ಉಪ್ಪಿನಂಗಡಿ: ಹಟ್ಟಿಯಿಂದ ದನವನ್ನು ಕದ್ದೊಯ್ದ ದುಷ್ಕರ್ಮಿಗಳು ದನದ ಮಾಲಕನ ಜಾಗದಲ್ಲಿಯೇ ದನವನ್ನು ಕೊಂದು ಅದರ ಕರುಳು ಸೇರಿದಂತೆ ದನದ ಹೊಟ್ಟೆಯೊಳಗಿನ ತ್ಯಾಜ್ಯವನ್ನು ತೆಗೆದು ಅಲ್ಲೇ ಬಿಸಾಡಿ ಮೃತ ದನದೊಂದಿಗೆ ಪರಾರಿಯಾದ ಘಟನೆ ಬಂಟ್ವಾಳ ತಾಲೂಕಿನ ಪೆರ್ನೆ ಬಳಿಯ ಕಡಂಬು ಎಂಬಲ್ಲಿ ಸೆ.4ರಂದು ಬೆಳಕಿಗೆ ಬಂದಿದೆ.

ಇಲ್ಲಿನ ದೇಜಪ್ಪ ಮೂಲ್ಯ ಎಂಬವರ ಮನೆಯಲ್ಲಿ ಈ ಘಟನೆ ನಡೆದಿದೆ. ಅವರು ಸುಮಾರು ಎರಡು ವರ್ಷ ಪ್ರಾಯದ ಗಬ್ಬದ ದನವೊಂದನ್ನು ಸಾಕಿಕೊಂಡಿದ್ದರು. ರಾತ್ರಿ ಎರಡೂವರೆ ಗಂಟೆ ಸುಮಾರಿಗೆ ಮನೆಯಿಂದ ಹೊರಬಂದು ಹಟ್ಟಿಯ ಕಡೆ ಕಣ್ಣಾಯಿಸಿದಾಗ ದನ ಹಟ್ಟಿಯಲ್ಲೇ ಇತ್ತು. ಬೆಳಗ್ಗೆ ಎದ್ದು ಹಟ್ಟಿಗೆ ಹೋದಾಗ ದನ ಹಟ್ಟಿಯಿಂದ ಕಣ್ಮರೆಯಾಗಿತ್ತು. ಹುಡುಕಾಟದ ಬಳಿಕ ಇವರ ಜಾಗದಲ್ಲಿಯೇ ದನವನ್ನು ಕೊಂದು ಅದರ ಹೊಟ್ಟೆಯೊಳಗಿನ ತ್ಯಾಜ್ಯವನ್ನು ಎಸೆದು ಹೋಗಿರುವ ಕೃತ್ಯ ಬೆಳಕಿಗೆ ಬಂದಿದೆ.
ಹೆದ್ದಾರಿ ಬದಿಯಲ್ಲಿಯೇ ಕೃತ್ಯ!:
ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡೇ ಎತ್ತರದ ಪ್ರದೇಶದಲ್ಲಿ ದೇಜಪ್ಪ ಮೂಲ್ಯರ ಮನೆ ಹಾಗೂ ದನದ ಕೊಟ್ಟಿಗೆಯಿದ್ದು, ಅದೇ ನೇರದಲ್ಲಿ ರಾಷ್ಟ್ರೀಯ ಹೆದ್ದಾರಿಯ ಇನ್ನೊಂದು ಬದಿಯಲ್ಲಿ ಹೆದ್ದಾರಿಗೆ ತಾಗಿಕೊಂಡೇ ಇವರ ಜಮೀನಿದೆ. ಕೊಟ್ಟಿಗೆಯಿಂದ ದನವನ್ನು ಕದ್ದುಕೊಂಡು ಹೋದ ದುಷ್ಕರ್ಮಿಗಳು ದನವನ್ನು ಹೆದ್ದಾರಿ ದಾಟಿಸಿ ಹೆದ್ದಾರಿಯ ಮತ್ತೊಂದು ಬದಿಯಲ್ಲಿರುವ ಇವರ ಜಾಗದಲ್ಲಿ ಕೊಂದು ಚರ್ಮ, ಹೊಟ್ಟೆಯೊಳಗಿನ ತ್ಯಾಜ್ಯವನ್ನು ಹೊರಗೆ ಎಸೆದು ದನದ ಕಳೇಬರವನ್ನು ಕೊಂಡು ಹೋಗಿದ್ದಾರೆ. ದನವನ್ನು ಕೊಂದು ಅದರ ಹೊಟ್ಟೆಯೊಳಗಿನ ತ್ಯಾಜ್ಯವನ್ನು ಹೊರತೆಗೆಯುವ ದೃಶ್ಯ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲೇ ನಡೆದಿರುವುದು ಅಚ್ಚರಿ ಮೂಡಿಸಿದೆ.
