ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘ : 3 ಕೋಟಿ 70 ಲಕ್ಷ ನಿವ್ವಳ ಲಾಭ: ಸುನೀಲ್ ಕುಮಾರ್ ದಡ್ಡು

0

ಉಪ್ಪಿನಂಗಡಿ: ಸಹಕಾರಿ ವ್ಯವಸಾಯಿಕ ಸಂಘ ಉಪ್ಪಿನಂಗಡಿಯು 2024-25ನೇ ಸಾಲಿನಲ್ಲಿ 572 ಕೋಟಿ ವ್ಯವಹಾರ ನಡೆಸಿ 3,70,53,862.65 ರೂ. ನಿವ್ವಳ ಲಾಭ ಗಳಿಸಿದ್ದು, ಆಡಿಟ್ ವರ್ಗೀಕರಣದಲ್ಲಿ ಸತತ ಎ' ಗ್ರೇಡನ್ನು ಪಡೆಯುತ್ತಾ ಬಂದಿದೆ. ಅಲ್ಲದೇ, 2024-25ನೇ ಸಾಲಿನಲ್ಲಿ ಸಂಘವು ಸಾಧಿಸಿದ ಗಣನೀಯ ಪ್ರಗತಿಗಾಗಿ ಸತತ 5ನೇ ಬಾರಿಗೆ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಪ್ರಶಸ್ತಿಯನ್ನು ಪಡೆದುಕೊಂಡಿದೆ. ನಮ್ಮ ಸಂಘವು ದ.ಕ. ಜಿಲ್ಲೆಯ ಪ್ರಾಥಮಿಕ ಸಹಕಾರಿ ಸಂಘಗಳಲ್ಲಿ ಉತ್ತಮ ಸೇವೆಯಿಂದ ಹೆಸರು ಪಡೆದುಕೊಂಡಿದೆ ಎಂದು ಸಂಘದ ಅಧ್ಯಕ್ಷರಾದ ಸುನೀಲ್ ಕುಮಾರ್ ದಡ್ಡು ತಿಳಿಸಿದರು.

ಉಪ್ಪಿನಂಗಡಿಯಲ್ಲಿರುವ ಸಂಘದ ಕೇಂದ್ರ ಕಚೇರಿಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಪ್ರಸಕ್ತ ಸಾಲಿನಲ್ಲಿ ಸಂಘವು ವಿವಿಧ ವ್ಯಾಪಾರಗಳಿಂದ 98.10 ಲಕ್ಷ ಲಾಭ ಗಳಿಸಿದೆ ಹಾಗೂ ಒಟ್ಟು ವ್ಯವಹಾರದಿಂದ 3.70 ಲಕ್ಷ ರೂ. ಲಾಭಗಳಿಸಿದೆ. ಬಂದ ಲಾಭಾಂಶದಲ್ಲಿ ಶೇ.13.50 ಡಿವಿಡೆಂಟ್ ಅನ್ನು ನೀಡಲು ಮಹಾಸಭೆಗೆ ಶಿಪಾರಸ್ಸು ಮಾಡಲಾಗುವುದು. ನಮ್ಮ ಸಂಘದಲ್ಲಿ ವಷ್ಯಾಂತ್ಯಕ್ಕೆ 9091 ಸದಸ್ಯರಿದ್ದು, 10.11ಕೋ.ರೂ. ಷೇರು ಬಂಡವಾಳವನ್ನು ಸಂಗ್ರಹಿಸಲಾಗಿದೆ. ವರದಿ ಸಾಲಿನಲ್ಲಿ ಸಂಘವು 99.51 ಕೋ. ರೂ. ಠೇವಣಿ ಹೊಂದಿದ್ದು, 156.51ಕೋ.ರೂ. ಹೊರಬಾಕಿ ಸಾಲ ಇರುತ್ತದೆ. ವರ್ಷಾಂತ್ಯದಲ್ಲಿ ಶೇ.96.16 ಸಾಲ ವಸೂಲಾತಿ ಆಗಿರುತ್ತದೆ. ಸಂಘದ ಕಾಯ್ದಿಟ್ಟ ನಿಧಿ ಮತ್ತು ಇತರ ನಿಧಿಗಳು 16.59 ಕೋ.ರೂ. ಇರುತ್ತದೆ. ಸಂಘವು ಒಟ್ಟು 368.65 ಲಕ್ಷ ಸ್ಥಿರಾಸ್ತಿಯನ್ನು ಹೊಂದಿದೆ ಎಂದರು.

