




313.55 ಕೋಟಿ ರೂ. ವ್ಯವಹಾರ | 1.43 ಕೋಟಿ ರೂ. ನಿವ್ವಳ ಲಾಭ | ಶೇ. 12 ಡಿವಿಡೆಂಡ್ ಘೋಷಣೆ



ಪಾಣಾಜೆ: ಪಾಣಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2024-25 ನೇ ಸಾಲಿನ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷರಾದ ಪದ್ಮನಾಭ ಬೋರ್ಕರ್ ಬ್ರಹ್ಮರಗುಂಡರವರ ಅಧ್ಯಕ್ಷತೆಯಲ್ಲಿ ಸೆ. 2 ರಂದು ಸಂಘದ ಸಭಾಭಭವನದಲ್ಲಿ ನಡೆಯಿತು.





ಸಂಘದ ಅಧ್ಯಕ್ಷರಾದ ಪದ್ಮನಾಭ ಬೋರ್ಕರ್ ರವರು ಮಾತನಾಡಿ ‘ಸಂಘವು ಪ್ರಸ್ತುತ 90ನೇ ವರ್ಷದಲ್ಲಿ ಮುನ್ನಡೆಯುತ್ತಿದ್ದು, ಪಾಣಾಜೆ ಮತ್ತು ನಿಡ್ಪಳ್ಳಿ 2 ಗ್ರಾಮಗಳಲ್ಲಿ 3,216 ‘ಎ’ ತರಗತಿ ಸದಸ್ಯರನ್ನು ಹೊಂದಿದೆ. 41.68 ಕೋಟಿ ರೂ. ಠೇವಣಿ ಸಂಗ್ರಹಿಸಿದೆ ಸದಸ್ಯರಿಗೆ ನೀಡಿದ ಸಾಲ ವರ್ಷಾಂತ್ಯಕ್ಕೆ 55.71 ಇದೆ. ಪ್ರಸಕ್ತ ಸಾಲಿನಲ್ಲಿ 313.55 ಕೋಟಿ ರೂ. ವ್ಯವಹಾರ ಮಾಡಿ ರೂ. 1,43,24,057 ಲಾಭ ಗಳಿಸಿರುತ್ತದೆ. ಸಂಘದ ಕಾರ್ಯವ್ಯಾಪ್ತಿಯಲ್ಲಿ ನೀಡಿರುವ ಗಣನೀಯ ಸೇವೆಯನ್ನು ಪರಿಗಣಿಸಿ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನಿAದ ಸತತ ಏಳನೇ ಬಾರಿ ಉತ್ತಮ ಸಹಕಾರ ಸಂಘ ಪ್ರಶಸ್ತಿ ಲಭಿಸಿದೆ. ಸಂಘದ ಸರ್ವತೋಮುಖ ಅಭಿವೃದ್ಧಿಗೆ ಸಹಕರಿಸಿದ ಸಂಘದ ಎಲ್ಲಾ ಸದಸ್ಯರುಗಳಿಗೆ,ನಿಕಟಪೂರ್ವ ನಿರ್ದೇಶಕರುಗಳಿಗೆ, ಹಾಲಿ ನಿರ್ದೇಶಕರುಗಳಿಗೆ, ಎಸ್ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷರು ಮತ್ತು ನಿರ್ದೇಶಕರುಗಳಿಗೆ ಹಾಗೂ ವಲಯ ಮೇಲ್ವಿಚಾರಕರಿಗೆ ಸಿಬಂದಿಗಳಿಗೆ, ಲೆಕ್ಕಪರಿಶೋಧಕರಿಗೆ ಕೃತಜ್ಞತೆ ಸಲ್ಲಿಸುತ್ತೇನೆ’ ಎಂದರು. ವರದಿ ಸಾಲಿನಲ್ಲಾದ ಲಾಭವನ್ನು ಪರಿಗಣಿಸಿ ಸದಸ್ಯರಿಗೆ ಶೇ. 12 ಡಿವಿಡೆಂಡ್ ನೀಡಲಾಗುವುದು ಎಂದು ಅಧ್ಯಕ್ಷರು ಘೋಷಿಸಿದರು.

ಸನ್ಮಾನ
ವಾರ್ಷಿಕ ಮಹಾಸಭೆಯಲ್ಲಿ ಸಂಘದ ನಿಕಟಪೂರ್ವ ನಿರ್ದೇಶಕರುಗಳಿಗೆ ಸನ್ಮಾನ ಮಾಡಲಾಯಿತು. 2020-25 ನೇ ಸಾಲಿನ ನಿರ್ದೇಶಕರುಗಳಾದ ನಾರಾಯಣ ರೈ ಕೊಪ್ಪಳ, ತಿಮ್ಮಣ್ಣ ರೈ ಆನಾಜೆ, ರವೀಂದ್ರ ಭಂಡಾರಿ ಬೈಂಕ್ರೋಡು, ರವಿಶಂಕರ ಶರ್ಮ ಬೊಳ್ಳುಕಲ್ಲು, ರಾಮ ನಾಯ್ಕ್ ಜರಿಮೂಲೆ, ಪ್ರೇಮ ಬರೆಂಬೊಟ್ಟು, ಗೀತಾ ಆರ್. ರೈ ಪಡ್ಯಂಬೆಟ್ಟು, ಗುಣಶ್ರೀ ಜಿ. ಪರಾರಿ, ಸಂಜೀವ ಕೀಲಂಪಾಡಿ ಮತ್ತು ಎಸ್ಸಿಡಿಸಿಸಿ ವಲಯ ಮೇಲ್ವಿಚಾರಕ ವಸಂತ್ ಎಸ್. ರವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಧನಸಹಾಯ ಹಸ್ತಾಂತರ
ಸಂಘದ ವ್ಯಾಪ್ತಿಯಲ್ಲಿ ಅನಾರೋಗ್ಯದಿಂದಿರುವ ಸದಸ್ಯರ ಮನೆಯವರಿಗೆ ಧನಸಹಾಯ ನೀಡುವ ಯೋಜನೆಯ ಅಂಗವಾಗಿ ಇಬ್ಬರಿಗೆ ಧನಸಹಾಯ ಹಸ್ತಾಂತರಿಸಲಾಯಿತು.
ಸದಸ್ಯರಿಂದ ವಿವಿಧ ಸಲಹೆ ಸೂಚನೆಗಳು
ಸಭೆಯಲ್ಲಿ ಕೃಷಿಕರಿಗೆ ಕಾಡು ಪ್ರಾಣಿ ಪಕ್ಷಿಗಳ ಹಾವಳಿ ಸೇರಿದಂತೆ ಪ್ರಾಕೃತಿಕ ವಿಕೋಪದಿಂದಾಗುವ ಬೆಳೆಹಾನಿ, ಅಡಿಕೆ ಕೊಳೆರೋಗ, ಯಶಸ್ವಿನಿ ಆರೋಗ್ಯ ವಿಮೆ, ಮತ್ತು ವಾರ್ಷಿಕ ವರದಿಗೆ ಪೂರಕವಾಗಿರುವ ವಿಚಾರಗಳ ಬಗ್ಗೆ ಸದಸ್ಯರು ಆಡಳಿತ ಮಂಡಳಿ ಜೊತೆಗೆ ಚರ್ಚಿಸಿದರು.
ಡಿವಿಡೆಂಡ್ ಹೆಚ್ಚಿಸುವ ಬಗ್ಗೆ ಸದಸ್ಯರಿಂದ ಸಲಹೆ ಬಂದಾಗ ಆದಷ್ಟು ನಿಧಿಗಳನ್ನು ಕ್ರೋಡಿಕರಿಸಿ ಸಂಘವನ್ನು ಆರ್ಥಿಕವಾಗಿ ಇನ್ನಷ್ಟು ಸದೃಢ ಗೊಳಿಸುವುದು ಸಂಘದ ಹಿತದೃಷ್ಟಿ ಯಿಂದ ಒಳ್ಳೆಯದು ಎಂದು ಸಂಘದ ನಿರ್ದೇಶಕರಾದ ನಾರಾಯಣ ಪ್ರಕಾಶ್ ಕೆ ನೆಲ್ಲಿತ್ತಿಮಾರು ಅವರು ಸದಸ್ಯರಿಗೆ ತಿಳಿಸಿದಾಗ ಎಲ್ಲರೂ ಸಹಮತ ವ್ಯಕ್ತಪಡಿಸಿದರು.
