ಶಿರಾಡಿ ಗ್ರಾಮಸಭೆ : ಉದನೆಯಿಂದ ಶಿರಾಡಿಗೆ ಗ್ರಾ.ಪಂ.ಕಚೇರಿ ಸ್ಥಳಾಂತರ ವಿಚಾರ; ವಾಗ್ವಾದ, ಗದ್ದಲ

0

1ನೇ ವಾರ್ಡ್‌ನ ಗ್ರಾಮಸ್ಥರ ಆಕ್ಷೇಪ, 2, 3ನೇ ವಾರ್ಡ್‌ನ ಗ್ರಾಮಸ್ಥರ ಬೆಂಬಲ-ನಿರ್ಣಯ

ನೆಲ್ಯಾಡಿ: ಗ್ರಾಮ ಪಂಚಾಯಿತಿ ಕಚೇರಿಯನ್ನು ಉದನೆಯಿಂದ ಶಿರಾಡಿಗೆ ಸ್ಥಳಾಂತರ ವಿಚಾರ ಪ್ರಸ್ತಾಪಗೊಂಡು ವಾಗ್ವಾದ, ಮಾತಿನ ಚಕಮಕಿ, ಗದ್ದಲ, ಕೋಲಾಹಲ ನಡೆದ ಘಟನೆ ಶಿರಾಡಿ ಗ್ರಾಮಸಭೆಯಲ್ಲಿ ನಡೆದಿದೆ. ಈ ಹಿನ್ನೆಲೆಯಲ್ಲಿ ಕಚೇರಿ ಕಟ್ಟಡಕ್ಕೆ 1ನೇ ವಾರ್ಡ್‌ನ ಗ್ರಾಮಸ್ಥರ ಆಕ್ಷೇಪ ಹಾಗೂ 2ಮತ್ತು 3ನೇ ವಾರ್ಡ್‌ನ ಗ್ರಾಮಸ್ಥರ ಬೆಂಬಲ ಇರುವ ಬಗ್ಗೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.


ಸಭೆ ಆ.30ರಂದು ಗ್ರಾ.ಪಂ.ಅಧ್ಯಕ್ಷ ಕಾರ್ತಿಕೇಯನ್ ಅಧ್ಯಕ್ಷತೆಯಲ್ಲಿ ಅಡ್ಡಹೊಳೆ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ನಡೆಯಿತು. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಪುತ್ತೂರು ಇಲ್ಲಿನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಸುರೇಶ್ ಮಾರ್ಗದರ್ಶಿ ಅಧಿಕಾರಿಯಾಗಿದ್ದರು.


