ವಾರ್ಡ್ಸಭೆ ನಡೆಸಲು ಶಾಲೆಯಲ್ಲಿ ಸ್ಥಳಾವಕಾಶ ನಿರಾಕರಣೆ
ಗ್ರಾಮಸಭೆಯಲ್ಲಿ ಖಂಡನೆ, ಖಂಡನಾ ನಿರ್ಣಯಕ್ಕೆ ಆಗ್ರಹ
ಪುತ್ತೂರು:ವಾರ್ಡ್ ಸಭೆ ನಡೆಸಲು ಸ್ಥಳಾವಕಾಶ ನಿರಾಕರಿಸಿರುವ ಶಾಲೆ, ಬಿಇಓ ವಿರುದ್ಧ ಗ್ರಾಮ ಸಭೆಯಲ್ಲಿ ಸದಸ್ಯರು ಹಾಗೂ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ ಸ್ಥಳಾವಕಾಶ ನಿರಾಕರಿಸಿದರುವುದನ್ನು ಖಂಡಿಸಿ, ಖಂಡನಾ ನಿರ್ಣಯಕ್ಕೆ ಆಗ್ರಹಿಸಿರುವ ಘಟನೆ ಬನ್ನೂರು ಗ್ರಾಮ ಸಭೆಯಲ್ಲಿ ನಡೆದಿದೆ.
ಗ್ರಾಮಸಭೆಯು ಆ.25ರಂದು ಗ್ರಾ.ಪಂ ಸಭಾ ಭವನದಲ್ಲಿ ನಡೆಯಿತು. ಉದ್ಯೋಗ ಖಾತರಿ ಯೋಜನೆಯ ಸಹಾಯಕ ನಿರ್ದೇಶಕ ವಿಲ್ಫ್ರೆಡ್ ರೋಡ್ರಿಗಸ್ ಚರ್ಚಾ ನಿಯಂತಯ್ರಣಾಧಿಕಾರಿಯಾಗಿದ್ದರು. ಸಭೆಯಲ್ಲಿ ಶಿಕ್ಷಣ ಇಲಾಖೆಯಿಂದ ಮಾಹಿತಿ ನೀಡುತ್ತಿರುವ ವೇಳೆ ಸದಸ್ಯೆ ರಮಣಿ ಡಿ ಗಾಣಿಗ ಮಾತನಾಡಿ, ಪಂಚಾಯತ್‌ನ ವಾರ್ಡ್ ಸಭೆ ನಡೆಸಲು ಶಾಲೆಯಲ್ಲಿ ಸ್ಥಳಾವಕಾಶ ನೀಡದೇ ಪಂಚಾಯತ್‌ಗೆ ಮತ್ತು ಸದಸ್ಯರಿಗೆ ಅವಮಾನವಾಗಿದೆ. ಹೀಗಾಗಿ ಸಭೆಗೆ ನೀವು ಮಾಹಿತಿ ನೀಡುವುದು ಬೇಡ. ಕ್ಷೇತ್ರ ಶಿಕ್ಷಣಾಧಿಕಾರಿಗಳೇ ಬರಬೇಕು. ಅವರು ಗ್ರಾಮ ಸಭೆಗೆ ಸರಿಯಾದ ಮಾಹಿತಿ ನೀಡಬೇಕು ಎಂದು ತಿಳಿಸಿದರು. ಸಭೆಗೆ ಬಿಇಓ ಅವರನ್ನು ಕರೆಸುವಂತೆ ಗ್ರಾಮಸ್ಥರು ಹಾಗೂ ಸದಸ್ಯರು ಆಗ್ರಹಿಸಿದರು. ಸಭೆ ನಡೆಸಲು ಶಾಲಾ ಮುಖ್ಯ ಶಿಕ್ಷಕಿಯವರು ಅನುಮತಿ ನೀಡದೇ ಗ್ರಾಮಸ್ಥರು, ಜನಪ್ರತಿನಿಧಿಗಳಿಗೆ ಅವಮಾನ ಮಾಡಿದ್ದಾರೆ. ಮುಖ್ಯ ಶಿಕ್ಷಕರಲ್ಲಿ ವಿಚಾರಿಸಿದರೆ ಬಿಇಓರವರು ಬಿಡುವುದಿಲ್ಲ ಎನ್ನುತ್ತಾರೆ. ಶಾಲೆಗೆ ಪಂಚಾಯತ್ ಎಲ್ಲಾ ರೀತಿಯ ಸಹಕಾರ ನೀಡಲಾಗುತ್ತಿದೆ. ಆದರೂ ಸಭೆ ನಡೆಸಲು ಅವಕಾಶ ನೀಡಿಲ್ಲ. ಎಲ್ಲಾ ಕಡೆ ಗ್ರಾಮ ಸಭೆ, ವಾರ್ಡ್ ಸಭೆಗಳು ಶಾಲೆಗಳಲ್ಲಿ ನಡೆದಿದ್ದರೂ ಆದರೆ ಇಲ್ಲಿಗೆ ಯಾಕೆ ಯಾವ ನಿಯಮ ಎಂದು ಗ್ರಾಮಸ್ಥ ಸುದರ್ಶನ ಪ್ರಶ್ನಿಸಿದರು.