ಮೊದಲನೇ ದಿನವೂ ಕಳವಿಗೆ ಯತ್ನ?:
ಸೆ.3ರಂದು ಬೆಳಗ್ಗೆ ದೇಜಪ್ಪ ಮೂಲ್ಯರವರ ಪತ್ನಿ ಸುಮತಿಯವರು ಬೆಳಗ್ಗೆದ್ದು ದನದ ಕೊಟ್ಟಿಗೆಗೆ ಹೋದಾಗ ಕೊಟ್ಟಿಗೆಯ ಬಾಗಿಲು ತೆರೆದಿಟ್ಟ ಸ್ಥಿತಿಯಲ್ಲಿತ್ತು. ಇವರು ಬಂದು ಮನೆಯಲ್ಲಿ ಈ ವಿಷಯ ತಿಳಿಸಿದಾಗ, ಗೋಡೆಯ ಇನ್ನೊಂದು ಬದಿಗೆ ಸರಿಗೆಯಲ್ಲಿ ಸಿಕ್ಕಿಸಿದ ತಗಡು ಶೀಟಿನ ಬಾಗಿಲು ಅದಾಗಿರುವುದರಿಂದ ಅದು ಗಾಳಿಗೆ ಓಪನ್ ಆಗಿರಬಹುದೆಂದು ಭಾವಿಸಿ ಈ ಬಗ್ಗೆ ಗಂಭೀರವಾಗಿ ಚಿಂತನೆ ಮಾಡಿರಲಿಲ್ಲ. ಆದರೆ ಅಂದು ಕೂಡಾ ಕಳ್ಳರೇ ಬಂದು ದನವನ್ನು ಕದ್ದೊಯ್ಯುವ ಯೋಜನೆ ರೂಪಿಸಿರಬಹುದೆಂದು ಮನೆಯವರು ಶಂಕಿಸಿದ್ದಾರೆ. ಘಟನೆಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಕಳ್ಳರನ್ನು ಕೂಡಲೇ ಬಂಧಿಸಿ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಪೊಲೀಸ್ ಇಲಾಖೆಯಲ್ಲಿ ಆಗ್ರಹಿಸಿದ್ದಾರೆ.
ಕಳವಾಗಿ ದುಷ್ಕರ್ಮಿಗಳಿಂದ ಹತ್ಯೆಗೀಡಾದ ದನದ ಮೌಲ್ಯ ಸುಮಾರು 30 ಸಾವಿರ ರೂ. ಎಂದು ಅಂದಾಜಿಸಲಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಪುತ್ತೂರು ಉಪವಿಭಾಗದ ಡಿವೈಎಸ್ಪಿ ಅರುಣ್ ನಾಗೇಗೌಡ, ಪುತ್ತೂರು ಗ್ರಾಮಾಂತರ ಠಾಣೆಯ ವೃತ್ತ ನಿರೀಕ್ಷಕ ರವಿ ಬಿ.ಎಸ್., ಉಪ್ಪಿನಂಗಡಿ ಪೊಲೀಸ್ ಠಾಣಾ ಉಪನಿರೀಕ್ಷಕ ಅವಿನಾಶ್ ಗೌಡ ಹಾಗೂ ಸಿಬ್ಬಂದಿ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಘಟನೆಯ ಬಗ್ಗೆ ದೇಜಪ್ಪ ಮೂಲ್ಯರವರ ಪುತ್ರ ಗೀತೇಶ್ ಕೆ. ನೀಡಿದ ದೂರಿನ ಮೇರೆಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಕಲಂ:331(4), 305 ಬಿ.ಎನ್.ಎಸ್-2023 ಹಾಗೂ ಕಲಂ: 4, 5 ಗೋಹತ್ಯಾ ನಿಷೇಧ ಕಾಯ್ದೆಯಡಿಯಲ್ಲಿ ಪ್ರಕರಣ ಅಕ್ರ:76/2025, ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.
ವಿಷಯ ಗೊತ್ತಾದರೂ ರಕ್ಷಣೆಗೆ ಹೋಗೋದ್ಹೇಗೆ?