ಸುವರ್ಣ ಸಂಗಮ ನಿಧಿ ಯೋಜನೆಯಂತೆ ಮೃತಪಟ್ಟ ಸದಸ್ಯರ ವಾರೀಸುದಾರರಿಗೆ 20 ಸಾವಿರ ರೂ. ಸೌಲಭ್ಯ ನೀಡಲಾಗುತ್ತಿದ್ದು, ಅದರಂತೆ ವರದಿ ಸಾಲಿನಲ್ಲಿ 37 ಮಂದಿ ಮೃತ ಸದಸ್ಯರ ವಾರೀಸುದಾರರಿಗೆ 7,40,000 ರೂ. ನೀಡಲಾಗಿದೆ. ಸಂಘದ ಕೃಷಿ ಸಾಲಗಾರರನ್ನು ಪಾಯಸ್' (ವೈಯಕ್ತಿಕ ಅಪಘಾತ ವಿಮೆ) ಮತ್ತು ಹವಾಮಾನ ಆಧಾರಿತ ಫಸಲ್ ಬಿಮಾ ಯೋಜನೆಗೆ ಒಳಪಡಿಸಲಾಗಿದ್ದು, ಎಲ್ಲಾ ರೈತರ ಕೃಷಿ ಸಾಲಗಳ ಮೇಲೆ ಸಂಪೂರ್ಣ ವಿಮಾ ಸೌಲಭ್ಯವನ್ನು 50:50 ಅನುಪಾತದಲ್ಲಿ ವಿಮಾ ಕಂತು ಪಾವತಿಯೊಂದಿಗೆ ನೂತನ ಯೋಜನೆಯನ್ನು ಪ್ರಾರಂಭಿಸಲಾಗಿದೆ.ವಿದ್ಯಾಶ್ರೀ’ ಎಂಬ ಯೋಜನೆಯಡಿಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಕುಟುಂಬಗಳ ಸಂಘದ ಕಾರ್ಯವ್ಯಾಪ್ತಿಯ ಬಿಪಿಎಲ್ ಪಡಿತರದಾರರ ಕುಟುಂಬಗಳ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಹಾಗೂ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದೆ. ಈ ಯೋಜನೆಯಡಿ 2024- 25ರಲ್ಲಿ ಒಟ್ಟು 59 ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲಾಗಿದೆ ಎಂದರು.


ಎಲ್ಲಾ ರಸಗೊಬ್ಬರ ಉತ್ಪಾದಕರ ಕಂಪನಿಗಳ ಡೀಲರ್‌ಶಿಪ್ ಪಡೆದುಕೊಂಡು ರಖಂ ನೆಲೆಯಲ್ಲಿ ಜಿಲ್ಲಾದ್ಯಂತ ರಸಗೊಬ್ಬರ, ಸಾವಯವ ಗೊಬ್ಬರ ಹಾಗೂ ಕೀಟನಾಶಕವನ್ನು ಸ್ಪರ್ಧಾತ್ಮಕ ದರದಲ್ಲಿ ಸರಬರಾಜು ಮಾಡುತ್ತಿರುವ ಏಕೈಕ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘವೆಂಬ ಹೆಗ್ಗಳಿಕೆಗೆ ನಮ್ಮ ಸಂಘವು ಪಾತ್ರವಾಗಿದ್ದು, ರಸಗೊಬ್ಬರದೊಂದಿಗೆ ರಬ್ಬರ್ ತಯಾರಿಕ ಪರಿಕರಗಳ ವಿಭಾಗವೂ ಇದ್ದು ಕೃಷಿಕರ ಬೇಡಿಕೆಯನ್ನು ಪೂರೈಸುತ್ತಿದೆ. ಇದರೊಂದಿಗೆ ಉತ್ತಮ ಗುಣಮಟ್ಟದ, ಮಿತಬೆಲೆಯ ದಿನ ಬಳಕೆ ಸಾಮಾಗ್ರಿಗಳು ಹೊಂದಿರುವ ಮಳಿಗೆ ‘ಅಮೃತ ಸಹಕಾರಿ ಮಾರ್ಟ್’ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಲಾಭಾಂಶದಲ್ಲಿ ಮುನ್ನಡೆಯುತ್ತಿದೆ. ಇದರ ಇನ್ನಷ್ಟು ವ್ಯವಹಾರ ಪ್ರಗತಿಗೆ ಸದಸ್ಯರ ಇನ್ನಷ್ಟು ಬೆಂಬಲವನ್ನು ನಿರೀಕ್ಷಿಸುತ್ತಿದ್ದು, ಸದಸ್ಯರೆಲ್ಲರೂ ತಮ್ಮ ಮನೆಗೆ ಬೇಕಾದ ದಿನಬಳಕೆಯ ಸಾಮಗ್ರಿಗಳನ್ನು ಇಲ್ಲಿಂದಲೇ ಖರೀಸಬೇಕೆಂದು ಸುನೀಲ್ ಕುಮಾರ್ ದಡ್ಡು ವಿನಂತಿಸಿದರು.