ಸದಸ್ಯ ಗಣೇಶ್ ಹೆಗ್ಡೆ ಮಾತನಾಡಿ, ವಾರ್ಡ್ ಸಭೆಗೆ ಅವಕಾಶ ನೀಡದ ಮುಖ್ಯ ಶಿಕ್ಷಕಿಯವರು ಮಧ್ಯಾಹ್ನ ಬಳಿಕ ಶಾಲೆ ಬಂದಿದ್ದಾರೆ ಎಂದು ಆರೋಪಿಸಿದರು. ಶಿಕ್ಷಣ ಇಲಾಖೆಯ ಸಿಆರ್‌ಪಿ ಮಹಮ್ಮದ್ ಅಶ್ರಫ್ ಮಾತನಾಡಿ, ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ತೊಂದರೆ ಆಗದಂತೆ ಯಾವುದೇ ಖಾಸಗಿ ಕಾರ್ಯಕ್ರಮ ನಡೆಸಲು ಅವಕಾಶ ಇಲ್ಲಿ ಎಂದು ಕಳೆದ ಜುಲೈನಲ್ಲಿ ಆದೇಶವಾಗಿತ್ತು. ಪಡ್ನೂರು ಶಾಲೆಯಲ್ಲಿ ನಡೆಯಲಿರುವ ವಾರ್ಡ್ ಸಭೆಯ ಬಗ್ಗೆ 20ರಂದು ಸಂಜೆ ಗ್ರಾಮ ಸಭೆಯ ಬ್ಯಾನರ್ ಹಾಗೂ ಕರಪತ್ರವನ್ನು ಶಾಲೆಯ ಹೆಸರು ಉಲ್ಲೇಖಿಸಿ ಶಾಲಾ ಸಮಯದಲ್ಲಿ ವಾರ್ಡ್ ಸಭೆ ನಡೆಸಲು ಅವಕಾಶ ನೀಡಿದವರು ಯಾರು ಎಂದು ವಾಟ್ಸಪ್ ಗ್ರೂಪ್‌ನಲ್ಲಿ ಸಂದೇಶ ಹರಿದಾಡಿತ್ತು. ಇದು ಮೇಲಾಧಿಕಾರಿಗಳಿಗೂ ತಲುಪಿತ್ತು. ಇದೇ ಮಾಹಿತಿಯು ರಾತ್ರಿ ವೇಳೆಗೆ ಶಾಲಾ ಮುಖ್ಯ ಶಿಕ್ಷಕರಿಗೂ ಬಂದಿದ್ದೂ ಅವರು ಗಲಿಬಿಲಿಗೊಂಡಿದ್ದರು. ಅಧಿಕಾರಿಗಳಿಗೆ ಮಾಹಿತಿ ತಿಳಿಸಿದ್ದರು. ಮುಖ್ಯಶಿಕ್ಷಕರು ಅವರಿಗೆ ಸಮಸ್ಯೆ ಆಗದಂತೆ ವಾರ್ಡ್ ಸಭೆಗೆ ಅವಕಾಶ ನಿರಾಕರಿಸಿದ್ದಾರೆ. ಹೊರತು ಗ್ರಾಮ ಪಂಚಾಯತ್, ಸದಸ್ಯರನ್ನು ಅವಮಾನಿಸುವ ಉದ್ದೇಶವಲ್ಲ. ಉದ್ದೇಶಪೂರ್ವಕವಾಗಿ ಅವಕಾಶ ನಿರಾಕರಿಸಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಈ ಸಂದೇಶ ಕಳುಹಿಸಿದವರ ವಿರುದ್ದ ಇಲಾಖೆಯಿಂದ ತನಿಖೆಯಾಗುತ್ತಿದೆ. ಪತ್ತೆ ಹಚ್ಚುವ ಕೆಲಸವಾಗುತ್ತಿದೆ ಎಂದು ತಿಳಿಸಿದರು.