ಸಭೆಯಲ್ಲಿ ವಿಚಾರ ಪ್ರಸ್ತಾಪಿಸಿದ ಮಾಜಿ ಸದಸ್ಯ ಕೆ.ಕೆ.ಸೆಬಾಸ್ಟಿನ್ ಅವರು, 1ನೇ ವಾರ್ಡ್ ವ್ಯಾಪ್ತಿಯ ಉದನೆ ಪೇಟೆಯಲ್ಲಿ ಅಬ್ರಹಾಂ ಅವರು ದಾನವಾಗಿ ನೀಡಿದ ಜಾಗದಲ್ಲಿ ನಿರ್ಮಾಣಗೊಂಡ ಗ್ರಾ.ಪಂ.ಕಟ್ಟಡದಲ್ಲಿ ಹಲವು ವರ್ಷಗಳಿಂದ ಗ್ರಾ.ಪಂ.ಕಚೇರಿ ಕಾರ್ಯನಿರ್ವಹಿಸುತ್ತಿದೆ. ಇದೀಗ ಏಕಾಏಕಿ ಗ್ರಾ.ಪಂ.ಕಚೇರಿಗೆ ಶಿರಾಡಿಯಲ್ಲಿ ಕಟ್ಟಡ ನಿರ್ಮಾಣಕ್ಕೆ ಗುದ್ದಲಿಪೂಜೆ ಮಾಡಲಾಗಿದೆ. ಈ ಬಗ್ಗೆ ಸಾಮಾನ್ಯ ಸಭೆಯಲ್ಲಿ ನಿರ್ಣಯ ಆಗಿದೆಯೇ, ಎಲ್ಲಾ ಸದಸ್ಯರ ಒಪ್ಪಿಗೆ ಇದೆಯಾ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಕಾರ್ತಿಕೇಯನ್ ಅವರು, ಶಿರಾಡಿ ಗ್ರಾ.ಪಂ.ಗೆ ಸ್ವಂತ ಕಟ್ಟಡ ಇಲ್ಲ. ಈಗ ಉದನೆಯಲ್ಲಿ ರಾಜೀವಗಾಂಧಿ ಸೇವಾ ಕೇಂದ್ರದಲ್ಲಿ ಕಚೇರಿ ನಡೆಯುತ್ತಿದೆ. ಸ್ವಂತ ಕಟ್ಟಡ ಇಲ್ಲದ ಗ್ರಾ.ಪಂ.ಗಳಿಗೆ ಕಟ್ಟಡ ನಿರ್ಮಾಣಕ್ಕೆ ಸರಕಾರದಿಂದಲೇ ಸುತ್ತೋಲೆ ಬಂದಿದೆ. ಗ್ರಾಮದ ಕೇಂದ್ರ ಸ್ಥಾನದಲ್ಲಿರುವ ಶಿರಾಡಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಪಕ್ಕದಲ್ಲೇ ಗ್ರಾ.ಪಂ.ಗೆ ಜಾಗ ಕಾದಿರಿಸಲಾಗಿತ್ತು. ಅದೇ ಜಾಗದಲ್ಲಿ ಕಟ್ಟಡ ನಿರ್ಮಾಣಕ್ಕೆ ಗುದ್ದಲಿ ಪೂಜೆ ಮಾಡಲಾಗಿದೆ. ಸರಕಾರದ 20 ಲಕ್ಷ ರೂ. ಅನುದಾನದ ಪೈಕಿ 8 ಲಕ್ಷ ರೂ. ಅನುದಾನ ಈಗಾಗಲೇ ಖಾತೆಗೆ ಜಮೆ ಆಗಿದೆ. ಉದ್ಯೋಗ ಖಾತರಿ ಯೋಜನೆಯಲ್ಲಿ 25 ಲಕ್ಷ ರೂ.ಅನುದಾನ ಸಿಗಲಿದೆ. ಒಟ್ಟು 45 ಲಕ್ಷ ರೂ. ಅನುದಾನದಲ್ಲಿ ಕಟ್ಟಡ ನಿರ್ಮಾಣ ಆಗಲಿದೆ. ತಾ.ಪಂ.ಮುಖ್ಯಕಾರ್ಯನಿರ್ವಾಹಕ ಅಧಿಕಾರಿಯವರು ಸ್ಥಳಕ್ಕೆ ಬಂದು ಪರಿಶೀಲನೆ ಸಹ ಮಾಡಿದ್ದಾರೆ. ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಂಡೇ ಕೆಲಸ ಆರಂಭಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ಈ ವೇಳೆ ಮಾಜಿ ಸದಸ್ಯ ರಾಜೇಶ್ ಮಾತನಾಡಿ, ಶಿರಾಡಿಯಲ್ಲಿ ಕಟ್ಟಡ ನಿರ್ಮಾಣಕ್ಕೆ ನಮ್ಮ ವಿರೋಧವಿಲ್ಲ. ಕಟ್ಟಡ ನಿರ್ಮಾಣ ಮಾಡಿ ಅದನ್ನು ತರಬೇತಿ ಅಥವಾ ಗ್ರಾ.ಪಂ.ನ ಇನ್ನಿತರ ಕೆಲಸಗಳಿಗೆ ಬಳಕೆ ಮಾಡಿಕೊಳ್ಳಿ. ಗ್ರಾ.ಪಂ.ಕಚೇರಿಯನ್ನು ಉದನೆಯಿಂದ ಶಿರಾಡಿಗೆ ಸ್ಥಳಾಂತರ ಮಾಡುವುದಕ್ಕೆ ವಿರೋಧವಿದೆ. ಗ್ರಾ.ಪಂ.ಕಚೇರಿ ಸ್ಥಳಾಂತರಕ್ಕೆ 1ನೇ ವಾರ್ಡ್‌ನ ಇಬ್ಬರು ಸದಸ್ಯರ ವಿರೋಧವಿರುವುದನ್ನು ಸಾಮಾನ್ಯ ಸಭೆಯಲ್ಲಿ ಗಣನೆಗೆ ತೆಗೆದುಕೊಳ್ಳಲಾಗಿದೆಯೇ ಎಂದು ಪ್ರಶ್ನಿಸಿದರು. ಅಧ್ಯಕ್ಷ ಕಾರ್ತಿಕೇಯನ್ ಮಾತನಾಡಿ, 1ನೇ ವಾರ್ಡ್‌ನ ಇಬ್ಬರು ಸದಸ್ಯರ ಆಕ್ಷೇಪದ ಬಗ್ಗೆಯೂ ಸಾಮಾನ್ಯ ಸಭೆಯಲ್ಲಿ ನಿರ್ಣಯ ಆಗಿದೆ. ಶಿರಾಡಿಯಲ್ಲಿ ಗ್ರಾ.ಪಂ.ಕಚೇರಿಗೆ ಕಟ್ಟಡದ ಬಗ್ಗೆ ಗ್ರಾಮಸ್ಥರೇ ತೀರ್ಮಾನಿಸಿ ಎಂದರು. ಇದರಿಂದ ತೀವ್ರ ಆಕ್ರೋಶಗೊಂಡ 1ನೇ ವಾರ್ಡ್‌ನ 20ಕ್ಕೂ ಹೆಚ್ಚು ಗ್ರಾಮಸ್ಥರು ವೇದಿಕೆಯ ಮುಂಭಾಗಕ್ಕೆ ಬಂದು ಅಧ್ಯಕ್ಷರ ಜೊತೆ ವಾಗ್ವಾದ ನಡೆಸಿದರು. 1ನೇ ವಾರ್ಡ್‌ನ ಸದಸ್ಯರಾದ ಲಕ್ಷ್ಮಣ ಗೌಡ ಕುದ್ಕೋಳಿ, ರಾಧಾ ತಂಗಪ್ಪನ್ ಅವರು ವೇದಿಕೆಯಿಂದ ಕೆಳಗಿಳಿದು ತಮ್ಮ ವಾರ್ಡ್‌ನ ಗ್ರಾಮಸ್ಥರ ಬೇಡಿಕೆಗೆ ಧ್ವನಿಗೂಡಿಸಿದರು. ಅಧ್ಯಕ್ಷರು, ಸದಸ್ಯರು, ಗ್ರಾಮಸ್ಥರ ನಡುವೆ ಮಾತಿನ ಚಕಮಕಿ, ಗದ್ದಲ ನಡೆದು ಸಭೆಯಲ್ಲಿ ಕೋಲಾಹಲವೂ ನಡೆಯಿತು. ಮಧ್ಯಪ್ರವೇಶಿಸಿದ ನೆಲ್ಯಾಡಿ ಹೊರಠಾಣೆ ಪೊಲೀಸ್ ಸಿಬ್ಬಂದಿ ಸದಾಶಿವ ದೊಡಮನಿ ಅವರು ಗ್ರಾಮಸ್ಥರನ್ನು ಸಮಾಧಾನಪಡಿಸಿ ಸ್ವಸ್ಥಾನದಲ್ಲಿ ಕುಳಿತುಕೊಳ್ಳುವಂತೆ ಮಾಡಿದರು. ಗ್ರಾಮಸ್ಥರಾದ ಜಾನ್ ಕೆ.ಪಿ., ದಿವಾಕರ ಗೌಡ ಶಿರಾಡಿ, ಅಭಿಲಾಷ್ ಮತ್ತಿತರರು ಉದನೆಯಿಂದ ಶಿರಾಡಿಗೆ ಗ್ರಾ.ಪಂ.ಕಚೇರಿ ಸ್ಥಳಾಂತರಕ್ಕೆ ಬೆಂಬಲ ಸೂಚಿಸಿ ಮಾತನಾಡಿದರು. ಮತ್ತೆ ಮಾತನಾಡಿದ ಅಧ್ಯಕ್ಷ ಕಾರ್ತಿಕೇಯನ್ ಅವರು, ಗ್ರಾ.ಪಂ.ಕಚೇರಿಗೆ ಹೊಸ ಕಟ್ಟಡ ನಿರ್ಮಣಕ್ಕೆ ಸಾಮಾನ್ಯ ಸಭೆಯಲ್ಲಿ ನಿರ್ಣಯ ಆಗಿದೆ. ಅದರಂತೆ ಮುಂದುವರಿಯುತ್ತೇವೆ ಎಂದು ಪುನರುಚ್ಚರಿಸಿದರು. ಮತ್ತೆ ಆಕ್ರೋಶಗೊಂಡ ಗ್ರಾಮಸ್ಥರು ವೇದಿಕೆ ಮುಂಭಾಗಕ್ಕೆ ಆಗಮಿಸಿ ವಾಗ್ವಾದ ಮಾಡಿ, ಗ್ರಾಮಸಭೆಯಲ್ಲಿ ನಾವು ವಿರೋಧ ಮಾಡುತ್ತಿದ್ದೇವೆ. ಗ್ರಾಮಸಭೆಯ ನಿರ್ಣಯವೇ ಮುಖ್ಯ ಎಂದು ಹೇಳಿದರು. ಬಳಿಕ ಪ್ರತಿಕ್ರಿಯಿಸಿದ ಅಧ್ಯಕ್ಷ ಕಾರ್ತಿಕೇಯನ್ ಅವರು, ಗ್ರಾ.ಪಂ.ಕಚೇರಿ ಕಟ್ಟಡ ಶಿರಾಡಿಯಲ್ಲಿ ನಿರ್ಮಾಣಕ್ಕೆ 1ನೇ ವಾರ್ಡ್‌ನ ಗ್ರಾಮಸ್ಥರ ಆಕ್ಷೇಪವಿರುವುದನ್ನು ದಾಖಲಿಸಿಕೊಳ್ಳುತ್ತೇವೆ. ಅದರಂತೆ 2 ಹಾಗೂ 3ನೇ ವಾರ್ಡ್‌ನ ಗ್ರಾಮಸ್ಥರ ಬೆಂಬಲ ಇರುವುದನ್ನೂ ದಾಖಲಿಸಿಕೊಳ್ಳುತ್ತೇವೆ. ಮುಂದೆ ಇಲಾಖೆಯಿಂದ ಯಾವ ರೀತಿ ಸೂಚನೆ ಬರುತ್ತದೋ ಅದೇ ರೀತಿ ಮುಂದುವರಿಯುತ್ತೇವೆ ಎಂದು ಹೇಳಿ ಚರ್ಚೆಗೆ ತೆರೆ ಎಳೆದರು.

