




ವಿಟ್ಲ: ಜಾಗದ ತಕರಾರಿಗೆ ಸಂಬಂಧಿಸಿ ಮಹಿಳೆಯೋರ್ವರಿಗೆ ಯುವಕನೋರ್ವ ಕತ್ತಿಯಿಂದ ದಾಳಿ ನಡೆಸಿದ ಘಟನೆ ಕೊಳ್ನಾಡು ಗ್ರಾಮದ ತಾಳಿತ್ತನೂಜಿ ಎಂಬಲ್ಲಿ ನಡೆದಿದೆ.



ಬಳಿಕದ ಬೆಳವಣಿಗೆಯಲ್ಲಿ ಆರೋಪಿಯನ್ನು ವಿಟ್ಲ ಪೊಲೀಸ್ ಠಾಣಾ ಇನ್ಸ್ ಪೆಕ್ಟರ್ ಹೆಚ್.ಈ. ನಾಗರಾಜ್ ರವರ ನೇತೃತ್ವದ ಪೊಲೀಸರ ತಂಡ ಬಂಧಿಸಿದೆ. ತಾಳಿತ್ತನೂಜಿ ನಿವಾಸಿ ಹಸೀನಾ(23 ವ.) ಗಾಯಗೊಂಡವರಾಗಿದ್ದು, ಸ್ಥಳೀಯ ನಿವಾಸಿ ಮಹಮ್ಮದ್ ಅಶ್ರಫ್ (32 ವ.) ಬಂಧಿತ ಆರೋಪಿ.





ತಾಳಿತ್ತನೂಜಿಯ ಸುಲೈಮಾನ್ ಪುತ್ರಿ ಹಸೀನಾರವರ ಮೇಲೆ, ಸುಲೈಮಾನ್ ರವರ ಎರಡನೇ ಪತ್ನಿಯ ಪುತ್ರ ಮಹಮ್ಮದ್ ಅಶ್ರಫ್ ಕತ್ತಿಯಿಂದ ದಾಳಿ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಹಸೀನಾರವರು ದ್ವಿಚಕ್ರ ವಾಹನದಲ್ಲಿ ತನ್ನ ಮಗನನ್ನು ಶಾಲೆಯಿಂದ ಮನೆಗೆ ಕರೆದುಕೊಂಡು ಬರುತ್ತಿರುವ ವೇಳೆ ಮನೆ ಸಮೀಪ ತಲುಪುತ್ತಿದ್ದಂತೆ, ಆರೋಪಿ ಕತ್ತಿಯನ್ನು ಹಿಡಿದುಕೊಂಡು ಬಂದು ಸ್ಕೂಟರಿನಲ್ಲಿದ್ದ ಹಸೀನಾರವರೊಂದಿಗೆ ಅನುಚಿತವಾಗಿ ವರ್ತಿಸಿ, ಕತ್ತಿಯಿಂದ ಹಲ್ಲೆಗೆ ಯತ್ನಿಸಿರುತ್ತಾನೆ. ಈ ವೇಳೆ ಹೊಡೆತ ತಪ್ಪಿಸುವ ಸಂದರ್ಭ ಹಸೀನಾರವರ ಕೈಬೆರಳಿಗೆ ಗಾಯವಾಗಿದೆ. ಘಟನೆಯಿಂದ ಬೆದರಿದ ಮಹಿಳೆ ಬೊಬ್ಬೆ ಹೊಡೆದಾಗ ಸ್ಥಳೀಯ ನಿವಾಸಿಗಳು ಬಂದಿದ್ದು, ಅವರನ್ನು ಕಂಡ ಆರೋಪಿ ಪರಾರಿಯಾಗಿದ್ದಾನೆ.
ಘಟನೆಯಿಂದ ಗಾಯಗೊಂಡ ಹಸೀನಾರವರನ್ನು ಪುತ್ತೂರಿನ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಬಗ್ಗೆ ಮಾಹಿತಿ ಅರಿತ ವಿಟ್ಲ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಮಾಹಿತಿ ಸಂಗ್ರಹಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಗಾಯಾಳು ಹಸೀನಾರವರು ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಮಹಮ್ಮದ್ ಅಶ್ರಫ್ ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಜಾಗದ ವಿಚಾರಕ್ಕೆ ಸಂಬಂಧಿಸಿದ ಮನಸ್ತಾಪದಿಂದ ಈ ಘಟನೆ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ಕಂಡು ಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.