ವಾರ್ಡ್ ಸಭೆಯ ದಿನ ಬಿಇಓ ಅವರು ಕರೆ ಸ್ವೀಕರಿಸಿಲ್ಲ. ನಂತರವಾದರೂ ಮಾಹಿತಿ ನೀಡಬೇಕಲ್ಲ ಬಿಇಓ ಅದನ್ನು ಮಾಡಿಲ್ಲ ಎಂದು ವಿಶ್ವಪ್ರಸಾದ್ ಆರೋಪಿಸಿದರು. ಅನಾಮಿಕ ವಾಟ್ಸಪ್ ಸಂದೇಶಕ್ಕೆ ಅಷ್ಟೊಂದು ಎತ್ತಿ ಹಿಡಿಯುವ ಆವಶ್ಯಕತೆ ಏನಿತ್ತು. ಶಾಲೆಗೆ ಎಲ್ಲಾ ರೀತಿಯ ಸಹಕಾರ ನೀಡುವ ಪಂಚಾಯತ್ ಅಧಿಕಾರಿಗಳು, ಸದಸ್ಯರು, ಗ್ರಾಮಸ್ಥರಿಗೆ ಗೌರವ ಇಲ್ಲವೇ? ಈ ಘಟನೆಗೆ ಬಿಇಓ ಅವರೇ ಕಾರಣ. ಇದರ ಬಗ್ಗೆ ಸ್ಪಷ್ಟಣೆ ಬೇಕು. ಈ ಹಿಂದೆ ಹಲವು ಭಾರಿ ವಾರ್ಡ್ ಸಭೆ, ಗ್ರಾಮಸಭೆಗಳು ನಡೆದಿದ್ದು ಯಾವುದೇ ಗಲಾಟೆ ನಡೆದಿಲ್ಲ. ಶಾಲೆಗೆ ತೊಂದರೆ ಆಗಿಲ್ಲ. ವಾರ್ಡ್ ಸಭೆಗೆ ಅವಕಾಶ ನಿಕಾಕರಿಸಿರುವುದಕ್ಕೆ ಖಂಡನಾ ನಿರ್ಣಯ ಕೈಗೊಳ್ಳುವಂತೆ ಆಗ್ರಹಿಸಿದ ಅವರು ಸಂದೇಶ ಹರಡಿದವರನ್ನು ಪತ್ತೆ ಮಾಡಿ ಅವರ ವಿರುದ್ದ ಸೂಕ್ತ ಕ್ರಮಕೈಗೊಳ್ಳುವಂತೆ ಆಗ್ರಹಿಸಿದರು. ಗ್ರಾಮಸ್ಥ ನವೀನ್ ಮಾತನಾಡಿ, ಸಭೆಗೆ ಅವಕಾಶ ನಿರಾಕರಿಸಿದಾಗ ಸದಸ್ಯರೋರ್ವರು ಬಿಇಓರವರಿಗೆ ಕರೆ ಮಾಡಿ ಸಮಸ್ಯೆ ಬಗ್ಗೆ ತಿಳಿಸಿದಾಗ ಸಭೆ ನಡೆಸುವಂತೆ ತಿಳಿಸಿದ್ದರು. ಇದರ ಬಗ್ಗೆ ಮುಖ್ಯ ಶಿಕ್ಷಕಿಗೆ ಸೂಚನೆ ನೀಡುವಂತೆ ಬಿಇಓರವರಲ್ಲಿ ತಿಳಿಸಿದ ಬಳಿಕ ಅವರು ಕರೆ ಸ್ವೀಕರಿಸಿಲ್ಲ. ಹೀಗಾಗಿ ಬಿಇಓರವರದ್ದು ಬೇಜಾಬ್ದಾರಿಯಿದೆ. ಸದಸ್ಯ ಶ್ರೀನಿವಾಸ ಪೆರ‍್ವೋಡಿ ಮಾತನಾಡಿ, ಸೈಬರ್ ಕ್ರೈಂ ಇದ್ದು ಸಂದೇಶ ಕಳುಹಿಸಿದವರನ್ನು ಕೂಡಲೇ ಪತ್ತೆ ಮಾಡಬೇಕು. ಇಲಾಖೆಯ ಆದೇಶವನ್ನು ಸರಿಯಾಗಿ ಪರಿಶೀಲಿಸದೇ ಇದ್ದು ನಿರ್ಧಾರ ಮಾಡಿರುವುದರಿಂದ ನಮಗೆ ಅವಮಾನವಾಗಿದೆ. ನಮ್ಮಲ್ಲಿ ಗ್ರಾಮಸ್ಥರು ಪ್ರಶ್ನಿಸುತ್ತಿದ್ದು ಗ್ರಾಮ ಸಭೆಯಲ್ಲಿ ಖಂಡಿಸುತ್ತೇವೆ ಎಂದರು. ಗ್ರಾಮಸ್ಥರು ಇಲ್ಲದೇ ಸರಕಾರಿ ಶಾಲೆ ನಡೆಯಲು ಸಾಧ್ಯವೇ. ಪಡ್ನೂರಿನಲ್ಲಿ ಹಲವು ನೋಂದಾಯಿತ ಸಂಘ ಸಂಸ್ಥೆಗಳಿದ್ದು ಇವುಗಳಿಂದ ಶಾಲೆಗೆ ಸಾಕಷ್ಟು ಕೊಡುಗೆ ನೀಡಿದ್ದೇವೆ. ಗ್ರಾಮ ಸಭೆಗೆ ಅವಕಾಶ ನೀಡದೇ ಇದ್ದರೆ ಶಾಲೆಗೆ ನಾವು ಸಹಕಾರ ನೀಡಬೇಕಾ ಪ್ರಶ್ನಿಸಿದರು. ವಾರ್ಡ್ ಸಭೆಗೆ ಸ್ಥಳಾವಕಾಶ ನಿರಾಕರಿಸಿದ ವಿರುದ್ಧ ಖಂಡನಾ ನಿರ್ಣಯಕ್ಕೆ ಆಗ್ರಹಿಸಿದ ಗ್ರಾಮಸ್ಥರು ಹಾಗೂ ಸದಸ್ಯರು ಕ್ಷೇತ್ರ ಶಿಕ್ಷಣಾಧಿಕಾರಿಗಳ ವಿರುದ್ದ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದು ಈ ಬಗ್ಗೆ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಬರೆಯುವುದಾಗಿ ನಿರ್ಣಯಕೈಗೊಳ್ಳಲಾಗಿದೆ.
ಬಾಗಿಲು ತೆರೆಯದ ಬನ್ನೂರು ಕ್ಷೇಮ ಕೇಂದ್ರ:
ಬನ್ನೂರು ಕ್ಷೇಮ ಕೇಂದ್ರ ಇದ್ದರೂ ಅದು ಬಾಗಿಲು ತೆರೆಯುವುದಿಲ್ಲ. ಅಲ್ಲಿ ಖಾಯಂ ಕಿರಿಯ ಆರೋಗ್ಯ ಸಹಾಯಕಿ ಹಾಗೂ ಸಮುದಾಯ ಆರೋಗ್ಯಾಧಿಕಾರಿಯೂ ಇಲ್ಲ. ನಿಯೋಜನೆಯಲ್ಲಿರುವ ಕಿರಿಯ ಆರೋಗ್ಯ ಸಹಾಯಕಿ ಬರುವುದಿಲ್ಲ. ಅವರು ಯಾವಾಗ ಬರುತ್ತಾರೆ ಎಂದು ಗೊತ್ತಾಗುವುದಿಲ್ಲ. ಎಲ್ಲಾ ಗ್ರಾಮಸ್ಥರಿರುವ ವಾಟ್ಸಪ್ ಗ್ರೂಪ್‌ಗೆ ಅವರನ್ನು ಸೇರಿಸಿ ಮಾಹಿತಿ ನೀಡುವಂತೆ ತಿಳಿಸಿದ್ದರೂ ಮಾಹಿತಿ ನೀಡುತ್ತಿಲ್ಲ. ನಿಯೋಜನೆಯಲ್ಲಿರುವ ಕಿರಿಯ ಆರೋಗ್ಯ ಸಹಾಯಕಿ ವಾರದಲ್ಲಿ ಕನಿಷ್ಠ ಮೂರು ದಿನವಾದರೂ ಬನ್ನೂರಿನಲ್ಲಿರಬೇಕು. ಪಡ್ನೂರಿನಲ್ಲಿ ಎರಡೂ ಹುದ್ದೆಗಳು ಖಾಯಂ ನೆಲೆಯಲ್ಲಿದ್ದು ಒಬ್ಬರನ್ನು ಬನ್ನೂರಿಗೆ ನೇಮಿಸುವಂತೆ ಉಪಾಧ್ಯಕ್ಷ ಆಗ್ರಹಿಸಿದರು. ಬನ್ನೂರಿನಲ್ಲಿ ಕಿರಿಯ ಆರೋಗ್ಯ ಸಹಾಯಕಿ, ಸಮುದಾಯ ಆರೋಗ್ಯಾಧಿಕಾರಿಗಳಿಲ್ಲದೇ ಗ್ರಾಮಸ್ಥರಿಗೆ ಸಮಸ್ಯೆ ಉಂಟಾಗಿದೆ. ನಿಯೋಜನೆಯಲ್ಲಿರುವರು ಸರಿಯಾಗಿ ಬರಬೇಕು. ಅವರು ಕರ್ತವ್ಯ ನಿರ್ವಹಿಸುವ ದಿನಗಳ ಬಗ್ಗೆ ಮಾಹಿತಿ ನೀಡಬೇಕು. ಕಿರಿಯ ಆರೋಗ್ಯ ಸಹಾಯಕಿ ವಾರದಲ್ಲಿ 7 ದಿನವೂ ಇಲ್ಲಿ ಕರ್ತವ್ಯ ನಿರ್ವಹಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.
ಸಂಘ ಸಂಸ್ಥೆಗಳ ಕಾರ್ಯಕ್ರಮಗಳಿಗೆ ಅವಕಾಶ ನೀಡುವಂತೆ ಮನವಿ:
ಸಂಘ-ಸಂಸ್ಥೆಗಳ ಮೂಲಕ ಸ್ಥಳೀಯವಾದ ಸರಕಾರಿ ಶಾಲೆಗಳಿಗೆ ಹಲವು ರೀತಿಯಲ್ಲಿ ಕೊಡುಗೆಗಳು ನೀಡುತ್ತಿರುವುದಲ್ಲದೆ ಶಾಲೆಗಳಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಸಹಕಾರ ನೀಡುತ್ತಿದ್ದು ಅಂತಹ ಸಂಘ ಸಂಸ್ಥೆಗಳಿಗೆ ಕಾರ್ಯಕ್ರಮ ನಡೆಸಲು ಶಾಲಾ ಆವರಣದಲ್ಲಿ ಅವಕಾಶ ನೀಡುವಂತೆ ಸರಕಾರಕ್ಕೆ ಮನವಿ ಮಾಡುವುದಾಗಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.