ಪಿಡಿಒ ವಿರುದ್ಧ ಅಸಮಾಧಾನ;
ಸಭೆಯಲ್ಲಿ ಪಿಡಿಒ ವಿರುದ್ಧ ಗ್ರಾಮಸ್ಥರು ಅಸಮಾಧಾನ ಸೂಚಿಸಿ ಅವರನ್ನು ಸಭೆಗೆ ಕರೆಸುವಂತೆಯೂ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಕಾರ್ತಿಕೇಯನ್ ಅವರು, ಪಿಡಿಒಗೆ ವರ್ಗಾವಣೆ ಆಗಿದೆ. ಕಾರ್ಯದರ್ಶಿಯವರಿಗೆ ಚಾರ್ಜ್ ಕೊಡಲಾಗಿದೆ. ನಾವು ಮತ್ತೆ ಪಿಡಿಒ ಅವರನ್ನು ಹೇಗೆ ಕರೆಸುವುದು ಎಂದು ಹೇಳಿದರು. ಮಾಜಿ ಸದಸ್ಯ ಕೆ.ಕೆ.ಸೆಬಾಸ್ಟಿನ್ ಮಾತನಾಡಿ ನಾನು ತಂದೆಯಿಂದ ಬಂದ ಮನೆಯಲ್ಲಿ ವಾಸವಾಗಿದ್ದೇನೆ. 2012ರಿಂದ ಮನೆ ತೆರಿಗೆ ಪಾವತಿಸುತ್ತಿದ್ದೇನೆ. ಈಗ ಮನೆ ತೆರಿಗೆ ಸ್ವೀಕರಿಸುತ್ತಿಲ್ಲ. ನಮ್ಮ ಮನೆ ನಂಬ್ರ ಬೇರೆಯವರಿಗೆ ನೀಡಿದ್ದಾರೆ. ಕನ್‌ವರ್ಷನ್, ಪ್ಲಾಟಿಂಗ್ ಮಾಡಿಕೊಂಡು ಬರಲು ಪಿಡಿಒ ಹೇಳುತ್ತಿದ್ದಾರೆ. ಸರಿಯಾದ ಮಾಹಿತಿಯೂ ನೀಡುತ್ತಿಲ್ಲ. ಈ ಬಗ್ಗೆ ಅವರಿಂದ ನಮಗೆ ಸರಿಯಾದ ಮಾಹಿತಿ ಬೇಕು. ಅವರನ್ನು ಕರೆಸಿ ಎಂದು ಒತ್ತಾಯಿಸಿದರು. ಇದಕ್ಕೆ ಸ್ಪಷ್ಟನೆ ನೀಡಿದ ಸಿಬ್ಬಂದಿ ಸ್ಮಿತಾ ಅವರು, ನಿಮಗೆ ನಿಮ್ಮ ತಂದೆಯವರಿಂದ ಮನೆ ಬಂದಿರುವ ಬಗ್ಗೆ ದಾಖಲೆ ಕೊಡಿ ಎಂದು ಪಿಡಿಒ ಹೇಳಿರುವುದು. ಆದರೆ ನೀವು ಕೊಟ್ಟಿರುವ ದಾಖಲೆ ಸರಿಯಾಗಿಲ್ಲ. ಈ ಹಿಂದೆ ಮ್ಯಾನುವೆಲ್ ಆಗಿ ಮನೆ ತೆರಿಗೆ ಸ್ವೀಕರಿಸಲಾಗುತಿತ್ತು. ಈಗ ಎಲ್ಲವೂ ಕಂಪ್ಯೂಟರೀಕೃತ ಆಗಿರುವುದರಿಂದ ಸರಿಯಾದ ದಾಖಲೆ ಬೇಕಾಗಿದೆ ಎಂದರು. ಈ ವೇಳೆ ಮಧ್ಯಪ್ರವೇಶಿಸಿ ಮಾತನಾಡಿದ ಸದಸ್ಯ ಎಂ.ಕೆ.ಪೌಲೋಸ್ ಅವರು, ಸಿಬ್ಬಂದಿ, ಕಾರ್ಯದರ್ಶಿ ಯಾವುದೇ ಕೆಲಸ ಮಾಡಬೇಕಿದ್ದರೂ ಪಿಡಿಒ ಅವರೇ ಹೇಳಬೇಕಾಗಿತ್ತು. ಈಗ ಅವರ ವರ್ಗಾವಣೆ ಆಗಿದೆ. ಮುಂದೆ ಎಲ್ಲಾ ಸರಿಯಾಗಲಿದೆ ಎಂದರು. ಈ ವೇಳೆ ಮಾತನಾಡಿದ ಗ್ರಾಮಸ್ಥ ಅಭಿಲಾಷ್ ಅವರು, ಚುನಾಯಿತ ಪ್ರತಿನಿಧಿಗಳಾಗಿ ನೀವು ಪಿಡಿಒ ಹೇಳಿದಂತೆ ಕೇಳಬಾರದು. ಸರಿಯಾದ ಆಡಳಿತ ನಡೆಸಬೇಕೆಂದು ಹೇಳಿದರು. ಈ ವಿಚಾರದಲ್ಲಿ ಎಂ.ಕೆ.ಪೌಲೋಸ್ ಹಾಗೂ ಅಭಿಲಾಷ್ ಅವರ ನಡುವೆ ಪರಸ್ಪರ ಮಾತಿನ ಚಕಮಕಿಯೂ ನಡೆಯಿತು. ಪಿಡಿಒ ಇಲ್ಲದೆ ಗ್ರಾಮಸಭೆಯೂ ಬೇಡ ಎಂಬ ಹಂತಕ್ಕೆ ಗ್ರಾಮಸ್ಥರು ಬಂದರು. ಮಧ್ಯಪ್ರವೇಶಿಸಿದ ನೋಡೆಲ್ ಅಧಿಕಾರಿ ಸುರೇಶ್ ಅವರು, ಪಿಡಿಒ ವರ್ಗಾವಣೆ ಆಗಿ ಕಾರ್ಯದರ್ಶಿಯವರಿಗೆ ಚಾರ್ಜ್ ಕೊಡಲಾಗಿದೆ. ಕಾರ್ಯದರ್ಶಿಯವರಿಂದ ನಿಮ್ಮ ಕೆಲಸ ಆಗದೇ ಇದ್ದಲ್ಲಿ ಮೇಲಾಧಿಕಾರಿಗಳಿಗೆ ದೂರು ನೀಡಲು ಅವಕಾಶವಿದೆ ಎಂದರು. ಗ್ರಾಮಸ್ಥ ದಿವಾಕರ ಅವರು ಮಾತನಾಡಿ, ಗ್ರಾಮಸಭೆ ಮುಂದೂಡುವುದರಲ್ಲಿ ಅರ್ಥವಿಲ್ಲ. ಸೆಬಾಸ್ಟಿನ್ ಅವರ ಮನೆ ತೆರಿಗೆ ಸಮಸ್ಯೆ ಬಗ್ಗೆ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳಿ ಎಂದು ಸಲಹೆ ನೀಡಿದರು. ಬಳಿಕ ಸಭೆ ಮುಂದುವರಿಸಲಾಯಿತು.

