ಸೆ.8: ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆಯಿಂದ ಪ್ರತಿಭಟನೆ

0

ಪುತ್ತೂರು: ಇರ್ದೆ ದೂಮಡ್ಕ – ಚಾಕೊಟೆ-ಮದಕ ಪರಿಶಿಷ್ಟ ಪಂಗಡದ ಸಂಪರ್ಕ ರಸ್ತೆ ಮತ್ತು ಬಲ್ನಾಡು ಗ್ರಾಮದ ಕೋಂಕೆ ಪರಿಶಿಷ್ಟ ಪಂಗಡ ಕಾಲೊನಿಗೆ ಕಾಂಕ್ರೀಟ್ ರಸ್ತೆ ನಿರ್ಮಾಣ, ಕೋಂಕೆಯಲ್ಲಿ ತೋಡಿಗೆ ಸೇತುವೆ ನಿರ್ಮಾಣ ಹಾಗೂ ಆರ್ಯಾಪು ಗ್ರಾಪಂನ ಮೇಗಿನ ಪಂಜ ಪರಿಶಿಷ್ಟ ಪಂಗಡದ ಕುಟುಂಬಕ್ಕೆ 94ಸಿಸಿ ಹಕ್ಕು ಪತ್ರ ವಿತರಣೆಗೆ ಇಲಾಖೆಯ ಅಧಿಕಾರಿಗಳು ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಸೆ.8ರಂದು ಪುತ್ತೂರಿನ ಅಮರ್ ಜವಾನ್ ಜ್ಯೋತಿ ಬಳಿಯಲ್ಲಿ ಪ್ರತಿಭಟನೆ ನಡೆಸಲಾಗುವುದು. ಆ ಬಳಿಕವೂ ಕ್ರಮ ಕೈಗೊಳ್ಳದಿದ್ದಲ್ಲಿ ತಾಲೂಕು ಆಡಳಿತ ಸೌಧಕ್ಕೆ ಬೀಗ ಜಡಿದು ಪ್ರತಿಭಟಿಸಲಾಗುವುದು ಎಂದು ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಗಿರಿಧರ್ ನಾಯ್ಕ್ ಎಚ್ಚರಿಕೆ ನೀಡಿದ್ದಾರೆ.


ಸೆ.1ರಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇರ್ದೆ ಗ್ರಾಮದ ದೂಮಡ್ಕ-ಚಾಕೊಟೆ- ಮದಕದಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದ 12 ಮನೆಗಳಿಗೆ ಸರಿಯಾದ ರಸ್ತೆ ಇಲ್ಲದ ಕಾರಣ ತಮ್ಮ ಸ್ವಂತ ಖರ್ಚಿನಲ್ಲಿ ಕಚ್ಚಾ ರಸ್ತೆ ನಿರ್ಮಾಣ ಮಾಡಿದ್ದಾರೆ. ಈ ರಸ್ತೆಯನ್ನು ತಕ್ಷಣವೇ ಕಾಂಕ್ರಿಟೀಕರಣಗೊಳಿಸಬೇಕು. ಇಲ್ಲಿ ರಸ್ತೆ ನಿರ್ಮಾಣ ಮಾಡಲು ಮುಂದಾದ 14 ಮಂದಿಯ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ. ಅಲ್ಲದೆ ಬಡವರಿಗೆ 5 ಲಕ್ಷ ಬಾಂಡ್ ಹಾಗೂ ಸರಕಾರಿ ನೌಕರರ ಜಾಮೀನು ನೀಡುವಂತೆ ಸೂಚನೆ ನೀಡಿದ್ದಾರೆ ದುಡಿದು ತಿನ್ನುವ ಬಡವರು ಐದು ಲಕ್ಷ ರೂ ಎಲ್ಲಿಂದ ನೀಡುವುದು. ಸಿವಿಲ್‌ಗೆ ಸಂಬಂಧಿಸಿದ ವಿಚಾರಕ್ಕೆ ಕ್ರಿಮಿನಲ್ ಕೇಸು ದಾಖಲಿಸಿದ್ದಾರೆ. ಈ ಕೇಸನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.


ಬಲ್ನಾಡು ಗ್ರಾಮದ ಕೋಂಕೆಯಲ್ಲಿ 6 ಪರಿಶಿಷ್ಟ ಪಂಗಡದ ಮನೆಗಳಿದ್ದು ಇಲ್ಲಿಗೆ ಸಂಪರ್ಕ ರಸ್ತೆಯನ್ನುನಿರ್ಮಿಸಬೇಕು ಹಾಗೂ ಇಲ್ಲಿನ ತೋಡಿಗೆ ಸೇತುವೆ ನಿರ್ಮಾಣ ಮಾಡಬೇಕು ಎಂಬುದು ಬಹುಕಾಲದ ಬೇಡಿಕೆಯಾಗಿದೆ. ಆದರೆ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಅಲ್ಲದೆ ಆರ್ಯಾಪು ಗ್ರಾಮದ ಮೇಗಿನ ಪಂಜ ಎಂಬಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಮನೆಗಳಿಗೆ ಇನ್ನೂ 94ಸಿಸಿ ಮಂಜೂರುಗೊಳಿಸಿಲ್ಲ. ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಅಗ್ರಹಿಸಿ ಪ್ರತಿಭಟನೆ ನಡೆಸಲಾಗುವುದು. ಸೆ.8ರಂದು ನಡೆಯುವ ಪ್ರತಿಭಟನಾ ಸ್ಥಳಕ್ಕೆ ಸಹಾಯಕ ಆಯುಕ್ತರು, ತಹಶೀಲ್ದಾರ್ ಹಾಗೂ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಯವರು ಭೇಟಿ ನೀಡಬೇಕು. ಪ್ರತಿಭಟನೆ ನಡೆದು ನಮ್ಮ ಬೇಡಿಕೆ ಈಡೇರಿಸಲು ಒಂದು ತಿಂಗಳ ಕಾಲಾವಕಾಶ ನೀಡಲಾಗುವುದು. ಆ ಬಳಿಕವು ನಮ್ಮ ಬೇಡಿಕೆ ಈಡೇರಿಸದಿದ್ದರೆ ತಾಲೂಕು ಆಡಳಿತ ಸೌಧಕ್ಕೆ ಬೀಗ ಜಡಿದು ಪ್ರತಿಭಟಿಸಲಾಗುವುದು ಎಂದು ಗಿರಿಧರ ನಾಯ್ಕ ತಿಳಿಸಿದರು.


ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆಯ ಮುಖಂಡರಾದ ನಮಿತಾ ಆರ್ಯಾಪು, ಕೃಷ್ಣಪ್ಪ ನಾಯ್ಕ ಕೊಡಿಪ್ಪಾಡಿ, ಪೂರ್ಣಿಮಾ ಬಲ್ನಾಡು ಮತ್ತು ದೇವಕಿ ಇರ್ದೆ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here