ನಾಳೆಯಿಂದ ಆಸ್ತಿ ನೋಂದಣಿ ಶುಲ್ಕ ದುಪ್ಪಟ್ಟು -ಕಂದಾಯ ಇಲಾಖೆ ಆದೇಶ

0

ಪುತ್ತೂರು: ವಿದ್ಯುತ್‌, ನೀರು, ಹಾಲು,ಬಸ್ ಹಾಗೂ ಮೆಟ್ರೋ ಪ್ರಯಾಣ ದರ, ಮುದ್ರಾಂಕ ಶುಲ್ಕ ಸೇರಿ ವಿವಿಧ ದರ ಹೆಚ್ಚಳ ಬೆನ್ನಲ್ಲೇ ಇದೀಗ ಆಸ್ತಿಗಳ ನೋಂದಣಿ ಶುಲ್ಕವನ್ನೂ ದುಪ್ಪಟ್ಟು ಮಾಡಿ ಕಂದಾಯ ಇಲಾಖೆ ಆದೇಶ ಹೊರಡಿಸಿದ್ದು, ಆ.31ರಿಂದ ಅನ್ವಯವಾಗುವಂತೆ ನೋಂದಣಿ ಶುಲ್ಕ ಶೇ.1ರಿಂದ ಶೇ.2ಕ್ಕೆ ಹೆಚ್ಚಳ ಆಗಲಿದೆ.

ಸ್ಥಿರಾಸ್ತಿ ಶುದ್ಧ ಕ್ರಯ ಪತ್ರ, ಸ್ವಾಧೀನ ಭೋಗ್ಯ ಪತ್ರ, ಕ್ರಯ ಉದ್ದೇಶದ ಜಿಪಿಎ ಸೇರಿ ವಿವಿಧ ಆಸ್ತಿ ಖರೀದಿ ನೋಂದಣಿಗೆ ಈ ಶುಲ್ಕ ಅನ್ವಯವಾಗಲಿದೆ. ಈವರೆಗೆ ರಾಜ್ಯದಲ್ಲಿ ನಿವೇಶನ, ಭೂಮಿ, ಫ್ಲ್ಯಾಟ್, ಮನೆ ಸೇರಿ ಯಾವುದೇ ಸ್ಥಿರಾಸ್ತಿ ಖರೀದಿ ವೇಳೆ ಶೇ.1 ರಷ್ಟು ನೋಂದಣಿ ಶುಲ್ಕ ಹಾಗೂ ಶೇ.5.6 ರಷ್ಟು ಮುದ್ರಾಂಕ ಶುಲ್ಕ ಸೇರಿ ಒಟ್ಟು ಶೇ.6.6 ರಷ್ಟು ಶುಲ್ಕ ಭರಿಸಬೇಕಾಗಿತ್ತು. ಇದೀಗ ನೋಂದಣಿ ಶುಲ್ಕ ಶೇ.2 ರಷ್ಟಾಗಿರುವುದರಿಂದ ಆಸ್ತಿಯ ಮಾರುಕಟ್ಟೆ ಬೆಲೆಯ ಶೇ.7.6 ರಷ್ಟನ್ನು ನೋಂದಣಿ ಮತ್ತು ಮುದ್ರಾಂಕ ಶುಲ್ಕಕ್ಕೆ ಭರಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಲಿದೆ.

ಈ ಬಗ್ಗೆ ಕಂದಾಯ ಇಲಾಖೆ ಆದೇಶ ಹೊರಡಿಸಿದ್ದು, ನೋಂದಣಿ ಮತ್ತು ಮುದ್ರಾಂಕ ಇಲಾಖೆಯು ಎಲ್ಲಾ ಉಪ ನೋಂದಣಾಧಿಕಾರಿಗಳಿಗೆ ಸೂಚನೆ ನೀಡಿದೆ. ಇದರನ್ವಯ ಆ.31ರಿಂದಲೇ ಅನ್ವಯವಾಗುವಂತೆ ನೋಂದಣಿ ಶುಲ್ಕ ಹೆಚ್ಚಳ ಮಾಡಲಾಗಿದೆ. ಹಿಂದಿನ (ಶೇ.1) ನೋಂದಣಿ ಶುಲ್ಕವನ್ನು ಪಾವತಿಸಿ ಈಗಾಗಲೇ ದಸ್ತಾವೇಜುಗಳ ನೋಂದಣಿಗೆ ಅಪಾಯಿಂಟ್‌ಮೆಂಟ್‌ ಪಡೆದಿರುವವರು ಅಥವಾ ಶುಲ್ಕವನ್ನು ಪಾವತಿಸಿ ಅಪಾಯಿಂಟ್‌ಮೆಂಟ್‌ ಪಡೆದಿರುವವರು ವ್ಯತ್ಯಾಸದ ಮೊತ್ತವನ್ನು ಇಲಾಖೆಯ ಅಧಿಕೃತ ಪೋರ್ಟಲ್‌ ಮೂಲಕ ಪಾವತಿಸಬೇಕು. ಮೊದಲು ಬಳಸಿದ ಲಾಗಿನ್‌ ಮೂಲಕವೇ ಈ ಪಾವತಿ ಮಾಡಬೇಕು ಎಂದು ಸ್ಪಷ್ಟವಾಗಿ ಸೂಚಿಸಲಾಗಿದೆ.

ಈಗಾಗಲೇ ದಸ್ತಾವೇಜುಗಳ ನೋಂದಣಿಗೆ ಸಲ್ಲಿಸಿದ್ದರೂ ಇನ್ನೂ ಪರಿಶೀಲನೆಯಲ್ಲಿರುವ ದಸ್ತಾವೇಜುಗಳ ನೋಂದಣಿ ಶುಲ್ಕವನ್ನು ಮರು ಲೆಕ್ಕ ಹಾಕಿ ಪರಿಷ್ಕೃತ ಶೇ.2 ರಂತೆ ನೋಂದಣಿ ಶುಲ್ಕ ಸ್ವೀಕರಿಸಬೇಕು. ಈ ವರ್ಗದ ಅರ್ಜಿದಾರರರಿಗೆ ಪಾವತಿಯ ಪ್ರಕ್ರಿಯೆ ಪೂರ್ಣಗೊಳ್ಳುವ ಮೊದಲು ಪರಿಷ್ಕೃತ ನೋಂದಣಿ ಶುಲ್ಕದ ವಿವರ ತಿಳಿಸಬೇಕು ಎಂದು ನಿರ್ದೇಶನ ನೀಡಲಾಗಿದೆ.

LEAVE A REPLY

Please enter your comment!
Please enter your name here