ಸಂಘದಲ್ಲಿ ಸದಸ್ಯರ ಹಾಗೂ ಗ್ರಾಹಕರ ಹಿತದೃಷ್ಟಿಯಿಂದ ಪಹಣಿ ಪತ್ರ ಮತ್ತು ಇ- ಸ್ಟಾಪಿಂಗ್ ಸೌಲಭ್ಯ ನೀಡಲಾಗುತ್ತಿದ್ದು, ಚಿನ್ನಾಭರಣ ಪರಿಶುದ್ಧತೆಯನ್ನು ತಿಳಿಸುವ ಅತ್ಯಾಧುನಿಕ ತಂತ್ರಜ್ಞಾನದ ಚಿನ್ನಾಭರಣ ಪರಿಶುದ್ಧತೆ ಪರಿಶೀಲನಾ ಯಂತ್ರವನ್ನು ಹೊಂದಿದೆ. ಸದಸ್ಯರು ಇದರ ಪ್ರಯೋಜನ ಪಡೆದುಕೊಳ್ಳಬಹುದಾಗಿದ್ದು, ನಮ್ಮ ಸಂಘದಲ್ಲಿ ಆರ್.ಟಿ.ಜಿ.ಎಸ್./ ನೆಫ್ಟ್ ಹಾಗೂ ಸೇಫ್ ಲಾಕರ್ ವ್ಯವಸ್ಥೆಯೂ ಇರುತ್ತದೆ ಎಂದರು.


ಈ ಹಿಂದಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಕೆ.ವಿ. ಪ್ರಸಾದ, ನಿರ್ದೇಶಕರು ಹಾಗೂ ಪ್ರಕೃತ ಆಡಳಿತ ಮಂಡಳಿ ನಿರ್ದೇಶಕರ ಸಲಹೆ, ಸೂಚನೆ, ನೌಕರರ ಪರಿಶ್ರಮ ಹಾಗೂ ಸದಸ್ಯರ ಮತ್ತು ಗ್ರಾಹಕರ ಉತ್ತಮ ಸ್ಪಂದನೆಯಿಂದ ಸಂಘಕ್ಕೆ ಈ ಸಾಧನೆ ಸಾಧ್ಯವಾಗಿದೆ. ಅವರಿಗೆಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಸುನೀಲ್ ಕುಮಾರ್ ದಡ್ಡು ತಿಳಿಸಿದರು.


