ ಮುಕ್ಕೂರು ಗಣೇಶೋತ್ಸವದಲ್ಲಿ ನಡೆದಿದೆ. ಇದು ಅತ್ಯುತ್ತಮ ಕಾರ್ಯ ಎಂದು ದ.ಕ.ಲೋಕಸಭಾ ಕ್ಷೇತ್ರದ ಮಾಜಿ ಸದಸ್ಯ ನಳಿನ್ ಕುಮಾರ್ ಕಟೀಲು ಹೇಳಿದರು.

ಕುಂಡಡ್ಕ -ಮುಕ್ಕೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ ಆ.27ರಂದು ಮುಕ್ಕೂರು ವಠಾರದಲ್ಲಿ ನಡೆದ 16ನೇ ವರ್ಷದ ಗಣೇಶೋತ್ಸವ ಆಚರಣೆ, ಕ್ರೀಡಾಕೂಟ, ಸಮ್ಮಾನ ಸಮಾರಂಭ, ಪ್ರತಿಭಾ ಪುರಸ್ಕಾರ ಹಾಗೂ ನೇಸರ ವಾರ್ಷಿಕ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಅವರು ಮಾತನಾಡಿದರು.ಗಣೇಶೋತ್ಸವದ ದಿನ ದಂದೂ ಏರ್ಪಡಿಸಿದ ಚಿತ್ರಕಲೆ ಸ್ಪರ್ಧೆ ಮಕ್ಕಳ ಮನಸ್ಸಿನಲ್ಲಿ ಗಣಪತಿಯ ಭಾವ ಮೂಡಿಸಬಹುದು. ಇಂತಹ ಹೊಸ ಹೊಸ ಪ್ರಯತ್ನಗಳು ಧಾರ್ಮಿಕ ಅರಿವು ಉಂಟು ಮಾಡುತ್ತದೆ. ಹೀಗಾಗಿ ಮುಕ್ಕೂರು ಗಣೇಶೋತ್ಸವ ಸಮಿತಿ ಚಿಂತನೆಗಳು ಶ್ಲಾಘನೀಯವಾದದು ಎಂದರು.

ನೇಸರ ವಾರ್ಷಿಕ ಪ್ರಶಸ್ತಿ ಪ್ರಧಾನಿಸಿದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದ ವ್ಯವಸ್ಥಾಪನ ಸಮಿತಿ ಸದಸ್ಯ ಅಶೋಕ್ ನೆಕ್ರಾಜೆ ಮಾತನಾಡಿ, ಧಾರ್ಮಿಕ ಆಚರಣೆಯ ಜತೆಗೆ ಶೈಕ್ಷಣಿಕ, ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಂಡವರನ್ನು ಗುರುತಿಸುವಿಕೆ ಒಂದೆಡೆಯಾದರೆ, ಕ್ರೀಡೆಯ ಮೂಲಕ ಸಾಮರಸ್ಯದ ಸಮಾಜ ನಿರ್ಮಾಣದ ಸಂಕಲ್ಪ ಇಟ್ಟುಕೊಂಡಿರುವ ಮುಕ್ಕೂರು ಗಣೇಶೋತ್ಸವ ಮಾದರಿ ಕಾರ್ಯಕ್ರಮ ಎಂದರು.

ಸಮ್ಮಾನಿತರ ಕುರಿತು ಸುಳ್ಯ ಚುಟುಕು ಸಾಹಿತ್ಯ ಪರಿಷತ್ತು ಅಧ್ಯಕ್ಷೆ ಅಶ್ವಿನಿ ಕೋಡಿಬೈಲು ಅಭಿನಂದನ ಮಾತುಗಳನ್ನಾಡಿ, ಸಾಧನೆಯ ಮೂಲಕ ವ್ಯಕ್ತಿ ಅಭಿನಂದನೆಗೆ ಪಾತ್ರವಾಗುವುದು ಮಹತ್ವದ್ದು. ಆ ಸಾಧನೆ ಉಳಿದವರಿಗೆ ಪ್ರೇರಣೆ, ಸ್ಪೂರ್ತಿ ನೀಡುವಂತಹದು. ಹಾಗಾಗಿ ಸಾಧಕರನ್ನು ಗುರುತಿಸುವ ನೇಸರ ವಾರ್ಷಿಕ ಪ್ರಶಸ್ತಿ ಪ್ರಧಾನ ಅತ್ಯುತ್ತಮ ಹೆಜ್ಜೆ. ಅರ್ಹರಿಗೆ ಅ ಪ್ರಶಸ್ತಿ ಸಿಕ್ಕಾಗ ಅದರ ಮೌಲ್ಯ ಉಳಿದುಕೊಳ್ಳಲು ಸಾದ್ಯ ಎನ್ನುವುದಕ್ಕೆ ಇಂದಿನ ಪ್ರಶಸ್ತಿ ಪ್ರಧಾನ, ಸಾಧಕರ ಸಮ್ಮಾನ ಕಾರ್ಯ ಉದಾಹರಣೆ ಎಂದ ಅವರು ಮೂವರು ಸಾಧಕರ ಜೀವನ ಸಾಧನೆಗಳ ಬಗ್ಗೆ ವಿವರಿಸಿದರು.