ತಡೆಗೋಡೆಗೆ ಎಂ.ಪಿ, ಎಂಎಲ್‌ಎಗೆ ಮನವಿ:
ಕಳೆದ ವರ್ಷದ ಮಳೆಗಾಲದಲ್ಲಿ ಪಡ್ನೂರು ಬೇರಿಕೆಯಲ್ಲಿ ಗುಡ್ಡ ಕುಸಿದು ಹೋಗಿದ್ದು ಅದರ ಮಣ್ಣ ತೆರವುಗೊಳಿಸಿಲ್ಲ. ಅಲ್ಲಿ ಮತ್ತೆ ಧರೆ ಕುಸಿಯುವ ಭೀತಿಯಲ್ಲಿದ್ದು ಸೂಕ್ತ ಕ್ರಮಕೈಗೊಳ್ಳುವಂತೆ ಗ್ರಾಮಸ್ಥ ಸಂಕಪ್ಪ ಗೌಡ ಆಗ್ರಹಿಸಿದರು. ಕುಸಿತಗೊಂಡಿರುವ ಪ್ರದೇಶವನ್ನು ಎನ್‌ಡಿಆರ್‌ಎಫ್ ತಮಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲಿ ಮಣ್ಣು ಮೃದುವಾಗಿದ್ದು ತಡೆಗೋಡೆ ನಿರ್ಮಿಸಿದರೂ ನಿಲ್ಲಲು ಸಾಧ್ಯವಿಲ್ಲ. ಕುಸಿದ ಮಣ್ಣ ತೆರವುಗೊಳಿಸಿದರೆ ಮತ್ತೆ ಕುಸಿಯುವ ಸಾಧ್ಯತೆಗಳಿವೆ ಎಂದು ವರದಿ ನೀಡಿದ್ದಾರೆ. ತಡೆಗೋಡೆ ನಿರ್ಮಿಸುವುದಾದರೂ ದೊಡ್ಡ ಮಟ್ಟಡ ಅನುದಾದ ಅಗತ್ಯವಿದೆ ಎಂದು ಪಿಡಿಓ ತಿಳಿಸಿದರು. ಇದರ ಬಗ್ಗೆ ಸಂಸದರು, ಶಾಸಕರಿಗೆ ಮನವಿ ಮಾಡುವುದಾಗಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಹಳದಿ ರೋಗ, ಕೊಳೆ ರೋಗಕ್ಕೆ ಪರಿಹಾರ, ದೋಟಿಗೆ ಸಬ್ಸಿಡಿ ನೀಡಿ:
ಈ ವರ್ಷದ ಅಧಿಕ ಮಳೆಯಿಂದಾಗಿ ಕೊಳೆ ರೋಗ ಅಧಿಕವಾಗಿ ಬಾಧಿಸಿ ಅಡಿಕೆ ಕೃಷಿಕರು ಬಹಳಷ್ಟು ನಷ್ಟ ಅನುಭವಿಸಿದ್ದಾರೆ. ಹೀಗಾಗಿ ಪರಿಹಾರ ನೀಡುವಂತೆ ಗ್ರಾಮಸ್ಥ ಸಂಕಪ್ಪ ಗೌಡ ಆಗ್ರಹಿಸಿದರು. ಸದಸ್ಯ ಶ್ರೀನಿವಾಸ ಪೆರ‍್ವೋಡಿ ಮಾತನಾಡಿ, ಗ್ರಾಮದಲ್ಲಿ 10 ಎಕರೆಗೂ ಅಧಿಕ ಅಡಿಕೆ ತೋಟಗಳು ಹಳದಿ ರೋಗಕ್ಕೆ ಬಲಿಯಾಗಿದೆ. ಇದಕ್ಕೂ ಪರಿಹಾರ ನೀಡಬೇಕು ಹಾಗೂ ಸೂಕ್ತ ಔಷದಿ ನೀಡುವಂತೆ ತಿಳಿಸಿದರು. ಔಷಧಿ ಸಂಶೋಧನಾ ಹಂತದಲ್ಲಿರುವುದಾಗಿ ತೊಟಗಾರಿಕಾ ಇಲಾಖಾಧಿಕಾರಿಯವರು ತಿಳಿಸಿದರು. ಅಡಿಕೆ ಕೃಷಿಕರಿಗೆ ಫೈಬರ್ ದೋಟಿ ಆವಶ್ಯಕತೆಯಿದ್ದು ಈ ಹಿಂದೆ ನೀಡುತ್ತಿದ್ದಂತೆ ಸಬ್ಸಿಡಿ ಮತ್ತೆ ಮುಂದುವರಿಸಬೇಕು ಎಂದು ಸದಸ್ಯ ಶ್ರೀನಿವಾಸ ಪೆರ‍್ವೋಡಿ ಆಗ್ರಹಿಸಿದರು.