ದನವನ್ನು ಹಟ್ಟಿಯಿಂದ ಕದ್ದೊಯ್ಯಲಾಗುತ್ತಿದೆ ಎಂಬ ವಿಷಯ ಗೊತ್ತಾದರೂ ಮನೆಯವರು ಅಲ್ಲಿಗೆ ಹೋದರೆ ಕಳ್ಳರು ಅವರ ಮೇಲೆಯೇ ದಾಳಿ ನಡೆಸುವ ಸಾಧ್ಯತೆ ಇತ್ತು. ಯಾಕೆಂದರೆ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿಯೇ ದನವನ್ನು ಕೊಂದು ಅದರ ಹೊಟ್ಟೆಯೊಳಗಿನ ತ್ಯಾಜ್ಯವನ್ನು ಹೊರತೆಗೆದಿದ್ದಾರೆಂದರೆ ಅವರು ಕೈಯಲ್ಲಿ ಮಾರಕಾಸಗಳನ್ನು ಹಿಡಿದುಕೊಂಡೇ ಬಂದಿದ್ದರು ಅನಿಸುತ್ತೆ. ಆದ್ದರಿಂದ ಇಂತಹ ಸಮಾಜಘಾತುಕ ಶಕ್ತಿಗಳ ಹೆಡೆಮುರಿಕಟ್ಟುವಲ್ಲಿ ಪೊಲೀಸ್ ಇಲಾಖೆ ಕಾರ್ಯಪ್ರವೃತವಾಗಬೇಕಾಗಿದೆ.
ಶಿವಪ್ಪ ನಾಯ್ಕ ಮಾಜಿ ಸದಸ್ಯರು, ಪೆರ್ನೆ ಗ್ರಾ.ಪಂ.

ನಮ್ಮಲ್ಲಿ ಇದು ಸೇರಿ ನಾಲ್ಕು ದನಗಳಿದ್ದವು. ಆದರೆ ಅನಾರೋಗ್ಯದ ಕಾರಣದಿಂದ ಮೂರು ದನಗಳನ್ನು ಸಾಕುವವರಿಗೆ ಮಾರಿ ಇಲ್ಲೇ ಹುಟ್ಟಿದ ಕರುವನ್ನು ಪ್ರೀತಿಯಿಂದ ಸಾಕುತ್ತಿದ್ದೆವು. ಬೆಳೆದು ದೊಡ್ಡವಳಾದ ಅವಳು ಗಬ್ಬಕ್ಕೆ ಬಂದಿದ್ದಳು. ಆದರೆ ಇವತ್ತು ನೋಡುವಾಗ ಹೀಗಾಗಿದೆ ಎಂದು ಕಣ್ಣೀರಿಟ್ಟ ದೇಜಪ್ಪ ಮೂಲ್ಯ ಅವರ ಪತ್ನಿ ಸುಮತಿಯವರು, ಬೆಳಗ್ಗೆ ಹಟ್ಟಿಯಲ್ಲಿ ದನ ಕಾಣದಿದ್ದಾಗ ದನ ಏನಾಗಿದೆ ಎಂದು ತೋರಿಸಿಕೊಡು ಎಂದು ನಮ್ಮ ಜಾಗದಲ್ಲಿರುವ ತಾಯಿ ಕಲ್ಲುರ್ಟಿಯ ಬನಕ್ಕೆ ಹೋಗಿ ಅಡ್ಡ ಬಿದ್ದು ಬಂದಿದ್ದೆ ಸ್ವಲ್ಪ ಹೊತ್ತಲ್ಲೇ ಮಗಳು ಮನೆಯಲ್ಲಿ ನೀರು ಖಾಲಿಯಾಗಿದೆ ಎಂದು ಕೊಳವೆ ಬಾವಿಯ ಪಂಪಿನ ಸ್ವಿಚ್ ಹಾಕಲು ಹೋದಾಗ ಅಲ್ಲೇ ದನದ ತ್ಯಾಜ್ಯ ಕಂಡು ಬಂದಿದ್ದು, ಅವಳು ಓಡಿ ಬಂದು ಮನೆಯಲ್ಲಿ ಹೇಳಿದ್ದಳು. ನೋಡಿದಾಗ ನಮ್ಮದೇ ದನವನ್ನು ಕದ್ದು ಕಿರಾತಕರು ನಮ್ಮದೇ ಜಾಗದಲ್ಲಿ ಅದನ್ನು ಕೊಂದು ಅದರ ತ್ಯಾಜ್ಯವನ್ನು ಎಸೆದು ಹೋಗಿದ್ದರು. ಅವರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಸುಮತಿಯವರು ಮಾಧ್ಯಮದ ಮುಂದೆ ಅವಲತ್ತುಕೊಂಡಿದ್ದಾರೆ.