ಜಪ್ತಿ ಸಾಮಾಗ್ರಿಗಳ ಏಲಂ-ಚರ್ಚೆ:
ಗುಂಡ್ಯದ ಅಂಗಡಿ ಕೋಣೆಯೊಂದರ ಜಪ್ತಿ ಸಾಮಾಗ್ರಿಗಳ ಏಲಂ ವಿಚಾರವೂ ಸಭೆಯಲ್ಲಿ ಚರ್ಚೆಗೆ ಬಂತು. ಗ್ರಾಮಸ್ಥ ಪ್ರವೀಣ್ ಅವರು ವಿಚಾರ ಪ್ರಸ್ತಾಪಿಸಿದರು. ಅಧ್ಯಕ್ಷ ಕಾರ್ತಿಕೇಯನ್ ಮಾತನಾಡಿ, ಸದ್ರಿ ಸಾಮಾಗ್ರಿಗಳಿಗೆ 32ಸಾವಿರ ರೂ. ವ್ಯಾಲ್ಯುವೇಷನ್ ಹಾಕಲಾಗಿತ್ತು. ಆದರೆ 22 ಸಾವಿರಕ್ಕೆ ಏಲಂ ಆಯಿತು. ಇದಕ್ಕೆ ಆಕ್ಷೇಪಣೆ ಬಂದ ಹಿನ್ನೆಲೆಯಲ್ಲಿ ಏಲಂ ರದ್ದುಗೊಳಿಸಿ ಸಾಮಾಗ್ರಿಗಳನ್ನು ಗ್ರಾ.ಪಂ.ಕಚೇರಿಯಲ್ಲಿ ತಂದಿರಿಸಲಾಗಿತ್ತು. ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಮತ್ತೆ ಏಲಂ ಮಾಡಿದಾಗ 10.250 ರೂ.ಗೆ ಖಾಯಂ ಆಗಿದೆ ಎಂದು ಸ್ಪಷ್ಪಪಡಿಸಿದರು. ಗ್ರಾಮಸ್ಥ ಪ್ರದೀಪ್ ಅವರೂ ಈ ವಿಚಾರದ ಕುರಿತು ಮಾತನಾಡಿದರು.

