ನಿಡ್ಪಳ್ಳಿ; ರಸ್ತೆ ಬದಿ ಬೆಳೆದ ಗಿಡ ಮರದಿಂದ ಸವಾರರಿಗೆ ಸಂಕಷ್ಟ

0

ಗೆಲ್ಲು ತಾಗಿ ಅಪಾಯಕಾರಿ ಸ್ಥಿತಿಯಲ್ಲಿ ವಿದ್ಯುತ್ ತಂತಿಗಳು-ತಕ್ಷಣ ಸ್ಪಂದಿಸಲು ಸಾರ್ವಜನಿಕರ ಒತ್ತಾಯ

 ನಿಡ್ಪಳ್ಳಿ; ಇಲ್ಲಿಯ ಕುಕ್ಕುಪುಣಿಯಿಂದ ಹನುಮಗಿರಿ ಹೋಗುವ ಲೋಕೋಪಯೋಗಿ ರಸ್ತೆಯಲ್ಲಿ ಬೊಳುಂಬುಡೆ, ನಾಕುಡೇಲು ಪರಿಸರದಲ್ಲಿ ರಸ್ತೆ ಬದಿಯ ಬೇಲಿಯ ಗಿಡ ಮರಗಳು ರಸ್ತೆಗೆ ಬಾಗಿ ನಿಂತ ಪರಿಣಾಮ ವಾಹನ ಸವಾರರಿಗೆ ಮತ್ತು ಪಾದಾಚಾರಿಗಳಿಗೆ ಸಂಚರಿಸಲು ಬಹಳ ಸಮಸ್ಯೆಯಾಗಿದೆ.

  ಬೊಳುಂಬುಡೆಯಿಂದ ನಾಕುಡೇಲುವರೆಗೆ ರಸ್ತೆಗೆ ಒಂದು ಬದಿಯಲ್ಲಿ  ಬಗ್ಗಿ ನಿಂತಿರುವುದರಿಂದ ರಸ್ತೆಯೆ ಮಾಯವಾಗಿದೆ. ಇದರಿಂದಾಗಿ ವಾಹನ ಸವಾರರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಬೆಳಿಗ್ಗೆ ಮತ್ತು ಸಂಜೆ ಮೂರು ಖಾಸಗಿ ಶಾಲೆಗಳ ವಾಹನಗಳು ಸೇರಿದಂತೆ ಹಲವಾರು ವಾಹನಗಳು ದಿನಂಪ್ರತಿ ಸಂಚರಿಸುತ್ತಿದ್ದು, ತೋಟದ ಬದಿಯ ಬೇಲಿಯ ಗಿಡ ಮರಗಳು ವಾಹನಗಳಿಗೆ ತಾಗುತ್ತಿದೆ. ಅಲ್ಲದೆ ಮರಗಳ ಗೆಲ್ಲುಗಳು ರಸ್ತೆಗೆ ಬಾಗಿದ್ದು ಮಳೆನೀರು ಸದಾ ಬೀಳುತ್ತಿರುವುದರಿಂದ ಡಾಮರ್, ಜಲ್ಲಿಗಳು ಎದ್ದು ಹೋಗುತ್ತಿದೆ.ಇತ್ತೀಚೆಗೆ ಮಳೆಗೆ ಬೊಳುಂಬುಡೆ ಎಂಬಲ್ಲಿ ರಸ್ತೆ ಬದಿ ತಡೆಗೋಡೆ ಕುಸಿದ ಕಾರಣ ರಸ್ತೆಯೂ ಕಿರಿದಾಗಿದೆ.ನೀರು ಹರಿಯಲು ರಸ್ತೆ ಬದಿ ಚರಂಡಿಯೂ ಇಲ್ಲದೆ ನೀರು ರಸ್ತೆಯ ಮೇಲೆಯೇ ಹರಿದು ರಸ್ತೆಗಳೂ ಕೆಟ್ಟು ಹೋಗುತ್ತಿದೆ. ಆದುದರಿಂದ ಸಂಬಂಧ ಪಟ್ಟವರು ತಕ್ಷಣ ಸ್ಪಂದಿಸಿ ಸಾರ್ವಜನಿಕರಿಗೆ ಆಗುವ ಸಮಸ್ಯೆಯನ್ನು ಬಗೆಹರಿಸುವಂತೆ ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

ಅಪಾಯದಲ್ಲಿ ವಿದ್ಯುತ್ ಲೈನ್; 
 ರಸ್ತೆ ಬದಿ ಹಾದು ಹೋಗುವ ವಿದ್ಯುತ್ ಕಂಬ ಮತ್ತು ತಂತಿಗಳಿಗೆ ಮರಗಳ ಗೆಲ್ಲುಗಳು ತಾಗುತ್ತಿದ್ದು ಅಪಾಯಕಾರಿ ಸ್ಥಿತಿಯಲ್ಲಿದೆ. ಗಾಳಿಗೆ ಮರ,ಅಡಿಕೆ ಮರಗಳು ಬಿದ್ದು ತಂತಿಗಳು ತುಂಡಾಗಿ ರಸ್ತೆಗೆ ಬೀಳುತ್ತಿರುವುದು ಇಲ್ಲಿ ನಡೆಯುತ್ತಲೇ ಇದೆ. ಅಲ್ಲದೆ ವಿದ್ಯುತ್ ಕಂಬಗಳು ಓರೆಯಾಗಿ ನಿಂತಿದೆ. ಇಲ್ಲಿ ಸಾರ್ವಜನಿಕರು, ಶಾಲಾ ಮಕ್ಕಳು  ಭಯ ಭೀತರಾಗಿಯೇ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.ಇದನ್ನು ಪರಿಶೀಲಿಸಿ ತಕ್ಷಣ ಸ್ಪಂದಿಸಿ ಸಾರ್ವಜನಿಕರಿಗೆ ಆಗುತ್ತಿರುವ ಸಂಕಷ್ಟವನ್ನು ಪರಿಹರಿಸುವಂತೆ ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here