ವೈದ್ಯಡಾ.ರಾಮಕಿಶೋರ್ ಕಾನಾವು ಮಾತನಾಡಿ, ಗಣೇಶೋತ್ಸವ ಧಾರ್ಮಿಕ ಮಹತ್ವದ ಜತೆಗೆ ನಾವೆಲ್ಲರೂ ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸಬೇಕು ಎನ್ನುವ ಸಂದೇಶ ಸಾರುತ್ತದೆ. ಮುಕ್ಕೂರು ಗಣೇಶೋತ್ಸವ ಅರ್ಥಪೂರ್ಣ ಆಚರಣೆ ಎಂದರು.
ಸಭಾಧ್ಯಕ್ಷತೆ ವಹಿಸಿದ್ದ ಪೆರುವಾಜೆ ಗ್ರಾ.ಪಂ.ಅಧ್ಯಕ್ಷ ಹಾಗೂ ಕುಂಡಡ್ಕ -ಮುಕ್ಕೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ಮಾತನಾಡಿ, ಮುಕ್ಕೂರು ಗಣೇಶೋತ್ಸವಕ್ಕೆ ಊರು ಪರವೂರಿನಲ್ಲಿ ತನ್ನದೇ ಆದ ಹಿರಿಮೆ ಇದೆ. ಧಾರ್ಮಿಕ ಕಾರ್ಯದ ಜತೆಗೆ ಸಮಾಜಮುಖಿ ಕಾರ್ಯಗಳು ಕೂಡ ನಡೆಯುವುದು ಇಲ್ಲಿನ ವಿಶೇಷ. ಈ ಚಿಂತನೆ ನಿತ್ಯ ನಿರಂತರವಾಗಿರಲಿದೆ ಎಂದರು.

ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕುಂಬ್ರ ದಯಾಕರ ಆಳ್ವ ಮಾತನಾಡಿ ಮುಕ್ಕೂರು ಗಣೇಶೋತ್ಸವ, ನೇಸರ ಯುವಕ ಮಂಡಲ ಸಂಘಟನೆಯ ಕಾರ್ಯ ಅತ್ಯುತ್ತಮವಾದದು. ಈ ಎರಡು ಸಂಘಟನೆಗಳು ಊರಿನಲ್ಲಿ ಸಮಾಜಮುಖಿ ಚಿಂತನೆಯ ಮೂಲಕ ಜನರ ವಿಶ್ವಾಸ ಗಳಿಸಿದೆ. ಇಂದಿನ ಗಣೇಶೋತ್ಸವ ಅತ್ಯಂತ ವೈಭವದಿಂದ ನಡೆದಿರುವದು ಸಂಘಟನ ಸಾಮರ್ಥ್ಯಕ್ಕೆ ಉದಾಹರಣೆ ಎಂದರು.
ಕುಂಡಡ್ಕ-ಮುಕ್ಕೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮಾಜಿ ಅಧ್ಯಕ್ಷ ಪ್ರಸಾದ್ ನಾಯ್ಕ ಕುಂಡಡ್ಕ ಮಾತನಾಡಿ, ಕಾರ್ಯಕ್ರಮ ಆಯೋಜನೆಯ ಹಿಂದೆ ಆರ್ಥಿಕ ಅಗತ್ಯತೆ ಮಾತ್ರವಲ್ಲದೆ ಸಂಘಟಕರ ಹಲವು ದಿನದ ಶ್ರಮ ಇರುತ್ತದೆ ಎನ್ನುವುದು ಪ್ರತಿಯೋರ್ವರು ಅರ್ಥ ಮಾಡಿಕೊಳ್ಳಬೇಕು. ಮುಕ್ಕೂರು ಗಣೇಶೋತ್ಸವದ ಯಶಸ್ಸಿನ ಹಿಂದೆ ಸಂಘಟಿತ ಪ್ರಯತ್ನ ಇದೆ ಎಂದರು.
ಬೆಳಗ್ಗೆ ಸುಧೀರ್ ಕೊಂಡೆಪ್ಪಾಡಿ ದೀಪ ಬೆಳಗಿಸಿದರು. ವೇದಿಕೆಯಲ್ಲಿ ಚಂದ್ರಹಾಸ ರೈ ಮುಕ್ಕೂರು, ಉದ್ಯಮಿ ಸಂತೋಷ್ ಕುಮಾರ್ ಅಲೆಕ್ಕಾಡಿ, ಪ್ರಗತಿಪರ ಕೃಷಿಕ ಸಂಜೀವ ಗೌಡ ಬೈಲಂಗಡಿ, ಮುಕ್ಕೂರು ಜ್ಯೋತಿ ಯುವಕ ಮಂಡಲ ಅಧ್ಯಕ್ಷ ದಿನೇಶ್ ಕಂರ್ಬುತ್ತೋಡಿ, ಮುಕ್ಕೂರು-ಕುಂಡಡ್ಕ ನೇಸರ ಯುವಕ ಮಂಡಲದ ಅಧ್ಯಕ್ಷ ರಮೇಶ್ ಕಾನಾವು, ಗಣೇಶೋತ್ಸವ ಸಮಿತಿ ಅಧ್ಯಕ್ಷ ರವೀಂದ್ರ ಅನವುಗುಂಡಿ ಅಧ್ಯಕ್ಷತೆ ವಹಿಸಲಿದ್ದಾರೆ. ಗ್ರಾ.ಪಂ.ಸದಸ್ಯರಾದ ಗುಲಾಬಿ ಬೊಮ್ಮೆಮ್ಮಾರು, ಚಂದ್ರಾವತಿ ಇಟ್ರಾಡಿ, ಯಶವಂತ ಜಾಲು, ಜಯಂತ ಕುಂಡಡ್ಕ ಮೊದಲಾದವರು ಉಪಸ್ಥಿತರಿದ್ದರು. ದೀಕ್ಷಾ ನೀರ್ಕಜೆ ನಿರೂಪಿಸಿದರು .

ಪ್ರಶಸ್ತಿ ಪ್ರಧಾನ ಹಾಗೂ ಸಮ್ಮಾನ
ಸಮಾಜ ಸೇವಾ ವಿಭಾಗದಲ್ಲಿ ರಕ್ಷಿತ್ ಕುಮಾರ್ ಪೆರುವಾಜೆ ಅವರಿಗೆ ನೇಸರ ವಾರ್ಷಿಕ ಪ್ರಶಸ್ತಿ-2025 ಪ್ರಧಾನ ಮಾಡಲಾಯಿತು. ನಿವೃತ್ತ ಶಿಕ್ಷಕಿ ಲಲಿತಾ ಕುಮಾರಿ ಮನವಳಿಕೆ, ಬೆಳ್ಳಾರೆ ಕೃಷಿ ಪತ್ತಿನ ಪ್ರಾಥಮಿಕ ಸಹಕಾರ ಸಂಘದ ಮಾಜಿ ಸಿಇಓ ವಿಜಯ ರೈ ನೆಲ್ಯಾಜೆ ಅವರನ್ನು ಸಮ್ಮಾನಿಸಲಾಯಿತು. ಸಮ್ಮಾನ ಸ್ವೀಕರಿಸಿದ ಮೂವರು ಕೃತಜ್ಞತೆ ಸಮರ್ಪಿಸಿದರು.