ರಸ್ತೆ ಶೀಘ್ರ ಹಸ್ತಾಂತರಿಸಿ:
ಪಂಚಾಯತ್ ವ್ಯಾಪ್ತಿಯಲ್ಲಿ ಬಹಳಷ್ಟು ರಸ್ತೆ ಕಾಮಗಾರಿಗಳು ನಡೆದಿದ್ದು ಪಂಚಾಯತ್‌ಗೆ ಹಸ್ತಾಂತರವಾಗಿಲ್ಲ. ಇದರಿಂದ ಸಮಸ್ಯೆ ಉಂಟಾಗಿದೆ. ಅಭಿವೃದ್ಧಿ ಕಷ್ಟ. ಹೀಗಾಗಿ ರಸ್ತೆಗಳನ್ನು ಶೀಘ್ರವಾಗಿ ಹಸ್ತಾಂತರಿಸಬೇಕು ಎಂದು ಮಾಜಿ ಸದಸ್ಯ ರತ್ನಾಕರ ಪ್ರಭು ಆಗ್ರಹಿಸಿದರು.
ವೀರಮಾರುತಿ ಸೇವಾ ಟ್ರಸ್ಟ್‌ನಿಂದ ಸಿಸಿ ಕ್ಯಾಮರಾ ಕೊಡುಗೆ:
ಗ್ರಾಮಸ್ಥ ಪ್ರಕಾಶ್ ಮಾತನಾಡಿ, ಅಪರಾಧ ಪ್ರಕರಣಗಳನ್ನು ಸುಲಭವಾಗಿ ಪತ್ತೆ ಹಚ್ಚಲು ಸಹಕಾರಿಯಾಗುವಂತೆ ದಾರಂದಕುಕ್ಕು ಎಂಬಲ್ಲಿ ವೀರ ಮಾರುತಿ ಸೇವಾ ಟ್ರಸ್ಟ್‌ನಿಂದ ಕೊಡುಗೆಯಾಗಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಮುಂದೆ ಇದರ ನಿರ್ವಹಣೆಯನ್ನು ಪಂಚಾಯತ್ ಮುಖಾಂತರ ಮಾಡುವಂತೆ ವಿನಂತಿಸಿದರು.
ಒಂದೇ ಮನೆಗೆ ಎಪಿಎಲ್, ಬಿಪಿಎಲ್ ಕಾರ್ಡ್
ಅಪ್ಪ ಮಕ್ಕಳು ಒಂದೇ ಮನೆಯಲ್ಲಿ ವಾಸ್ತವ್ಯವಿದ್ದು ಮಕ್ಕಳು ಉದ್ಯೋಗದಲ್ಲಿದ್ದರೂ ಆ ಮನೆಯಲ್ಲಿ ಅಪ್ಪ-ಅಮ್ಮನ ಹೆಸರಿನಲ್ಲಿ ಬಿಪಿಎಲ್ ಕಾರ್ಡ್ ಹಾಗೂ ಮಕ್ಕಳ ಹೆಸರಿನಲ್ಲಿ ಎಪಿಎಲ್ ಕಾರ್ಡ್‌ಗಳಿವೆ. ಆ ಮನೆಯವರಿಗೆ ಬಿಪಿಎಲ್ ಕಾರ್ಡ್‌ನಲ್ಲಿ ಸರಕಾರದ ಎಲ್ಲಾ ಸವಲತ್ತುಗಳನ್ನು ಪಡೆದುಕೊಂಡು ಉದ್ಯೋಗದಲ್ಲಿರುವ ಮಕ್ಕಳು ಸಂಬಳ ಪಡೆದುಕೊಂಡು ಆರಾಮವಾಗಿ ಜೀವನ ನಡೆಸುವರಿದ್ದಾರೆ. ಇಂತಹವರನ್ನು ಪತ್ತೆ ಮಾಡುವಂತೆ ಗ್ರಾಮಸ್ಥ ಸುದರ್ಶನ್ ಆರೋಪಿಸಿದರು.