ಪತ್ರಿಕಾಗೋಷ್ಟಿಯಲ್ಲಿ ಸಂಘದ ಉಪಾಧ್ಯಕ್ಷರಾದ ದಯಾನಂದ ಸರೋಳಿ, ನಿರ್ದೇಶಕರಾದ ರಾಜೇಶ್, ವಸಂತ ಪಿ., ರಾಘವ ನಾಯ್ಕ, ಸುಂದರ ಕೆ., ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೋಭಾ ಕೆ., ಉಪ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪುಷ್ಪರಾಜ ಶೆಟ್ಟಿ ಎಚ್., ಶಾಖಾ ವ್ಯವಸ್ಥಾಪಕ ಪ್ರವೀಣ್ ಆಳ್ವ ಉಪಸ್ಥಿತರಿದ್ದರು.


ಸೆ.7ರಂದು ವಾರ್ಷಿಕ ಮಹಾಸಭೆ
ಸಂಘದ 2024-25ನೇ ಸಾಲಿನ ವಾರ್ಷಿಕ ಮಹಾಸಭೆಯು ಸೆ.7ರಂದು ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಸ್ಥಾನದ ನೇತ್ರಾವತಿ ಸಮುದಾಯ ಭವನದಲ್ಲಿ ಪೂರ್ವಾಹ್ನ 10:30ಕ್ಕೆ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಸುನೀಲ್ ಕುಮಾರ್ ದಡ್ಡು ತಿಳಿಸಿದರು. ಕೃಷಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಂಘವು ಬೃಹತ್ ಮಟ್ಟದ ಕೃಷಿ ಯಂತ್ರೋಪಕರಣಗಳ ಮಾರಾಟ ವಿಭಾಗವನ್ನು ಆರಂಭಿಸಲು ಚಿಂತನೆ ನಡೆಸಿದೆ. ಈ ಬಗ್ಗೆ ಮಹಾಸಭೆಯಲ್ಲಿ ಅನುಮೋದನೆ ಪಡೆದುಕೊಂಡ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಇದರೊಂದಿಗೆ ಮನೆಯ ಮೇಲ್ಚಾವಣಿಯಲ್ಲಿ ಹೈನುಗಾರಿಕೆ, ಮಲ್ಲಿಗೆ, ತರಕಾರಿ ಕೃಷಿ, ಕೋಳಿಸಾಕಾಣಿಕೆ ಹೀಗೆ ಸಣ್ಣ ಜಾಗವಿರಲಿ, ದೊಡ್ಡ ಜಾಗವಿರಲಿ ಮಾದರಿಯಾಗಿ ಕೃಷಿ ಮಾಡುವ ಸಂಘದ ಕಾರ್ಯವ್ಯಾಪ್ತಿಯ ಕೃಷಿಕರನ್ನು ಗುರುತಿಸಿ ಸಂಘದ ವತಿಯಿಂದ ಅವರಿಗೆ ಪ್ರಶಸ್ತಿ ನೀಡುವ ಯೋಜನೆಯೂ ಇದ್ದು, ಈ ಬಗ್ಗೆ ಸಭೆಯಲ್ಲಿ ಸಲಹೆ- ಸೂಚನೆ ಪಡೆದು ಅದನ್ನು ಅನುಷ್ಠಾನಿಸಲಾಗುವುದು ಎಂದರು.


ಕಳೆದ ಆಡಳಿತ ಮಂಡಳಿಯು ನಿರ್ಣಯಿಸಿದಂತೆ ಇಳಂತಿಲ ಮತ್ತು 34 ನೆಕ್ಕಿಲಾಡಿ ಗ್ರಾ.ಪಂ.ನಲ್ಲಿ ಜಾಗ ಖರೀದಿಸಿ ಕಟ್ಟಡ ಕಟ್ಟುವ ಯೋಜನೆಯ ಪ್ರಕ್ರಿಯೆಗಳು ನಡೆಯುತ್ತಿವೆ. ಇದರೊಂದಿಗೆ ಬಜತ್ತೂರಿನಲ್ಲಿ 1.89 ಕೋ.ರೂ. ವೆಚ್ಚದಲ್ಲಿ ಸಂಘದ ಕಟ್ಟಡ ಕಾಮಗಾರಿ ನಡೆಯಲಿದ್ದು, ಇದು ಟೆಂಡರ್‌ನ ಹಂತದಲ್ಲಿದೆ ಎಂದರು.

LEAVE A REPLY

Please enter your comment!
Please enter your name here