ಉದನೆಯಲ್ಲಿ ಬಸ್ಸು ನಿಲ್ಲುತ್ತಿಲ್ಲ;
ಉದನೆ, ಶಿರಾಡಿಯಲ್ಲಿ ವೇಗದೂತ ಬಸ್ಸು ನಿಲುಗಡೆ ಮಾಡಬೇಕೆಂದು ಕಳೆದ ಗ್ರಾಮಸಭೆಯಲ್ಲೂ ಪ್ರಸ್ತಾಪಗೊಂಡು ನಿರ್ಣಯ ಆಗಿದೆ. ಆದರೆ ಬಸ್ಸುಗಳು ನಿಲ್ಲುತ್ತಿಲ್ಲ. ಇದರಿಂದ ಶಾಲಾ ಮಕ್ಕಳಿಗೆ ತೊಂದರೆಯಾಗಿದೆ ಎಂದು ಸೆಬಾಸ್ಟಿನ್ ಹೇಳಿದರು. ಅಧ್ಯಕ್ಷ ಕಾರ್ತಿಕೇಯನ್ ಉತ್ತರಿಸಿ, ಈ ಬಗ್ಗೆ ಇಲಾಖೆ ಜೊತೆ ಪತ್ರ ವ್ಯವಹಾರ ಮಾಡಿದ್ದು ಉದನೆ, ಶಿರಾಡಿಯಲ್ಲಿ ಬಸ್ಸು ನಿಲುಗಡೆಗೆ ಆದೇಶವೂ ಆಗಿದೆ. ಆದರೆ ಕೆಲವೊಂದು ಬಸ್ಸಿನ ಚಾಲಕರು ನಿಲ್ಲಿಸುತ್ತಾರೆ. ಕೆಲವರು ನಿಲ್ಲಿಸುತ್ತಿಲ್ಲ. ಇದರ ಬಗ್ಗೆ ಜನರೇ ಹೋರಾಟ ಮಾಡಬೇಕಾಗಿದೆ ಎಂದರು. ಗ್ರಾಮಸ್ಥ ಜಿಮ್ಸನ್ ಗುಂಡ್ಯ ಮಾತನಾಡಿ, ಸದ್ರಿ ಜಾಗದಲ್ಲಿ ಬಸ್ಸು ನಿಲುಗಡೆಗೆ ಸಂಬಂಧಿಸಿ ಬೋರ್ಡ್ ಹಾಕಬೇಕು. ಅಲ್ಲದೇ ಪೊಲೀಸರ ಸಹಕಾರ ಪಡೆದು ಇಲಾಖೆಯ ಆದೇಶ ಪತ್ರದೊಂದಿಗೆ ಒಂದು ದಿನ ಎಲ್ಲಾ ಬಸ್ಸುಗಳೂ ನಿಂತು ಹೋಗುವಂತೆ ಮಾಡಬೇಕು ಎಂದರು. ಬಸ್ಸು ನಿಲುಗಡೆ ಎಂದು ಬೋರ್ಡ್ ಹಾಕಲು ಪಂಚಾಯತ್‌ನಿಂದ ಕ್ರಮ ಕೈಗೊಳ್ಳುವುದಾಗಿ ಅಧ್ಯಕ್ಷ ಕಾರ್ತಿಕೇಯನ್ ಹೇಳಿದರು.