ಪ್ರತಿಭಾ ಪುರಸ್ಕಾರ
ಎಸೆಸೆಲ್ಸಿ, ಪಿಯುಸಿಯಲ್ಲಿ ಶೇ.90 ಕ್ಕಿಂತ ಅಧಿಕ ಅಂಕ ಸಾಧಕರಾದ ಸೃಜನ್ ಕೊಂಡೆಪ್ಪಾಡಿ, ವೈಷ್ಣವಿ ಮೇಲಿನ ಮುಕ್ಕೂರು, ಸಾನ್ವಿ ಜೆ ಕಾನಾವುಜಾಲು, ಜಸ್ಮಿತಾ ಅಡ್ಯತಕಂಡ ಹಾಗೂ ಮುಕ್ಕೂರು ಶಾಲೆಯಲ್ಲಿ ಶಿಕ್ಷಣ ಪಡೆದು ಈ ಬಾರಿ ಎಸೆಸೆಲ್ಸಿ, ದ್ವಿತೀಯ ಪಿಯುಸಿಯಲ್ಲಿ ಗರಿಷ್ಟ ಅಂಕ ಪಡೆದ ಆದ್ಯ ರೈ ಕೊಂಡೆಪ್ಪಾಡಿ, ಸಿಂಚನ್ ದೇವಿಮೂಲೆ ಅವರಿಗೆ ಪ್ರತಿಭಾ ಪುರಸ್ಕಾರ ಪ್ರಧಾನಿಸಲಾಯಿತು.
ಆಕರ್ಷಕ ಮಂಟಪ
ಈ ಬಾರಿ ಗಣೇಶನ ಭಾವಚಿತ್ರವನ್ನು ಇರಿಸಲು ಆಕರ್ಷಕ ಮಂಟಪದ ವ್ಯವಸ್ಥೆ ಮಾಡಲಾಗಿತ್ತು. ಹೂವಿನ ಅಲಂಕಾರ ಅತ್ಯಾಕರ್ಷಕದಿಂದ ಕೂಡಿ ಗಮನ ಸೆಳೆಯಿತು.
ಕುಣಿತ ಭಜನೆ
ಶ್ರೀ ಉಳ್ಳಾಕುಲು ಕುಣಿತ ಭಜನ ತಂಡ ಪಯ್ಯಂದೂರು ಹಾಗೂ ಪೆರುವಾಜೆ ಶ್ರೀ ಜಲದುರ್ಗಾದೇವಿ ಕುಣಿತ ಭಜನ ತಂಡದಿಂದ ಒಂದು ಗಂಟೆಗಳ ಕುಣಿತ ಭಜನೆ ನಡೆಯಿತು.
ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ ಹಾಗೂ ಕ್ರೀಡಾಕೂಟ
ಬೆಳಗ್ಗೆ 9 ರಿಂದ 11 ಗಂಟೆ ತನಕ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ ನಡೆಯಿತು. ಕ್ರೀಡಾಕೂಟದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳು, ಪುರುಷರ ವಿಭಾಗದಲ್ಲಿ ವಾಲಿಬಾಲ್, ಹಗ್ಗಜಗ್ಗಾಟ, ಮಹಿಳಾ ವಿಭಾಗದಲ್ಲಿ ತ್ರೋಬಾಲ್, ಹಗ್ಗಜಗ್ಗಾಟ, ನಿಧಿಶೋಧ, ಮಡಕೆ ಒಡೆಯುವ ಸ್ಪರ್ಧೆ ಹೀಗೆ ಹತ್ತಾರು ಸ್ಪರ್ಧೆಗಳು ನಡೆಯಿತು. ಕ್ರೀಡಾ ತೀರ್ಪುಗಾರರಾಗಿ ನರಿಮೊಗರು ಸಾಂದೀಪನಿ ವಿದ್ಯಾಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕ ಜಯಚಂದ್ರ, ಪುರುಷುತ್ತೋಮ ಕುಂಡಡ್ಕ, ರೂಪಾ, ಪ್ರಜ್ವಲ್ ರೈ ಚೆನ್ನಾವರ, ದಯಾನಂದ ಕಡಮಂತಕಜೆ ಮೊದಲಾದವರು ಸಹಕರಿಸಿದರು. ಕಾರ್ಯಕ್ರಮದಲ್ಲಿ
ಸುಮಾರು 600 ಅಧಿಕ ಮಂದಿ ಭಾಗವಹಿಸಿದರು. ಬೆಳಗ್ಗೆ ಉಪಹಾರ, ಮಧ್ಯಾಹ್ನ ಅನ್ನದಾನ ನೆರವೇರಿತು.
ಜ್ಞಾನದೀಪ ಮೊಂಟೆಸರಿ ಶಿಕ್ಷಕಿಯರ ತರಬೇತಿ ಸಂಸ್ಥೆಯ ವಿದ್ಯಾರ್ಥಿ ಶಿಕ್ಷಕಿಯರು ಸ್ವಯಂಸೇವಕರಾಗಿ ಸಹಕರಿಸಿದರು.
