ಪುತ್ತೂರು:ಮದುವೆಯಾಗುವುದಾಗಿ ನಂಬಿಸಿ ಬಲವಂತದ ದೈಹಿಕ ಸಂಪರ್ಕ ಬೆಳೆಸಿ ಅಪ್ರಾಪ್ತೆಯನ್ನು ಗರ್ಭವತಿಯನ್ನಾಗಿಸಿದ ಆರೋಪದಲ್ಲಿ ಬಂಧಿತನಾಗಿ ನ್ಯಾಯಾಂಗ ಬಂಧನದಲ್ಲಿರುವ ಕೆಯ್ಯೂರು ನಿವಾಸಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಅಪ್ರಾಪ್ತ ಪ್ರಾಯದ ವಿದ್ಯಾರ್ಥಿನಿ ಈ ಕುರಿತು ಮಹಿಳಾ ಪೊಲೀಸ್ ಠಾಣೆಗೆ ನೀಡಿದ್ದ ದೂರಿನ ಆಧಾರದಲ್ಲಿ ಕೆಯ್ಯೂರು ಸಂತೋಷ್‌ನಗರ ನಿವಾಸಿ ಯತೀಂದ್ರ ಕುಮಾರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರು.ತಾನು ಕಲಿಯುತ್ತಿರುವ ಸಮಯ ತನಗೆ ಆರೋಪಿಯ ಪರಿಚಯವಾಗಿತ್ತು.ಶಾಲೆಗೆ ರಜೆ ಸಿಕ್ಕಿದ್ದ ಸಂದರ್ಭ ಆರೋಪಿಯು ತನಗೆ ಕರೆ ಮಾಡಿ,ಮಾತನಾಡಲಿಕ್ಕಿದೆ ಎಂದು ಕರೆಸಿಕೊಂಡಿದ್ದು ಬಳಿಕ ಗುಡ್ಡೆಗೆ ಕರೆದೊಯ್ದು ತನ್ನನ್ನು ಮದುವೆಯಾಗುವುದಾಗಿ ನಂಬಿಸಿ ಬಲವಂತದ ದೈಹಿಕ ಸಂಪರ್ಕ ಬೆಳೆಸಿದ್ದ.
ಮತ್ತೂ ಒಂದೆರಡು ಬಾರಿ ಆರೋಪಿಯು ಈ ರೀತಿ ಮಾಡಿದ್ದ.ಇದರ ಪರಿಣಾಮ ತಾನು ಗರ್ಭವತಿಯಾಗಿದ್ದಾಗಿ ಸಂತ್ರಸ್ತೆ ನೀಡಿದ್ದ ದೂರಿನ ಮೇರೆಗೆ ಆರೋಪಿ ಯತೀಂದ್ರ ಕುಮಾರ್ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಆರೋಪಿಯನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಗೆ ಇದೀಗ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಮತ್ತು ಪೊಕ್ಸೋ ವಿಶೇಷ ನ್ಯಾಯಾಲಯದ ನ್ಯಾಯಾಧೀಶರೂ ಆಗಿರುವ ಸರಿತಾ ಅವರು ಜಾಮೀನು ಮಂಜೂರು ಮಾಡಿದ್ದಾರೆ.ಆರೋಪಿ ಪರ ವಕೀಲರಾದ ಉದಯಶಂಕರ ಶೆಟ್ಟಿ ಅರಿಯಡ್ಕ,ಕೃಷ್ಣವೇಣಿ ಎಂ.,ರಾಕೇಶ್ ಮಸ್ಕರೇನ್ಹಸ್ ಮತ್ತು ಸಂಧ್ಯಾಲತಾ ಬಿ.ಅವರು ವಾದಿಸಿದ್ದರು.