ನಿರ್ದೇಶಕರ ನಿಸ್ವಾರ್ಥ ಸೇವೆಗೆ ಶ್ಲಾಘನೆ
ನಿಕಟಪೂರ್ವ ನಿರ್ದೇಶಕರನ್ನು ಸನ್ಮಾನಿಸಿದ ವೇಳೆ ಮಾತನಾಡಿದ ಅಧ್ಯಕ್ಷ ಪದ್ಮನಾಭ ಬೋರ್ಕರ್ರವರು ʻಆಡಳಿತ ಮಂಡಳಿಯವರು ಯಾರೂ ಕೂಡಾ ಸಂಭಾವನೆ ಪಡೆದುಕೊಳ್ಳದೇ ಅವರ ಕೆಲಸ ಕಾರ್ಯ ಬದಿಗಿಟ್ಟು ಸಂಸ್ಥೆಯ ಉನ್ನತಿಗಾಗಿ ತಮ್ಮ ಸಮಯವನ್ನು ತ್ಯಾಗ ಮಾಡುತ್ತಿದ್ದಾರೆʼ ಎಂದರು. ಅವರ ನಿಸ್ವಾರ್ಥ ಸೇವೆ ಇರುವುದರಿಂದಲೇ ಮಾಜಿ ನಿರ್ದೇಶಕರುಗಳಿಗೆ ಸನ್ಮಾನಕ್ಕೆ ನಾವು ಸಂತೋಷದಿಂದ ಸಹಮತ ಸೂಚಿಸಿರುವುದಾಗಿ ಸದಸ್ಯರು ಹೇಳಿದರು.
ರೈತರ ಕೃಷಿ ಅಧ್ಯಯನ ಪ್ರವಾಸ
ತನ್ನ ಅಧ್ಯಕ್ಷೀಯ ಭಾಷಣದಲ್ಲಿ ಅಡಿಕೆ ಕೃಷಿಯ ಆತಂಕದ ಬಗ್ಗೆ ಮಾತನಾಡಿದ ಅಧ್ಯಕ್ಷರು ಕ್ಯಾಂಪ್ಕೋ ಅಧ್ಯಕ್ಷರ ಹೇಳಿಕೆಯನ್ನು ಉಲ್ಲೇಖಿಸಿ, ಅಡಿಕೆ ಕೃಷಿಕರು ಮಿಶ್ರಿತ ಬೆಳೆಯನ್ನು ಬೆಳೆಯದಿದ್ದರೆ ಮುಂದೊಂದು ದಿನ ಭಾರೀ ಪರಿಣಾಮ ಎದುರಿಸಬೇಕಾದಿತು. ಈ ಹಿನ್ನೆಲೆಯಲ್ಲಿ ಸಂಘದ ವತಿಯಿಂದ ಮಿಶ್ರಿತ ಬೆಳೆಯ ಬಗ್ಗೆ ಅರಿತಿಕೊಳ್ಳಲು ʻರೈತರ ಕೃಷಿ ಅಧ್ಯಯನ ಪ್ರವಾಸʼ ಹಮ್ಮಿಕೊಳ್ಳುವುದಾಗಿ ಹೇಳಿದರು.