ಅಡ್ಡಹೊಳೆಗೆ ಬಸ್ ಸ್ಟ್ಯಾಂಡ್ ಬೇಕು’:
ಅಡ್ಡಹೊಳೆಯಲ್ಲಿ ಇದ್ದ ಬಸ್ಸು ನಿಲ್ದಾಣ ಹೆದ್ದಾರಿ ಅಗಲೀಕರಣದ ವೇಳೆ ತೆರವು ಮಾಡಲಾಗಿದೆ. ಇಲ್ಲಿಗೆ ಬಸ್ಸು ಸ್ಟ್ಯಾಂಡ್ ಅಗತ್ಯವಾಗಿ ಬೇಕು ಎಂದು ಪ್ರವೀಣ್ ಒತ್ತಾಯಿಸಿದರು. ಅಧ್ಯಕ್ಷರು ಉತ್ತರಿಸಿ ಹೈವೆ ಹಾಗೂ ಅರಣ್ಯ ಇಲಾಖೆಯವರ ಅನುಮತಿ ಇಲ್ಲದೆ ಬಸ್ ಸ್ಟ್ಯಾಂಡ್ ಮಾಡುವಂತಿಲ್ಲ ಎಂದರು. ಎರಡೂ ಇಲಾಖೆಯಿಂದ ಎನ್‌ಒಸಿ ತಂದು ಕೊಡುತ್ತೇವೆ. ಬಸ್‌ಸ್ಟ್ಯಾಂಡ್ ನಿರ್ಮಾಣಕ್ಕೆ ಅನುದಾನ ಇದೆಯೇ ಎಂದು ಗ್ರಾಮಸ್ಥ ಜಿಮ್ಸನ್ ಪ್ರಶ್ನಿಸಿದರು. ಅಧ್ಯಕ್ಷ ಕಾರ್ತಿಕೇಯನ್, ಸದಸ್ಯ ಎಂ.ಕೆ.ಪೌಲೋಸ್ ಮಾತನಾಡಿ, ಈ ವರ್ಷದ ಬಜೆಟ್ ಆಗಿದೆ ಎಂದರು. ಅಗತ್ಯದ ಕೆಲಸಗಳಿಗೆ ಅನುದಾನ ಬಳಕೆ ಮಾಡಿ ಎಂದು ಜಿಮ್ಸನ್ ಹೇಳಿದರು. ರಸ್ತೆ, ಕುಡಿಯುವ ನೀರು, ಪೈಪ್‌ಲೈನ್ ಗ್ರಾಮಸ್ಥರ ಪ್ರಮುಖ ಮಾಡಿಕೆಯಾಗಿದೆ. ಅದಕ್ಕೆ ಅನುದಾನ ಖರ್ಚಾಗುತ್ತಿದೆ ಎಂದು ಕಾರ್ತಿಕೇಯನ್ ಹೇಳಿದರು.

ವಿದ್ಯುತ್ ಕಂಬ ಸ್ಥಳಾಂತರ-ಚರ್ಚೆ:
ವಿದ್ಯುತ್ ಕಂಬವೊಂದರ ಸ್ಥಳಾಂತರ ವಿಚಾರದಲ್ಲಿ ಸದಸ್ಯ ಎಂ.ಕೆ.ಪೌಲೋಸ್ ಹಾಗೂ ಮೆಸ್ಕಾಂ ಜೆಇ ರಾಮಣ್ಣ ಅವರ ನಡುವೆ ವಾಗ್ವಾದವೂ ನಡೆಯಿತು. ಅಪಾಯಕಾರಿಯಾಗಿರುವ ಕಂಬ ಸ್ಥಳಾಂತರಿಸಬೇಕೆಂದು ಸದಸ್ಯ ಪೌಲೋಸ್ ಹೇಳಿದರು. ಇದನ್ನು ಪರಿಶೀಲನೆ ನಡೆಸಿದ್ದು ಅದು ಅಪಾಯಕಾರಿ ಸ್ಥಿತಿಯಲ್ಲಿ ಇಲ್ಲ ಎಂದು ಜೆಇ ಹೇಳಿದರು. ಈ ವಿಚಾರದಲ್ಲಿ ಇಬ್ಬರ ನಡುವೆ ಚಕಮಕಿಯೂ ನಡೆಯಿತು. ಈ ವೇಳೆ ಗ್ರಾಮಸ್ಥ ಅಭಿಲಾಷ್ ಅವರು ಸದಸ್ಯರು ಅಧಿಕಾರಿಗಳಿಗೆ ಗೌರವ ಕೊಟ್ಟು ಮಾತನಾಡಬೇಕೆಂದು ಹೇಳಿದರು. ಇದಕ್ಕೆ ಗ್ರಾಮಸ್ಥ ಸಣ್ಣಿ ಆಕ್ಷೇಪಿಸಿದ ವೇಳೆ ಅಭಿಲಾಷ್ ಹಾಗೂ ಸಣ್ಣಿಯವರ ನಡುವೆ ಮಾತಿನ ಚಕಮಕಿ ನಡೆದು ಹೊ ಕೈ ಹಂತಕ್ಕೂ ಬಂತು. ಉಳಿದ ಗ್ರಾಮಸ್ಥರು ಸಮಾಧಾನಪಡಿಸಿದರು.