ಬೀರಿಗ ಅಂಗನವಾಡಿ ಕೇಂದ್ರಕ್ಕೆ ಸಹಾಯಕಿ ಹುದ್ದೆ ಭರ್ತಿ ಮಾಡಬೇಕು. ತಾಂತ್ರಿಕ ತೊಂದರೆಗಳಿರುವ ಎಪ್‌ಆರ್‌ಎಸ್‌ನ್ನು ರದ್ದು ಮಾಡಬೇಕು, ಅಂಗನವಾಡಿ ಕಾರ್ಯಕರ್ತೆಯರನ್ನು ಚುನಾವಣಾ ಕೆಲಸಕ್ಕೆ ಬಳಸಬಾರದು, ಬೀದಿ ದೀಪಗಳನ್ನು ಶೀಘ್ರವಾಗಿ ದುರಸ್ಥಿಗೊಳಿಸಬೇಕು. ಮನೆ ತೆರಿಗೆ, ನೀರಿನ ಶುಲ್ಕ ಸಕಾಲಕ್ಕೆ ಸಂಗ್ರಹವಾಗಬೇಕು.ವಿದ್ಯುತ್ ತಂತಿ ಮೇಲಿರುವ ಅಪಾಯಕಾರಿ ಮರಗಳನ್ನು ತೆರವುಗೊಳಿಸಬೇಕು. ಪಡ್ನೂರಿನಲ್ಲಿ ಪಂಚಾಯತ್‌ನ ಕಟ್ಟಡದಲ್ಲಿ ಅಂಗಡಿಯನ್ನು ವಿಸ್ತರಿಸಿರುವುದನ್ನು ತೆರವುಗೊಳಿಸಬೇಕು. ಬೀರಿಗ-ಬೀರ‍್ನಹಿತ್ತಿಲು ಸಂಪರ್ಕ ರಸ್ತೆ ಅಭಿವೃದ್ಧಿ ಪಡಿಸಬೇಕು ಸೇರಿದಂತೆ ಹಲವು ಬೇಡಿಕೆಗಳನ್ನು ಗ್ರಾಮಸ್ಥರು ಸಲ್ಲಿಸಿದರು.
ಹೊಲಿಗೆ ಯಂತ್ರ ವಿತರಣೆ:
ಜನಶಿಕ್ಷಣ ಸೇವ ಟ್ರಸ್ಟ್‌ನ ವತಿಯಿಂದ ಪಂಚಾಯತ್‌ನ ಇಬ್ಬರು ಫಲಾನುಭವಿಗಳಿಗೆ ಹೊಲಿಗೆ ಯಂತ್ರವನ್ನು ಜನಶಿಕ್ಷಣ ಸೇವಾ ಟ್ರಸ್ಟ್ ಶೀನ ಶೆಟ್ಟಿ ಹಾಗೂ ಕೃಷ್ಣರವರು ವಿತರಿಸಿದರು.
ಸನ್ಮಾನ:
ಎಸ್.ಎಸ್.ಎಲ್.ಸಿಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ವೈಭವ್ ಪೂಜಾರಿ, ಖುಷಿತ್, ರೋಷನ್, ಜೀವಿತಾ ಜಿ.ಎಸ್., ಪಿಯುಸಿಯಲ್ಲಿ ಅನನ್ಯ ಕೆ, ಯಸ್ಮಿಕಾ , ನಿವೃತ್ತರಾದ ಅಡುಗೆ ಸಹಾಯಕಿ ಕಮಲ, ಆರೋಗ್ಯ ಸುರಕ್ಷಾಧಿಕಾರಿ ಜಯಂತಿ, ಗ್ರಾಮ ಸಹಾಯಕ ರಾಬರ್ಟ್ ಲೋಬೋ, ಪಂಚಾಯತ್‌ನಿಂದ ವರ್ಗಾವಣೆಗೊಂಡ ಸಿಬ್ಬಂದಿಗಳಾದ ಪುಷ್ಪಶ್ರೀ ಡಿ., ಮಮತಾ ಅವರನ್ನು ಪಂಚಾಯತ್‌ನಿಂದ ಸನ್ಮಾನಿಸಲಾಯಿತು.
ಸದಸ್ಯರಾದ ಗೀತಾ, ಹರಿಣಾಕ್ಷಿ, ಸುಪ್ರಿತಾ ಪ್ರಭು, ತಿಮಪ್ಪ ಪೂಜಾರಿ, ರಾಘವೇಂದ್ರ ಗೌಡ, ವಿಮಲ ಹರೀಶ್, ಗಿರಿಧರ ಪಂಜಿಗುಡ್ಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪಿಡಿಓ ಚಿತ್ರಾವತಿ ಸ್ವಾಗತಿಸಿದರು. ಲೆಕ್ಕಸಹಾಯಕಿ ಜಯಂತಿ ವಂದಿಸಿದರು. ಭವ್ಯ ಸನ್ಮಾನಿತರ ಪರಿಚಯ ಮಾಡಿದರು. ಸಿಬ್ಬಂದಿಗಳು ಸಹಕರಿಸಿದರು.