ಸಂಘದ ಪ್ರಗತಿ
ಸಂಘದ ಸದಸ್ಯತನವು 3,035 ರಿಂದ 3,216 ಕ್ಕೆ ಏರಿಕೆಯಾಗಿದೆ. ಪಾಲು ಬಂಡವಾಳದಲ್ಲಿ ಕಳೆದ ಸಾಲಿಗಿಂತ ಶೇ. 1.55 ವೃದ್ದಿಯಾಗಿದೆ. ಠೇವಣಾತಿಯಲ್ಲಿ ಕಳೆದ ವರ್ಷಕ್ಕಿಂತ ಶೇ. 2.79 ಹೆಚ್ಚಳವಾಗಿದೆ. ಸದಸ್ಯರಿಗೆ ನೀಡಿದ ವಿವಿಧ ಸಾಲಗಳು ವರ್ಷಾಂತ್ಯಕ್ಕೆ ರೂ. 55.87 ಕೋಟಿ ಇದ್ದು ಸಂಘವು ರೂ. 2.75 ಕೋಟಿ ವಿವಿಧ ನಿಧಿ ಹೊಂದಿದೆ.
ಮುಂದಿನ ಯೋಜನೆಗಳು ರೂ. 45 ಕೋಟಿಯಷ್ಟು ಠೇವಣಿ ಹೊಂದುವುದು, ರೂ. 60 ಕೋಟಿಯಷ್ಟು ರೈತರಿಗೆ ಸಾಲ ನೀಡುವುದು. ಶೇಕಡಾ 100 ಸಾಲ ವಸೂಲಾತಿ ಮಾಡುವುದು ಸಂಘದ ಮುಂದಿನ ಯೋಜನೆಗಳಾಗಿವೆ.
ಮಹಾಸಭೆಯಲ್ಲಿ ಉಪಾಧ್ಯಕ್ಷ ಉಮೇಶ್ ರೈ ಗಿಳಿಯಾಲು, ನಿರ್ದೇಶಕರುಗಳಾದ ನಾರಾಯಣ ಪ್ರಕಾಶ ಕೆ. ನೆಲ್ಲಿತ್ತಿಮಾರು ಸದಾಶಿವ ರೈ ಸೂರಂಬೈಲು, ರಾಧಾಕೃಷ್ಣ ರೈ ಪಟ್ಟೆ, ಕುಮಾರ ನರಸಿಂಹ ಬುಳೆನಡ್ಕ, ನಾಗೇಶ್ ಗೌಡ ಪುಳಿತ್ತಡಿ, ಹರೀಶ್ ಪೂಜಾರಿ ನೆಲ್ಲಿತ್ತಿಮಾರು, ಪುಷ್ಪಾವತಿ ಅಪಿನಿಮೂಲೆ, ಚಂದ್ರಕಲಾ ಕೊಪ್ಪಳ, ದಯಾನಂದ ತೂಂಬಡ್ಕ, ಮಾಜಿ ಉಪಾಧ್ಯಕ್ಷ ಡಾ. ಅಖಿಲೇಶ್ ಪಾಣಾಜೆ, ಎಸ್ಸಿಡಿಸಿಸಿ ಬ್ಯಾಂಕ್ ವಲಯ ಮೇಲ್ವಿಚಾರಕ ವಸಂತ ಎಸ್. ಉಪಸ್ಥಿತರಿದ್ದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹರೀಶ್ ಕುಮಾರ್ ಕೆ. ವಂದಿಸಿದರು. ನಿಡ್ಪಳ್ಳಿ ಶಾಖಾ ವ್ಯವಸ್ಥಾಪಕ ಸಂದೇಶ್ ಬಿ. ಸನ್ಮಾನಿತರ ಬಗ್ಗೆ ನಿರೂಪಿಸಿದರು, ಸಿಬ್ಬಂದಿ ತೃಪ್ತಿ ಬಿ ಪ್ರಾರ್ಥಿಸಿದರು ಲೆಕ್ಕಿಗ ಪ್ರದೀಪ್ ರೈ ಎಸ್ ಸಿಬಂದಿಗಳಾದ ಎಂ. ಕೃಷ್ಣಕುಮಾರ್, ಬಿ. ಸುಧಾಕರ ಭಟ್, ಅನುರಾಧ ಕೆ., ಚಿತ್ರಕುಮಾರ್, ಎ. ರಮೇಶ್ ನಾಯ್ಕ, ಜಯಶ್ರೀ, ಅವಿನಾಶ್ ಸಿ.ಎಚ್., ಹರೀಶ್ ಜಿ. ಸಹಕರಿಸಿದರು.