ರಸ್ತೆ ಕೆಸರುಮಯ;
ಪದಂಬಳ ಬಸ್‌ಸ್ಟ್ಯಾಂಡ್ ಬಳಿಯಿಂದ ಅಲಂಪಾಟ್ ಕಡೆಗೆ ಹೋಗುವ ರಸ್ತೆ ಸಮರ್ಪಕವಾಗಿಲ್ಲ. ಮಕ್ಕಳಿಗೆ ನಡೆದುಕೊಂಡು ಹೋಗಲು ಆಗುತ್ತಿಲ್ಲ. ಗ್ರಾ.ಪಂ.ನಿಂದ ಚರಂಡಿ ದುರಸ್ತಿಯೂ ಮಾಡಿಲ್ಲ. ಚರಳೂ ತಂದು ಹಾಕಿಲ್ಲ. ಗ್ರಾಮಸ್ಥರೇ ಹಣ ಸಂಗ್ರಹಿಸಿ ಮಾಡಿ ಜಲ್ಲಿ ಹುಡಿ ತಂದು ಹಾಕಿದ್ದೇವೆ ಎಂದು ಗ್ರಾಮಸ್ಥ ಶಾಜಿ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಸದಸ್ಯ ಸಣ್ಣಿಜಾನ್ ಅವರು, ಸದ್ರಿ ರಸ್ತೆಯು ಅಗಲ ಕಿರಿದಾಗಿದ್ದು ಹಿಟಾಚಿಯಲ್ಲಿ ಚರಂಡಿ ದುರಸ್ತಿ ಮಾಡಲು ಸಾಧ್ಯವಿಲ್ಲ. ಗ್ರಾಮಸ್ಥರ ಬೇಡಿಕೆಯಂತೆ 2.50 ಲಕ್ಷ ರೂ.ಅನುದಾನ ಕಾಂಕ್ರಿಟೀಕರಣಕ್ಕೆ ಇಟ್ಟಿದ್ದೇವೆ. ಅಗತ್ಯವಿದ್ದಲ್ಲಿ ಮಾಡಿಕೊಡುತ್ತೇವೆ ಎಂದರು. ಶಾಜಿ ಅವರು ಮಾತನಾಡಿ, ಇನ್ನು ಇದರ ಅವಶ್ಯಕತೆ ಇಲ್ಲ ಎಂದು ಆಕ್ರೋಶಭರಿತರಾಗಿ ಹೇಳಿದರು.

ಶಿರ್ವತ್ತಡ್ಕ ರಸ್ತೆ ದುರಸ್ತಿಗೊಳಿಸಿ;
ಶಿರಾಡಿ-ಶಿರ್ವತ್ತಡ್ಕ ರಸ್ತೆ ಹದಗೆಟ್ಟು ಹೋಗಿದೆ. 20 ವರ್ಷದ ಹಿಂದೆ ಎಂ.ಕೆ.ಪೌಲೋಸ್ ಅವರ ಪ್ರಯತ್ನದಿಂದ ಡಾಮರೀಕರಣ ಆಗಿತ್ತು. ಈಗ ಡಾಮರು ಎದ್ದು ದೊಡ್ಡ ದೊಡ್ಡ ಹೊಂಡ ನಿರ್ಮಾಣಗೊಂಡಿದೆ. ಸಂಚಾರ ಮಾಡಲು ಆಗುತ್ತಿಲ್ಲ. ಆದ್ದರಿಂದ ಸದ್ರಿ ರಸ್ತೆ ಡಾಮರೀಕರಣಕ್ಕೆ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥ ಜಾನ್ ಕೆ.ಪಿ.ಹೇಳಿದರು. ಇಂಜಿನಿಯರ್ ಹುಕ್ಕೇರಿ ಮಾತನಾಡಿ, ಸದ್ರಿ ರಸ್ತೆ ಡಾಮರೀಕರಣಕ್ಕೆ ಅಂದಾಜುಪಟ್ಟಿ ಮಾಡಲಾಗಿದೆ. ಅನುದಾನ ಬಂದಿಲ್ಲ ಬಂದರು. ಎಂ.ಕೆ.ಪೌಲೋಸ್ ಅವರು ಈ ಬಗ್ಗೆ ಪ್ರಯತ್ನಿಸಬೇಕೆಂದು ಜಾನ್ ಕೆ.ಪಿ.ಹೇಳಿದರು.

ರಸ್ತೆ ತುಂಡರಿಸಿ ಪೈಪ್ ಅಳವಡಿಕೆ;
ಜೆಜೆಎಂ ಕಾಮಗಾರಿ ವೇಳೆ ಉದನೆ-ಶಿಬಾಜೆ ರಸ್ತೆಯಲ್ಲಿ ಕಾಂಕ್ರೀಟ್ ರಸ್ತೆ ತುಂಡರಿಸಿ ಪೈಪ್ ಹಾಕಿ ಮತ್ತೆ ರಸ್ತೆ ಮುಚ್ಚಲಾಗಿದೆ. ಆದರೆ ಈಗ ಇದು ಎದ್ದುಹೋಗಿ ಹೊಂಡ ನಿರ್ಮಾಣವಾಗಿದೆ ಎಂದು ರಾಜೇಶ್ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ನೋಡೆಲ್ ಅಧಿಕಾರಿಯೂ ಆಗಿದ್ದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಸುರೇಶ್ ಅವರು ಈ ರೀತಿಯ ಸಮಸ್ಯೆಗಳನ್ನು ಸರಿಪಡಿಸಿಕೊಡಲಾಗುವುದು ಎಂದರು. ಅಡ್ಡಹೊಳೆಯಲ್ಲಿ ಚರಂಡಿಯಲ್ಲಿ ಪೈಪು ಹಾಕಲಾಗಿದೆ ಎಂದು ಗ್ರಾಮಸ್ಥರು ಹೇಳಿದರು.

ಹಿಂದೂ ರುದ್ರಭೂಮಿ, ಆನೆದಾಳಿ, ಜಂಟಿ ಸರ್ವೆ ಕುರಿತೂ ಸಭೆಯಲ್ಲಿ ಚರ್ಚೆ ನಡೆಯಿತು. ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಉಷಾ ಕೆ.ಎಸ್., ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಪುಷ್ಪಾವತಿ ಡಿ.ಎಂ., ಸಮಾಜ ಕಲ್ಯಾಣ ಇಲಾಖೆಯ ಪ್ರೇಮಲತಾ ಯಂ., ಕೃಷಿ ಇಲಾಖೆಯ ಚಂದ್ರಕಲಾ, ತೋಟಗಾರಿಕೆ ಇಲಾಖೆಯ ರವಿರಾಜ ರೈ, ಸಿಆರ್‌ಪಿ ಪ್ರಕಾಶ್ ಬಾಕಿಲ, ಮೆಸ್ಕಾಂ ಜೆಇ ರಾಮಣ್ಣ, ಅರಣ್ಯ ಇಲಾಖೆಯ ಚಂದ್ರಕಾಂತ್, ನೆಲ್ಯಾಡಿ ಹೊರಠಾಣೆಯ ಸದಾಶಿವ ದೊಡಮನಿ, ಗ್ರಾಮ ಆಡಳಿತಾಧಿಕಾರಿ ಸಂತೋಷ್ ಅವರು ಇಲಾಖಾವಾರು ಮಾಹಿತಿ ನೀಡಿದರು. ಉಪಾಧ್ಯಕ್ಷೆ ವಿನಿತ ಎಂ.ಬಿ., ಸದಸ್ಯರಾದ ಎಂ.ಕೆ.ಪೌಲೋಸ್, ತೋಮಸ್ ಜೋನ್, ಲಕ್ಷ್ಮಣ ಗೌಡ, ರಾಧ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಶಾರದಾ ಸ್ವಾಗತಿಸಿದರು. ಸಿಬ್ಬಂದಿ ಸ್ಮಿತಾ ವರದಿ ವಾಚಿಸಿದರು. ಸಿಬ್ಬಂದಿ ಏಲಿಯಾಸ್ ವಂದಿಸಿದರು.


ಆಸ್ಪತ್ರೆ ಮೇಲ್ದರ್ಜೆಗೇರಿಸಿ;
ಶಿರಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲ್ಯಾಬ್ ಟೆಕ್ನಿಷಿಯನ್ ಸೇರಿದಂತೆ ಪ್ರಮುಖ ಹುದ್ದೆಗಳು ಖಾಲಿ ಇವೆ. ಆಸ್ಪತ್ರೆ ಆರಂಭವಾಗಿ ೨೫ ವರ್ಷ ಆಗಿದೆ. ೫ ರಿಂದ ೧೦ ಬೆಡ್‌ನ ಅವಶ್ಯಕತೆಯೂ ಇದೆ. ಆದ್ದರಿಂದ ಸದ್ರಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಬೇಕೆಂದು ಗ್ರಾಮಸ್ಥ ದಿವಾಕರ ಶಿರಾಡಿ ಒತ್ತಾಯಿಸಿದರು. ಈ ಬಗ್ಗೆ ಸರಕಾರಕ್ಕೆ ಬರೆಯಲು ನಿರ್ಣಯಿಸಲಾಯಿತು. ಆಸ್ಪತ್ರೆಯಲ್ಲಿ ಉತ್ತಮ ಸೇವೆ ಸಿಗುತ್ತದೆ ಎಂದು ಗ್ರಾಮಸ್ಥರು ಹೇಳಿದರು.


ಶಿರಾಡಿಯಲ್ಲಿ ಹೊರಠಾಣೆ ಆಗಲಿ;
ಈ ಹಿಂದೆ ಉದನೆಯಲ್ಲಿದ್ದ ಶಿರಾಡಿ ಹೊರಠಾಣೆ ನೆಲ್ಯಾಡಿಗೆ ಸ್ಥಳಾಂತರಗೊಂಡಿದೆ. ನೆಲ್ಯಾಡಿಯಲ್ಲಿ ಪೂರ್ಣಪ್ರಮಾಣದ ಪೊಲೀಸ್ ಠಾಣೆಗೆ ಪ್ರಕ್ರಿಯೆ ನಡೆಯುತ್ತಿದ್ದು ನೆಲ್ಯಾಡಿಯಲ್ಲಿ ಪೂರ್ಣಪ್ರಮಾಣದ ಪೊಲೀಸ್ ಠಾಣೆ ಆದಲ್ಲಿ ಶಿರಾಡಿಯಲ್ಲಿ ಹೊರಠಾಣೆ ಮಾಡಬೇಕೆಂದು ಗ್ರಾಮಸ್ಥ ದಿವಾಕರ ಶಿರಾಡಿ ಹೇಳಿದರು. ಈ ಬಗ್ಗೆ ಸರಕಾರಕ್ಕೆ ಬರೆಯಲು ನಿರ್ಣಯಿಸಲಾಯಿತು. ನೆಲ್ಯಾಡಿಯನ್ನು ಹೋಬಳಿ ಕೇಂದ್ರ ಮಾಡುವಂತೆಯೂ ಗ್ರಾಮಸ್ಥರು ಆಗ್ರಹಿಸಿದರು.

LEAVE A REPLY

Please enter your comment!
Please enter your name here